7

ಹಳೆಯ ನಿರ್ಣಯಗಳ ನಡುವೆ!

Published:
Updated:
ಹಳೆಯ ನಿರ್ಣಯಗಳ ನಡುವೆ!

- ಜಯಸಿಂಹ ಕೆ.ಆರ್

2018ನೇ ವರ್ಷದ ಕ್ಯಾಲೆಂಡರ್ ಗೋಡೆ ಏರಿದೆ. ಹೊಸ ವರ್ಷಕ್ಕೆ ಹೊಸ ರೆಸಲೂಷನ್‌ಗಳನ್ನು ತೆಗೆದುಕೊಳ್ಳುವುದು ಇತ್ತೀಚಿನ ವಾಡಿಕೆ. ಬಹುತೇಕರು ಎಂದಿನಂತೆ, ಹಿಂದಿನಂತೆ ಹೊಸ ವರ್ಷಕ್ಕೆ ತಮ್ಮ ತಮ್ಮ ಹೊಸ ನಿರ್ಣಯಗಳನ್ನು ಈಗಾಗಲೇ ಸಂಕಲ್ಪಿಸಿಕೊಂಡಿರುತ್ತಾರೆ. ಕೆಲವರಿಗೆ ಕಳೆದ ವರ್ಷದ ನಿರ್ಣಯಗಳನ್ನು ಪಾಲಿಸಲಾಗಲಿಲ್ಲವಲ್ಲಾ ಎಂಬ ತಳಮಳವಿದ್ದರೆ, ಇನ್ನೂ ಕೆಲವರಿಗೆ ಹೊಸ ವರ್ಷದಲ್ಲಿ ಏನಾದರರೂ ಸಾಧಿಸಬೇಕೆಂಬ ಹುಮ್ಮಸ್ಸು ಮತ್ತು ತವಕ. ಹೊಸ ವರ್ಷದ ಹೊಸ್ತಿಲಲ್ಲಿರುವಾಗಲೇ ನಮ್ಮಲ್ಲಿ ಹೊಸ ವರ್ಷದ ನಿರ್ಣಯಗಳ ಬಗ್ಗೆ ಚಾಯ್ ಪೆ ಚರ್ಚಾ ಶುರುವಾಗುತ್ತದೆ.

ಸಾಮಾನ್ಯವಾಗಿ ವಿದ್ಯಾರ್ಥಿಗಳು ಓದಿನಿಂದ ಹಿಡಿದು ಆಟದವರೆಗೆ ಅನೇಕ ಹೊಸ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಡಿಸೆಂಬರ್ ತಿಂಗಳಿನಲ್ಲಿ ಯೋಚಿಸಿ ಜನವರಿಯಲ್ಲಿ ಕಾರ್ಯಪ್ರವೃತ್ತರಾಗುವ ನಾವು ನಮ್ಮ ನಿರ್ಣಯಗಳನ್ನು ಹೆಚ್ಚು ದಿನ ಉಳಿಸಿಕೊಳ್ಳುವುದಿಲ್ಲ ಎಂಬುದು ನಮಗೆ ಅರಿವಿರುವ 'ಸಿಹಿ-ಕಹಿ ಸತ್ಯ'.

ನನ್ನ ಹೊಸ ವರ್ಷದ ನಿರ್ಣಯಗಳನ್ನು ನೆನೆದಾಗಲೆಲ್ಲಾ ನನಗೆ ಪುರಂದರದಾಸರ ‘ಕಷ್ಟಪಟ್ಟರೂ ಇಲ್ಲ ಕಳವಳಿಸಿದರಿಲ್ಲ...’ ಕೀರ್ತನೆ ಜ್ಞಾಪಕಕ್ಕೆ ಬರುತ್ತದೆ. ಜಿ. ಎಸ್. ಶಿವರುದ್ರಪ್ಪನವರ ಒಂದು ಕವನದ ಸಾಲಾದ ‘...ಅಂತು ಬಿತ್ತಿದ್ದು ಕೆಳಕ್ಕೆ ಬೇರೂರಿ ಮೇಲಕ್ಕೆ ಗಿಡವಾಗಿ ಪುಟಿದೇಳಲೇ ಇಲ್ಲ’ ನನಗೇ ಬರೆದದ್ದೊ ಎಂದು ಭಾಸವಾಗುತ್ತದೆ. ನಾನೂ ಹುಮ್ಮಸ್ಸಿನಿಂದ ಪ್ರತಿ ವರ್ಷ ಅನೇಕ ನಿರ್ಣಯಗಳ ಪ್ರಮಾಣವಚನವನ್ನು ಸ್ವೀಕರಿಸುತ್ತೇನೆ. ಆದರೆ, ದಿನಗಳು ಕಳೆದಂತೆ ನಿರ್ಣಯಗಳನ್ನು ಪಾಲಿಸುವ ಶ್ರದ್ದೆ ಕಡಿಮೆಯಾಗುತ್ತದೆ. ನಮ್ಮ ಜನನಾಯಕರ ಪ್ರಮಾಣವಚನದಷ್ಟು ಸತ್ಯ ನಮ್ಮ ಪ್ರಮಾಣವು ಕೂಡ. ಇದು ಜನವರಿ ತಿಂಗಳ ಚಳಿಯಿಂದ ಬಂದ ಚಾಳಿ ಇರಬೇಕೋ ಏನೋ?! ಗೊತ್ತಿಲ್ಲ. ಹಾಗಾಗಿ ಈ ವರ್ಷ ನಾನು ಹೆಚ್ಚು ನಿರ್ಣಯಗಳನ್ನು ತೆಗೆದುಕೊಳ್ಳಬಾರದೆಂಬ ನಿರ್ಣಯಕ್ಕೆ ಬಂದಿದ್ದೇನೆ.

ಕಡಿಮೆ ನಿರ್ಣಯಗಳನ್ನು ತೆಗೆದುಕೊಂಡು ಅದನ್ನು ನಿಷ್ಠೆಯಿಂದ ಅನುಷ್ಠಾನಕ್ಕೆ ತರುವುದೆ ನನ್ನ ಹೊಸ ವರ್ಷದ ನಿರ್ಣಯ. ಹಾಗಂತ ಹೊಸದೇನೂ ಇಲ್ಲ. Old wine in new bottle – ಎಂಬಂತೆ ನನ್ನ ಹಿಂದಿನ ವರ್ಷಗಳ ನಿರ್ಣಯಗಳನ್ನು ಈ ಹೊಸ ವರ್ಷಕ್ಕೆ ವರ್ಗಾಯಿಸುತ್ತಿದ್ದೇನೆ ಅಷ್ಟೇ! ನಮ್ಮ ಹಳೆಯ ಬೇರುಗಳು ಇನ್ನಷ್ಟು ಕೆಳಕ್ಕೆ ತಳಕ್ಕೆ ಬೇರೂರಿ ಹೊಸದಾಗಿ ಚಿಗುರೊಡೆಯುತ್ತೆಂಬ ಆಸೆಯಿಂದ, ಆಸ್ಥೆಯಿಂದ ಈ ಪೂರಕ ಪರೀಕ್ಷೆಗೆ ಮತ್ತೊಮ್ಮೆ apply ಮಾಡುತ್ತಿದ್ದೇನೆ !

ನನ್ನ ಈ ವರ್ಷದ ಹಳೆಯ ನಿರ್ಣಯಗಳಲ್ಲಿ ನನಗೆ ಮುಖ್ಯವಾದದ್ದು ಪಠ್ಯಪುಸ್ತಕಗಳು ಮರೆತಿರುವ ಪದ್ಯಗಳನ್ನು ಓದಿ ಬಾಯಿಪಾಠ ಮಾಡುವುದು ಹಾಗು ತಿಂಗಳಿಗೆ ಕನಿಷ್ಠ 2-3 ಪುಸ್ತಕಗಳನ್ನು ಓದಿ ಮನನಿಸುವುದು. ಈಗ ಕೋಶ ಓದಿ ಆಯಿತು; ಹಾಗಾಗಿ ಇನ್ನು ದೇಶ ಸುತ್ತುವ ಕೆಲಸ, ಹೆಚ್ಚು ಪ್ರವಾಸ ಮಾಡಬೇಕು ಎಂದುಕೊಂಡಿದ್ದೇನೆ. ಆದಕ್ಕೆ ಸ್ವಲ್ಪ ಸಮಯವನ್ನೂ ಹಣವನ್ನೂ ಹೊಂದಿಸಿಕೊಳ್ಳಬೇಕಲ್ಲವೆ? ಹಾಗಾಗಿ ಅನವಶ್ಯಕ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು. ಇನ್ನು ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಫೋನ್, ಟ್ಯಾಬ್ ಹಾಗು ಲ್ಯಾಪ್‌ಟಾಪ್‌ನಿಂದ ಸ್ವಲ್ಪ ದೂರವಿರಬೇಕು.

ಈ ಪಥದಲ್ಲಿ ಸಾಗಲು ಸ್ವಲ್ಪ ಸಹನೆ, ವಿವೇಕ ಮತ್ತು ಶ್ರದ್ಧೆ ಬೇಕಲ್ಲವೆ? ಹಾಗಾಗಿ ಈ ಗುಣಗಳನ್ನೂ ಅಳವಡಿಸಿಕೊಳ್ಳಬೇಕು. ಇವಿಷ್ಟು ನನ್ನ ಹಳೆಯ ನಿರ್ಣಯಗಳ ಹೊಸ ಮುಖಗಳು.

ಇನ್ನು Beaten ಆಗಿರುವ ಚೆಂಡನ್ನು ಮರೆತು, ಮುಂದೆ ಎದುರಿಸಬೇಕಿರುವ ಚೆಂಡಿನತ್ತ ನಮ್ಮೆಲ್ಲರ ಗಮನ ಹರಿಯಲಿ. ಹೊಸ ವರುಷದ ಉತ್ಸಾಹ ಎಂದಿಗೂ ಬತ್ತದಿರಲಿ. ಕನಸು ಕಾಣುವ ಕಣ್ಣಲ್ಲಿ ಸ್ಪಲ್ಪ ಶ್ರಮದ ಬೆವರು ಹರಿಯಲಿ. ಈ ಹೊಸ ವರ್ಷ ಹಾಗೂ ನಮ್ಮ ನಿಮ್ಮೆಲ್ಲರ ನಿರ್ಣಯಗಳು ಎಲ್ಲರಿಗೂ ಎಲ್ಲಕ್ಕೂ ಶುಭ ತರಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry