ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರಿಹಾರ ಸುಲಭವಿತ್ತು’

Last Updated 31 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

‘ಅಂಜನಿಪುತ್ರ’ ಚಿತ್ರತಂಡ ದಿಢೀರ್ ಎಂದು ಸುದ್ದಿಗೋಷ್ಠಿ ಕರೆದಿತ್ತು. ವಕೀಲ ಸಮುದಾಯಕ್ಕೆ ನೋವುಂಟು ಮಾಡುವಂತಹ ಸಂಭಾಷಣೆ ಚಿತ್ರದಲ್ಲಿ ಇದೆ ಎಂದು ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ಸಿನಿಮಾ ಪ್ರದರ್ಶನಕ್ಕೆ ತಡೆಯಾಜ್ಞೆ ಬಂದಿದ್ದು, ಆಕ್ಷೇಪಾರ್ಹ ಎನ್ನಲಾದ ಸಂಭಾಷಣೆಯನ್ನು ತೆಗೆದ ನಂತರ ತಡೆಯಾಜ್ಞೆ ತೆರವಾಗಿದ್ದು... ಎಲ್ಲವೂ ಆಗಿತ್ತು.

ನಾಯಕ ನಟ ಪುನೀತ್ ರಾಜ್‌ಕುಮಾರ್‌, ನಾಯಕಿ ರಶ್ಮಿಕಾ ಮಂದಣ್ಣ, ನಿರ್ಮಾಪಕ ಎಂ.ಎನ್. ಕುಮಾರ್, ನಿರ್ದೇಶಕ ಎ. ಹರ್ಷ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, ಚಿತ್ರ ವಿತರಕ ಜಾಕ್‌ ಮಂಜು ಪತ್ರಿಕಾಗೋಷ್ಠಿಯಲ್ಲಿ ಇದ್ದರು. ಚಿತ್ರದ ಪ್ರದರ್ಶನಕ್ಕೆ ಇದ್ದ ತಡೆಯಾಜ್ಞೆ ತೆರವಾಗಿದ್ದ ಖುಷಿ ಅವರೆಲ್ಲರ ಮುಖದಲ್ಲಿ ಕಾಣುತ್ತಿತ್ತು.

‘ಇವತ್ತು ಸುದ್ದಿಗೋಷ್ಠಿ ಆಯೋಜಿಸಿರುವುದು ಸಿನಿಮಾದ ಯಶಸ್ಸಿನ ಬಗ್ಗೆ ಹೇಳಲು ಮತ್ತು ವಕೀಲ ಸಮೂಹಕ್ಕೆ ನೋವಾಗಿದ್ದರ ಬಗ್ಗೆ ಮಾತನಾಡಲು’ ಎಂದು ಹರ್ಷ ಆರಂಭದಲ್ಲಿಯೇ ಸ್ಪಷ್ಟಪಡಿಸಿದರು. ‘ಸಿನಿಮಾ ಪ್ರದರ್ಶನ ಚೆನ್ನಾಗಿ ಆಗುತ್ತಿದೆ. ನ್ಯಾಯಾಲಯದಲ್ಲಿ ನಮ್ಮ ಪರವಾಗಿ ವಾದ ಮಂಡಿಸಿದ ವಕೀಲರಿಗೆ ಕೃತಜ್ಞತೆಗಳು’ ಎಂದರು ಹರ್ಷ.

‘ಚಿತ್ರದ ಪ್ರದರ್ಶನ ಒಂದು ದಿನದ ಮಟ್ಟಿಗೆ ಸ್ಥಗಿತವಾಗಿತ್ತು. ಇದರಿಂದಾಗಿ ವೀಕ್ಷಕರು ನಿರಾಸೆಗೆ ಒಳಗಾದರು. ವಕೀಲರ ಭಾವನೆಗಳಿಗೆ ನೋವುಂಟುಮಾಡುವ ಉದ್ದೇಶ ನಮ್ಮಲ್ಲಿ ಯಾರಿಗೂ ಇಲ್ಲ. ಆದರೆ ವಕೀಲರು ಸಿನಿಮಾ ವಿರುದ್ಧ ಮೊಕದ್ದಮೆ ಹೂಡುವ ಮೊದಲು ನಮ್ಮ ಬಳಿ ಬಂದಿದ್ದರೆ ಸಮಸ್ಯೆ ಅರ್ಧಗಂಟೆಯಲ್ಲಿ ಬಗೆಹರಿಯುತ್ತಿತ್ತು’ ಎಂದರು ಗೋವಿಂದು.

‘ವಕೀಲರು ತಮಗೆ ಅನಿಸಿದ್ದನ್ನು ಹೇಳಿಕೊಂಡಿದ್ದು ತಪ್ಪಲ್ಲ. ಆದರೆ ಅವರು ಹಾಗೆ ಹೇಳಿಕೊಂಡ ರೀತಿ ತಪ್ಪು. ನನಗೆ, ಗೋವಿಂದು ಅವರಿಗೆ ಅಥವಾ ಪುನೀತ್ ಅವರಿಗೆ ಒಮ್ಮೆ ದೂರವಾಣಿ ಕರೆ ಮಾಡಿದ್ದರೂ ಸಾಕಿತ್ತು’ ಎಂದರು ಕುಮಾರ್.

ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಸಿನಿಮಾಕ್ಕೆ ಪ್ರಮಾಣಪತ್ರ ನೀಡಿ, ಸಿನಿಮಾ ಪ್ರದರ್ಶನ ಆರಂಭವಾದ ನಂತರ ಅದು ಅನ್ಯ ಕಾರಣಗಳಿಗೆ ಸ್ಥಗಿತಗೊಳ್ಳದಂತಹ ವ್ಯವಸ್ಥೆ ಆಗಬೇಕು ಎಂಬ ಆಶಯ ವ್ಯಕ್ತಪಡಿಸಿದರು ಗೋವಿಂದು. ‘ಆಗುವುದೆಲ್ಲವೂ ಒಳ್ಳೆಯದಕ್ಕೆ. ಅಭಿಮಾನಿ ದೇವರು ನಮ್ಮ ಕೈಹಿಡಿಯುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು ಪುನೀತ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT