7
2017ರ ಒಡನಾಟಕ್ಕೆ ವಿದಾಯ, 2018ರ ಸಹಜೀವನ ಆರಂಭ

ಸರಿದುಹೋದ ಸಿಹಿ–ಕಹಿಗಳ ವರ್ಷ

Published:
Updated:
ಸರಿದುಹೋದ ಸಿಹಿ–ಕಹಿಗಳ ವರ್ಷ

ಯಾವುದೇ ವರ್ಷಕ್ಕೂ ವರ್ಷಕ್ಕಿಂತ ಹೆಚ್ಚು ಆಯಸ್ಸು ಇರುವುದಿಲ್ಲ. ಆ ವರ್ಷ ಮತ್ತೆಂದೂ ಮರಳಿ ಬರುವುದಿಲ್ಲ. ವರ್ಷ ಆ ವರ್ಷವಾಗಿಯೇ ಉಳಿಯುವುದಿಲ್ಲ. ವರ್ಷಗಳೆಂದೂ ಮುಗಿಯುವುದೇ ಇಲ್ಲ....

ಕಾಲಚಕ್ರ ಮತ್ತೊಂದು ಸುತ್ತು ತಿರುಗಿದೆ. 364 ದಿನ ವಿಶ್ವದ ಸಕಲ ಜೀವರಾಶಿಯ ಜತೆಗಿದ್ದ ‘2017’ ಎಂಬ ಕಾಲಬಂಧು ಇಂದು ಮಧ್ಯರಾತ್ರಿ ತನ್ನ ಜೀವಿತಾವಧಿ (365 ದಿನ) ಪೂರೈಸಲಿದ್ದಾನೆ.

8,760 ತಾಸು ನಮ್ಮ ಜೀವನದ ಒಂದು ಭಾಗವೇ ಆಗಿದ್ದ 2017ರ ಸ್ನೇಹಿತನಿಗೆ ವಿದಾಯ ಹೇಳುವ ನೋವು ಬಹುಶಃ ಯಾರನ್ನೂ ಹೆಚ್ಚು ಕಾಡಲಾರದು. ಕಾರಣ ಆತ ಹೋರಟ ತಕ್ಷಣವೇ ಒಳಬರುವ ಹೊಸ ಬಂಧು–2018ರ ಸ್ವಾಗತಕ್ಕೆ ಈಗಾಗಲೇ ಜಿಲ್ಲೆಯ ಜನರೂ ಸಂಭ್ರಮದಿಂದ ಸಜ್ಜಾಗಿದ್ದಾರೆ.

ವರ್ಷಗಳ ಆಯಸ್ಸು ಅಲ್ಪವಾದರೂ, ಅವು ನಮ್ಮ ಜೀವನದಲ್ಲಿ ಸೃಷ್ಟಿಸುವ ತಲ್ಲಣಗಳು, ನೀಡುವ ಅನುಭೂತಿ, ಕೊಡುವ ನೋವು, ಖುಷಿ ಮರೆಯಲು ಸಾಧ್ಯವೇ? ಹಾಗೆಯೇ ಇಂದೋ, ಮುಂದೆಂದೋ ನಿಂತು ತಿರುಗಿ ನೋಡಿದಾಗ 2017ರ ಮಹತ್ವ ಅರಿವಿಗೆ ಬರುತ್ತದೆ. ನೆನಪಿನ ಛಾಯೆ ಸ್ಮೃತಿ ಪಟಲದಲ್ಲಿ ಹಾದು ಹೋಗುತ್ತದೆ. ಅದು ನೀಡಿದ ಕಹಿ, ಸಿಹಿ ಎಲ್ಲರ ಬದುಕಿನುದ್ದಕ್ಕೂ ಗತ ನೆನಪಾಗಿ ಕಾಡುತ್ತದೆ.

ಪ್ರಪಂಚಕ್ಕೆ, ದೇಶಕ್ಕೆ, ರಾಜ್ಯಕ್ಕೆ ಆಯಾ ವರ್ಷ ಹಲವು ಸಿಹಿ–ಹಲವು ಕಹಿ ನೀಡಿದಂತೆ ಶಿವಮೊಗ್ಗ ಜಿಲ್ಲೆಯ ಜನರಿಗೂ 2017 ಸಮ್ಮಿಶ್ರ ಫಲ ನೀಡಿದೆ.

2017 ನೀಡಿದ ಸಹಿ–ಕಹಿ ನೆನಪುಗಳು:

ವರ್ಷದ ಆರಂಭದ ತಿಂಗಳಲ್ಲೇ (ಜ. 20) ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಯ ಜನರಲ್ಲಿ ಹೊಸ ಭರವಸೆ ಮೂಡಿಸಿದ್ದರು. ಎರಡು ದಶಕಗಳ ಹೋರಾಟದ ಫಲವಾಗಿ ಕೊನೆಗೂ ಅಂಬೇಡ್ಕರ್ ಪ್ರತಿಮೆ ಪಾಲಿಕೆ ಆವರಣದಲ್ಲಿ ಅನಾವರಣಗೊಂಡಿತು. ಗಾಂಧಿ ಪಾರ್ಕ್‌ನಲ್ಲಿ 100 ಅಡಿ ಎತ್ತರದ ಶಾಶ್ವತ ಧ್ವಜ ಸ್ಥಂಭವನ್ನು ಸಿದ್ದರಾಮಯ್ಯ ಉದ್ಘಾಟಿಸಿದ್ದರು. 2016ರಲ್ಲಿ ದೋಣಿ ದುರಂತ ಸಂಭವಿಸಿ 12 ಜನರನ್ನು ಬಲಿ ತೆಗೆದುಕೊಂಡಿದ್ದ ಹಾಡೋನಹಳ್ಳಿ ಜನರಿಗೆ ನದಿ ದಾಟಲು ಸರ್ಕಾರ ಮಿನಿ ಲಾಂಜ್ ನೀಡಿತು. ಸಹ್ಯಾದ್ರಿ ಕಾಲೇಜು ಅಮೃತ ಸಂಭ್ರಮ ಆಚರಿಸಿಕೊಂಡಿತು. ಹಳೇ ವಿದ್ಯರ್ಥಿಗಳ ಸಮ್ಮಿಲನ ಗಮನ ಸೆಳೆಯಿತು.

ಶಿವಮೊಗ್ಗಕ್ಕೆ ಕೆಎಸ್‌ಆರ್‌ಟಿಸಿ ವಿಭಾಗ:

ದಾವಣಗೆರೆ ವಿಭಾಗದಿಂದ ಬೇರ್ಪಡಿಸಿ ಪ್ರತ್ಯೇಕ ಶಿವಮೊಗ್ಗ ಕೆಎಸ್ಆರ್‌ಟಿ ವಿಭಾಗ ಸ್ಥಾಪನೆಯಾದ ಕಾರಣ ಹಲವು ಮಾರ್ಗಗಳಲ್ಲಿ ಹೊಸ ಬಸ್‌ಗಳ ಸಂಚಾರಕ್ಕೆ ಅವಕಾಶ ದೊರೆಯಿತು. ವರ್ಷದ ಕೊನೆಗೆ 50 ಮಾರ್ಗಗಳಲ್ಲಿ ನೂತನ ಬಸ್‌ಗಳ ಸಂಚಾರಕ್ಕೆ ಜಿಲ್ಲಾ ಸಾರಿಗೆ ಪ್ರಾಧಿಕಾರವೂ ಅನುಮೋದನೆ ನೀಡಿತು.

ತ್ಯಾವರೆಕೊಪ್ಪಕ್ಕೆ ಬಂದ ಸಿಂಹಗಳು:

ಕೆಲವು ವರ್ಷಗಳಿಂದ ತ್ಯಾವರೆಕೊಪ್ಪ ಹುಲಿ–ಸಿಂಹಧಾಮದಲ್ಲಿ ಎರಡೇ ಸಿಂಹಗಳು ಇದ್ದವು. ಬನ್ನೇರುಘಟ್ಟದಿಂದ ಸುಶ್ಮಿತಾ, ಸರ್ವೇಶ್ ಕರೆತಂದ ನಂತರ ಸಂಖ್ಯೆ ನಾಲ್ಕಕ್ಕೆ ಏರಿದೆ. ಹಾಗೆಯೇ ಹೊಸ ಸಂತಾನದ ನಿರೀಕ್ಷೆಯೂ ಗರಿಗೆದರಿದೆ. ಹಾಗೆಯೇ ಐದು ಚಿರತೆಗಳನ್ನು ಮೈಸೂರಿಗೆ ಕಳುಹಿಸಲಾಗಿದೆ.

ಸಕ್ರೆಬೈಲು ಆನೆ ಬಿಡಾರದಲ್ಲಿ ಈ ವರ್ಷ ಮೂರು ಆನೆಗಳು ಮೃತಪಟ್ಟವು. ಇಂದಿರಾ ಹಾಗೂ ಕಪಿಲಾ ಸಹಜ ಸಾವು ಕಂಡರೆ, ನ್ಯೂಟಸ್ಕರ್ ಗಜ ಕಾಳಗದಲ್ಲಿ ಗಾಯಗೊಂಡು ಮೃತಪಟ್ಟಿತು. ದಾಂಡೇಲಿಯ ಮರಿ ಆನೆ ಸೇರಿದಂತೆ ನಾಲ್ಕು ಕಾಡಾನೆಗಳು ಹೊಸದಾಗಿ ಬಂದಿವೆ. ಹಾಗೆಯೇ, ಐದು ಆನೆಗಳು ಉತ್ತರ ಪ್ರದೇಶದ ದುದ್ವಾ ಅರಣ್ಯದತ್ತ ಪಯಣ ಬೆಳೆಸಿವೆ.

ಕರ್ನಾಟಕದ ಬರಹಗಾರರ ಸಮಾವೇಶ ‘ಅಭಿವ್ಯಕ್ತಿ’ಕಾರ್ಯಕ್ರಮದಲ್ಲಿ ಸಾಹಿತಿ ದೇವನೂರು ಮಹಾದೇವ, ಚಿತ್ರನಟ ಚೇತನ್ ಸೇರಿದಂತೆ ಅನೇಕ ಚಿಂತಕರು ಸೇರಿದ್ದರು.

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಶಿವಮೊಗ್ಗ ಧ್ಯಾನಚಂದ್ 47ನೆ ರ‍್ಯಾಂಕ್ ಗಳಿಸಿ, ಗಮನ ಸೆಳೆದರು.

ಎಸ್ಸೆಸ್ಸೆಲ್ಸಿ ಟಾಪರ್ಸ್: ರಾಮಕೃಷ್ಣ ವಿದ್ಯಾಲಯದ ಸುಭಾಷಿಣಿ 625ಕ್ಕೆ 625 ಅಂಕ ಪಡೆಯುವ ಮೂಲಕ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದರು.

ಕೃಷಿ ವಿ.ವಿಗೆ ಹೊಸ ಕ್ಯಾಂಪಸ್:

ನವುಲೆಯ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯಕ್ಕೆ ಸಾಗರ ತಾಲ್ಲೂಕು ಆನಂದಪುರಂ ಹೋಬಳಿ ಇರುವಕ್ಕಿ ಬಳಿ 777 ಎಕರೆ ಭೂಮಿ ಮಂಜೂರು ಮಾಡಲಾಯಿತು. ಅಲ್ಲಿ ಹೊಸ ಕ್ಯಾಂಪಸ್ ಆರಂಭವಾಗುತ್ತಿದೆ.

ನಗರದ ಬಿ.ಎಚ್. ರಸ್ತೆಯ ಸೆಕ್ರೇಡ್ ಹಾರ್ಡ್ ಚರ್ಚ್ ಪ್ರವೇಶ ದ್ವಾರದಲ್ಲಿ 10.3 ಅಡಿ ಎತ್ತರದ ಯೇಸುವಿನ ಪ್ರತಿಮೆ ಸ್ಥಾಪನೆ ಗಮನ ಸೆಳೆಯಿತು.

ವರ್ಷದ ಕೊನೆಗೆ ಹರಿದ ತುಂಗಾ ನೀರು:

ತುಂಗಾ ಏತನೀರಾವರಿ ಮೂಲಕ ಹಾಯ್‌ಹೊಳೆ, ಬಾರೇಹಳ್ಳ, ಗೌಡನಕೆರೆ ಮೂಲಕ ನ್ಯಾಮತಿವರೆಗಿನ ಹಲವು ಕೆರೆಗಳಿಗೆ ನೀರು ಹರಿಸುವ ಯೋಜನೆ ವರ್ಷದ ಕೊನೆಯಲ್ಲಿ ಸಾಕಾರಗೊಂಡಿತು.

ಕ್ರೀಡಾ ನೆನಪುಗಳು: ಕರ್ನಾಟಕ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಕಳೆದ ತಿಂಗಳು ನಡೆದ ರಣಜಿ ಟ್ರೋಫಿಯಲ್ಲಿ ಹೈದರಾಬಾದ್ ವಿರುದ್ಧ ಸೆಣಸಿದ್ದ ಕರ್ನಾಟಕ ಗೆಲುವು ಪಡೆಯಿತು. ನಾಲ್ಕು ದಿನ ಇಲ್ಲಿನ ಜನರು ನೆಚ್ಚಿನ ಆಟಗಾರರ ಕ್ರೆಕೆಟ್ ಸೊಬಗು ಕಣ್ತುಂಬಿಕೊಂಡರು. ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಜಿಲ್ಲೆ ಆತಿಥ್ಯ ವಹಿಸುವ ಮೂಲಕ ರಾಜ್ಯದ ಗಮನ ಸೆಳೆಯಿತು.

ಈ ವರ್ಷವೂ ಕಾಡಿದ ಬರ:

2017ರಲ್ಲೂ ಜಿಲ್ಲೆಯಲ್ಲಿ ಮಳೆ ಕೊರತೆ ಕಾಡಿತು. ಭದ್ರಾ ಜಲಾಶಯ ಭರ್ತಿಯಾಗದ ಕಾರಣ ಭತ್ತ ಬೆಳೆಗಾರರು ಎರಡೂ ಬೆಳೆ ತ್ಯಾಗ ಮಾಡಿದರು. ಹಾಗಾಗಿ, ಈ ವರ್ಷ ನಿರೀಕ್ಷೆಗೂ ಮೀರಿ ಮೆಕ್ಕೆ ಜೋಳ ಬೆಳೆಯಲಾಯಿತು. ಹಲವು ಕೆರೆಕಟ್ಟೆಗಳಿಗೆ ನೀರು ಹರಿದು ಬರಲಿಲ್ಲ. ಒತ್ತುವರಿಯಾದ ನೂರಾರು ಕೆರೆಗಳನ್ನು ತೆರವುಗೊಳಿಸಲಾಯಿತು.

ವಾಡಿಕೆಯಂತೆ ಜಿಲ್ಲೆಯಲ್ಲಿ 2,483 ಮಿ.ಮೀ. ಮಳೆಯಾಗಬೇಕಿತ್ತು.ವರ್ಷದ ಅಂತ್ಯದವರೆಗೂ ಆದ ಮಳೆ ಪ್ರಮಾಣ ಕೇವಲ 1,767 ಮಿ.ಮೀ. ಮಾತ್ರ.

ಹಕ್ಕಿಪಿಕ್ಕಿ ಆತಂಕ:

ಉಗಾಂಡಾಕ್ಕೆ ತೆರಳಿದ್ದ ಹಸೂಡಿ ಕ್ಯಾಂಪ್‌ನ ಹಕ್ಕಿಪಿಕ್ಕಿ ಜನರು ಅಲ್ಲಿನ ಜೈಲು ಸೇರಿದ್ದು ಆತಂಕ ಸೃಷ್ಟಿಸಿತ್ತು.

ಮೆಗ್ಗಾನ್ ಆಸ್ಪತ್ರೆಯಲ್ಲಿ ರೋಗಿಯನ್ನು ನೆಲದ ಮೇಲೆ ಎಳೆದುಕೊಂಡು ಹೋಗಿದ್ದ ಪ್ರಕರಣ ರಾಜ್ಯದಾದ್ಯಂತ ಸುದ್ದಿ ಮಾಡಿತ್ತು. ರಾಜ್ಯ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಜಾರಿ ವಿರೋಧಿಸಿ ಖಾಸಗಿ ಆಸ್ಪತ್ರೆಗಳಿಂದ ಬಂದ್‌ನಿಂದ ರೋಗಿಗಳು ಪರದಾಡಿದರು.

ತಹಶೀಲ್ದಾರ್‌ ಎಸಿಬಿ ಬಲೆಗೆ:

ಬಗರ್‌ಹುಕುಂ ಹಕ್ಕುಪತ್ರ ನೀಡಲು ₹ 50ಸಾವಿರ ಲಂಚ ಪಡೆಯುತ್ತಿದ್ದ ತಹಶೀಲ್ದಾರ್‌ ಕೇಶವಮೂರ್ತಿ ಹಾಗೂ ಕಂದಾಯ ನಿರೀಕ್ಷಕ ಶಶಿಧರ್ ಭಟ್ ಅವರನ್ನು ಎಸಿಬಿ ಪೊಲೀಸರು ಬಂಧಿಸಿದ್ದರು. ಗಾಜನೂರು ಮುರಾರ್ಜಿ ದೇಸಾಯಿ ಶಾಲೆಯ 30 ಮಕ್ಕಳು ಆಹಾರದ ವ್ಯತ್ಯಾಸದಿಂದ ಆಸ್ಪತ್ರೆಗೆ ದಾಖಲಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry