7

ಟ್ರೋಫಿ ನಿರೀಕ್ಷೆಯಲ್ಲಿ...

Published:
Updated:
ಟ್ರೋಫಿ ನಿರೀಕ್ಷೆಯಲ್ಲಿ...

‘ದೇಶಿ ಟೂರ್ನಿಗಳಲ್ಲಿ ಪೃಥ್ವಿ ಶಾ ಹೇಗೆ ಆಡುತ್ತಾನೆ ಎಂಬುದನ್ನು ನೋಡಿದ್ದೇನೆ. ಇದೇ ಆಟಗಾರನ ನಾಯಕತ್ವದಲ್ಲಿ ಭಾರತ ತಂಡ 19 ವರ್ಷದ ಒಳಗಿನವರ ವಿಶ್ವಕಪ್‌ ಟೂರ್ನಿಗೆ ಸಜ್ಜಾಗಿದೆ. ಈ ಬಾರಿ ನಮ್ಮ ತಂಡದವರು ಹೇಗೆ ಆಡುತ್ತಾರೆ, ಪೃಥ್ವಿ ಬ್ಯಾಟಿಂಗ್‌ ಹೇಗಿರುತ್ತದೆ ಎನ್ನುವುದನ್ನು ನೋಡಲು ಕುತೂಹಲದಿಂದ ಕಾಯುತ್ತಿದ್ದೇನೆ...’

ನ್ಯೂಜಿಲೆಂಡ್‌ನಲ್ಲಿ ಆಯೋಜನೆಯಾಗಿರುವ ವಿಶ್ವಕಪ್‌ ಟೂರ್ನಿಯಲ್ಲಿ ಆಡಲು ತೆರಳಿದ ಆಟಗಾರರನ್ನು ಭೇಟಿಯಾದ ಬಳಿಕ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಹೇಳಿದ ಮಾತಿದು. ಈ ಬಾರಿಯ ವಿಶ್ವಕಪ್‌ ಮೂಡಿಸಿದ ಕುತೂಹಲಕ್ಕೆ ಕೊಹ್ಲಿ ಅವರ ಮಾತೇ ಸಾಕ್ಷಿ.

ಕಿವೀಸ್‌ ನಾಡಿನಲ್ಲಿ ಜನವರಿ 13ರಿಂದ ಫೆಬ್ರುವರಿ 3ರ ವರೆಗೆ ಟೂರ್ನಿ ನಡೆಯಲಿದೆ. ಭಾರತ, ಕೆನ್ಯಾ, ನ್ಯೂಜಿಲೆಂಡ್‌, ದಕ್ಷಿಣ ಆಫ್ರಿಕಾ, ವೆಸ್ಟ್‌ ಇಂಡೀಸ್‌, ಆಸ್ಟ್ರೇಲಿಯಾ, ಪಪುವಾ ನ್ಯೂಗಿನಿ, ಜಿಂಬಾಬ್ವೆ, ಬಾಂಗ್ಲಾದೇಶ, ಕೆನಡಾ, ಇಂಗ್ಲೆಂಡ್‌, ನಮೀಬಿಯಾ, ಅಫ್ಗಾನಿಸ್ತಾನ, ಪಾಕಿಸ್ತಾನ, ಐರ್ಲೆಂಡ್‌ ಮತ್ತು ಶ್ರೀಲಂಕಾ ತಂಡಗಳು ಪಾಲ್ಗೊಳ್ಳಲಿವೆ. ವಿಶೇಷವೆಂದರೆ ಐಸಿಸಿ ಆಯೋಜಿಸುವ ಪ್ರತಿಷ್ಠಿತ ಈ ಟೂರ್ನಿಗೆ ಮೂರು ಬಾರಿ ಆತಿಥ್ಯ ವಹಿಸಿದ ಏಕೈಕ ದೇಶ ಎನ್ನುವ ಕೀರ್ತಿಗೆ ನ್ಯೂಜಿಲೆಂಡ್‌ ಪಾತ್ರವಾಗಿದೆ.

ಹೆಚ್ಚಿದ ನಿರೀಕ್ಷೆ

ಟೂರ್ನಿಯಲ್ಲಿ ಇದುವರೆಗೆ ತಲಾ ಮೂರು ಬಾರಿ ಪ್ರಶಸ್ತಿ ಜಯಿಸಿ ಹೆಚ್ಚು ಸಲ ಚಾಂಪಿಯನ್‌ ಆದ ಗೌರವವನ್ನು ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಜಂಟಿಯಾಗಿ ಹಂಚಿಕೊಂಡಿವೆ. ಇದನ್ನು ಮುರಿದು ಭಾರತ ತಂಡದವರು ಈ ಬಾರಿ ದಾಖಲೆ ನಿರ್ಮಿಸುವರೇ ಎನ್ನುವ ಕುತೂಹಲ ಮೂಡಿದೆ.

1998ರಲ್ಲಿ 19 ವರ್ಷದ ಒಳಗಿನವರ ವಿಶ್ವಕಪ್‌ ಆರಂಭವಾಯಿತು. ಚೊಚ್ಚಲ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಟ್ರೋಫಿ ಎತ್ತಿ ಹಿಡಿಯಿತು. 2000ರಲ್ಲಿ ಮೊಹಮ್ಮದ್‌ ಕೈಫ್‌ ನಾಯಕತ್ವದ ಭಾರತ ತಂಡ ಮೊದಲ ಸಲ ಚಾಂಪಿಯನ್‌ ಆಯಿತು. ಬಳಿಕ ಪ್ರಶಸ್ತಿಗಾಗಿ 2008ರ ವರೆಗೆ ಕಾಯಬೇಕಾಯಿತು. ಆ ವರ್ಷ ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ ಟ್ರೋಫಿ ಲಭಿಸಿತು. 2012ರಲ್ಲಿ ಉನ್ಮುಕ್ತ್‌ ಚಾಂದ್‌ ಭಾರತಕ್ಕೆ ಚಾಂಪಿಯನ್‌ ಪಟ್ಟ ತಂದುಕೊಟ್ಟರು.

ಪ್ರತಿ ವರ್ಷದ ಟೂರ್ನಿಯಲ್ಲಿ ವೆಸ್ಟ್‌ ಇಂಡೀಸ್, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಇಂಗ್ಲೆಂಡ್‌ ತಂಡಗಳು ಉತ್ತಮ ಸಾಮರ್ಥ್ಯ ತೋರುತ್ತಿವೆ. ಈ ಸಲವೂ ಕಠಿಣ ಪೈಪೋಟಿ ಏರ್ಪಡುವುದು ಖಚಿತ. ಭಾರತ ತಂಡದಲ್ಲಿ ಪ್ರತಿಭಾನ್ವಿತ ಆಟಗಾರರ ದಂಡು ಇರುವುದರಿಂದ ನಿರೀಕ್ಷೆ ಗರಿಗೆದರಿದೆ.

ಕೋಚ್‌ಗೆ ಅದೃಷ್ಟ ಪರೀಕ್ಷೆ

ರಾಹುಲ್‌ ದ್ರಾವಿಡ್‌ ಜೂನಿಯರ್‌ ತಂಡದ ಕೋಚ್‌ ಆದ ಬಳಿಕ ಭಾರತ ಆಡುತ್ತಿರುವ ಎರಡನೇ ವಿಶ್ವಕಪ್‌ ಟೂರ್ನಿ ಇದು. 2016ರ ಟೂರ್ನಿಯಲ್ಲಿ ಭಾರತ ತಂಡ ಫೈನಲ್‌ನಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ ಸೋತು ರನ್ನರ್ಸ್‌ ಅಪ್‌ ಆಗಿತ್ತು. ಈಗಲೂ ದ್ರಾವಿಡ್‌ ಕೋಚ್‌. ಆದ್ದರಿಂದ ಅವರಿಗೆ ಇದು ಅದೃಷ್ಟ ಪರೀಕ್ಷೆಯ ಟೂರ್ನಿ ಎನಿಸಿದೆ.

ಪೃಥ್ವಿ ಮೇಲೆ ಭರವಸೆ

ಜೂನಿಯರ್‌ ಕ್ರಿಕೆಟ್‌ನ ‘ರನ್‌ ಯಂತ್ರ’ ಎನಿಸಿರುವ ಮುಂಬೈನ ಪೃಥ್ವಿ ಭರವಸೆಯ ಆಟಗಾರನಾಗಿ ಬೆಳೆಯುವ ಸಾಮರ್ಥ್ಯ ಹೊಂದಿದ್ದಾರೆ. ದುಲೀಪ್‌ ಟ್ರೋಫಿ ಮತ್ತು ರಣಜಿಯ ಪದಾರ್ಪಣೆ ಪಂದ್ಯದಲ್ಲಿ ಅವರು ಶತಕ ಬಾರಿಸಿದ್ದರು. ಪ್ರಥಮ ದರ್ಜೆಯಲ್ಲಿ ಒಂಬತ್ತು ಪಂದ್ಯಗಳಿಂದ ಐದು ಶತಕ ಮತ್ತು ಮೂರು ಅರ್ಧಶತಕಗಳನ್ನು ಹೊಡೆದು ತಾವೊಬ್ಬ ಸಮರ್ಥ ಬ್ಯಾಟ್ಸ್‌ಮನ್‌ ಎನ್ನುವುದನ್ನು ಸಾಬೀತು ಮಾಡಿದ್ದಾರೆ.

ಪೃಥ್ವಿ, ಶಾಲಾ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ಮಾಡಿದ್ದಾರೆ. 2014ರಲ್ಲಿ 14 ವರ್ಷದ ಒಳಗಿನವರಿಗಾಗಿ ನಡೆದಿದ್ದ ಅಂತರ ಶಾಲಾ ಹ್ಯಾರಿಸ್‌ ಶೀಲ್ಡ್‌ ಟೂರ್ನಿಯಲ್ಲಿ 546 ರನ್‌ ಗಳಿಸಿದ್ದರು. ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ ಶಾಲಾ ತಂಡದ ಪರವಾಗಿ ಆಡುವ ಅವಕಾಶವನ್ನೂ ಪಡೆದಿದ್ದರು.

ಉಪನಾಯಕನ ಜವಾಬ್ದಾರಿ ನಿಭಾಯಿಸಲಿರುವ ಶುಭಮನ್‌ ಗಿಲ್‌, ಹಿಮಾಂಶು ರಾಣಾ, ಅಭಿಷೇಕ್‌ ಶರ್ಮಾ, ರಿಯಾನ್‌ ಪರಾಗ್‌, ವಿಕೆಟ್‌ ಕೀಪರ್‌ ಹಾರ್ವಿಕ್‌ ದೇಸಾಯಿ, ಅರ್ಷದೀಪ್‌ ಸಿಂಗ್‌, ಶಿವ ಸಿಂಗ್‌, ಪಂಕಜ್‌ ಸಿಂಗ್‌ ವಿಶ್ವಕಪ್‌ ತಂಡದಲ್ಲಿರುವ ಪ್ರಮುಖ ಆಟಗಾರರು.

ಭವ್ಯ ಭವಿಷ್ಯಕ್ಕೆ ಬುನಾದಿ

ಕ್ರಿಕೆಟ್‌ನಲ್ಲಿ ಗಟ್ಟಿ ಭವಿಷ್ಯ ರೂಪುಗೊಳ್ಳಲು ಕಿರಿಯರ ವಿಶ್ವಕಪ್‌ ವೇದಿಕೆಯಾಗಿದೆ. ರಾಷ್ಟ್ರೀಯ ತಂಡದ ತಾರಾ ಆಟಗಾರರಾಗಿರುವ ಯುವರಾಜ್‌ ಸಿಂಗ್‌, ಮೊಹಮ್ಮದ್‌ ಕೈಫ್‌, ಕೊಹ್ಲಿ, ರವೀಂದ್ರ ಜಡೇಜ ಹೀಗೆ ಅನೇಕರ ಕ್ರಿಕೆಟ್‌ ಬದುಕು ಬೆಳಗಿದ್ದು ಜೂನಿಯರ್‌ ಕ್ರಿಕೆಟ್‌ ಮೂಲಕ.

‘ಪ್ರತಿ ಕ್ರಿಕೆಟಿಗನ ಬದುಕು ರೂಪುಗೊಳ್ಳಲು ಗಟ್ಟಿ ಬುನಾದಿ ಅಗತ್ಯ. ಅದಕ್ಕೆ ವಯೋಮಿತಿಯೊಳಗಿನ ಟೂರ್ನಿಗಳು ವೇದಿಕೆಯಾಗುತ್ತವೆ. ಅಡ್ಡಹಾದಿ ಹಿಡಿಯದೇ ಸಭ್ಯ ಕ್ರಿಕೆಟಿಗನಾಗುವತ್ತ ಗಮನ ಕೊಡಿ’ ಎಂದು ಭಾರತ ಜೂನಿಯರ್‌ ತಂಡದ ಕೋಚ್‌ ರಾಹುಲ್‌ ದ್ರಾವಿಡ್‌ ತಮ್ಮ ನಿವೃತ್ತಿಯ ಸಂದರ್ಭದಲ್ಲಿ ಹೇಳಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry