ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತವರಿನ ಪ್ರೇಕ್ಷಕರೇ ಪ್ರೇರಕ ಶಕ್ತಿ

Last Updated 31 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಹೊಸ ಜೀವನಕ್ಕೆ ಕಾಲಿಟ್ಟಿರುವ ನಿಮಗೆ ಶುಭಾಶಯಗಳು. ಮದುವೆಯಾಗಿ ಒಂದು ತಿಂಗಳಾಗುತ್ತ ಬಂತು. ಬದುಕಿನ ಈ ತಿರುವಿನ ಬಗ್ಗೆ ಏನನಿಸುತ್ತಿದೆ?

ಶುಭ ಕೋರಿದ್ದಕ್ಕೆ ಧನ್ಯವಾದಗಳು. ವಿವಾಹದ ನಂತರ ಭಾರಿ ಬದಲಾವಣೆಗಳಾಗಲಿಲ್ಲ. ಹಾಗೆ ಆಗಲು ಸಾಧ್ಯವೂ ಇಲ್ಲ. ಯಾಕೆಂದರೆ ಸೋನಮ್‌ ಭಟ್ಟಾಚಾರ್ಯ (ಪತ್ನಿ) ನನ್ನ ಬದುಕಿಗೆ ಹೊಸಬರೇನೂ ಅಲ್ಲ. ನಮ್ಮದು 13 ವರ್ಷಗಳ ಗೆಳೆತನ. ದೀರ್ಘಕಾಲದ ಒಡನಾಟ ಮದುವೆಯಲ್ಲಿ ಸಮಾಪ್ತಿಗೊಂಡದ್ದು ಖುಷಿ ನೀಡಿದೆ. ಬದುಕು ಬದಲಾಗಿದೆಯೋ ಇಲ್ಲವೋ ಎಂದು ಈಗಲೇ ಹೇಳಲಾಗದು.

ಐಎಎಸ್‌ಎಲ್‌ನಲ್ಲಿ ಬಿಎಫ್‌ಸಿಯ ಪಂದ್ಯಗಳನ್ನು ವೀಕ್ಷಿಸಲು ಪತ್ನಿ ನಿಮ್ಮ ಜೊತೆ ಬರುತ್ತಾರೆಯೇ?

ಇಲ್ಲ. ಅವರು ಉದ್ಯಮಿ ಆಗಿರುವುದರಿಂದ ನನ್ನಷ್ಟೇ ಬ್ಯುಸಿಯಾಗಿದ್ದಾರೆ. ಆದ್ದರಿಂದ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ವೀಕ್ಷಿಸಲು ಬರುವುದಿಲ್ಲ.

ಇತ್ತೀಚಿನ ಕೆಲವು ವರ್ಷಗಳಲ್ಲಿ ಬೆಂಗಳೂರು ನಿಮಗೆ ತವರಿನಂತಾಗಿದೆ. ಐಎಸ್‌ಎಲ್‌ನಲ್ಲಿ ತವರಿನ ಪಂದ್ಯಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?

ತವರಿನ ಅಭಿಮಾನಿಗಳ ಮುಂದೆ ಆಡುವ ಖುಷಿಯೇ ಬೇರೆ. ತವರಿನ ಪ್ರೋತ್ಸಾಹದ ವಿಷಯದಲ್ಲಿ ಬಿಎಫ್‌ಸಿ ಅದೃಷ್ಟದ ತಂಡ. ಇಲ್ಲಿ ಅನೇಕ ಸಾಧನೆಗಳನ್ನು ಮಾಡಲು ನಮಗೆ ಸಾಧ್ಯವಾಗಿದೆ. ತವರಿನಲ್ಲಿ ನಡೆಯಲಿರುವ ಮುಂದಿನ ಪಂದ್ಯಕ್ಕೂ ಉತ್ತಮ ಪ್ರೋತ್ಸಾಹ ಸಿಗುವ ನಿರೀಕ್ಷೆ ಇದೆ.

ಕಂಠೀರವ ಕ್ರೀಡಾಂಗಣದಲ್ಲಿ ನೀಲಿ ಪಡೆಗೆ (ಬಿಎಫ್‌ಸಿ) ಅಪಾರ ಜನ ಮನ್ನಣೆ ಇದೆ. ಇದರಿಂದ ತಂಡ ಗಳಿಸಿದ್ದೇನು?

ದೇಶದಲ್ಲೇ ಅತ್ಯುತ್ತಮ ಫುಟ್‌ಬಾಲ್‌ ಪ್ರೇಕ್ಷಕರು ಬೆಂಗಳೂರಿನಲ್ಲಿದ್ದಾರೆ. ಇಲ್ಲಿ ಪ್ರೇಕ್ಷಕರ ಸ್ಟ್ಯಾಂಡ್‌ಗಳಿಂದ ಸಿಗುವ ಪ್ರೋತ್ಸಾಹ ಆಟಗಾರರ ಹುಮ್ಮಸ್ಸು ಹೆಚ್ಚಲು ನೆರವಾಗುತ್ತದೆ. ಇಲ್ಲಿ ಗಳಿಸಿದ ಹೆಚ್ಚಿನ ಗೆಲುವಿಗೆ ಪ್ರೇಕ್ಷಕರು ಸೃಷ್ಟಿಸಿದ ವಾತಾವರಣವೇ ಕಾರಣವೆಂದು ಹೇಳಬಹುದು.

ಐಎಸ್‌ಎಲ್‌ನಲ್ಲಿ ಬಿಎಫ್‌ಸಿ ಮಿಶ್ರ ಫಲ ಕಂಡಿದೆ. ತವರಿ‌ನಿಂದ ಹೊರಗೆ ಅಮೋಘ ಜಯದೊಂದಿಗೆ ‘ರೋಚಕ’ ಸೋಲನ್ನೂ ಕಂಡಿದೆ. ಲೀಗ್‌ನಲ್ಲಿ ಇಲ್ಲಿಯ ವರೆಗಿನ ಆಟವನ್ನು ಹೇಗೆ ವಿಶ್ಲೇಷಿಸುತ್ತೀರಿ?

ಲೀಗ್‌ನಲ್ಲಿ ಇಲ್ಲಿ ತನಕ ಉತ್ತಮ ಸಾಧನೆ ಮಾಡಿದ್ದೇವೆ. ಸೋತ ಪಂದ್ಯಗಳಲ್ಲೂ ಹೋರಾಟ ಕೈಬಿಟ್ಟಿರಲಿಲ್ಲ. ಪ್ರತಿ ಪಂದ್ಯದಲ್ಲೂ ಗರಿಷ್ಠ ಪಾಯಿಂಟ್‌ಗಳನ್ನು ಬಗಲಿಗೆ ಹಾಕಿಕೊಳ್ಳಲು ಪ್ರಯತ್ನಿಸಿದ್ದೇವೆ. ಇನ್ನೂ ಸಾಕಷ್ಟು ಪಂದ್ಯಗಳನ್ನು ಆಡಬೇಕಾಗಿದ್ದು ಯಶಸ್ಸನ್ನೇ ಮೂಲಮಂತ್ರವಾಗಿರಿಸಿಕೊಂಡು ನಿರಂತರ ಪ್ರಯತ್ನ ನಡೆಯಲಿದೆ.

ಅತ್ಯುತ್ತಮ ಫಾರ್ವರ್ಡ್‌ ಆಟಗಾರರನ್ನು ಹೊಂದಿರುವ ತಂಡ ಬಿಎಫ್‌ಸಿ. ಆದರೆ ರಕ್ಷಣಾ ವಿಭಾಗದಲ್ಲಿ ತಂಡ ಬಲಿಷ್ಠವಾಗಿಲ್ಲ. ನಾಯಕನಾಗಿ ಈ ಕುರಿತು ನಿಮ್ಮ ಅಭಿಪ್ರಾಯವೇನು?

ರಕ್ಷಣಾ ವಿಭಾಗದಲ್ಲಿ ತಂಡ ದುರ್ಬಲವಾಗಿದೆ ಎಂದು ಹೇಳಲಾಗದು. ಜಾನ್‌ ಜಾನ್ಸನ್‌ ಮತ್ತು ಜುವಾನನ್‌, ಲೀಗ್‌ನ ಅತ್ಯುತ್ತಮ ಡಿಫೆಂಡರ್‌ಗಳಾಗಿ ಗಮನ ಸೆಳೆದಿದ್ದಾರೆ. ರಾಹುಲ್‌ ಬೆಕೆ ಮತ್ತು ಹರ್ಮನ್‌ಜೋತ್ ಖಾಬ್ರಾ ಕೂಡ ಉತ್ತಮ ಆಟವಾಡುತ್ತಿದ್ದಾರೆ. ಯುವ ಆಟಗಾರ ಸುಭಾಶಿಷ್‌ ಬೋಸ್ ಅವರ ಮೇಲೆಯೂ ತಂಡಕ್ಕೆ ಭರವಸೆ ಇದೆ.

ಪಾಯಿಂಟ್ ಪಟ್ಟಿಯಲ್ಲಿ ನಿರಂತರವಾಗಿ ಅಗ್ರ ಸ್ಥಾನ ಉಳಿಸಿಕೊಂಡಿದ್ದದ್ದ ತಂಡ ಈಗ ಎರಡನೇ ಸ್ಥಾನದಲ್ಲಿದೆ. ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದು ಎಂದೇ ಬಿಎಫ್‌ಸಿಯನ್ನು ಪರಿಗಣಿಸಲಾಗಿದೆ. ಈ ಕುರಿತು ನಿಮ್ಮ ಅಭಿಪ್ರಾಯವೇನು?

ಪ್ರಶಸ್ತಿ ಗೆದ್ದೇ ಗೆಲ್ಲುತ್ತೇವೆ ಎಂದು ನಾವು ಇಲ್ಲಿಯ ವರೆಗೆ ಎಲ್ಲೂ ಹೇಳಿಕೊಂಡಿಲ್ಲ. ಅದರ ಬಗ್ಗೆ ಹೆಚ್ಚು ಯೋಚನೆಯೂ ಮಾಡಿಲ್ಲ. ಬೆರಳೆಣಿಕೆಯಷ್ಟು ಪಂದ್ಯಗಳನ್ನು ಮಾತ್ರ ಆಡಿದ್ದೇವೆ, ಆದ್ದರಿಂದ ಈಗಲೇ ಏನೂ ಹೇಳಲು ಸಾಧ್ಯವಿಲ್ಲ.

ತಂಡದ ಅಭ್ಯಾಸ, ತಂತ್ರಗಾರಿಕೆ ಇತ್ಯಾದಿಗಳ ಬಗ್ಗೆ ಸ್ವಲ್ಪ ವಿವರಿಸುವಿರಾ?

ತಂಡ ನಿತ್ಯವೂ ಕಠಿಣ ಅಭ್ಯಾಸ ಮಾಡುತ್ತಿದೆ. ಕೋಚ್‌ಗಳು ಮತ್ತು ಸಹಾಯಕ ಸಿಬ್ಬಂದಿ ಸಾಕಷ್ಟು ಶ್ರಮ ಹಾಕಿ ಆಟಗಾರರನ್ನು ಸಿದ್ಧಗೊಳಿಸುತ್ತಿದ್ದಾರೆ. ತಂಡ ದಿನದಿಂದ ದಿನಕ್ಕೆ ಬಲಿಷ್ಠವಾಗುತ್ತಿರುವುದರ ಹಿಂದೆ ಅವರ ಪರಿಶ್ರಮ ಸಾಕಷ್ಟಿದೆ.

ಐಎಸ್‌ಎಲ್‌ನಲ್ಲಿ ಈ ವರೆಗೆ ಬಿಎಫ್‌ಸಿ ಪರವಾಗಿ ಅತ್ಯುತ್ತಮ ಆಟ ಆಡಿದವರ ಪೈಕಿ ಹೆಚ್ಚು ಗಮನ ಸೆಳೆದಿರುವವರು ಫಾರ್ವರ್ಡ್ ಆಟಗಾರ ಮಿಕು ಮತ್ತು ಮಿಡ್‌ಫೀಲ್ಡರ್‌ ಎರಿಕ್‌ ಪರ್ಟಾಲು. ಅವರ ಬಗ್ಗೆ ಏನನಿಸುತ್ತಿದೆ?

ಮಿಕು ಒಬ್ಬ ಅತ್ಯದ್ಭುತ ಆಟಗಾರ. ಪ್ರತಿ ಪಂದ್ಯದಲ್ಲೂ ಅವರು ಅಮೋಘ ಸಾಮರ್ಥ್ಯ ತೋರುತ್ತಿದ್ದಾರೆ. ಪರ್ಟಾಲು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಅನೇಕ ಗೋಲುಗಳಿಗೆ ಅವರು ಅವಕಾಶಗಳನ್ನು ಸೃಷ್ಟಿಸಿದ್ದಾರೆ. ಇಂಥ ವೈವಿಧ್ಯಮ ಆಟಗಾರರು ಇರುವುದರಿಂದ ತಂಡ ಈ ಮಟ್ಟಕ್ಕೆ ಬೆಳೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT