ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಇಲಾಖೆ ಅಧಿಕಾರಿಗಾಗಿ 2 ತಾಸು ಕಾಯ್ದ ಡಿ.ಸಿ

ಜಿಲ್ಲಾಧಿಕಾರಿ ಕಾರು ತಡೆಗಟ್ಟಿದ ಬಸಾಪುರ ಗ್ರಾಮಸ್ಥರು, ಪಡಿತರ ಸಮಸ್ಯೆ ತೋಡಿಕೊಂಡ ಜನರು
Last Updated 31 ಡಿಸೆಂಬರ್ 2017, 11:53 IST
ಅಕ್ಷರ ಗಾತ್ರ

ಕವಿತಾಳ: ಕಂದಾಯ ಮತ್ತು ಆಹಾರ ಇಲಾಖೆ ಅಧಿಕಾರಿಗಳ ಬರುವಿಕೆಗಾಗಿ ಜಿಲ್ಲಾಧಿಕಾರಿ ಬಗಾದಿ ಗೌತಮ್‌ ಅವರು ಎರಡು ಗಂಟೆಗೂ ಅಧಿಕ ಸಮಯ ಕಾಯ್ದು ಕುಳಿತ ಪ್ರಸಂಗ ಸಮೀಪದ ಬಸಾಪುರ ಗ್ರಾಮದಲ್ಲಿ ಶನಿವಾರ ನಡೆದಿದೆ.

ಮಸ್ಕಿಗೆ ತೆರಳುತ್ತಿದ್ದ ಜಿಲ್ಲಾಧಿಕಾರಿಯವರ ಕಾರು ತಡೆದ ಗ್ರಾಮಸ್ಥರು ಪಡಿತರ ವಿತರಣೆ ಸಮಸ್ಯೆ ಕುರಿತು ಮಾಹಿತಿ ನೀಡಿದರು. ಸಾರ್ವಜನಿಕರ ದೂರು ಆಲಿಸಿದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಅವರು ಆಹಾರ ಇಲಾಖೆ ಅಧಿಕಾರಿ ಅಮರೇಶ ಅವರಿಗೆ ದೂರವಾಣಿ ಕರೆ ಮಾಡಿ ಕೂಡಲೇ ಸ್ಥಳಕ್ಕೆ ಬರುವಂತೆ ಸೂಚಿಸಿದರು. ಅಧಿಕಾರಿ ಸ್ಥಳಕ್ಕೆ ಬರುವ ತನಕ 2 ಗಂಟೆಗೂ ಅಧಿಕ ಸಮಯ ಜಿಲ್ಲಾಧಿಕಾರಿಗಳು ಕಾಯ್ದು ಕುಳಿತರು.

ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಬಸಾಪುರ, ಗೂಗೆಬಾಳ, ಪರಸಾಪುರ ಮತ್ತು ಇರಕಲ್‌ ಗ್ರಾಮಗಳ ಜನರು ಪಡಿತರ ವಿತರಣೆಯಲ್ಲಿನ ಸಮಸ್ಯೆ ಕುರಿತು ಮಾಹಿತಿ ನೀಡಿದರು. ಸ್ಥಳಕ್ಕೆ ತಡವಾಗಿ ಬಂದ ಗ್ರಾಮಲೆಕ್ಕಿಗ ಸದಾಕ್‌ ಅಲಿ ಹಾಗೂ ಆಹಾರ ಇಲಾಖೆಯ ಅಧಿಕಾರಿ ಅಮರೇಶ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಪಡಿತರ ವಿತರಣೆಯಲ್ಲಿನ ಸಮಸ್ಯೆ ಕುರಿತು ಲಿಖಿತ ದೂರು ನೀಡುತ್ತಿದ್ದರೂ ಆಹಾರ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದರು.

ನ್ಯಾಯಬೆಲೆ ಅಂಗಡಿಯ ಪರವಾನಗಿಯನ್ನು ತಕ್ಷಣ ರದ್ದುಗೊಳಿಸಿ ವ್ಯವಸ್ಥಾಪಕರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ ತಮಗೆ ಲಿಖಿತ ವರದಿ ನೀಡುವಂತೆ ಆಹಾರ ಇಲಾಖೆ ಅಧಿಕಾರಿಗೆ ಸೂಚಿಸಿದರು.
ಕ್ರಮ ಕೈಗೊಳ್ಳಲು ಹಿಂದೇಟು ಹಾಕಿದಲ್ಲಿ ಅಮಾನತು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿಯವರು ಗ್ರಾಮದಿಂದ ತೆರಳಿದ ನಂತರ ಆಹಾರ ಇಲಾಖೆ ಉಪ ನಿರ್ದೇಶಕ ಪ್ರಭಾಕರ ವಾಲ್ಗದ್‌ ಭೇಟಿ ನೀಡಿ ಗ್ರಾಮಸ್ಥರಿಂದ ಮಾಹಿತಿ ಪಡೆದರು.

***
ದಾಖಲೆಗಳ ಪರಿಶೀಲನೆ ವೇಳೆ ಪಡಿತರ ವಿತರಣೆಯಲ್ಲಿ ಲೋಪಗಳು ಕಂಡು ಬಂದಿವೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಸಮರ್ಪಕ ವಿತರಣೆಗೆ ಅನುಕೂಲ ಕಲ್ಪಿಸಲಾಗುವುದು.
-ಡಾ.ಬಗಾದಿ ಗೌತಮ್‌,
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT