ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೃತ್ಯವೇ ಸರ್ವಸ್ವ

Last Updated 31 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಹಾಡುವ ಮುರಳಿಯ ಕುಣಿಯುವ ಗೆಜ್ಜೆಯ...’ ವ್ಯಾಮೋಹ ನನಗೆ ಬಾಲ್ಯದಿಂದಲೇ ಅಂಟಿಕೊಂಡಿತ್ತು. ಹಾಡಿನ ಇಂಪು ಕಿವಿಗೆ ತಾಕುತ್ತಿದ್ದಂತೆ ಮನಸ್ಸು, ಕಾಲು ಉಲ್ಲಾಸದಲ್ಲಿ ಕುಣಿಯುತ್ತಿದ್ದವು. ಶ್ರೀಮಂತ ಕುಟುಂಬದಲ್ಲಿಯೇ ಬೆಳೆದಿದ್ದ ನನಗೆ ಅದ್ಹೇಗೆ ನೃತ್ಯದೊಲುಮೆ ಶುರುವಾಯ್ತೊ ಕಾಣೆ.

ಹುಟ್ಟೂರು ಬೆಂಗಳೂರು. ತಂದೆ ಎಂ.ಆರ್. ರಾಜಾರಾವ್‌ ಅವರು ಬಿಲ್ಡಿಂಗ್‌ ಕಂಟ್ರಾಕ್ಟರ್‌. ಅಜ್ಜ ಒಳ್ಳೇ ಸಂಪಾದನೆ ಮಾಡಿ ಎಲ್ಲರಿಗೂ ಮನೆ, ಸೈಟುಗಳನ್ನು ಮಾಡಿಟ್ಟಿದ್ದರು. ಕಷ್ಟದ ಬಿಸಿ ನಮ್ಮನ್ನು ತಾಕಿದ್ದೇ ಇಲ್ಲ. ನಾವು ಆರು ಮಕ್ಕಳು. ತಾಯಿ ಸೇತುಬಾಯಿ ಎಲ್ಲರನ್ನೂ ಅಕ್ಕರೆಯಿಂದ ಬೆಳೆಸಿದರು. ಓದಿನೊಂದಿಗೆ ನನ್ನೊಳಗೆ ಕಲಾವಿದನೊಬ್ಬ ನಿಧಾನವಾಗಿ ರೂಪುಗೊಳ್ಳುತ್ತಿದ್ದ.

ಮಾಯಾರಾವ್‌ ಬೆಂಗಳೂರಿಗೆ ಬಂದು ನೃತ್ಯಶಾಲೆ ಆರಂಭಿಸಿದ್ದ ಕಾಲವದು. ನನಗೆ ಆಗ 13 ವರ್ಷ. ಅವರ ಬಳಿ ಸ್ವಲ್ಪ ದಿನ ನೃತ್ಯ ಕಲಿತೆ. ಅವರು ‘ಕೃಷ್ಣಮೂರ್ತಿ, ನೀನು ನೃತ್ಯವನ್ನು ಹವ್ಯಾಸವಾಗಿ ಅಲ್ಲ, ವೃತ್ತಿಪರವಾಗಿ ಕಲಿಯಬೇಕು’ ಎಂದು ಮಾರ್ಗದರ್ಶನ ಮಾಡಿದರು. ಅದಾಗಲೇ ನೃತ್ಯಕ್ಷೇತ್ರದಲ್ಲಿ ಹೆಸರು ಮಾಡಿದ್ದ ಯು.ಎಸ್‌. ಕೃಷ್ಣರಾವ್‌ ಕೂಡ ‘ನಿನಗೆ ನೃತ್ಯವನ್ನು ಕಲಿಯಲೇಬೇಕು ಎನ್ನುವ ಗಾಢವಾದ ಆಸಕ್ತಿ ಇದ್ದರೆ ರುಕ್ಮಿಣಿದೇವಿ ಅರುಂಡೇಲ್‌ ಅವರ ಕಲಾಕ್ಷೇತ್ರಕ್ಕೆ ಹೋಗು’ ಎಂದು ಸೂಚಿಸಿದರು.

ಅದು ನನ್ನ ಮನಸ್ಸಿನಲ್ಲಿ ಅಚ್ಚೊತ್ತಿತ್ತು. ಆಗ ನೆಹರು ಸರ್ಕಾರದಲ್ಲಿ ಹಣಕಾಸು ಸಲಹೆಗಾರರೂ ಆಗಿದ್ದ ನಮ್ಮ ಸಂಬಂಧಿ ಸಿ.ವಿ.ಶ್ರೀನಿವಾಸ್‌ ರಾವ್‌ ಅವರ ಬಳಿ ನೃತ್ಯ ಕಲಿಯುವ ನನ್ನ ಆಸೆಯನ್ನು ಹೇಳಿಕೊಂಡೆ. ‘ಈ ಕ್ಷೇತ್ರ ಅಷ್ಟು ಸುಲಭವಾಗಿ ಒಲಿಯುವುದಿಲ್ಲ. ತುಂಬಾ ಆಳವಾದ ಅಭ್ಯಾಸ ಬೇಕು, ನಿನ್ನಿಂದ ಸಾಧ್ಯನಾ’ ಎಂದು ಕೇಳಿದರು. ನಾನು ‘ಮಾಡುತ್ತೇನೆ’ ಎಂದುಬಿಟ್ಟೆ.

ಅಷ್ಟೊತ್ತಿಗೆ ನಾನು ಪಿಯುಸಿ ಮುಗಿಸಿದ್ದೆ. ಆ ಕಾಲಕ್ಕೆ ನೃತ್ಯಕ್ಷೇತ್ರವನ್ನು ಯಾರೂ, ಅದರಲ್ಲೂ ಪುರುಷರು ವೃತ್ತಿಯಾಗಿ ಆಯ್ದುಕೊಳ್ಳುತ್ತಿರಲಿಲ್ಲ. ಹೀಗಿದ್ದೂ ನಾನು ಧೈರ್ಯ ಮಾಡಿ ಕಲಾಕ್ಷೇತ್ರ ಹಾಗೂ ಶಾಂತಿನಿಕೇತನ... ಎರಡೂ ಕಡೆ ಅರ್ಜಿ ಸಲ್ಲಿಸಿಬಿಟ್ಟೆ. ಎರಡೂ ಕಡೆಯಿಂದ ಸಂದರ್ಶನಕ್ಕೆ ಕರೆಬಂತು. ನನ್ನ ಬಯಕೆಗಳನ್ನು, ಅಭಿರುಚಿಗಳನ್ನು ಪೋಷಿಸುತ್ತಾ ಬಂದಿದ್ದ ಅಪ್ಪನೂ ಒಪ್ಪಿಕೊಂಡ ಮೇಲೆ ಕಲಾಕ್ಷೇತ್ರಕ್ಕೆ ಹೋದೆ.

ಅಪ್ಪ– ಅಮ್ಮನ ಪ್ರೀತಿಯ ತೋಳಿನಿಂದ ನಾನು ಹೊರಬಂದಿದ್ದು ಅದೇ ಮೊದಲು. ಅಲ್ಲಿಂದ ಚೆನ್ನೈನ ಕಲಾಕ್ಷೇತ್ರದ ಮಡಿಲಿಗೆ ನಾನು ಸೇರಿದ್ದೆ. ಅಲ್ಲಿ 14–15 ವರ್ಷ ಗುರುಕುಲ ಪದ್ಧತಿಯಲ್ಲಿ ಕಲಿತೆ. ದೈವಿಕ ಕಳೆ ಹೊಂದಿದ್ದ ಗುರು ರುಕ್ಮಿಣಿದೇವಿ ಅರುಂಡೇಲ್‌ ಅವರ ಮಾರ್ಗದರ್ಶನದಲ್ಲಿ ನಿರಂತರ ನೃತ್ಯಾಭ್ಯಾಸದಲ್ಲಿ ತೊಡಗಿಕೊಂಡೆ. ಕಲಾಕ್ಷೇತ್ರ, ಸುಮಾರು 250 ಎಕರೆ ವ್ಯಾಪ್ತಿಯ ವಿಶಾಲ ಪ್ರದೇಶ. ಎಲ್ಲವನ್ನೂ ಅಲ್ಲಿ ಶಾಸ್ತ್ರಬದ್ಧವಾಗಿಯೇ ಕಲಿಯಬೇಕು. ನೃತ್ಯ ಕಲಿಯಲು ವಿಶಾಲ ವೇದಿಕೆ ಅಲ್ಲಿರಲಿಲ್ಲ. ಬದಲಿಗೆ ಮರದ ಕೆಳಗಡೆ ನೃತ್ಯಪಾಠ. ಸಿತಾರ್ ವಾದಕ ರವಿಶಂಕರ್‌, ಪ್ರಸಿದ್ಧ ಗಾಯಕಿ ಎಂ.ಎಸ್‌. ಸುಬ್ಬುಲಕ್ಷ್ಮಿ ಸೇರಿದಂತೆ ಹಲವು ಖ್ಯಾತನಾಮರು ರುಕ್ಮಿಣಿದೇವಿ ಅವರಿಗೆ ಪರಿಚಯವಿದ್ದರು. ಪಾಠ ಹೇಳಿಕೊಡಲು ಬರುತ್ತಿದ್ದರು.

ಅಲ್ಲಿದ್ದುಕೊಂಡು ನಾನು ಮೊದಲು ಕಥಕ್ಕಳಿ ಕಲಿತೆ. ಜೊತೆಗೆ ಭರತನಾಟ್ಯ, ಸಂಗೀತ, ಸಂಸ್ಕೃತ, ಇಂಗ್ಲಿಷ್‌ ಹಾಗೂ ತಮಿಳು ಕಲಿತುಕೊಂಡೆ. ಅದೂ ನಮ್ಮ ಅಭ್ಯಾಸದ ಭಾಗವೇ ಆಗಿತ್ತು. ನೃತ್ಯದ ಒಂದೊಂದೇ ಪಟ್ಟುಗಳನ್ನು ಅರಗಿಸಿಕೊಂಡ ಬಳಿಕ ಮುಂದಿನ ಪಾಠ. ಕಲಾಕ್ಷೇತ್ರದಲ್ಲಿ ದಿನದ ಹೆಚ್ಚಿನ ಭಾಗ ನೃತ್ಯ, ಅವುಗಳಿಗೆ ಸಂಬಂಧಿಸಿದ ಅಭ್ಯಾಸಕ್ಕಾಗಿಯೇ ಮೀಸಲಾಗುತ್ತಿತ್ತು. ಬೆಳಿಗ್ಗೆ 4.30ಕ್ಕೆ ಎದ್ದು 5.30ರವರೆಗೆ ನೃತ್ಯಾಭ್ಯಾಸ. 7.30ರಿಂದ 8.30 ಸಂಗೀತ,  8.30ರಿಂದ 9.30ರವರೆಗೆ ನೃತ್ಯಶಾಸ್ತ್ರಕ್ಕೆ ಸಂಬಂಧಿಸಿದ ಥಿಯರಿ ಪಾಠಗಳಿರುತ್ತಿದ್ದವು. 1.30ರಿಂದ 2.30ರವರೆಗೆ ಸಂಗೀತ ಪ್ರಾಕ್ಟಿಕಲ್‌, 2.30ರಿಂದ 3.30 ಕಥಕ್ಕಳಿ ಅಭ್ಯಾಸ, 3.45ನಿಂದ 4.45 ದ್ವಿತೀಯ ಭಾಷಾ ಪಾಠ, 4.45ನಿಂದ 6ಗಂಟೆಯವರೆಗೆ ಜನಪದ ನೃತ್ಯ ಪಾಠ ಇರುತ್ತಿತ್ತು. ಸುಮಾರು ಐದು ವರ್ಷ ಕಲಿತ ನಂತರ ನನಗೆ ನೃತ್ಯ ನಾಟಕ, ನೃತ್ಯ ರೂಪಕಗಳಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು. ರಾಮಾಯಣ, ಮಹಾಭಾರತದಂಥ ಸುಮಾರು 34 ನೃತ್ಯ ರೂಪಕಗಳನ್ನು ರುಕ್ಮಿಣಿದೇವಿ ಸಂಯೋಜಿಸಿದ್ದರು.

ಒಂದೆಡೆ ಕಲಾಕ್ಷೇತ್ರದಲ್ಲಿ ನೃತ್ಯ ಸಾಧನೆ ನಡೆಯುತ್ತಿತ್ತು. ಇತ್ತ ಚೀನಾ ಹಾಗೂ ಭಾರತದ ಸಂಬಂಧ ತಿಳಿಗೊಂಡಿತ್ತು. ಆ ವೇಳೆಗೆ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅವರು ರುಕ್ಮಿಣಿದೇವಿ ಅವರನ್ನು ಭಾರತದ ಸಾಂಸ್ಕೃತಿಕ ರಾಯಭಾರಿ ಎಂದು ಚೀನಾಕ್ಕೆ ಕಳುಹಿಸಿಕೊಟ್ಟರು. ಅವರೊಂದಿಗೆ ತೆರಳಿದ ನೃತ್ಯ ತಂಡದಲ್ಲಿ ನಾನೂ ಇದ್ದೆ. ಆಗ ನನಗೆ 22 ವರ್ಷ. ಅಲ್ಲಿಂದ ಬೇರೆ ಬೇರೆ ನೃತ್ಯ ನಾಟಕಗಳ ಭಾಗವಾಗುತ್ತಾ ಬೇರೆ ಬೇರೆ ದೇಶಗಳನ್ನು ನೋಡುವ ಅವಕಾಶ ನನಗೆ ಸಿಕ್ಕಿತು.

ಭಾರತೀಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಬಿಂಬಿಸುವ ನೃತ್ಯ ನಾಟಕ ಹಾಗೂ ಜನಪದ ನೃತ್ಯಗಳನ್ನು ಪ್ರದರ್ಶಿಸಲು ನಾವು ಸಿಂಗಪುರ, ಆಸ್ಟ್ರೇಲಿಯಾ, ಫಿಜಿ, ತೈವಾನ್‌, ವಿಯೆಟ್ನಾಂ, ಕೊರಿಯಾ, ಮಂಗೋಲಿಯಾ, ಖಜಕಸ್ತಾನ, ರಷ್ಯಾ, ಪೋಲೆಂಡ್‌, ರುಮೇನಿಯಾ, ಫ್ರಾನ್ಸ್‌, ಪೋರ್ಚುಗಲ್‌, ಸ್ಪೇನ್‌, ಹಾಲೆಂಡ್‌, ನೆದರ್‌ಲೆಂಡ್‌, ಅಗಿನ ಅವಿಭಜಿತ ಜೆಕೊಸ್ಲೋವಾಕಿಯಾ, ಯುಗೊಸ್ಲಾವಿಯಾ  ಮುಂತಾದ ಕಡೆ ಹೋಗಿದ್ದೆವು. ಅಲ್ಲಿ ವಿಶ್ವವಿಖ್ಯಾತ, ಜನಪ್ರಿಯ ಕಲಾವಿದರನ್ನು ಭೇಟಿ ಮಾಡಿದೆ. ಮುಂದೆ ಅನೇಕ ಸೋಲೊ ಕಾರ್ಯಕ್ರಮಗಳನ್ನೂ ನೀಡಿದೆ. ಒಟ್ಟಿನಲ್ಲಿ ಸಂಪೂರ್ಣವಾಗಿ ನೃತ್ಯಕ್ಕೆ ನನ್ನನ್ನು ಸಮರ್ಪಿಸಿಕೊಂಡಿದ್ದೆ.

ಗುರು ಎಂದರೆ ದೇವರು ಎಂದೇ ಭಾವಿಸುತ್ತಿದ್ದ ಕಾಲವದು. ರುಕ್ಮಿಣಿದೇವಿ ಅವರು ತೀರಿಕೊಂಡ ಮೇಲೆ ನನಗೆ ಕಲಾಕ್ಷೇತ್ರದಲ್ಲಿ ಉಳಿಯುವ ಮನಸಾಗಲಿಲ್ಲ. ಈ ಶಾಸ್ತ್ರಬದ್ಧ ನೃತ್ಯವನ್ನು ಕರ್ನಾಟಕದಲ್ಲಿ ನೀನು ಯಾಕೆ ಪರಿಚಯಿಸಬಾರದು ಎಂದು ಅನೇಕರು ನನ್ನನ್ನು ಕೇಳಿದರು. 1991ರ ಸುಮಾರಿಗೆ ಮತ್ತೆ ಬೆಂಗಳೂರಿಗೆ ಬಂದೆ. ‘ಪುರುಷನಾದ ಈತ ಹೇಗೆ ನೃತ್ಯ ಮಾಡಬಲ್ಲ’ ಎಂದು ನನ್ನನ್ನು ಕುತೂಹಲದಿಂದ ನೋಡುತ್ತಿದ್ದವರೂ ಇದ್ದರು. ಅವುಗಳ ಬಗೆಗೆ ತಲೆಕೆಡಿಸಿಕೊಳ್ಳದೆ ನಾನು ಕಲಿತ ನೃತ್ಯವನ್ನು ಇಲ್ಲಿನ ಆಸಕ್ತರಿಗೆ ಕಲಿಸಲಾರಂಭಿಸಿದೆ. ಏಳೆಂಟು ವಿದ್ಯಾರ್ಥಿಗಳಿಗೆ ನೃತ್ಯಪಾಠ ಹೇಳಿಕೊಡುವುದರೊಂದಿಗೆ ‘ಕಲಾಕ್ಷಿತಿ’ ಪ್ರಾರಂಭಿಸಿದೆ.

ಎನ್‌.ಆರ್‌.ಕಾಲೊನಿಯ ನಮ್ಮ ಮನೆಯ ಹಿಂಭಾಗದಲ್ಲಿ ವಿಶಾಲವಾದ ವೇದಿಕೆ ನಿರ್ಮಿಸಿ ಅಲ್ಲಿಯೇ ಈಗಲೂ ನೃತ್ಯ ಪಾಠ ನಡೆಯುತ್ತಿದೆ. ವಾಹನಗಳ ಓಡಾಟಗಳಿಂದ ವಿದ್ಯಾರ್ಥಿಗಳ ಏಕಾಗ್ರತೆಗೆ ಭಂಗ ಬರಬಾರದು ಎನ್ನುವ ಕಾರಣಕ್ಕೆ ಮನೆಯ ಹಿಂಭಾಗದ ಆವರಣವನ್ನು ನೃತ್ಯಾಭ್ಯಾಸಕ್ಕಾಗಿ ಮೀಸಲಿಟ್ಟಿದ್ದೇನೆ. ಅಂದಹಾಗೆ ಕಲಾಪ್ರೀತಿಯ ಅನೇಕರು ನನ್ನನ್ನು ಪ್ರೀತಿಯಿಂದ ಕರೆಯುವುದು ‘ಕಿಟ್ಟು ಸರ್‌’ ಎಂದು.

ನಾನು ಸಂಸ್ಥೆ ಪ್ರಾರಂಭಿಸಿ 25 ವರ್ಷವಾಯ್ತು. ಸುಮಾರು 40ರಿಂದ 50 ವಿದ್ಯಾರ್ಥಿಗಳು ನನ್ನಿಂದ ನೃತ್ಯ ಕಲಿತಿದ್ದಾರೆ. ಇಂದಿಗೂ ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು 14–15 ವರ್ಷಗಳಿಂದ ನಿರಂತರವಾಗಿ ಪಾಠ ಹೇಳಿಸಿಕೊಳ್ಳುತ್ತಿರುವವರೇ. ಶಾಸ್ತ್ರಬದ್ಧ ಕಲಿಕೆ ಆಗಿರುವುದರಿಂದ ನಿಜವಾದ ಆಸಕ್ತಿ ಇರುವವರಿಗೆ ಮಾತ್ರ ಇಲ್ಲಿ ಅವಕಾಶ. ನೃತ್ಯದ ಪಟ್ಟುಗಳನ್ನು ಸರಿಯಾಗಿ ಕಲಿತ ಮೇಲೆಯೇ ಮುಂದಿನ ಪಾಠ. 13 ವರ್ಷವಾದ ನಂತರವೇ ರಂಗ ಏರಲು ಒಪ್ಪಿಗೆ... ಹೀಗೆ ಹಲವು ನಿಯಮಗಳನ್ನು ಇಲ್ಲಿ ಬಂದವರು ಪಾಲಿಸಬೇಕು. ಹೀಗಾಗಿ ನನ್ನ ಬಳಿ ನೃತ್ಯ ಕಲಿಯಲು ಬರುವವರೂ ತುಂಬಾ ಯೋಚನೆ ಮಾಡಿಯೇ ಬರುತ್ತಾರೆ. ಮೂಲ ಸ್ವರೂಪಕ್ಕಿಂತ ಇಂದಿನ ನೃತ್ಯ ಡೊಂಕಾಗಿದೆ. ಅವನ್ನೆಲ್ಲಾ ನಾನು ನೇರಾನೇರವಾಗಿ ಹೇಳಿಬಿಡುತ್ತೇನೆ ಎನ್ನುವ ಕಾರಣಕ್ಕೆ ಈ ಕ್ಷೇತ್ರದ ಅನೇಕರ ಕೆಂಗಣ್ಣಿಗೂ ನಾನು ಗುರಿಯಾಗಿದ್ದಿದೆ. ಏನೇ ಆದರೂ ನೃತ್ಯದ ಮೂಲಸ್ವರೂಪಕ್ಕೆ ಧಕ್ಕೆ ಬರುವುದನ್ನು ನನ್ನ ಮನಸ್ಸು ಒಪ್ಪುವುದಿಲ್ಲ.

ನನ್ನ ಬಳಿ ನೃತ್ಯ ಕಲಿತ ಎಲ್ಲ ಮಕ್ಕಳು ಶೈಕ್ಷಣಿಕವಾಗಿಯೂ ಮುಂದಿದ್ದಾರೆ. ನೃತ್ಯ ಅವರಿಗೆ ಹವ್ಯಾಸ. ಆದರೆ ಹವ್ಯಾಸವನ್ನೂ ಸಾಧನೆ ಮಟ್ಟಕ್ಕೆ ಕೊಂಡೊಯ್ಯಬೇಕು ಎನ್ನುವುದು ನನ್ನ ಸಿದ್ಧಾಂತ. ಕೆಲವು ಶಿಷ್ಯರು ವಿದೇಶದಲ್ಲಿದ್ದಾರೆ. ಬೇರೆ ಕೆಲಸದೊಂದಿಗೆ ನೂರಾರು ಮಕ್ಕಳಿಗೆ ನೃತ್ಯ ಪಾಠ ಮಾಡುತ್ತಾರೆ. ಶಿಷ್ಯರ ಸಾಧನೆಯೇ ಗುರುವಿಗೆ ಹೆಮ್ಮೆ ತರಬಲ್ಲದು. ಇನ್ನು ಭಾರತೀಯ ನೃತ್ಯದ ಬಗೆಗೆ ವಿಶೇಷ ಒಲವನ್ನು ವಿದೇಶಿಗರು ಹೊಂದಿರುತ್ತಾರೆ ಎಂಬುದನ್ನು ಕಣ್ಣಾರೆ ಕಂಡು, ಅನುಭವಿಸಿದವನು ನಾನು. ಜರ್ಮನಿ, ಫ್ರಾನ್ಸ್‌, ಇಟಲಿಯಿಂದ ಅನೇಕರು ಬಂದು ನನ್ನ ಬಳಿ ಸಾಂಪ್ರದಾಯಿಕ ನೃತ್ಯವನ್ನು ಕಲಿತು ಹೋಗಿದ್ದಾರೆ. ಇವೆಲ್ಲಾ ನನಗೆ ಖುಷಿ ಹಾಗೂ ತೃಪ್ತಿ ಕೊಡುವ ಸಂಗತಿಗಳು.

ನೃತ್ಯ ಒಂದನ್ನೇ ಆರಾಧಿಸುತ್ತ ಬಂದ ನನಗೆ ಅನೇಕ ಪ್ರಶಸ್ತಿಗಳೂ ಬಂದಿವೆ. ಅವು ನಮ್ಮನ್ನು ಪ್ರೋತ್ಸಾಹಿಸುವ ಮಾರ್ಗವಷ್ಟೇ. ಪ್ರಶಸ್ತಿ ಫಲಕಗಳು ನನ್ನ ವಿದ್ಯಾರ್ಥಿಗಳ ಮನೆಯಲ್ಲಿ ಭದ್ರವಾಗಿವೆ. ಅಂದಹಾಗೆ ನಾನು ವಿದ್ಯಾರ್ಥಿಗಳಿಂದ ಅನೇಕ ನೃತ್ಯ ರೂಪಕಗಳನ್ನೂ ಮಾಡಿಸಿದ್ದೇನೆ. ಕಾರ್ಯಾಗಾರ ಮಾಡುತ್ತೇನೆ. ಇಂದಿಗೂ ನನ್ನ ಚಿಂತೆ, ಚಿಂತನೆ ಏನಿದ್ದರೂ ನಿರಂತರವಾಗಿ ನೃತ್ಯದ ಬಗೆಗೇ. ನನಗೀಗ 81 ವರ್ಷ. ಇಂದಿಗೂ ನಿರಂತರವಾಗಿ ನೃತ್ಯಪಾಠ ಹೇಳಿಕೊಡುತ್ತೇನೆ. ಮಕ್ಕಳು ಶಾಸ್ತ್ರಬದ್ಧವಾದ ನೃತ್ಯಕ್ಕೆ ಹೆಜ್ಜೆ ಹಾಕುವಾಗ ಮನಸ್ಸಿಗೆ ತೃಪ್ತಿ ಸಿಗುತ್ತದೆ. ದೊಡ್ಡವರೂ ನೃತ್ಯ ಕಲಿಯುವುದಕ್ಕೆ ಬರುತ್ತಾರೆ. ಯಾರಿಗೆ ಹೇಗೆ ನೃತ್ಯ ಕಲಿಸಬೇಕು ಎನ್ನುವ ಚಾಕಚಕ್ಯತೆ ಗುರುವಿಗೆ ಇರಬೇಕು. ನೃತ್ಯ, ಅಭಿನಯ ಎಂದಿಗೂ ಅಶ್ಲೀಲ ಎನಿಸುವಂತಾಗಬಾರದು ಎನ್ನುವ ರುಕ್ಮಿಣಿ ದೇವಿ ಅವರ ಮಾತನ್ನು ನಾನು ಪರಿಪಾಲಿಸಿಕೊಂಡು ಬರುತ್ತಿದ್ದೇನೆ. ಹೀಗಾಗಿಯೇ ಕರೆದೆಲ್ಲಾ ಕಾರ್ಯಕ್ರಮಗಳಿಗೆ ನಾನು ಹೋಗುವುದಿಲ್ಲ. ಇಂದಿನ ಕೆಲವವರ ನೃತ್ಯದ ಡೊಂಕು ನನ್ನ ಮನಸಿಗೆ ಸಹನೀಯವಲ್ಲ. ಪುರುಷನಾಗಿಯೂ ಜೀವನ ಪರ್ಯಂತ ನೃತ್ಯವನ್ನು ಆರಾಧಿಸಿ, ಬೆಳೆಸಬಹುದು ಎನ್ನುವುದನ್ನು ಸಾಧಿಸಿ ತೋರಿಸಿರುವುದರ ಬಗೆಗೆ ನಿಜವಾಗಿಯೂ ನನಗೆ ತೃಪ್ತಿ ಇದೆ.

ಸಿನಿಮಾ ಮತ್ತು ನಾನು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT