ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರದ ದಿನವಿಡಿ ನೀರು ಪೂರೈಕೆಗೆ ದರ ನಿಗದಿ

ಕುಷ್ಟಗಿ ಪುರಸಭೆ ಸಾಮಾನ್ಯ ಸಭೆ ನಿರ್ಧಾರ
Last Updated 31 ಡಿಸೆಂಬರ್ 2017, 11:34 IST
ಅಕ್ಷರ ಗಾತ್ರ

ಕುಷ್ಟಗಿ: ಸದ್ಯ ಪಟ್ಟಣದ ಆರು ವಾರ್ಡ್‌ಗಳಿಗೆ ವಾರದ ದಿನವಿಡಿ ಕುಡಿಯುವ ನೀರು ಪೂರೈಸಲು ಕನಿಷ್ಠ ದರ ₹ 112 ಇದೆ. ಹೆಚ್ಚುವರಿಯಾಗಿ ಮಾಸಿಕ ಪ್ರತಿ ಸಾವಿರ ಲೀಟರ್‌ಗೆ ₹ 8 ರಂತೆ ದರ ನಿಗದಿಪಡಿಸಲು ಪುರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

ಶನಿವಾರ ಇಲ್ಲಿಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅಧ್ಯಕ್ಷ ಖಾಜಾ ಮೈನುದ್ದೀನ್‌ ಮುಲ್ಲಾ, ಹುನಗುಂದ ಮತ್ತು ಇಳಕಲ್ಲ ಪಟ್ಟಣದಲ್ಲಿಯೂ ಇದೇ ದರ ನಿಗದಿಪಡಿಸಲಾಗಿದ್ದು ಶುದ್ಧೀಕರಿಸಿದ ನೀರನ್ನೇ ಪೂರೈಸಲಾಗುತ್ತದೆ ಎಂದರು.

ನೀರು ಪೂರೈಕೆ ನಿರ್ವಹಣೆಗೆ ಪ್ರತ್ಯೇಕ ಸಾಫ್ಟ್‌ವೇರ್‌ ಅಳವಡಿಸಲಾಗುತ್ತದೆ. ಪ್ರಾಯೋಗಿಕವಾಗಿ ನೀರು ಪೂರೈಲಾಗುತ್ತಿದ್ದು ಬೆಳಕಿಗೆ ಬರುವ ಲೋಪದೋಷಗಳನ್ನು ಸರಿಪಡಿಸಲಾಗುತ್ತದೆ. ನೀರು ಹೆಚ್ಚಿಗೆ ಬಳಸಿದಂತೆ ಯೂನಿಟ್‌ ದರ ಹೆಚ್ಚಲಿದ್ದು ಬಳಕೆದಾರರಿಗೆ ₹ 150 ರಿಂದ ಗರಿಷ್ಠ ₹ 200ವರೆಗೆ ದರ ಅನ್ವಯ ಆಗಬಹುದು ಎಂದು ಹೇಳಿದರು.

ಕೆಲವು ವಾರ್ಡ್‌ಗಳಲ್ಲಿ ಕೆಲಸ ಪೂರ್ಣಗೊಂಡಿಲ್ಲ, ಯೋಜನೆ ಪುರಸಭೆಗೆ ಹಸ್ತಾಂತರವಾಗುವ ಮೊದಲೇ ದರ ನಿಗದಿಪಡಿಸುವುದು ಎಷ್ಟು ಸರಿ ಎಂದು ಆಕ್ಷೇಪಿಸಿದ ಸದಸ್ಯ ಕಲ್ಲೇಶ ತಾಳದ, ಹೀಗಿದ್ದೂ ಆರು ತಿಂಗಳ ಹಿಂದೆಯೇ ಅಧ್ಯಕ್ಷರು ಉದ್ಘಾಟನೆಗೆ ಸಿದ್ಧತೆ ನಡೆಸಿದ್ದರು. ಈಗ ಇನ್ನೂ ಒಂದು ತಿಂಗಳು ಕಾಲಾವಕಾಶ ಬೇಕು ಎನ್ನುತ್ತಿದ್ದಾರೆ ಎಂದರು.

ಅನುದಾನ ಬಿಡುಗಡೆಯಾದ ಬಳಿಕ ಮೂರನೇ ಹಂತದ ಕಾಮಗಾರಿ ಆರಂಭಿಸುವುದಾಗಿ ಅಧ್ಯಕ್ಷ ಮುಲ್ಲಾ ಹೇಳಿದರು.

ಇಂದಿರಾ ಕ್ಯಾಂಟಿನ್‌: ಪಟ್ಟಣದ ಜೆಸ್ಕಾಂ ಉಪ ವಿಭಾಗ ಕಚೇರಿಯ 60–80 ಚದರಡಿ ಜಾಗದಲ್ಲಿ ಮೂಲಸೌಲಭ್ಯ ಕಲ್ಪಿಸಿ ಇಂದಿರಾ ಕ್ಯಾಂಟಿನ್‌ ಆರಂಭಿಸಲಾಗುತ್ತದೆ. ಇದಕ್ಕೆ ಜಿಲ್ಲಾಡಳಿ ಒಪ್ಪಿಗೆ ನೀಡಿದ ಎಂದು ಸಭೆಗೆ ತಿಳಿಸಲಾಯಿತು.

ಮರು ಟೆಂಡರ್: ಜೆಸ್ಕಾಂ ಪಕ್ಕದಲ್ಲಿರುವ 10 ವಾಣಿಜ್ಯ ಮಳಿಗೆಗಳ ಅಳತೆ ಆಧಾರದ ಮೇಲೆ ಬಾಡಿಗೆ ದರ ನಿಗದಿಪಡಿಸಿ ಪುನಃ ಬಹಿರಂಗ ಹರಾಜಿಗೆ ಟೆಂಡರ್‌ ಕರೆಯಲು, ವಿದ್ಯುತ್‌ ಮೀಟರ್‌ ಅಳವಡಿಸಲು ಸಭೆ ನಿರ್ಧರಿಸಿತು. ಆದರೆ, ಈ ಎಲ್ಲ ಪ್ರಕ್ರಿಯೆ ಮುಗಿಯಲು ಐದಾರು ತಿಂಗಳು ಬೇಕಾಗುತ್ತದೆ ಇದರಿಂದ ಪುರಸಭೆ ಆದಾಯಕ್ಕೆ ಹೊಡೆತ ಬೀಳುತ್ತದೆ ಎಂದು ಕೆಲ ಸದಸ್ಯರು ಅಸಮಾಧಾನ ಹೊರಹಾಕಿದರು.

ರಸ್ತೆಬದಿ ತ್ಯಾಜ್ಯ: ಮುಖ್ಯರಸ್ತೆಗಳ ಪಕ್ಕದಲ್ಲಿ ಕೋಳಿ ಮಾಂಸದ ಅಂಗಡಿ ಮತ್ತಿತರೆ ತ್ಯಾಜ್ಯ ಹಾಕುತ್ತಿರುವುದರಿಂದ ವಾತಾವರಣ ಮಲೀನಗೊಂಡಿದೆ ಎಂದು ಸದಸ್ಯರು ಆರೋಪಿಸಿದರು. ಕಸ ವಿಲೇವಾರಿ ಮಾಡುತ್ತೇವೆ ಮತ್ತು ಪುನಃ ತ್ಯಾಜ್ಯ ಬಿಸಾಡದಂತೆ ಕ್ರಮ ಜರುಗಿಸುವುದಾಗಿ ಮುಖ್ಯಾಧಿಕಾರಿ ಸತೀಶ್‌ ಚವಡಿ ಹೇಳಿದರು.

ಫ್ಲೆಕ್ಸ್‌ಗಳಿಗೆ ದರ: ಪರವಾನಗಿ ರಹಿತ ಫ್ಲೆಕ್ಸ್‌, ಬ್ಯಾನರ್‌ಗಳನ್ನು ತೆರವುಗೊಳಿಸುವುದು, ಶುಲ್ಕ ಪಾವತಿಸಿದ ನಂತರವೇ ಅಳವಡಿಸಲು ಸಭೆ ಒಪ್ಪಿಗೆ ಸೂಚಿಸಿತು.

ಕೇವಲ 4ನೇ ವಾರ್ಡ್‌ಗೆ ಮಾತ್ರ ಮಂಜೂರು ಮಾಡಲಾಗಿದ್ದ ₹ 85 ಲಕ್ಷ ಅನುದಾನದ ಬಳಕೆ ತಡೆ ಹಿಡಿದು ಸದರಿ ಮೊತ್ತವನ್ನು ಇತರೆ ವಾರ್ಡ್‌ಗಳ ಕೆಲಸಗಳಿಗೆ ಬಳಸಿಕೊಳ್ಳಲು ಸಭೆ ನಿರ್ಣಯಿಸಿತು. ಉಪಾಧ್ಯಕ್ಷೆ ಜ್ಯೋತಿ ಸೇಬಿನಕಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT