ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಚ್‌ನಲ್ಲಿ ಮೋಜುಕೂಟ ನಡೆಸದಂತೆ ಕಟ್ಟೆಚ್ಚರ

650 ಪೊಲೀಸರು, ಆರು ಕೆಎಸ್ಆರ್‌ಪಿ, 15 ಸಿಎಆರ್‌ ತುಕಡಿಗಳ ನಿಯೋಜನೆ
Last Updated 31 ಡಿಸೆಂಬರ್ 2017, 11:52 IST
ಅಕ್ಷರ ಗಾತ್ರ

ಮಂಗಳೂರು: ಈ ಬಾರಿಯ ಹೊಸ ವರ್ಷಾಚರಣೆಯ ಮೋಜುಕೂಟಗಳಿಗಾಗಿ ಸಾರ್ವಜನಿಕರು ಬೀಚ್‌ಗಳತ್ತ ತೆರಳುವಂತಿಲ್ಲ. ಕರಾವಳಿ ಉತ್ಸವದ ಭಾಗವಾಗಿ ಪಣಂಬೂರಿನಲ್ಲಿ ನಡೆಯುತ್ತಿರುವ ‘ಬೀಚ್‌ ಉತ್ಸವ’ದ ಹೊರತಾಗಿ ಯಾವುದೇ ಕಡಲ ತೀರದಲ್ಲೂ ಹೊಸ ವರ್ಷಾಚರಣೆ ಕೂಟ ನಡೆಸದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ತಣ್ಣೀರುಬಾವಿ, ಉಳ್ಳಾಲ, ಸೋಮೇಶ್ವರ, ಸಸಿಹಿತ್ಲು ಸೇರಿದಂತೆ ನಗರದ ಸುತ್ತಮುತ್ತಲಿನ ಎಲ್ಲ ಬೀಚ್‌ಗಳ ಸಂಪರ್ಕ ರಸ್ತೆಗಳನ್ನು ಭಾನುವಾರ ಸಂಜೆಯೇ ಮುಚ್ಚಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ನದಿ ಕಿನಾರೆಗಳಲ್ಲೂ ಮೋಜುಕೂಟಗಳನ್ನು ಆಯೋಜಿಸದಂತೆ ಪೊಲೀಸರು ನಿಗಾ ವಹಿಸಿದ್ದಾರೆ. ಕಣ್ತಪ್ಪಿಸಿ ಬೀಚ್‌ಗಳು, ನದಿ ಕಿನಾರೆಗಳಲ್ಲಿ ಮೋಜು ಕೂಟಗಳನ್ನು ಆಯೋಜಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ನಗರ ಪೊಲೀಸ್‌ ಕಮಿಷನರ್‌ ಟಿ.ಆರ್‌.ಸುರೇಶ್‌ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಕರಾವಳಿ ಉತ್ಸವದ ಅಂಗವಾಗಿ ನಡೆಯುತ್ತಿರುವ ಬೀಚ್‌ ಉತ್ಸವದಲ್ಲಿ ಸಹಸ್ರಾರು ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಅಲ್ಲಿ ಮಧ್ಯರಾತ್ರಿ 12 ಗಂಟೆಗೆ ಹೊಸ ವರ್ಷಾಚರಣೆ ಪ್ರಯುಕ್ತ ವಿಶೇಷ ಸಂಗೀತ ಕಾರ್ಯಕ್ರಮ ಆಯೋಜನೆಯಾಗಿದೆ. ಸಹಸ್ರಾರು ಮಂದಿ ಒಟ್ಟಿಗೆ ನೃತ್ಯ ಮಾಡುವ ಸಮಯದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ತಪ್ಪಿಸಲು ಪೊಲೀಸರು ವಿಶೇಷ ಭದ್ರತಾ ಯೋಜನೆ ರೂಪಿಸಿಕೊಂಡಿದ್ದಾರೆ.

ಪಣಂಬೂರು ಬೀಚ್‌ ಪ್ರದೇಶದಲ್ಲೂ ಮದ್ಯಪಾನ, ಧೂಮಪಾನ ಸೇರಿದಂತೆ ಮೋಜು ಕೂಟಗಳನ್ನು ಆಯೋಜಿಸಲು ಅವಕಾಶವಿಲ್ಲ. ಬೀಚ್‌ ಉತ್ಸವದ ಭಾಗವಾಗಿ ನಡೆಯುವ ಸಂಗೀತ ಕಾರ್ಯಕ್ರಮವನ್ನು ಆಸ್ವಾದಿಸಲು ಬರುವವರಿಗೆ ಮಾತ್ರ ಅವಕಾಶವಿದೆ.

ಅನುಮತಿ ಪತ್ರಗಳ ವಿತರಣೆ:

ಒಳಾಂಗಣ ಮತ್ತು ಸುರಕ್ಷಿತ ತಡೆಗೋಡೆ, ಆವರಣ ಬೇಲಿ ಹೊಂದಿರುವ ಸ್ಥಳಗಳಲ್ಲಿ ಮಾತ್ರ ಹೊಸ ವರ್ಷಾಚರಣೆಯ ಮೋಜುಕೂಟಗಳನ್ನು ಆಯೋಜಿಸಲು ಪೊಲೀಸರು ಅನುಮತಿ ನೀಡಿದ್ದಾರೆ.

‘ನಿಗದಿತ ನಮೂನೆಯಲ್ಲಿ ಅರ್ಜಿ ಮತ್ತು ಪ್ರಮಾಣಪತ್ರಗಳನ್ನು ಸಲ್ಲಿಸಿರುವವರಿಗೆ ಮಾತ್ರವೇ ಮೋಜುಕೂಟಗಳನ್ನು ಆಯೋಜಿಸಲು ಅನುಮತಿ ನೀಡಲಾಗಿದೆ. ಕೂಟಗಳು ನಡೆಯುವ ಸ್ಥಳಗಳಲ್ಲಿ ಅಹಿತಕರ ಘಟನೆಗಳು ಸಂಭವಿಸಿದರೆ ಆಯೋಜಕರೇ ಹೊಣೆ ಎಂಬುದಾಗಿ ಅವರಿಂದ ಪ್ರಮಾಣಪತ್ರಗಳನ್ನು ಪಡೆಯಲಾಗಿದೆ’ ಎಂದು ಟಿ.ಆರ್.ಸುರೇಶ್ ತಿಳಿಸಿದರು.

ನಗರದ ಬಹುತೇಕ ಬಾರ್‌ ಮತ್ತು ರೆಸ್ಟೋರೆಂಟ್‌ಗಳು, ಐಷಾರಾಮಿ ಹೋಟೆಲ್‌ಗಳು, ಕ್ಲಬ್‌ಗಳು, ರೆಸಾರ್ಟ್‌ಗಳು, ಕೆಲವು ಸಂಘ ಸಂಸ್ಥೆಗಳು ಮೋಜುಕೂಟ ನಡೆಸಲು ಅನುಮತಿ ಪಡೆದುಕೊಂಡಿವೆ. ಟಿ.ಎಂ.ಎ. ಪೈ ಸಭಾಂಗಣ ಸೇರಿದಂತೆ ಬಿಗಿಯಾದ ತಡೆಗೋಡೆ, ಆವರಣ ಬೇಲಿ ಹೊಂದಿರುವ ಕೆಲವು ಸ್ಥಳಗಳಲ್ಲಿ ಹೊರಾಂಗಣ ಕೂಟಗಳಿಗೆ ಅವಕಾಶ ನೀಡಲಾಗಿದೆ.

650 ಪೊಲೀಸರ ನಿಯೋಜನೆ:

ಹೊಸ ವರ್ಷಾಚರಣೆ ವೇಳೆ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ನಗರದಲ್ಲಿ ಭದ್ರತಾ ಕಾರ್ಯಕ್ಕೆ 650 ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ರಾಜ್ಯ ಮೀಸಲು ಪೊಲೀಸ್‌ ಪಡೆಯ ಆರು ತುಕಡಿಗಳು, ನಗರ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ 15 ತುಕಡಿಗಳನ್ನು ಹೊಸ ವರ್ಷಾಚರಣೆಯ ಭದ್ರತೆಗೆ ನಿಯೋಜಿಸಲಾಗಿದೆ. ಇದರೊಂದಿಗೆ ಗೃಹರಕ್ಷಕ ದಳದ 120 ಸಿಬ್ಬಂದಿಯನ್ನೂ ಬಳಸಿಕೊಳ್ಳಲಾಗುತ್ತಿದೆ.

ಆಯಾ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ನಡೆಯುವ ಮೋಜು ಕೂಟಗಳ ಸಮಗ್ರ ವಿವರಗಳನ್ನು ಕಲೆಹಾಕುವಂತೆ ಪೊಲೀಸ್‌ ಕಮಿಷನರ್‌ ಎಲ್ಲ ಠಾಣೆಗಳ ಇನ್‌ಸ್ಪೆಕ್ಟರ್‌ ಮತ್ತು ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. 12 ಗಂಟೆಗೆ ಸರಿಯಾಗಿ ಕೂಟಗಳನ್ನು ಸ್ಥಗಿತಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆಯೂ ಸೂಚನೆ ನೀಡಿದ್ದಾರೆ.

ಚಾಲಕರ ತಪಾಸಣೆಗೆ ತಂಡ:

ಮೋಜು ಕೂಟಗಳಲ್ಲಿ ಪಾಲ್ಗೊಂಡವರು ಮದ್ಯ ಸೇವಿಸಿದ ಬಳಿಕ ವಾಹನ ಚಾಲನೆ ಮಾಡಿ ಅಪಘಾತಕ್ಕೆ ಕಾರಣವಾಗುವುದನ್ನು ತಡೆಯಲು ಸಂಚಾರ ಪೊಲೀಸರ ವಿಶೇಷ ತಂಡಗಳನ್ನು ರಚಿಸಲಾಗಿದೆ. ನಗರದ ಪ್ರಮುಖ ವೃತ್ತಗಳಲ್ಲಿ ರಾತ್ರಿ ಈ ತಂಡಗಳು ವಾಹನ ಚಾಲಕರ ತಪಾಸಣೆ ನಡೆಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT