ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನನ್ನ ಅವಧಿಯಲ್ಲಿ ಅವ್ಯವಹಾರ ನಡೆದಿಲ್ಲ’

ಎಡಿಬಿ ಮೊದಲ ಹಂತದ ಕಾಮಗಾರಿ ಕಳಪೆ: ಪ್ರತಿಪಕ್ಷಗಳ ಆರೋಪ
Last Updated 31 ಡಿಸೆಂಬರ್ 2017, 11:57 IST
ಅಕ್ಷರ ಗಾತ್ರ

ಮಂಗಳೂರು: ಎಡಿಬಿ ಮೊದಲ ಹಂತದ ಯೋಜನೆಯಡಿ ಸುರತ್ಕಲ್‌ ಭಾಗದಲ್ಲಿ ಕೈಗೆತ್ತಿಕೊಳ್ಳಲಾದ ಒಳಚರಂಡಿ ಅವ್ಯವಸ್ಥೆಯ ಕುರಿತು ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ನಡುವೆ ಶನಿವಾರ ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ತೀವ್ರ ವಾಗ್ವಾದ ನಡೆಯಿತು.

ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷದ ನಾಯಕ ಗಣೇಶ್‌ ಹೊಸಬೆಟ್ಟು, ಸುರತ್ಕಲ್‌ನ ಮಧ್ವನಗರದಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು ತೆರೆದಿಡಲಾಗಿದೆ. ತ್ಯಾಜ್ಯ ನೀರಿನ ಮರುಬಳಕೆಗೆ ಪಾಲಿಕೆಯು ಎಂಆರ್‌ಪಿಎಲ್ ಜತೆಗೆ ಒಡಂಬಡಿಕೆ ಮಾಡಿಕೊಂಡಿದೆ. ಆದರೆ, ಎಂಆರ್‌ಪಿಎಲ್‌ವರೆಗೆ ಪೈಪ್‌ಲೈನ್‌ ಅಳವಡಿಕೆ ಆಗಿಲ್ಲ. ಹೀಗಾಗಿ ಸಂಸ್ಕರಿಸಿದ ನೀರು ಚರಂಡಿ ಪಾಲಾಗುತ್ತಿದೆ. ಇದರಿಂದ ಬಡಾವಣೆಯ ನಾಗರಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು.

ವೆಟ್‌ವೆಲ್‌ ಮತ್ತು ಮ್ಯಾನ್‌ ಹೋಲ್‌ಗಳಲ್ಲಿ ಸೋರಿಕೆಯಾಗುತ್ತಿದ್ದು, ಇದರಿಂದ ದುರ್ವಾಸನೆ ಬೀರುತ್ತಿದೆ. ಒಳಚರಂಡಿ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಧ್ವನಿಗೂಡಿಸಿದ ಸುಧೀರ್‌ ಶೆಟ್ಟಿ, ನಗರದ ಜಲ್ಲಿಗುಡ್ಡೆ, ಫೈಸಲ್‌ನಗರ, ಪಡೀಲ್‌ನಲ್ಲಿಯೂ ಒಳಚರಂಡಿ ವ್ಯವಸ್ಥೆಯ ವೆಟ್‌ವೆಲ್‌ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಿದರು.

ಪಾಲಿಕೆ ಅಧಿಕಾರಿಗಳು ಸಮೀಕ್ಷೆ ನಡೆಸಿದ್ದು, ಕೆಲವೆಡೆ ಮುಖ್ಯ ಮಾರ್ಗಕ್ಕೆ ಸಂಪರ್ಕ ತಪ್ಪಿರುವುದು ಪತ್ತೆಯಾಗಿದೆ. ಇದನ್ನು ಸರಿಪಡಿಸಲು ₹19.19 ಕೋಟಿ ಮೊತ್ತದ ಕ್ರಿಯಾ ಯೋಜನೆ ರೂಪಿಸಲಾಗಿದೆ. ಅದಾಗ್ಯೂ ಅಮೃತ್‌ ಯೋಜನೆಯಡಿ ಒಳಚರಂಡಿ ವ್ಯವಸ್ಥೆ ಸರಿಪಡಿಸಲು ₹56 ಕೋಟಿ ಮೀಸಲಿಡಲಾಗಿದೆ. ಎಡಿಬಿ ಮೊದಲ ಹಂತದ ಯೋಜನೆ ಸಂಪೂರ್ಣ ವಿಫಲವಾಗಿದ್ದು, ಆಡಳಿತ ಪಕ್ಷದ ಸದಸ್ಯರು ಎರಡನೇ ಹಂತದ ಯೋಜನೆ ಕೈಗೆತ್ತಿಕೊಳ್ಳಲು ಉತ್ಸುಕರಾಗಿದ್ದಾರೆ ಎಂದು ಗಣೇಶ್‌ ಹೊಸಬೆಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಗಿನ ಕುಡ್ಸೆಂಪ್‌ ಉಪ ಯೋಜನಾ ನಿರ್ದೇಶಕರಾಗಿದ್ದ ಶಾಸಕ ಜೆ.ಆರ್‌. ಲೋಬೊ, ‘ನನ್ನ ಅವಧಿಯಲ್ಲಿ ಕಳಪೆ ಕಾಮಗಾರಿ ನಡೆದಿಲ್ಲ. ಅಧಿಕಾರಿಯಾಗಿ ನನ್ನ ಅವಧಿ 2009 ಡಿಸೆಂಬರ್‌ಗೆ ಪೂರ್ಣ ಗೊಂಡಿದೆ. ಸುರತ್ಕಲ್‌ ಭಾಗದಲ್ಲಿ 2011 ರಲ್ಲಿ ಒಳಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ’ ಎಂದರು.

‘ಆಗ ಅಧಿಕಾರದಲ್ಲಿ ಇದ್ದವರು ಇದರ ಜವಾಬ್ದಾರಿ ಹೊತ್ತುಕೊಳ್ಳಬೇಕು. ನನ್ನ ಅವಧಿಯಲ್ಲಿ ಯಾವುದೇ ಭ್ರಷ್ಟಾ ಚಾರ ಆಗಿಲ್ಲ’ ಎಂದು ಸ್ಪಷ್ಟಪಡಿಸಿದರು.

ಇದರಿಂದಾಗಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆಯಿತು. ಕೆಲಕಾಲ ಪಾಲಿಕೆ ಸಭಾಂಗಣದಲ್ಲಿ ಗದ್ದಲದ ವಾತಾವರಣ ಉಂಟಾಗಿತ್ತು.

ಈ ಮಧ್ಯೆ ಮಾತು ಮುಂದುವರಿಸಿದ ಲೋಬೊ, ರಾಜಕೀಯ ಕಾರಣಕ್ಕಾಗಿ ಒಬ್ಬರತ್ತ ಬೊಟ್ಟು ಮಾಡುವುದು ಸರಿಯಲ್ಲ. ಮೊದಲ ಹಂತದಲ್ಲಿ ಕಳಪೆ ಕಾಮಗಾರಿ ಆಗಿದ್ದರೆ, ಪರಿಣಿತರ ತಂಡದಿಂದ ಕಾಮಗಾರಿಯ ಪರಿಶೀಲನೆ ಮಾಡಬಹುದು. ಯಾವುದೇ ರೀತಿಯ ತನಿಖೆಯನ್ನು ಸ್ವಾಗತಿಸುವುದಾಗಿ ಹೇಳಿದರು.

ದಾಖಲೆಗಳೇ ಇಲ್ಲ: ಎಡಿಬಿ ಮೊದಲ ಹಂತದ ಯೋಜನೆಯಡಿ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮಂಡಳಿಯಿಂದ ಕೈಗೊಳ್ಳಲಾದ ಕಾಮಗಾರಿಗಳನ್ನು ಹಸ್ತಾಂತರಿಸಿದ ಬಗ್ಗೆ ಪಾಲಿಕೆಯಲ್ಲಿ ಯಾವುದೇ ದಾಖಲೆಗಳಿಲ್ಲ ಎಂದು ಪ್ರತಿಪಕ್ಷದ ಸದಸ್ಯ ಪ್ರೇಮಾನಂದ ಶೆಟ್ಟಿ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಎಂ. ಮುಹಮ್ಮದ್‌ ನಜೀರ್‌, ಎಲ್ಲ ದಾಖಲೆಗಳಿದ್ದು, ಮುಂದಿನ ಸಭೆಯಲ್ಲಿ ಒದಗಿಸುವುದಾಗಿ ಭರವಸೆ ನೀಡಿದರು.

ಆಡಳಿತ ಪಕ್ಷದ ಸದಸ್ಯ ಎ.ಸಿ. ವಿನಯ್‌ರಾಜ್‌ ಮಾತನಾಡಿ, ಎಡಿಬಿ ಎರಡನೇ ಹಂತದಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ₹75 ಕೋಟಿ ವೆಚ್ಚದ ಕಾಮಗಾರಿಗಳ ಆದೇಶ ಪತ್ರವನ್ನು ಗುತ್ತಿಗೆದಾರರಿಗೆ ಇದುವರೆಗೆ ಹಸ್ತಾಂತರಿಸಿಲ್ಲ ಏಕೆ ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಮತ್ತೆ ಕೆರಳಿದ ಪ್ರತಿಪಕ್ಷದ ಸದಸ್ಯರು, ಎರಡನೇ ಹಂತದ ಕಾಮಗಾರಿಯ ಬಗ್ಗೆ ಪಾಲಿಕೆ ಸಭೆಯಲ್ಲಿ ಯಾವುದೇ ನಿರ್ಣಯ ಕೈಗೊಂಡಿಲ್ಲ. ಪ್ರತಿಪಕ್ಷಗಳನ್ನು ಕತ್ತಲೆಯಲ್ಲಿ ಇಡಲಾಗಿದೆ. ಎರಡನೇ ಹಂತದ ಕಾಮಗಾರಿ ಕೈಗೆತ್ತಿಕೊಳ್ಳಲು ಮೇಯರ್‌ ಉತ್ಸುಕತೆ ತೋರುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.

ಉಪಮೇಯರ್ ರಜನೀಶ್ ಕಾಪಿಕಾಡ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ನಾಗವೇಣಿ, ಅಬ್ದುಲ್ ರವೂಫ್, ಪ್ರತಿಭಾ ಕುಳಾಯಿ, ಸಬಿತಾ ಮಿಸ್ಕಿತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT