7
2017 ರ ಸಿಹಿ–ಕಹಿ ನೆನಪುಗಳು

ವರ್ಷದುದ್ದಕ್ಕೂ ಹೋರಾಟಗಳು: ಪ್ರಗತಿಯಲ್ಲಿ ಮಂದಗತಿ

Published:
Updated:
ವರ್ಷದುದ್ದಕ್ಕೂ ಹೋರಾಟಗಳು: ಪ್ರಗತಿಯಲ್ಲಿ ಮಂದಗತಿ

ರಾಯಚೂರು: ಜಿಲ್ಲೆ ಸಮಗ್ರ ಅಭಿವೃದ್ಧಿ ಪಥದಲ್ಲಿ ದಾಪುಗಾಲು ಇಡಬಹುದು ಎನ್ನುವ 2017 ನೇ ಸಾಲಿನ ಜನರ ನಿರೀಕ್ಷೆಗಳು ಸಂಪೂರ್ಣ ಕೈಗೂಡಿಲ್ಲ!

ಜಿಲ್ಲೆಗೆ ಬಿಡುಗಡೆ ಆಗಿದ್ದ ಸಾಕಷ್ಟು ಅನುದಾನ ಹಾಗೂ ಜನಪ್ರತಿನಿಧಿಗಳು ನೀಡಿದ್ದ ಭರವಸೆಗಳು ವರ್ಷಾರಂಭದಲ್ಲಿ ಹೊಸ ಆಸೆಗಳನ್ನು ಚಿಗುರಿಸಿದ್ದವು. ಅಂದುಕೊಂಡಂತೆ ಆಗಿದ್ದರೆ; ಈಗಾಗಲೇ ಜಿಲ್ಲೆಯಾದ್ಯಂತ ರಸ್ತೆ, ಚರಂಡಿ, ಒಳಚರಂಡಿ, ಕುಡಿಯುವ ನೀರು ಸೇರಿದಂತೆ ಇನ್ನಿತರೆ ಮೂಲ ಸೌಕರ್ಯದ ಕಾಮಗಾರಿಗಳು ವರ್ಷಾಂತ್ಯದೊಳಗೆ ಮುಕ್ತಾಯವಾಗಬೇಕಿತ್ತು. ಆದರೆ ಕಾಮಗಾರಿಗಳು ಇನ್ನೂ ಪ್ರಗತಿಯಲ್ಲಿವೆ.

ರಾಯಚೂರು ನಗರದಲ್ಲಿ ಆಗಸ್ಟ್‌ ತಿಂಗಳಲ್ಲಿ ಮುಗಿಯಬೇಕಿದ್ದ 24/7 ಕುಡಿಯುವ ನೀರಿನ ಕಾಮಗಾರಿ, ಜಿಲ್ಲಾ ಕ್ರೀಡಾಂಗಣ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಕಾಮಗಾರಿ, ಜಿಲ್ಲಾಡಳಿತ ಭವನ ನಿರ್ಮಾಣ, ಒಳಚರಂಡಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು, ಸಿಂಧನೂರಿನ ನಿರಂತರ ನೀರು ಪೂರೈಸುವ ಯೋಜನೆ... ಹೀಗೆ ಇನ್ನೂ ಅನೇಕ ಕೆಲಸಗಳು ಪ್ರಗತಿಯಲ್ಲಿವೆ. ಇವೆಲ್ಲವೂ 2018 ಸಾಲಿನಲ್ಲಿ ಪೂರ್ಣವಾಗುವ ಸಾಧ್ಯತೆ ಇದೆ.

ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ), ನಗರೋತ್ಥಾನ ಯೋಜನೆ ಹಾಗೂ ರಾಜ್ಯ ಹಣಕಾಸು ಆಯೋಗ ಅನುದಾನ (ಎಸ್‌ಎಫ್‌ಸಿ) ಹಾಗೂ ನೀರಾವರಿ ಯೋಜನೆ, ಎಸ್‌ಸಿಪಿ–ಟಿಎಸ್‌ಪಿ ಯೋಜನೆಗಳಡಿ ಜಿಲ್ಲೆಗೆ ಬಂದಿರುವ ಅನುದಾನ ಸಂಪೂರ್ಣ ವೆಚ್ಚವಾಗಿಲ್ಲ. ದಲಿತಪರ, ಕಾರ್ಮಿಕಪರ, ರೈತಪರ ಹಾಗೂ ನಗರಾಭಿವೃದ್ಧಿಪರ, ಮಹಿಳಾಪರ ಸಂಘಟನೆಗಳು ವರ್ಷಾರಂಭದಲ್ಲಿ ಯಾವ ಬೇಡಿಕೆಗಳನ್ನು ಇಟ್ಟುಕೊಂಡು ಹೋರಾಟ ಆರಂಭಿಸಿದ್ದರು. ಈಗಲೂ ಬೇಡಿಕೆಗಳು ಈಡೇರಿಲ್ಲ. ವರ್ಷದುದ್ದಕ್ಕೂ ಹೋರಾಟಗಳು ನಡೆದಿರುವುದು ವಿಶೇಷ. ಹೋರಾಟಗಾರರ ಬೇಡಿಕೆಗಳಿಗೆ ಸ್ಪಂದನೆ ಸಿಕ್ಕಿಲ್ಲ. ಹಕ್ಕುಪತ್ರ, ನಿವೇಶನಕ್ಕಾಗಿ ದೀನ ದಲಿತರ ಹೋರಾಟಗಳು ಈಗಲೂ ಮುಂದುವರಿದಿವೆ. ಆದರೆ ಸ್ಪಂದಿಸುವ ಪ್ರಾಮಾಣಿಕ ಯತ್ನ ನಡೆಯದಿರುವುದು ವಿಪರ್ಯಾಸ.

ವರ್ಷದುದ್ದಕ್ಕೂ ಸಾಕಷ್ಟು ಕಹಿ ಘಟನೆಗಳು ನಡೆದಿವೆ. ಕೆಲವು ಸಿಹಿ ಎನ್ನಬಹುದಾದ ಯೋಜನೆಗಳು ಜಾರಿಯಾಗಿವೆ. ಅವುಗಳ ಬಗ್ಗೆ ಒಂದು ನೋಟ...

****

ಜನವರಿ

ಜನವರಿ 2 ರಂದು ತಾಲ್ಲೂಕಿನ ಯರಗೇರಾದಲ್ಲಿ ಕೌಟುಂಬಿಕ ಕಲಹದಿಂದ ಮಾಧುರಿ (28) ಹಾಗೂ ಕಂದಮ್ಮಗಳಾದ ಮಾನಸ, ಮಾತೃ ಜೀವಗಳು ಬೆಂದು ಹೋದವು. ಘಟನೆ ಸಂಬಂಧ ರಾಘವೇಂದ್ರ ಎನ್ನುವ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಇದೊಂದು ಕಹಿ ನೆನಪು.

ಜ.4 ರಂದು ಸಿಂಧನೂರಿನಲ್ಲಿ ಕವಿ ಜಿ.ವಿ ಶರ್ಮಾ ನಿಧನರಾದರು. ಜ. 20ರಂದು ಸಿಂಧನೂರಿನ ಭಗವಾನ್ ಮಹಾವೀರ ಗೋಶಾಲೆಯಲ್ಲಿ 200 ಎಕರೆಯ ಭತ್ತ ಹುಲ್ಲು ಬೆಂಕಿ ಘಟನೆಯಲ್ಲಿ ಭಸ್ಮವಾಯಿತು.

ಫೆಬ್ರುವರಿ

ಫೆ. 3 : ಮಾನ್ವಿ ತಾಲ್ಲೂಕಿನ ಕಲ್ಲೂರಿನ ಶಾಲಾ ವಿದ್ಯಾರ್ಥಿ ಹೊಕ್ರಾಣಿಯ ವಿದ್ಯಾರ್ಥಿ ಬಸವಲಿಂಗ ಟ್ರ್ಯಾಕ್ಟರ್‌ ಡಿಕ್ಕಿಯಿಂದ ಸಾವನ್ನಪಿದ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ರಾಜ್ಯ ಹೆದ್ದಾರಿ ಬಂದ್ ಮಾಡಿದ್ದರು.

ಫೆ. 9: ಹಟ್ಟಿ ಚಿನ್ನದ ಗಣಿಯ 37 ಕಾರ್ಮಿಕರನ್ನು ಸೇವೆಯಿಂದ ವಜಾಗೊಳಿಸಿದ್ದಕ್ಕಾಗಿ ನಿರಂತರ ಧರಣಿ ನಡೆಸಿ ಬೇಸತ್ತಿದ್ದ ಕಾರ್ಮಿಕರು ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದು ಗಮನ ಸೆಳೆದಿದ್ದರು.

ಫೆ. 14 : ಬಂಡಾಯ ಸಾಹಿತಿ ಜಂಬಣ್ಣ ಅಮರಚಿಂತ ನಿಧನ. ಬಂಡಾಯ ಮೊಳಗಿಸಿದ್ದ ಹಿರಿಯ ಚೇತನದ ಅಗಲಿಕೆಗೆ ನಾಡಿನಾದ್ಯಂತ ಕಂಬನಿ.

ಮಾರ್ಚ್‌

ಮಾರ್ಚ್‌ 7 : ವೈಟಿಪಿಎಸ್‌ 800 ಮೆಗಾ ವಾಟ್‌ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯದ 1ನೇ ಘಟಕವನ್ನು, ಏಪ್ರಿಲ್‌ 6 ರಂದು 2 ನೇ ಘಟಕವನ್ನು ವಾಣಿಜ್ಯ ಬಳಕೆಗೆ ಘೋಷಣೆ ಮಾಡಲಾಯಿತು.

ಮಾರ್ಚ್‌ 15: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ್ದ ಬಜೆಟ್‌ನಲ್ಲಿ ರಾಯಚೂರಿಗೆ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪನೆ, ಸಿರವಾರ, ಮಸ್ಕಿ ಹೊಸ ತಾಲ್ಲೂಕುಗಳನ್ನು ರಚಿಸುವುದಾಗಿ ಘೋಷಿಸಿದ್ದರು. ಹೊಸ ವರ್ಷಾರಂಭ ಪೂರ್ವ ಹೊಸ ತಾಲ್ಲೂಕುಗಳು ಅಸ್ತಿತ್ವಕ್ಕೆ ಬಂದಿವೆ.

ಮಾರ್ಚ್‌ 17: ಲಿಂಗಸುಗೂರಿನ ಸೌಂಡ್ ಸರ್ವಿಸ್ ಅಂಗಡಿಯೊಂದರಲ್ಲಿ ರಾತ್ರಿ ಮಲಗಿದ್ದ ಐದು ಯುವಕರು ಜನರೇಟರ್ ಕಾರ್ಬನ್ ಹೊಗೆ ಸೇವಿಸಿ ಮೃತಪಟ್ಟರು.

ಮಾರ್ಚ್‌ 24: ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದ ಕೂರ್ಮಾರಾವ್‌ ಅವರನ್ನು ಜನರು ಕೈಯಿಂದ ಎತ್ತಿ ಹಳ್ಳ ದಾಟಿಸಿದ್ದು ಸುದ್ದಿಯಾಗಿತ್ತು.

lಮಾರ್ಚ್‌ 26: ರಿಮ್ಸ್‌ ಐಸಿಯುನಲ್ಲಿದ್ದ ಶಿಶು ನಿಗೂಢ ನಾಪತ್ತೆ. ಪ್ರಕರಣದ ಆರೋಪಿಗಳ ಬಂಧನ.

ಏಪ್ರಿಲ್‌

ಏಪ್ರಿಲ್‌ 5: ಟಿಎಲ್‌ಬಿಸಿ ಹಂಗಾಮಿ ಕಾರ್ಮಿಕರು ಬೆಂಗಳೂರಿಗೆ ಪಾದಯಾತ್ರೆ. ಆನಂತರ ಶಿರಾ ಬಳಿ ಪೊಲೀಸರು ಅವರನ್ನು ಬಂಧಿಸಿ ರಾಯಚೂರಿಗೆ ಕರೆತಂದರು. ಅನಿರ್ದಿಷ್ಟಾವಧಿ ಧರಣಿ ನಡೆಸಿದ ಕಾರ್ಮಿಕರಿಗೆ ನೀರಾವರಿ ಇಲಾಖೆಯು ಸ್ಪಂದಿಸಿತು.

ಏಪ್ರಿಲ್‌ 22: ಸಿಂಧನೂರಿನ ಸೂಪರ್ ಮಾರ್ಕೆಟ್‌ಗೆ ಬೆಂಕಿ ತಗುಲಿ ಸುಮಾರು ₹ 75 ಲಕ್ಷ ಮೌಲ್ಯದ ಬಟ್ಟೆಗಳು ಭಸ್ಮ

ಮೇ

ಮೇ 24: ಸಿಂಧನೂರು ಸಿಎಸ್‌ಎ ಬಳಿ 54ನೇ ಉಪಕಾಲುವೆಗೆ ಟ್ರ್ಯಾಕ್ಟರ್ ಉರುಳಿ ಮೂವರು ಕಾರ್ಮಿಕರು ಮೃತಪಟ್ಟರು.

ಜೂನ್‌

ಜೂನ್‌ 22: ಮುಖ್ಯಮಂತ್ರಿಗಳು ಘೋಷಿಸಿದ ₹50 ಸಾವಿರ ಸಾಲಮನ್ನಾ ಯೋಜನೆಯಿಂದ ಜಿಲ್ಲೆಯ 89,223 ರೈತರಿಗೆ ಅನುಕೂಲವಾಯಿತು.

ಜುಲೈ

ಜುಲೈ 13: ಲಿಂಗಸೂಗೂರು ತಾಲ್ಲೂಕಿನ ರೈತರ ಬಹುದಿನದ ಬೇಡಿಕೆಯಾಗಿದ್ದ ನಂದವಾಡಗಿ ಏತ ನೀರಾವರಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ.

ಆಗಸ್ಟ್‌

ಆಗಸ್ಟ್‌ 3: ಸಿಂಧನೂರು ಮತ್ತು ಸಿರವಾರಗಳಲ್ಲಿ ರೈತರು ಬಂದ್ ಆಚರಿಸಿದರು. ತುಂಗಭದ್ರಾ ಎಡದಂಡೆ ಕಾಲುವೆಗೆ ನೀರು ಹರಿಸಬೇಕು, ಹಾಕಿದ ಬೆಳೆ ಉಳಿಸಬೇಕು ಎಂದು ಒತ್ತಾಯ.

ಆಗಸ್ಟ್‌ 29: ನರ್ಮದಾ ಬಚಾವೋ ಆಂದೋಲನದ ರೂವಾರಿ ಮೇಧಾ ಪಾಟ್ಕರ್‌ ಅವರು ರಾಯಚೂರಿನ ಎಪಿಎಂಸಿ ಆವರಣದಲ್ಲಿ ನಡೆದ ಮದ್ಯ ನಿಷೇಧ ಹೋರಾಟ ಸಭೆ ಹಾಗೂ ರ‍್ಯಾಲಿಯಲ್ಲಿ ಭಾಗಿ

ಸೆಪ್ಟೆಂಬರ್‌

ಸೆಪ್ಟೆಂಬರ್‌ 17 : ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯಿತು. ವಿವಿಧೆಡೆ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಕೃಷ್ಣಾ ನದಿಗೆ ಬಸವಸಾಗರದಿಂದ 2.4 ಲಕ್ಷ ಕ್ಯೂಸೆಕ್ ನೀರು ಹರಿಸಿದ್ದರಿಂದ ಲಿಂಗಸುಗೂರು ತಾಲ್ಲೂಕಿನ ಅನೇಕ ಗ್ರಾಮಗಳು ನಡುಗಡ್ಡೆ ಆಗಿದ್ದವು. ಜನರು ಎರಡು ದಿನ ಸಂಪರ್ಕ ಕಳೆದುಕೊಂಡಿದ್ದರು.

ಅಕ್ಟೋಬರ್‌

ಅಕ್ಟೊಬರ್‌ 8: ಸತತ ಮಳೆಯಿಂದ ಜಿಲ್ಲೆಯಲ್ಲಿ ಆಗಿರುವ ಆಗಿರುವ ಹಾನಿಯ ವರದಿಯನ್ನು ಜಿಲ್ಲಾಡಳಿತವು ಸರ್ಕಾರಕ್ಕೆ ಸಲ್ಲಿಸಿತು. ಸುಮಾರು 75 ಸಾವಿರ ಹೆಕ್ಟೇರ್‌ ಬೆಳೆನಾಶವಾಯಿತು. ರಸ್ತೆ, ಕಿರು ಸೇತುವೆಗಳು ಹಾಗೂ ವಿದ್ಯುತ್‌ ಕಂಬಗಳು ಕೊಚ್ಚಿಹೋಗಿ ಮೂಲ ಸೌಕರ್ಯಗಳಿಗೆ ಧಕ್ಕೆ ಆಯಿತು.

ನವೆಂಬರ್‌

ನವೆಂಬರ್‌ 1 : ಮಾನ್ವಿ ತಾಲ್ಲೂಕಿನ ಕರಡಿಗುಡ್ಡದ ಜನಪದ ಗಾಯಕಿ ದುರ್ಗಮ್ಮ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನವೆಂಬರ್‌ 27: ರಾಯಚೂರು ನಗರ ಮತ್ತು ಗ್ರಾಮೀಣ ಶಾಸಕರು ನಿರಂತರ ವಿದ್ಯುತ್‌ಗಾಗಿ ಒತ್ತಾಯಿಸಿ ಗಾಣಧಾಳದಿಂದ ಶಕ್ತಿನಗರದವರೆಗೂ ಪಾದಯಾತ್ರೆ.ಯಾತ್ರೆಗೆ ಜನರಿಂದ ಭಾರಿ ಸ್ಪಂದನೆ. ಆದರೆ ಪಾದಯಾತ್ರೆಯ ಅಂತ್ಯವು ನಾಟಕೀಯವಾಗಿತ್ತು. ಪಾದಯಾತ್ರೆಯ ವೇಳೆ ನಿರಂತರ ವಿದ್ಯುತ್‌ ಪೂರೈಕೆ ಮಾಡಲಾಗಿತ್ತು. ಆನಂತರದಲ್ಲಿ ವಿದ್ಯುತ್‌ ಕಣ್ಣುಮುಚ್ಚಾಲೆ ಮುಂದುವರಿಯಿತು.

ಡಿಸೆಂಬರ್‌

ಡಿಸೆಂಬರ್‌ 8 ರಿಂದ 11: ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ ಕೃಷಿ ಮೇಳ ಆಯೋಜನೆ

ಡಿಸೆಂಬರ್‌ 13 : ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಪರಿವರ್ತನಾ ರ‍್ಯಾಲಿ.

ಡಿ.15: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾನ್ವಿಯಲ್ಲಿ ₹362 ಕೋಟಿ ವಿವಿಧ ಕಾಮಗಾರಿಗಳಿಗೆ ಚಾಲನೆ

ಡಿ. 23: ನಟಿ ಪೂಜಾ ಗಾಂಧಿ ಅವರು ಕೋರ್ಟ್‌ ಕೇಸ್‌ನಿಂದ ಖುಲಾಸೆ.ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣವು ನಾಲ್ಕೂವರೆ ವರ್ಷಗಳ ಬಳಿಕ ಸುಖಾಂತ್ಯ.

ಡಿ. 24, 25: ಸಾವಯವ ಮತ್ತು ಸಿರಿಧಾನ್ಯ ಮೇಳಕ್ಕೆ ಜನರಿಂದ ಅಭೂತಪೂರ್ವ ಸ್ಪಂದನೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry