ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನ: ಬಹುತೇಕರ ಜನ್ಮದಿನ ಜನವರಿ 1!

Last Updated 31 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಕಾಬೂಲ್‌: ಇಲ್ಲಿನ ಸಮದ್ ಅಲಾವಿ ಅವರಿಗೆ ಜನವರಿ 1 ವಿಶೇಷ ಸಂಭ್ರಮದ ದಿನ. ಅದೇ ರೀತಿ, ಅವರ ಹೆಂಡತಿ, ಇಬ್ಬರು ಮಕ್ಕಳು ಹಾಗೂ ಅವರ 32 ಸ್ನೇಹಿತರಿಗೂ ಇದೇ ದಿನ ವಿಶೇಷ. ಇದಕ್ಕೆ ಕಾರಣ ಇವರೆಲ್ಲರ ಜನ್ಮ ದಿನ ಜನವರಿ 1.

ಅಫ್ಗಾನಿಸ್ತಾನದ ಬಹುತೇಕ ಮಂದಿ ಜನವರಿ 1ರಂದೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೆ. ಜನನ ಪ್ರಮಾಣಪತ್ರ ಅಥವಾ ಅಧಿಕೃತ ದಾಖಲೆಗಳು ಹಲವರ ಬಳಿ ಇಲ್ಲ. ಹಾಗಾಗಿ, ಅವರು ಜನಿಸಿದಾಗ ನಡೆದ ಯಾವುದಾದರೂ ಚಾರಿತ್ರಿಕ ಘಟನೆಯನ್ನೋ ಅಥವಾ ಋತುವನ್ನೋ ನೆನಪಿಟ್ಟುಕೊಂಡಿರುತ್ತಾರೆ. ಆದರೆ, ಇದರಿಂದ ಜನಿಸಿದ ತಿಂಗಳು ಮತ್ತು ದಿನಾಂಕವನ್ನು ಖಚಿತವಾಗಿ ಹೇಳಲು ಆಗುವುದಿಲ್ಲ.

ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ನೋಂದಣಿಗೆ, ಪಾಸ್‌ಪೋರ್ಟ್‌ ಮತ್ತು ವೀಸಾಗಳಿಗೆ ಜನ್ಮದಿನಾಂಕ ನೋಂದಣಿ ಮಾಡಬೇಕಾಗುತ್ತದೆ. ಹೀಗಾಗಿ, ನಿಖರ ಜನ್ಮದಿನ ಗೊತ್ತಿಲ್ಲದವರು ಸಾಮಾನ್ಯವಾಗಿ ಜನವರಿ 1 ಅನ್ನು ತಮ್ಮ ಜನ್ಮದಿನವನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಜನ್ಮದಿನ ಗೊತ್ತಿದ್ದವರೂ ಸಹ ಜನವರಿ 1ನೇ ದಿನವನ್ನೇ ಜನ್ಮದಿನ ಎಂದು ನೋಂದಣಿ ಮಾಡಿಕೊಳ್ಳುವುದು ಸಹ ರೂಢಿಯಾಗಿದೆ. ಇಸ್ಲಾಮಿಕ್ ಕ್ಯಾಲೆಂಡರ್‌ ’ಸೋಲಾರ್‌ ಹಿಜ್ರಿ’ಯಿಂದ ಪಾಶ್ಚಾತ್ಯ ಕ್ಯಾಲೆಂಡರ್‌ಗೆ ಜನ್ಮದಿನಾಂಕ ಪರಿವರ್ತಿಸುವ ಸಮಸ್ಯೆ ಎದುರಿಸಲು ಬಹುತೇಕರು ಇಷ್ಟಪಡುವುದಿಲ್ಲ.‘ಸೋಲಾರ್‌ ಹಿಜ್ರಿ’ ಕ್ಯಾಲೆಂಡರ್‌ನ ವರ್ಷದ ಮೊದಲ ದಿನ ಸಾಮಾನ್ಯವಾಗಿ ಮಾರ್ಚ್‌ 21 ಆಗಿರುತ್ತದೆ ಎಂದು ಇಲ್ಲಿನ ನಾಗರಿಕರು ಹೇಳುತ್ತಾರೆ.

‘ನನ್ನ ಗುರುತಿನ ಚೀಟಿಯಲ್ಲಿ (ತಜ್‌ಕಿರಾ) ಹಿಜ್ರಿ ಕ್ಯಾಲೆಂಡರ್‌ನ 1365ರ (1986) ಅನ್ವಯ ನನಗೆ ಮೂರು ವರ್ಷವಾಗಿತ್ತು. ಆಗ ನನ್ನ ತಜ್‌ಕಿರಾ ನೀಡಲಾಗಿದೆ’ ಎಂದು 34 ವರ್ಷದ ಅಬ್ದುಲ್‌ ಹದಿ ತಿಳಿಸಿದ್ದಾರೆ.

ಅಫ್ಗನ್‌ ಸರ್ಕಾರ ಜನರಿಗೆ ವಿತರಿಸುವ ಗುರುತಿನ ಚೀಟಿಯಲ್ಲಿ (ತಜ್‌ಕಿರಾ) ವ್ಯಕ್ತಿಯ ಎತ್ತರ, ಮೈಕಟ್ಟು ಮುಂತಾದ ದೈಹಿಕ ಲಕ್ಷಣಗಳನ್ನು ನೋಡಿ ವಯಸ್ಸು ನಮೂದಿಸಲಾಗುತ್ತಿತ್ತು. ಸರ್ಕಾರ ’ಇ–ತಜ್‌ಕಿರಾ’ ವಿತರಿಸಲು ಉದ್ದೇಶಿಸಿತ್ತು. ಆದರೆ, ರಾಜಕೀಯ ಮತ್ತು ತಾಂತ್ರಿಕ ಸಮಸ್ಯೆಗಳಿಂದ ಈ ಯೋಜನೆ ಸ್ಥಗಿತಗೊಂಡಿದೆ.

ಈಚೆಗೆ ದೊಡ್ಡ ನಗರಗಳ ಕೆಲ ಆಸ್ಪತ್ರೆಗಳು ನವಜಾತು ಶಿಶುಗಳಿಗೆ ಜನನ ಪ್ರಮಾಣಪತ್ರ ವಿತರಿಸಲು ಆರಂಭಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT