7

ಹೊಸ ವರ್ಷಕ್ಕೆ ಹೀಗಿರಲಿ ಸಂಕಲ್ಪ!

Published:
Updated:
ಹೊಸ ವರ್ಷಕ್ಕೆ ಹೀಗಿರಲಿ ಸಂಕಲ್ಪ!

ಎಂದಿನಂತೆ ಒಂದು ಕ್ಯಾಲೆಂಡರ್ ವರ್ಷ ಮುಗಿಯಿತು. ಮತ್ತೊಂದು ಹೊಸ ವರ್ಷ ಪ್ರಾರಂಭವಾಯಿತು. ಹೊಸ ವರ್ಷವನ್ನು ಸ್ವಾಗತಿಸುವ ಹಲ ಬಗೆಯ ಆಚರಣೆಗಳಲ್ಲಿ, ಹೊಸ ಸಂಕಲ್ಪಗಳನ್ನು ಮಾಡುವುದೂ ಒಂದು ಪರಿಪಾಠ ಅಲ್ಲವೇ? ತಾವು ಈ ವರ್ಷದಲ್ಲಿ ಸಾಧಿಸಬೇಕು ಅಂದುಕೊಂಡಿರುವ ಹಲವಾರು ಕಾರ್ಯಯೋಜನೆಗಳನ್ನು ಪಟ್ಟಿ ಮಾಡಿಕೊಳ್ಳುವ ಪದ್ದತಿಯನ್ನು ವಿದ್ಯಾರ್ಥಿಗಳೂ ಸೇರಿ ಬಹು ಮಂದಿ ಪಾಲಿಸುತ್ತಾರೆ. ಇವೇ ‘ಹೊಸ ವರ್ಷದ ಸಂಕಲ್ಪಗಳು’.

ಪಟ್ಟಿ ಮಾಡಿಕೊಂಡ ಸಂಕಲ್ಪಗಳನ್ನು ಯೋಜಿತ ರೀತಿಯಲ್ಲಿ ಜಾರಿಗೆ ತಾರದೇ ಹೋದರೆ, ಈ ಸಂಕಲ್ಪಗಳಿಗೆ ಯಾವುದೇ ಅರ್ಥ ಇರುವುದಿಲ್ಲ. ಮತ್ತೆ ಅವು ಮುಂದಿನ ವರ್ಷದ ಸಂಕಲ್ಪಗಳ ಪಟ್ಟಿಯನ್ನು ಸೇರುತ್ತವೆ, ಅಲ್ಲವೇ? ವಿದ್ಯಾರ್ಥಿಗಳೇ, ನಿಮ್ಮ ಭವಿಷ್ಯ ಜೀವನವನ್ನು ಉಜ್ವಲಗೊಳಿಸಿಕೊಳ್ಳುವ ನಿಟ್ಟಿನಲ್ಲಿ ನೀವೂ ಬಂದಿರುವ ಹೊಸವರ್ಷಕ್ಕೆ ನಿರ್ದಿಷ್ಟವಾದ ಕಾರ್ಯಯೋಜನೆ ಹಾಕಿಕೊಂಡು ಸಂಕಲ್ಪತೊಟ್ಟು, ಆ ಮಾರ್ಗದಲ್ಲಿ ಮುಂದುವರೆದರೆ, ಯಶಸ್ಸು ಖಂಡಿತ.

ಶೈಕ್ಷಣಿಕವಾಗಿ ಹಾಗೂ ಬೌದ್ಧಿಕವಾಗಿ ಉನ್ನತ ಮಟ್ಟಕ್ಕೆ ಏರಲು ಪೂರಕವಾಗಿರುವಂಥ ಸಂಕಲ್ಪಗಳನ್ನು ರೂಪಿಸಿಕೊಂಡು, ಅವುಗಳನ್ನು ಅಳವಡಿಸಿಕೊಂಡಲ್ಲಿ ನಿಮ್ಮ ವ್ಯಕ್ತಿತ್ವದಲ್ಲಿ ಗಮನಾರ್ಹವಾದ ಬದಲಾವಣೆಗಳು ಉಂಟಾಗುತ್ತವೆ. ಈ ನಿಟ್ಟಿನಲ್ಲಿ, ಈಗ ಬಂದಿರುವ ಹೊಸ ವರ್ಷಕ್ಕೆ ನಿಮ್ಮ ಸಂಕಲ್ಪಗಳು ಹೇಗಿರಬೇಕು ಎಂಬ ಬಗ್ಗೆ ನಿಮಗೆ ಮಾರ್ಗದರ್ಶನ ಮಾಡುವುದೇ ಈ ಲೇಖನದ ಉದ್ದೇಶ.

ಆದರ್ಶ ವಿದ್ಯಾರ್ಥಿಯಾಗಿ

ನಿಮ್ಮ ನಡೆ, ನುಡಿ, ವ್ಯಕ್ತಿತ್ವ, ಶಿಸ್ತು, ಸಂಯಮ, ಬುದ್ಧಿವಂತಿಕೆ ಮುಂತಾದ ಉತ್ತಮ ಗುಣಗಳಿಂದಲೇ ನೀವೊಬ್ಬ ಆದರ್ಶ ವಿದ್ಯಾರ್ಥಿ ಎನ್ನಿಸಿಕೊಳ್ಳುವುದು ಸಾಧ್ಯ. ಆಗಲೇ ನೀವು ಇತರರಿಗೂ ಮಾದರಿಯಾಗಿ ರೂಪುಗೊಳ್ಳುತ್ತೀರಿ. ಇದು, ನಿಮ್ಮನ್ನು ನೀವು ಸುಧಾರಿಸಿಕೊಳ್ಳುವುದರಿಂದ ಮಾತ್ರ ಆಗುವ ಬದಲಾವಣೆ. ನಿಮ್ಮ ಪೋಷಕರು ಹಾಗೂ ಶಿಕ್ಷಕರು ನಿಮ್ಮಲ್ಲಿ ಗುರುತಿಸಿರಬಹುದಾದ ಋಣಾತ್ಮಕ ಗುಣಗಳನ್ನು ದೂರ ಮಾಡಿಕೊಂಡು, ಅವರೆಲ್ಲರ ವಿಶ್ವಾಸವನ್ನು ಗಳಿಸಿಕೊಳ್ಳುವ ಪ್ರಯತ್ನವೇ ನಿಮ್ಮ ಮೊದಲ ಸಂಕಲ್ಪವಾಗಬೇಕು. ಅದಕ್ಕೆ ಪೂರಕವಾದ ಬದಲಾವಣೆಗಳು ನಿಮ್ಮಿಂದಲೇ ಪ್ರಾರಂಭವಾಗಬೇಕು. ಈ ಬಗ್ಗೆ ನಿಮ್ಮ ಗುರಿ ನಿರ್ದಿಷ್ಟವಾಗಿರಲಿ. ಅನವಶ್ಯಕ ಕಾಲಹರಣ ಮಾಡುವುದು ಹಾಗೂ ಅನಗತ್ಯ ವಿಷಯಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುವುದು ನಿಮ್ಮನ್ನು ಗುರಿಯಿಂದ ದೂರವಿರಿಸುತ್ತದೆ.

ಶೈಕ್ಷಣಿಕವಾಗಿ ಉನ್ನತಮಟ್ಟ ತಲುಪಲು ಬಯಸಿ

ಪ್ರಸ್ತುತ ತರಗತಿಯಲ್ಲಿ ನಿಮ್ಮ ಶೈಕ್ಷಣಿಕ ಮಟ್ಟ ಏನೇ ಇರಲಿ, ಅದನ್ನು ಸುಧಾರಿಸಿಕೊಂಡು ಇನ್ನಷ್ಟು ಉನ್ನತ ಮಟ್ಟಕ್ಕೆ ಏರುವುದು ನಿಮ್ಮ ಇನ್ನೊಂದು ಪ್ರಮುಖ ಸಂಕಲ್ಪವಾಗಬೇಕು. ಪಾಠ–ಪ್ರವಚನಗಳಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡು, ವಿಷಯ ಕಲಿಯುವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಕ್ರಮಬದ್ಧವಾದ ಅಧ್ಯಯನ ವಿಧಾನವನ್ನು ಅಳವಡಿಸಿಕೊಂಡರೆ. ಉತ್ತಮ ಶ್ರೇಣಿ ಪಡೆಯುವುದು ಕಷ್ಟವಲ್ಲ. ಈ ನಿಟ್ಟಿನಲ್ಲಿ ಪ್ರಾಮಾಣಿಕವಾದ ಪ್ರಯತ್ನ ಮಾಡುವುದಾಗಿ ಸಂಕಲ್ಪ ಮಾಡಿಕೊಳ್ಳಿ. ನಿಮ್ಮ ಶಿಕ್ಷಕರ ಹಾಗೂ ಪೋಷಕರ ಸಹಾಯ ಪಡೆದು, ಅಧ್ಯಯನಕ್ಕೆ ಒಂದು ಸೂಕ್ತ ವೇಳಾಪಟ್ಟಿಯನ್ನು ರಚಿಸಿಕೊಳ್ಳಿ. ಅದನ್ನು ಯಾವುದೇ ಲೋಪವಾಗದಂತೆ ಜಾರಿಗೆ ತನ್ನಿ.

ಜ್ಞಾನದ ಹಸಿವನ್ನು ಹೆಚ್ಚಿಸಿಕೊಳ್ಳಿ

ನಿಮ್ಮ ತರಗತಿಯ ಪಾಠ–ಪ್ರವಚನಗಳಿಗೆ ಸೀಮಿತವಾಗದೆ, ನಿಮ್ಮ ಆಸಕ್ತಿಯ ವಿಷಯದಲ್ಲಿ ಜ್ಞಾನವನ್ನು ವಿಸ್ತರಿಸಿಕೊಳ್ಳುವ ಬಗ್ಗೆ ನೀವು ಸಂಕಲ್ಪಿಸುವುದು ನಿಮ್ಮ ಬೌದ್ಧಿಕಮಟ್ಟದ ಅಭಿವೃದ್ಧಿಗೆ ಪೂರಕವಾಗುತ್ತದೆ. ಈಗಂತೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಾಗಿರುವ ಬೆಳವಣಿಗೆಗಳಿಂದಾಗಿ ಬೆರಳ ತುದಿಯಲ್ಲೇ ಬೇಕಾದ ಮಾಹಿತಿ ಸಂಗ್ರಹ ಸಾಧ್ಯವಿದೆ. ಸಾಮಾಜಿಕ ಜಾಲತಾಣಗಳ ಸದ್ಬಳಕೆ ಮಾಡಿಕೊಂಡು ನಿಮ್ಮ ಜ್ಞಾನದ ಹಸಿವನ್ನು ಹೆಚ್ಚಿಸಿಕೊಳ್ಳಿ. ನಿಮ್ಮ ಪ್ರಸ್ತುತ ಅಧ್ಯಯನಕ್ಕೆ ಮಾತ್ರವಲ್ಲದೆ, ನಿಮ್ಮ ಭವಿಷ್ಯಜೀವನಕ್ಕೆ ಸೂಕ್ತವಾದ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಇಂಥ ಚಟುವಟಿಕೆಗಳು ಪೂರಕವಾಗಿರುತ್ತವೆ. ಅಗತ್ಯ ಬಿದ್ದಲ್ಲಿ ನಿಮ್ಮ ಹಿರಿಯರ ಅಥವಾ ಶಿಕ್ಷಕರ ಅಥವಾ ನಿಮ್ಮ ಆಸಕ್ತಿಯ ಕ್ಷೇತ್ರದ ತಜ್ಞರ ಜೊತೆಗೆ ಸಮಾಲೋಚಿಸಿ ನಿರ್ಧಾರಕ್ಕೆ ಬನ್ನಿ. ರಾಷ್ಟ್ರಕವಿ ಕುವೆಂಪು ಹೇಳಿರುವ ಈ ಮಾತುಗಳು ನೆನಪಿರಲಿ: ‘ವಿದ್ಯಾರ್ಥಿಗಳು ಕೇವಲ ಭತ್ತ ತುಂಬುವ ಚೀಲಗಳಾಗಬಾರದು. ಭತ್ತ ಬೆಳೆಯುವ ಗದ್ದೆಗಳಾಗಬೇಕು’.

ಕೆಟ್ಟ ಪ್ರಭಾವಗಳಿಂದ ದೂರವಿರಿ

ನಿಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡುವ, ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯುವ ಮೊಬೈಲ್, ಲ್ಯಾಪ್‍ಟಾಪ್ ಮುಂತಾದ ಎಲೆಕ್ಟ್ರಾನಿಕ್ ಉಪಕರಣಗಳನ್ನು ಅವಶ್ಯಕತೆ ಇರುವಾಗ ಮಾತ್ರ ಬಳಸುವ ಪ್ರಬುದ್ದತೆಯನ್ನೂ ನಿಮ್ಮ ಸಂಕಲ್ಪದಲ್ಲಿ ಅಳವಡಿಸಿಕೊಳ್ಳಿ. ನಿಮ್ಮ ಅಧ್ಯಯನಶೀಲತೆಗೆ ಭಂಗ ತರುವ ಸಾಮಾಜಿಕ ಜಾಲತಾಣಗಳಿಂದ ದೂರವಿರಿ. ನೆನಪಿಡಿ, ನಿಮ್ಮ ಪೋಷಕರು, ಹಿರಿಯರು ಇವೆಲ್ಲಾ ಇಲ್ಲದ ಕಾಲದಲ್ಲಿಯೂ ಸಂತೃಪ್ತಿಯ ಹಾಗೂ ನೆಮ್ಮದಿಯ ಜೀವನ ನಡೆಸಿದ್ದರು. ಅವಶ್ಯಕವಾದರೂ ಅವು ನಿಮ್ಮ ಜೀವನಕ್ಕೆ ಅನಿವಾರ್ಯವಲ್ಲ.

ಪರಿಸರಪ್ರಜ್ಞೆಯನ್ನು ಬೆಳೆಸಿಕೊಳ್ಳಿ

ವಿನಾಶಕ್ಕೊಳಗಾಗುತ್ತಿರುವ ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ನಿಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳುವ ಸಂಕಲ್ಪ ಮಾಡುವುದು ಇಂದಿನ ಪ್ರಮುಖ ಅವಶ್ಯಕತೆ. ಭೂಮಿಯ ಇಂದಿನ ದುರವಸ್ಥೆಗಳ ಬಗ್ಗೆ ನಿಮ್ಮ ಪಾಠಗಳಲ್ಲಿ ನೀವು ಸಾಕಷ್ಟು ಓದಿದ್ದೀರಿ ಹಾಗೂ ತಿಳಿದುಕೊಂಡಿದ್ದೀರಿ. ಆದರೆ, ಭವಿಷ್ಯದ ಒಬ್ಬ ಪ್ರಜ್ಞಾವಂತ ನಾಗರಿಕನಾಗಿ ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ನಿಮ್ಮ ಪಾತ್ರದ ಬಗ್ಗೆ ಅರಿವು ಮೂಡಿಸಿಕೊಳ್ಳುವುದು ಹಾಗೂ ಸಮಾಜದಲ್ಲಿ ಇತರರಿಗೆ ಅರಿವು, ಜಾಗೃತಿ ಮೂಡಿಸುವುದು ನಿಮ್ಮ ಜವಾಬ್ದಾರಿ. ಶಾಲೆಯ ಪರಿಸರ ಸಂಬಂಧಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ. ಮನೆಯ ಅಂಗಳದಲ್ಲಿ, ಶಾಲೆಯಲ್ಲಿ, ನಿಮ್ಮ ನೆರೆಹೊರೆಯಲ್ಲಿ ಸಾಧ್ಯವಾದಷ್ಟೂ ಗಿಡಗಳನ್ನು ನೆಟ್ಟು ಪೋಷಿಸಿ. ನಿಮ್ಮ ಮನೆಯ ಮುಂಭಾಗದಲ್ಲಿರುವ ಗಿಡ, ಮರಗಳಿಗೆ ನೀರುಣಿಸಿ. ಪ್ರಾಣಿ, ಪಕ್ಷಿಗಳ ಬಗ್ಗೆ ಕಾಳಜಿ ಬೆಳೆಸಿಕೊಳ್ಳಿ. ಎಲ್ಲಕ್ಕಿಂತ ಮುಖ್ಯವಾಗಿ, ನಿಮ್ಮ ಮನೆ, ಅಕ್ಕ ಪಕ್ಕ ಹಾಗೂ ಶಾಲೆಯ ಅಂಗಳದಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳುವ ಬಗ್ಗೆ ಕ್ರಮ ತೆಗೆದುಕೊಳ್ಳಿ.

ಪರಿಸರಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ. ಪರಿಸರಕ್ಕೆ ಸಂಬಂಧಿಸಿದಂತೆ ನಿಮ್ಮ ಸಮಾಜದಲ್ಲಿ ಅಪೇಕ್ಷಿತ ಬದಲಾವಣೆಗಳಿಗೆ ಚಾಲನೆ ನೀಡುವ ಯಾವುದೇ ವ್ಯಕ್ತಿ ಅಥವಾ ಸಂಘಟನೆಯ ಜೊತೆಗೆ ಕೈ ಜೋಡಿಸಿ. ನಿಮ್ಮದೇ ಆದ ಸಮಾನ ಮನಸ್ಕರ ತಂಡವೊಂದನ್ನು ರಚಿಸಿಕೊಂಡು ಅವರೊಡನೆ ಸಹಕರಿಸಿ.

ಈ ವರ್ಷ ಹೊಸ ಸ್ನೇಹಿತರನ್ನು ಗಳಿಸಿ

ನಿಮ್ಮ ಯೋಚನಾಲಹರಿಯನ್ನು ಬೆಂಬಲಿಸುವಂಥ ಹೊಸ ಸ್ನೇಹಿತರನ್ನು ಗಳಿಸಿಕೊಳ್ಳುವ ಸಂಕಲ್ಪ ಮಾಡಿ. ಅವರು ನಿಮಗಿಂತ ಬುದ್ಧಿವಂತರಿರಬಹುದು. ಯೋಚಿಸಬೇಡಿ, ಅವರ ಬುದ್ಧಿವಂತಿಕೆಯ ಪ್ರಯೋಜನವನ್ನು ಪಡೆಯುವ ನಿಟ್ಟಿನಲ್ಲಿ ಯೋಚಿಸಿ. ಪರಸ್ಪರ ಪೂರಕವಾಗಿ ನಿಮ್ಮ ಸ್ನೇಹ ಸಾಗುವಂತೆ ನೋಡಿಕೊಳ್ಳಿ. ನಿಮ್ಮ ಸಮಾನಮನಸ್ಕ ಸ್ನೇಹಿತರು ನಿಮ್ಮ ಎಲ್ಲ ಪ್ರಯತ್ನಗಳಿಗೆ ನಿಮ್ಮೊಂದಿಗೆ ಕೈ ಜೋಡಿಸುವಂತೆ ಪ್ರೇರೇಪಣೆ ನೀಡಿ. ನಿಮ್ಮ ಜೊತೆಗೆ ಅವರೂ ತಮ್ಮ ವ್ಯಕ್ತಿತ್ವವನ್ನು ಸುಧಾರಿಸಿಕೊಳ್ಳಲು ಅವಕಾಶ ಮಾಡಿಕೊಡಿ. ಅವರೊಡನೆ ನೀವು ಅಧ್ಯಯನ ಮಾಡಿದ ವಿಷಯಗಳನ್ನು ಹಂಚಿಕೊಳ್ಳಿ. ನೀವು ರೂಪಿಸಿಕೊಂಡ ಉತ್ತಮ ಗುಣಗಳು ಅವರ ಮೇಲೆಯೂ ಪ್ರಭಾವ ಬೀರಲಿ.

ಇದೆಲ್ಲದರ ಜೊತೆಗೆ, ಹೊಸ ವರ್ಷದ ನಿಮ್ಮ ಸಂಕಲ್ಪಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ನೀವು ಅನೇಕ ದೃಢ ನಿರ್ಧಾರಗಳನ್ನು ತಳೆಯಬೇಕಾಗುತ್ತದೆ. ನೀವು ಅಂದುಕೊಂಡಿರುವ ಎಲ್ಲ ಸಂಕಲ್ಪಗಳಿಗೆ ಕಾಲಮಿತಿಯನ್ನು ಹಾಕಿಕೊಳ್ಳಿ. ಸಾಧ್ಯವಾದಷ್ಟೂ ಆ ಕಾಲಮಿತಿಯ ಒಳಗೆ ಜಾರಿಗೊಳಿಸಲು ಪ್ರಾಮಾಣಿಕವಾದ ಪ್ರಯತ್ನ ಮಾಡಿ. ಹೆಚ್ಚು ಮುಂದೂಡಬೇಡಿ. ನೆನಪಿಡಿ, ನಿಮ್ಮ ಪ್ರಾಮಾಣಿಕತೆಯೇ ನಿಮ್ಮ ಯಶಸ್ಸಿನ ತಳಪಾಯ.               

ನಿರ್ದಿಷ್ಟವಾದ ಸಂಕಲ್ಪಗಳೊಡನೆ, ದೃಢಚಿತ್ತದಿಂದ ನಿಮ್ಮ ವಿದ್ಯಾರ್ಥಿಜೀವನದ ಭವಿಷ್ಯವನ್ನು ನೀವೇ ರೂಪಿಸಿಕೊಳ್ಳಿ. ಪೋಷಕರಿಗೆ ನಂದಾದೀಪಗಳಾಗಿ, ಸಮಾಜದ ಅತ್ಯಮೂಲ್ಯ ಆಸ್ತಿಯಾಗಿ, ದೇಶದ ಪ್ರಜ್ಞಾವಂತ ನಾಗರಿಕರಾಗಿ ರೂಪುಗೊಳ್ಳಲು ನಿಮ್ಮ ಸಂಕಲ್ಪಗಳು ನಿಮಗೆ ನೆರವಾಗಲಿ. ಬಂದಿರುವ ಹೊಸ ವರ್ಷವು ನಿಮಗೆ ಆಶಾದಾಯಕವಾಗಿರಲಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry