7
ಚನ್ನಪಟ್ಟಣದಲ್ಲಿ ರಸಋಷಿ ಕುವೆಂಪು 113ನೇ ಜನ್ನದಿನಾಚರಣೆ

‘ಸಾಹಿತ್ಯದಿಂದ ವೈಚಾರಿಕತೆ ಬೆಳೆಸಿಕೊಳ್ಳಿ’

Published:
Updated:

ಚನ್ನಪಟ್ಟಣ: ಯುವ ಪೀಳಿಗೆ ಕುವೆಂಪು ಸಾಹಿತ್ಯವನ್ನು ಅಧ್ಯಯನ ಮಾಡುವುದರ ಮೂಲಕ ವೈಚಾರಿಕತೆ ಮತ್ತು ವಿಶ್ವಮಾನವ ತತ್ವವನ್ನು ಮೈಗೂಡಿಸಿಕೊಳ್ಳಬೇಕು ಎಂದು ಕವಿ ಭೂಹಳ್ಳಿ ಪುಟ್ಟಸ್ವಾಮಿ ಕಿವಿಮಾತು ಹೇಳಿದರು.

ಪಟ್ಟಣದ ಚನ್ನಾಂಬಿಕಾ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ರಾಷ್ಟ್ರಕವಿ ಕುವೆಂಪುರವರ 113ನೇ ಜನ್ಮದಿನಾಚರಣೆ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಪುಸ್ತಕ ಬಿಡುಗಡೆ, ಉಪನ್ಯಾಸ, ಸನ್ಮಾನ ಹಾಗೂ ಗೀತಾಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಮಹನೀಯರ ಹೆಸರುಗಳನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುವ ಪರಿಪಾಠ ಬೆಳೆಯುತ್ತಿದೆ. ಇದು ತಪ್ಪು ಬೆಳವಣಿಗೆ. ಅವರ ಮಾದರಿ ಬದುಕಿಗೆ ಕಳಂಕ ಬಾರದಂತೆ ನಡೆದುಕೊಳ್ಳಬೇಕಾದುದು ನಮ್ಮ ಆದ್ಯ ಕರ್ತವ್ಯವಾಗಬೇಕು’ ಎಂದರು.

ಜನಪದ ವಿದ್ವಾಂಸ ಡಾ.ಚಕ್ಕೆರೆ ಶಿವಶಂಕರ್ ಮಾತನಾಡಿ, ಶೋಷಿತರ ಮತ್ತು ಮಹಿಳಾ ಸಂವೇದನೆಗಳಿಗೆ ಕುವೆಂಪು ಸಾಹಿತ್ಯ ಸ್ಪಂದಿಸಿದೆ. ಸಮಾಜವನ್ನು ದುರ್ಬಲಗೊಳಿಸುವ ಮೌಢ್ಯದ ವಿರುದ್ಧ ಸಮರ ಸಾರಿದವರು ಕುವೆಂಪು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಚನ್ನಾಂಬಿಕಾ ವಿದ್ಯಾಸಂಸ್ಥೆ ಕಾರ್ಯದರ್ಶಿ ಪೂರ್ಣಿಮ ನಿಂಗೇಗೌಡ ಮಾತನಾಡಿ, ಕನ್ನಡ ಸಾಹಿತ್ಯ ಲೋಕ ಕಂಡ ಅಪ್ರತಿಮ ಕವಿ ಕುವೆಂಪು. ವಿಶ್ವಮಾನವ ತತ್ವ ವಿಶ್ವಕ್ಕೆ ಮಾದರಿಯಾದದು. ಅದ್ವಿತೀಯ ಬರಹಗಳಿಂದ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಮಹಾನ್ ದಾರ್ಶನಿಕ ರಸಋಷಿ ಕುವೆಂಪು ಎಂದರು.

ಸಾಹಿತಿ ಚೌ.ಪು.ಸ್ವಾಮಿಯವರ ಮಂಕುಂದ ಇತಿಹಾಸ ಲಾವಣಿ ಪುಸ್ತಕವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಖಜಾಂಚಿ ಎಚ್‌.ಪಿ.ನಂಜೇ ಗೌಡ ಬಿಡುಗಡೆಗೊಳಿಸಿದರು. ನಂತರ ಅವರು ಮಾತನಾಡಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಗಂಗರಸರ ಕುರಿತಾದ ಲಾವಣಿಗಳನ್ನು ರಚಿಸಿ ಪುಸ್ತಕ ರೂಪದಲ್ಲಿ ಹೊರತರುತ್ತಿರುವುದು ಸಂತಸದ ಸಂಗತಿ ಎಂದರು.

ಸಾಹಿತಿಗಳಾದ ಡಾ.ಬಿ.ಆರ್.ಶಿವಕುಮಾರ್, ಚೌ.ಪು.ಸ್ವಾಮಿ, ಶೆಟ್ಟಿಹಳ್ಳಿ ಮಂಜೇಶ್ ಬಾಬು ಅವರನ್ನು ಸನ್ಮಾನಿಸಲಾಯಿತು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸಿಂ.ಲಿಂ.ನಾಗರಾಜ್, ಸಮಾಜಸೇವಕ ರಾಂಪುರ ರಾಜಣ್ಣ, ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ಬಿ.ಟಿ.ನಾಗೇಶ್, ತಾಲ್ಲೂಕು ಘಟಕದ ಅಧ್ಯಕ್ಷ ಮತ್ತೀಕೆರೆ ಬಿ.ಚಲುವರಾಜು, ಜಿಲ್ಲಾ ಕಾರ್ಯದರ್ಶಿ ವಿಜಯ್ ರಾಂಪುರ, ಕೆಂಗಲ್ ವಿನಯ್ ಕುಮಾರ್, ಭಾ.ವಿ.ಪ. ತಾಲ್ಲೂಕು ಘಟಕದ ಅಧ್ಯಕ್ಷ ವಸಂತ್ ಕುಮಾರ್, ಗೋವಿಂದಹಳ್ಳಿ ಶಿವಣ್ಣ, ಎಂ.ಡಿ.ಶಿವಕುಮಾರ್, ನಂ.ಶಿವಲಿಂಗಯ್ಯ, ಹೊಸದೊಡ್ಡಿ ರಮೇಶ್, ಶ್ರೀನಿವಾಸ ರಾಂಪುರ, ಪ್ರತಾಪ್, ಗುರುಪ್ರಸಾದ್, ಟಿ.ಆರ್.ಸ್ವಾಮಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry