7

ಪ್ರಕೃತಿ–ಸಂಸ್ಕೃತಿ ಸಮಾಗಮ

Published:
Updated:
ಪ್ರಕೃತಿ–ಸಂಸ್ಕೃತಿ ಸಮಾಗಮ

ಸೌಂದರ್ಯಲಹರಿಯ ಸಾಮೂಹಿಕ ಪಠಣ ತಣ್ಣಗೆ ಮೊಳಗುತ್ತಿದ್ದ ವೇದಿಕೆಯಲ್ಲಿ ಸಾವಯವ ಕೃಷಿಯ ಘಮ ಹರಡಿತ್ತು. ಸುತ್ತಲಿನ ಹಸಿರು ಕಣ್ಣಿಗೆ ಆಹ್ಲಾದಕರ ಅನುಭವ ಕಟ್ಟಿಕೊಡುತ್ತಿದ್ದರೆ, ದೇಶಿ ಆಹಾರ, ಕಲೆ, ಸಂಸ್ಕೃತಿ ಸಾಹಿತ್ಯದ ಕಂಪು ಸುಸ್ಥಿರ ಅಭಿವೃದ್ಧಿಯ ಮಹತ್ವ ಸಾರುತ್ತಿತ್ತು.

‘ಅದಮ್ಯ ಚೇತನ ಸಂಸ್ಥೆ’ಯು ನಗರದ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಸೇವಾ ಉತ್ಸವ ತನ್ನ ಧ್ಯೇಯವಾಕ್ಯಕ್ಕೆ ತಕ್ಕಂತೆ ಪ್ರಕೃತಿ ಹಾಗೂ ಸಂಸ್ಕೃತಿಯ ಸಮಾಗಮದಂತಿದೆ. ಶಾಸ್ತ್ರೀಯ, ಜನಪದ ಸಂಗೀತ, ನೃತ್ಯದ ಜೊತೆಗೆ ಸಾವಯವಕೃಷಿ, ಸಿರಿಧಾನ್ಯ, ದೇಶಿ ಆಹಾರಮೇಳ, ತಾರಸಿ ಕೃಷಿಯ ಸಾಧ್ಯತೆಗಳು ಮೇಳೈಸಿವೆ.

ವಿವಿಧ ಮಳಿಗೆಗಳ ಮುಂದೆ ಉತ್ಸಾಹದಿಂದ ನಿಂತು ತಮ್ಮ ಪ್ರತಿಭೆ ಪ್ರದರ್ಶಿಸುತ್ತಿದ್ದ ಚಿಣ್ಣರ ಕಲರವ ಪ್ರದರ್ಶನಕ್ಕೆ ಮತ್ತಷ್ಟು ಮೆರುಗು ನೀಡಿದೆ. ವಾಗ್ದೇವಿ ವಿಲಾಸ ಶಾಲೆಯ ಮಕ್ಕಳು ಸಿದ್ಧಪಡಿಸಿದ್ದ ಮರಗಳು, ಬಿ.ಜಿ.ಎಸ್‌.ನ್ಯಾಷನಲ್ ಪಬ್ಲಿಕ್‌ ಶಾಲೆಯ ವಿದ್ಯಾರ್ಥಿಗಳು ರಚಿಸಿದ್ದ ಹಕ್ಕಿಗಳು, ವಿದ್ಯಾನಿಕೇತನ ಪಬ್ಲಿಕ್ ಶಾಲೆಯ ಚಿಣ್ಣರ ಚಿಟ್ಟೆಗಳು, ಕೆ.ಕೆ.ಇಂಗ್ಲಿಷ್‌ ಶಾಲೆ ವಿದ್ಯಾರ್ಥಿಗಳ ಜಲಸಸ್ಯಗಳು ಹೀಗೆ... ವಸ್ತುಪ್ರದರ್ಶನದಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಲೋಕವೇ ಅನಾವರಣಗೊಂಡಂತಿದೆ.

ತೆಂಗಿನಕಾಯಿ ಚಿಪ್ಪು, ಕಡಲೆಕಾಯಿ ಸಿಪ್ಪೆ ಬಳಸಿ ಅಡುಗೆ ಮಾಡುವ ವಿಧಾನವನ್ನು ಅದಮ್ಯ ಚೇತನ ಸಂಸ್ಥೆಯ ಕಾರ್ಯಕರ್ತರು ವಿವಿಧ ಪ್ರಾತ್ಯಕ್ಷಿಕೆಗಳ ಮೂಲಕ ವಿವರಿಸುತ್ತಿದ್ದರೆ, ನೆರೆದಿದ್ದವರು ಬೆರಗಿನಿಂದ ವೀಕ್ಷಿಸುತ್ತಿದ್ದರು. ‘ಮೈಡ್ರೀಮ್‌ ಗಾರ್ಡನ್’ ಕಂಪೆನಿಯ ‘ಮ್ಯಾಜಿಕ್ ಪ್ಲಾಂಟರ್ ಬಾಕ್ಸ್‌’ ನಗರದಲ್ಲಿನ ಕೃಷಿ ಆಸಕ್ತರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ವಿವಿಧ ಗಾತ್ರಗಳ ಈ ಪ್ಲಾಂಟರ್ ಬಾಕ್ಸ್‌ಗಳನ್ನು ಬಳಸಿ ಮನೆಯ ತಾರಸಿಯ ಮೇಲೆ ಕೃಷಿ ಮಾಡುವ ಅಪೂರ್ವ ಅವಕಾಶ ಪರಿಚಯಿಸಿತ್ತು.

ಮಳೆ ನೀರು ಸಂಗ್ರಹಣೆಗೆ ಬಳಸಬಹುದಾದ ವಿವಿಧ ಮಾದರಿಗಳು ಹಾಗೂ ತಂತ್ರಜ್ಞಾನಗಳನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರೆ. ಸೂರ್ಯನ ಬೆಳಕನ್ನು ಬಳಸಿ ಅಡುಗೆ ಮಾಡುವ ನಮೂನೆಗಳು, ತ್ಯಾಜ್ಯಗಳಿಂದಲೇ ವಿವಿಧ ಶಕ್ತಿಯ ಮೂಲಗಳ ಉತ್ಪಾದನೆಗೆ ಪೂರಕವಾದ ನೂತನ ಪರಿಸರಸ್ನೇಹಿ ತಂತ್ರಜ್ಞಾನಗಳನ್ನು ಇಲ್ಲಿ ಪರಿಚಯಿಸಲಾಗಿದೆ.

ಮೇಳವು ಕೃಷಿ ಹಾಗೂ ಸುಸ್ಥಿರ ಅಭಿವೃದ್ಧಿಗೆ ಸೀಮಿತವಾಗದೆ, ಭಾರತೀಯ ಕಲೆ ಹಾಗೂ ಸಂಸ್ಕೃತಿಗೂ ಮಹತ್ವ ನೀಡಲಾಗಿದೆ. ಮರದ ಪುಡಿಯನ್ನು ಬಳಸಿ ಮಕ್ಕಳೇ ತಯಾರಿಸಿದ ಸೂತ್ರದ ಬೊಂಬೆಗಳ ಮಾದರಿಯ ಪ್ರದರ್ಶನ ಮೇಳ ಆಕರ್ಷಣೆಯ ಕೇಂದ್ರವಾಗಿದೆ.

ಇಳಕಲ್ ಸೀರೆಗಳನ್ನು ನೇರವಾಗಿ ನೇಕಾರರಿಂದಲೇ ಖರೀದಿಸುವ ಅವಕಾಶವೂ ಇದೆ. ಚಳಿಯಲ್ಲಿ ದೇಹವನ್ನು ಬೆಚ್ಚಗಿಡುವ ಜೊತೆಗೆ ಆಧುನಿಕತೆಯ ನೋಟವನ್ನು ನೀಡುವ ವಿವಿಧ ಉಣ್ಣೆಯ ಉಡುಪುಗಳ ಮಳಿಗೆಗಳಿವೆ. ಪರಿಸರ ಸ್ನೇಹಿ, ಹತ್ತಿ, ಸೆಣಬು ಹಾಗೂ ಪೇಪರ್ ಚೀಲಗಳು ಇಲ್ಲಿ ವಿವಿಧ ವಿನ್ಯಾಸಗಳಲ್ಲಿ ಲಭ್ಯ. ಕೊಳಚೆ ಪ್ರದೇಶ ಹಾಗೂ ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ‘ಸುರುಚಿ’ ಸಂಸ್ಥೆ ಮಾಡುತ್ತಿರುವ ಪ್ರಯತ್ನ ಇದು.

ಕಬ್ಬು ಅರೆಯುವ ಕಾರ್ಖಾನೆಗಳಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯದ ನಾರಿನಿಂದ ತಯಾರಿಸಿದ ವಿವಿಧ ಗಾತ್ರಗಳ ಲೋಟ ಹಾಗೂ ತಟ್ಟೆಗಳು ಕಸದಿಂದ ರಸ ಉತ್ಪಾದಿಸಿ ಆರ್ಥಿಕ ಸಬಲತೆಯನ್ನು ಪಡೆಯಲು ಪೂರಕವಾಗಿದೆ.

ಮಂಗಳಯಾನ, ಚಂದ್ರಯಾನ, ಒಂದಕ್ಕಿಂತ ಹೆಚ್ಚಿನ ಉಪಗ್ರಹಗಳ ಉಡಾವಣೆ ಮತ್ತಿತರ ಕುತೂಹಲಕಾರಿ ಸಂಗತಿಗಳನ್ನು ವಿವರಿಸುವ ಮಾದರಿಗಳು ಇಲ್ಲಿವೆ. ಭಾರತೀಯ ಬಾಹ್ಯಾಕಾಶ ಸಂಸ್ಥೆ, ವಾಯುಯಾನ ಅಭಿವೃದ್ಧಿ ಸಂಸ್ಥೆ, ಹಿಂದೂಸ್ತಾನ್ ಏರೋನಾಟಿಕ್ ಸೇರಿದಂತೆ ವಿವಿಧ ಸಂಸ್ಥೆಗಳು ಉಪಗ್ರಹ ಉಡಾವಣೆಯ ವಿಧಾನ, ರಕ್ಷಣೆ ಮತ್ತು ವೈಮಾನಿಕ ಕ್ಷೇತ್ರದ ತಂತ್ರಜ್ಞಾನಗಳನ್ನು ಎಲ್ಲರಿಗೂ ಅರ್ಥವಾಗುವಂತೆ ವಿವಿರಿಸುವ ಮಾದರಿಗಳು ಪ್ರದರ್ಶನದಲ್ಲಿವೆ.

ಕಾರ್ಯಕ್ರಮದ ಮುಖ್ಯ ವೇದಿಕೆಯ ಪಕ್ಕದಲ್ಲೇ ಶತಮಾನೋತ್ಸವ ಸಂಭ್ರಮದಲ್ಲಿರುವ ನ್ಯಾಷನಲ್ ಹೈಸ್ಕೂಲ್‌ನ ಚರಿತ್ರೆಯ ಪುಟಗಳನ್ನು ಅನಾವರಣಗೊಳಿಸಲಾಗಿದೆ. ಸಂಸ್ಥೆ ಬೆಳೆದು ಬಂದ ಬಗೆಯನ್ನು ವಿವರಿಸಲಾಗಿದೆ. ಸ್ಥಾಪನೆಗೆ ಶ್ರಮಿಸಿದ ಚೇತನಗಳು, ಶಿಕ್ಷಣ ಸಂಸ್ಥೆಗೆ ಬೇಟಿನೀಡಿದ ರಾಷ್ಟ್ರೀಯ ನೇತಾರರ ಚಿತ್ರಗಳ ಮುಖೇನ ಸಂಸ್ಥೆಯ ಚಿರಿತ್ರೆಯನ್ನು ಕಟ್ಟಿಕೊಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry