7

ಇದು ಮೋಜಿನ ಸಮಯ

Published:
Updated:
ಇದು ಮೋಜಿನ ಸಮಯ

ಹೊಸ ವರ್ಷದ ಸಂಭ್ರಮದಲ್ಲಿರುವ ಬಾಲಿವುಡ್‌ ಮಂದಿ ಈ ವರ್ಷವನ್ನು ಕುಟುಂಬದ ಜೊತೆಗೆ ಪ್ರಾರಂಭಿಸುತ್ತಿದ್ದಾರೆ. ನಟ, ನಟಿಯರು ಹೊಸ ವರ್ಷವನ್ನು ವಿಭಿನ್ನವಾಗಿ ಬರಮಾಡಿಕೊಂಡಿದ್ದಾರೆ. ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರೂ, ಈ ನೆಪದಲ್ಲಿ ಕೆಲವರು ವಿದೇಶಕ್ಕೂ ಹಾರಿದ್ದಾರೆ. ಯಾವ ಸೆಲೆಬ್ರಿಟಿಗಳು ಹೇಗೆ ಹೊಸ ವರ್ಷ ಆಚರಿಸಿದರು ಅನ್ನುವ ಕುತೂಹಲಕ್ಕೊಂದು ವಿವರವಿದು.

ಕೇಪ್‌ಟೌನ್‌ ಎಂದಾಕ್ಷಣ ಅದ್ಭುತ ಪ್ರಾಕೃತಿಕ ಸೌಂದರ್ಯ ಕಣ್ಣೆದುರು ಬರುತ್ತದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಎಂದೂ ಮರೆಯದ ಖುಷಿ ದೊರಕಿಸಿಕೊಡುವ ನಗರಕ್ಕೆ ಹೋಗಿರುವವರು ಅಕ್ಷಯ್‌ ಕುಮಾರ್‌ ಮತ್ತು ಟ್ವಿಂಕಲ್‌ ಖನ್ನಾ ಕುಟುಂಬ. ಡಿಸೆಂಬರ್‌ ಕೊನೆಯಲ್ಲಿಯೇ ಯೂರೋಪ್‌ ದೇಶಕ್ಕೆ ಪ್ರವಾಸ ಬೆಳೆಸಿರುವ ಕರೀನಾ, ಸೈಫ್‌ ದಂಪತಿ. ಸ್ವಿಡ್ಜರ್‌ಲೆಂಡ್‌ನಲ್ಲಿ ಮಗ ತೈಮೂರ್‌ ‘ಸ್ಲೆಡ್ಜ್ ರೈಡ್‌’ ಮಾಡುತ್ತಿರುವ ಚಿತ್ರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿಕೊಂಡಿದ್ದರು. ಇನ್ನು ಒಂದು ವಾರವಂತೂ ಇವರು ಭಾರತಕ್ಕೆ ಬರುವುದಿಲ್ಲ ಎನ್ನುತ್ತಿದ್ದಾರೆ ಬಾಲಿವುಡ್‌ ಮಂದಿ. ಸೋನಂ ಕಪೂರ್‌ ಹಳೆಯ ಗೆಳೆಯರೊಂದಿಗೆ ಹೊಸ ವರ್ಷ ಆಚರಿಸಲು ಲಂಡನ್‌ಗೆ ತೆರಳಿದ್ದಾರೆ.

ಇತ್ತೀಚೆಗಷ್ಟೇ ಹಸೆಮಣೆ ಏರಿರುವ ಅನುಷ್ಕಾ ಶರ್ಮಾ, ವಿರಾಟ್‌ ಕೊಹ್ಲಿ ಹೊಸ ವರ್ಷದ ಸಂಭ್ರಮಕ್ಕೆಂದು ದಕ್ಷಿಣ ಆಫ್ರಿಕಾಗೆ ತೆರಳಿದ್ದಾರೆ. ‘ಟೋರ್‌ಬಾಜ್‌’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಸಂಜಯ್‌ ದತ್‌ ಕುಟುಂಬ ಹೊಸ ವರ್ಷವನ್ನು ದುಬೈನಲ್ಲಿ ಆಚರಿಸಿದೆ. ಮಗ ಮತ್ತು ಪತಿಯ ಜೊತೆಗೆ ಕ್ರಿಸ್‌ಮಸ್‌ ದಿನದಂದೇ ದುಬೈಗೆ ತೆರಳಿದ್ದ ಶಿಲ್ಪಾಶೆಟ್ಟಿ ಅಲ್ಲಿಯೇ ಹೊಸವರ್ಷವನ್ನು ಬರಮಾಡಿಕೊಂಡರೆ, ಮಾಧುರಿ ದೀಕ್ಷಿತ್‌ ಜಪಾನ್‌ನಲ್ಲಿ ನವವರ್ಷವನ್ನು ಸ್ವಾಗತಿಸಿದರು.

ಹೊಸವರ್ಷ ಆಚರಣೆಯ ಸಲುವಾಗಿ ಜಾಕ್ವಲಿನ್‌ ಫರ್ನಾಂಡಿಸ್‌ ಮತ್ತು ಆಲಿಯಾ ಭಟ್‌ ಇಂಡೊನೇಷಿಯಾಕ್ಕೆ ತೆರಳಿದ್ದಾರೆ. ಆದರೆ ಇವರಿಬ್ಬರು ಒಟ್ಟಿಗೆ ಆಚರಣೆ ಮಾಡುತ್ತಿಲ್ಲ. ಈ ವರ್ಷ ಅದೃಷ್ಟ ಪರೀಕ್ಷೆಯಲ್ಲಿ ಯಶಸ್ಸನ್ನೇ ಗಳಿಸಿರುವ ರಾಜಕುಮಾರ್‌ ರಾವ್‌ ತಮ್ಮ ಗೆಳತಿಯ ಜೊತೆಗೆ ಮೋಜುಕೂಟದಲ್ಲಿ ಪಾಲ್ಗೊಳ್ಳಲು ಥಾಯ್ಲೆಂಡ್‌ಗೆ ತೆರಳಿದ್ದಾರೆ. ‘ಸಾಹೇಬ್ ಬೀವಿ ಔರ್‌ ಗ್ಯಾಂಗ್‌ಸ್ಟರ್‌ 3’ ಮತ್ತು ‘ಬಜಾರ್‌’ ಸಿನಿಮಾದಲ್ಲಿ ತೊಡಗಿಸಿಕೊಂಡಿರುವ ಚಿತ್ರಾಂಗದ ಸಿಂಗ್‌ ಕುಟುಂಬದ ಜೊತೆಗೆ ಫುಕೆಟ್‌ನಲ್ಲಿ ಹೊಸ ವರ್ಷಕ್ಕೆ ಕಳೆ ತುಂಬಿದರು.

ಇವರೆಲ್ಲ ವಿದೇಶದಲ್ಲಿ ಹೊಸ ವರ್ಷವನ್ನು ಸ್ವಾಗತಿಸಿದರೆ ಇನ್ನು ಕೆಲವು ಸೆಲೆಬ್ರಿಟಿಗಳು ದೇಶದಲ್ಲಿಯೇ ನವ ವರ್ಷಕ್ಕೆ ಸ್ವಾಗತ ಕೋರಿದರು.

ಡಿಸೆಂಬರ್‌ 28ಕ್ಕೆ ಅಮೀರ್‌ ಖಾನ್‌ ಮದುವೆಯಾಗಿ 12 ವರ್ಷವಾಗುತ್ತದೆ. ವಿವಾಹ ವಾರ್ಷಿಕೋತ್ಸವದ ಜೊತೆಗೆ ಹೊಸ ವರ್ಷವನ್ನು ಆಚರಿಸುವ ಸಲುವಾಗಿ ಮಗ ಅಜಾದ್‌ ಜೊತೆಗೆ ಇವರು ಗೋವಾಕ್ಕೆ ತೆರಳಿದ್ದಾರೆ. ವಿಶೇಷ ಸಂದರ್ಭಗಳ ಜೊತೆಗೆ ಬಿಡುವಿನ ಸಮಯವನ್ನು ಕಳೆಯಲು ಮಹಾರಾಷ್ಟ್ರದಲ್ಲಿರುವ ಫಾರ್ಮ್‌ಹೌಸ್‌ಗೆ ತೆರಳುವುದು ಸಲ್ಮಾನ್‌ ಅಭ್ಯಾಸ. ಈ ವರ್ಷದ ಮೊದಲ ಪಾರ್ಟಿಯನ್ನು ಅವರು ಅಲ್ಲಿಯೇ ಇಟ್ಟುಕೊಂಡಿದ್ದರು. ಶಾರೂಖ್‌ ಖಾನ್‌ ಹೇಗೆ ಈ ಸಂಭ್ರಮವನ್ನು ಆಚರಿಸುತ್ತಾರೆ ಎಂಬ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಮುಂಬೈಯಲ್ಲಿರುವ ಅವರ ಮನೆಯಲ್ಲಿಯೇ ಪಾರ್ಟಿ ಆಯೋಜಿಸಿದ್ದರು ಎಂಬ ಸುದ್ದಿ ಇದೆ.

‘ಪ್ಯಾಡ್‌ಮನ್‌’ ಸಿನಿಮಾ ಬಿಡುಗಡೆ ನಿರೀಕ್ಷೆಯಲ್ಲಿರುವ ರಾಧಿಕಾ ಆಪ್ಟೆ ಹೊಸ ವರ್ಷವನ್ನು ಕುಟುಂಬದ ಜೊತೆಗೆ ಪುಣೆಯಲ್ಲಿ ಆಚರಿಸಿಕೊಂಡರೆ, ಯಾಮಿ ಗೌತಮ್‌ ಚಂಡೀಗಡದ ತಮ್ಮ ಮನೆಯಲ್ಲಿ ನವ ವರ್ಷವನ್ನು ಬರಮಾಡಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry