ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರವಸೆಯ ಕಿರಣಗಳಿಗೆ ಮೈಯೊಡ್ಡುತ್ತಾ...

Last Updated 31 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಒಂದೆಡೆ ಬೊಗಸೆ ತುಂಬಾ ಸಿಹಿ ನೆನಪು; ಇನ್ನೊಂದೆಡೆ ಮ‌ತ್ತಷ್ಟು ಸಾಧನೆಯ ತುಡಿತ. ಹೊಸ ಸಂವತ್ಸರದ ಬಾಗಿಲೊಳಗೆ ಪ್ರವೇಶಿಸಿ ಲವಲವಿಕೆಯ ಹೊಸ ಕಿರಣಗಳಿಗೆ ಮೈಯೊಡ್ಡಿ ನಿಂತಾಗಿದೆ. ಕ್ರೀಡಾಲೋಕದ ಹೊಸಪುಟಗಳನ್ನು ತೆರೆಯುವ ಸಮಯವಿದು.

2017ರಲ್ಲಿ ಅದ್ಭುತ ಸಾಧನೆಗಳಿಗೆ ಕಾರಣರಾದ ದೇಶದ ಕ್ರೀಡಾಪಟುಗಳಿಗೆ ಧನ್ಯವಾದ ಹೇಳತ್ತಲೇ ಮುಂದಿನ ಹೆಜ್ಜೆ ಇಡಬೇಕು. ಭಾರತದ  ಕ್ರೀಡಾ ಕ್ಷೇತ್ರದ ಮಟ್ಟಿಗೆ ಗತಿಸಿದ ಸಂವತ್ಸರ ಹಲವು ನೆನಪುಗಳನ್ನು ಕಟ್ಟಿಕೊಟ್ಟಿದೆ. ಅದೊಂದು ವಿಶೇಷ ವರ್ಷ. ಆ ಕ್ಷಣಗಳನ್ನು ನೆನಪಿಸಿಕೊಂಡರೆ ನಿರಾಳ ಭಾವ. ಮನಸ್ಸು ಹಗುರವಾದ ಭಾವನೆ. ಎಲ್ಲಿ ನೋಡಿದರಲ್ಲಿ ಸಾಧನೆಯ ಹೆಜ್ಜೆ ಗುರುತುಗಳು. ಹೀಗಾಗಿ, ಹೊಸ ಸಂವತ್ಸರದೊಳಗೆ ಖುಷಿ, ಹುರುಪಿನಿಂದಲೇ ಕಾಲಿಡಬಹುದು.

ಅದರಲ್ಲೂ ಕ್ರಿಕೆಟ್‌ ಹಾಗೂ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಮೇಲೆ ತುಂಬಾ ಭರವಸೆ ಇಟ್ಟುಕೊಳ್ಳಲಾಗಿದೆ. ಬಾಕ್ಸಿಂಗ್‌, ಕುಸ್ತಿ, ಹಾಕಿ, ಶೂಟಿಂಗ್‌ನಲ್ಲೂ ಸಾಧನೆಯ ವಿಶ್ವಾಸವಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಕೇವಲ ಮೂರು ತಿಂಗಳು ಬಾಕಿ ಇದೆ. ಜೊತೆಗೆ ಏಷ್ಯನ್‌ ಕ್ರೀಡಾಕೂಟ, ರಾಷ್ಟ್ರೀಯ ಕ್ರೀಡಾಕೂಟಗಳು ಎದುರುಗಿವೆ. ಎಲ್ಲರ ನಿರೀಕ್ಷೆಯ ವಿಶ್ವಕಪ್‌ ಫುಟ್‌ಬಾಲ್‌ ಈ ವರ್ಷವೇ ನಡೆಯಲಿದೆ. ಫುಟ್‌ಬಾಲ್‌ನಲ್ಲಿ ಭಾರತವೇನು ಅರ್ಹತೆ ಪಡೆದಿಲ್ಲ ಬಿಡಿ!

ಕ್ರಿಕೆಟ್‌ನ ಸವಾಲು, ಭರವಸೆ

ಬಹುಜನರು ಹಿಂಬಾಲಿಸುವ ಕ್ರಿಕೆಟ್‌ನಿಂದಲೇ ಆರಂಭಿಸೋಣ. ಏಕೆಂದರೆ ವರ್ಷದ ಆರಂಭದಲ್ಲಿಯೇ ಭಾರತ ಕ್ರಿಕೆಟ್‌ಗೆ ದೊಡ್ಡ ಸವಾಲು ಎದುರಾಗುತ್ತಿದೆ. ದಕ್ಷಿಣ ಆಫ್ರಿಕಾ ಸವಾಲು ಎದುರಿಸಲು ಭಾರತ ತಂಡದವರು ಈಗ ಹರಿಣಗಳ ನಾಡಿನಲ್ಲಿದ್ದಾರೆ.

2017ರ ಟೂರ್ನಿಗಳು, ಸರಣಿಗಳಲ್ಲಿ ಪಾರಮ್ಯ ಮೆರೆದ ವಿರಾಟ್‌ ಕೊಹ್ಲಿ ಪಡೆ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ ಸರಣಿ ಆಡಲಿದೆ. ಯುವ ಆಟಗಾರರನ್ನು ಒಳಗೊಂಡಿರುವ ಭಾರತ ತಂಡದವರು ದಕ್ಷಿಣ ಆಫ್ರಿಕಾದಲ್ಲಿ ಇತಿಹಾಸ ನಿರ್ಮಿಸಬಲ್ಲರೇ ಎಂಬ ಕಾತರ ಎಲ್ಲರ ಮನದಲ್ಲಿ. ಅಲ್ಲದೆ, ಇದೇ ವರ್ಷ ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಲಿದ್ದಾರೆ. ಅಮೋಘ ಫಾರ್ಮ್‌ನಲ್ಲಿರುವ ಕೊಹ್ಲಿ ಅವರತ್ತಲೇ ಎಲ್ಲರ ಚಿತ್ತ ನೆಟ್ಟಿದೆ. ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌ ಪ್ರವಾಸದಲ್ಲಿ ಯಶಸ್ಸು ಲಭಿಸಿದರೆ ಖಂಡಿತ ಕೊಹ್ಲಿ ಅವರ ಸಾಧನೆಯ ಗ್ರಾಫ್‌ ಮತ್ತಷ್ಟು ಮೇಲೇರಲಿದೆ.

ವಿಶ್ವಕಪ್‌ ಕ್ರಿಕೆಟ್‌ ಫೈನಲ್‌ ತಲುಪಿದ ಬಳಿಕ ಮಹಿಳೆಯರ ವಿಶ್ವಾಸವೂ ಹೆಚ್ಚಿದೆ. ಈ ವರ್ಷ ಟ್ವೆಂಟಿ–20 ವಿಶ್ವಕಪ್‌ ನಡೆಯಲಿದ್ದು ಸಾಧನೆಯನ್ನು ಉತ್ತಮಪಡಿಸಿಕೊಳ್ಳುವ ಭರವಸೆ ಹೊಂದಿದ್ದಾರೆ. ಜೊತೆಗೆ ಏಕದಿನ ಹಾಗೂ ಟ್ವೆಂಟಿ–20 ಸರಣಿಗಳಲ್ಲಿ ಆಡಲಿದ್ದಾರೆ.

ಸಿಂಧು, ಶ್ರೀಕಾಂತ್‌ ಮೇಲೆ ಚಿತ್ತ

ಈಗ ಎಲ್ಲರ ಚಿತ್ತ ಹರಿಯುತ್ತಿರುವುದು ಪಿ.ವಿ.ಸಿಂಧು, ಸೈನಾ ನೆಹ್ವಾಲ್‌ ಹಾಗೂ ಕೆ.ಶ್ರೀಕಾಂತ್‌ ಮೇಲೆ. ಇವರು 2017ರಲ್ಲಿ ನೀಡಿದ ಅಮೋಘ ಪ್ರದರ್ಶನವೇ ಅದಕ್ಕೆ ಮುಖ್ಯ ಕಾರಣ. ವಿಶ್ವ ಬ್ಯಾಡ್ಮಿಂಟನ್‌ ರ‍್ಯಾಂಕಿಂಗ್‌ ಪಟ್ಟಿಯ 20 ಸ್ಥಾನದೊಳಗೆ ಭಾರತದ ನಾಲ್ವರು ಇದ್ದಾರೆ. 13 ಪ್ರಮುಖ ಪ್ರಶಸ್ತಿಗಳನ್ನು ಗೆದ್ದು ಬಂದಿದ್ದಾರೆ.


ಪಿ.ವಿ.ಸಿಂಧು

ಅದರಲ್ಲೂ ಸಿಂಧು ಅವರು ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ತೋರಿದ ಪ್ರದರ್ಶನ ಅದ್ಭುತ. ಆದರೆ, ಫೈನಲ್‌ನಲ್ಲಿ ಎಡವು ತ್ತಿದ್ದಾರೆ. ವಿಶ್ವ ಸೂಪರ್‌ ಸರಣಿ ಫೈನಲ್‌ನಲ್ಲೂ ಎಡವಟ್ಟು ಮಾಡಿಕೊಂಡರು. ನಾಲ್ಕು ಸೂಪರ್‌ ಸರಣಿ ಗೆದ್ದು ವಿಶೇಷ ಸಾಧನೆ ಮಾಡಿದ ಶ್ರೀಕಾಂತ್‌ ಈ ವರ್ಷ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ನಲ್ಲಿ ಪದಕದ ಗುರಿಯೊಂದಿಗೆ ಸಿದ್ಧತೆ ನಡೆಸುತ್ತಿದ್ದಾರೆ. ಈ ವರ್ಷ ಕಾಮನ್‌ವೆಲ್ತ್‌ ಹಾಗೂ ಏಷ್ಯನ್‌ ಕ್ರೀಡಾಕೂಟ ನಡೆಯುತ್ತಿವೆ. ಇಲ್ಲಿ ಚಿನ್ನದ ಪದಕದ ಸಾಧನೆ ಮಾಡಲು ಉತ್ತಮ ಅವಕಾಶಗಳಿವೆ. ಅಲ್ಲದೆ, ಸೂಪರ್ ಸರಣಿಗಳಲ್ಲಿ ಪಾರಮ್ಯ ಮುಂದುವರಿಸುವ ಭರವಸೆ ಇದೆ. ಜೊತೆಗೆ ಪ್ರತಿಭಾವಂತ ಆಟಗಾರರಾದ ಸಾಯಿ ಪ್ರಣೀತ್‌, ಸಮೀರ್‌ ವರ್ಮ ಕೂಡ ಭರವಸೆ ಮೂಡಿಸಿದ್ದಾರೆ.


ಕಿದಂಬಿ ಶ್ರೀಕಾಂತ್‌

ಹಾಕಿ ವಿಶ್ವಕಪ್‌ಗೆ ಸಿದ್ಧತೆ

ವಿಶ್ವ ಹಾಕಿ ಲೀಗ್‌ ಫೈನಲ್ಸ್‌ನಲ್ಲಿ ಕಂಚಿನ ಪದಕದ ಸಾಧನೆ ಮಾಡಿರುವ ಭಾರತ ತಂಡದವರು ಡಿಸೆಂಬರ್‌ನಲ್ಲಿ ಸ್ವದೇಶದಲ್ಲಿಯೇ ನಡೆಯಲಿ ರುವ ವಿಶ್ವಕಪ್‌ಗೆ ಸಿದ್ಧತೆ ನಡೆಸುತ್ತಿದ್ದಾರೆ. ಟ್ರೋಫಿ ಗೆಲ್ಲುವ ವಿಶ್ವಾಸವಂತೂ ಇದ್ದೇ ಇದೆ. ಜೊತೆಗೆ ಕಾಮನ್‌ವೆಲ್ತ್‌ ಹಾಗೂ ಏಷ್ಯನ್‌ ಕ್ರೀಡಾಕೂಟ ಎದುರಿವೆ.

ಇನ್ನೂ ಶೂಟಿಂಗ್‌, ಬಾಕ್ಸಿಂಗ್‌, ಕುಸ್ತಿಯಲ್ಲಿ ಸಾಧನೆ ತೋರಲು ಆಟಗಾರರು ಸಜ್ಜಾಗುತ್ತಿದ್ದಾರೆ. ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ಹಿರಿಯ ಬಾಕ್ಸರ್‌ ಮೇರಿ ಕೋಮ್‌ ಮೇಲೆ ಭರವಸೆ ಇಟ್ಟುಕೊಳ್ಳಬಹುದು. ಅಮೆರಿಕದಲ್ಲಿ ನಡೆದ ವಿಶ್ವ ವೇಟ್ ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಮೀರಾಬಾಯಿ ಚಾನು ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧನೆಯ ನಿರೀಕ್ಷೆ  ಮೂಡಿಸಿದ್ದಾರೆ. ಶೂಟಿಂಗ್‌ನಲ್ಲಿ ಜಿತು ರೈ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈಗಿನಿಂದಲೇ ಹೊರಹೊಮ್ಮುವ ಉತ್ತಮ ಸಾಧನೆ ಹಾಗೂ ಸಿದ್ಧತೆ 2020ರಲ್ಲಿ ಜಪಾನ್‌ನ ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ ನಿಟ್ಟಿನಲ್ಲಿ ಭಾರತದ ಪಾಲಿಗೆ ಪದಕ ಭರವಸೆ ಮೂಡಿಸಬಲ್ಲವು.

ಅಷ್ಟೇ ಅಲ್ಲ; ಹೊಸ ಪ್ರತಿಭೆಗಳನ್ನು ಶೋಧಿಸುವ ಐಪಿಎಲ್‌, ಐಎಸ್‌ಎಲ್‌, ಪ್ರೊ ಕಬಡ್ಡಿ, ಐಬಿಎಲ್‌ನಂಥ ಟೂರ್ನಿಗಳ ಬಗ್ಗೆಯೂ ಪ್ರೇಕ್ಷಕರಲ್ಲಿ ಕುತೂಹಲ ಇದ್ದೇ ಇದೆ.

ಜೊತೆಗೊಂದಿಷ್ಟು ಸವಾಲುಗಳು ಇವೆ. ಈಜು, ಅಥ್ಲೆಟಿಕ್ಸ್‌, ಫುಟ್‌ಬಾಲ್‌ನಲ್ಲಿ ಪದೇಪದೇ ನಿರಾಸೆ ಮೂಡಿಸುತ್ತಿರುವ ಭಾರತದ ಸ್ಪರ್ಧಿಗಳು ಈ ವರ್ಷವಾದರೂ ಉತ್ತಮ ಸಾಧನೆ ಮಾಡುತ್ತಾರಾ ಎಂಬ ಕುತೂಹಲ ಎಲ್ಲರನ್ನು ಕಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT