7

ನದಿ ಮೂಲಗಳನ್ನು ಹುಡುಕಿ ತೆಗೆದು...

Published:
Updated:
ನದಿ ಮೂಲಗಳನ್ನು ಹುಡುಕಿ ತೆಗೆದು...

ಭಾರತ ಹಳ್ಳಿಗಳ ದೇಶ. ಹಾಗೆಯೇ ಹಳ್ಳಗಳ ದೇಶವೂ ಹೌದು. ಹನಿ ಹನಿಗೂಡಿ ಹಳ್ಳ. ಹಳ್ಳಗಳು ತೊರೆಯಾಗಿ ಹರಿದು, ಹೊಳೆಯಾಗಿ ನಲಿದು ಸೇರುವುವು ನದಿಗಳನ್ನು. ದೊಡ್ಡ ದೊಡ್ಡ ಜೀವನದಿಗಳ ಮೂಲವೆಲ್ಲವೂ ಇಂತಹ ಸಣ್ಣ ಹಳ್ಳಗಳೇ. ಆದ್ದರಿಂದಲೇ ನದಿಗಳ ಪುನರುಜ್ಜೀವನದ ಮೂಲಸೂತ್ರ ಅಡಗಿರುವುದು ಸಹ ಇಂತಹ ಸಣ್ಣ ಸಣ್ಣ ಹೊಳೆಗಳ ಪುನರುಜ್ಜೀವನದಲ್ಲಿಯೇ.

ಇತ್ತೀಚೆಗೆ, ಅಂದರೆ ಡಿಸೆಂಬರ್ 5 ಮತ್ತು 6ರಂದು ನದಿ ಪುನಶ್ಚೇತನದ ಬಗ್ಗೆ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಆಯೋಜಿಸಿದ್ದ ಎರಡು ದಿನಗಳ ಕಾರ್ಯಾಗಾರದಲ್ಲಿ ಭಾಗವಹಿಸಿದ್ದೆ. ನುರಿತ ವಿಜ್ಞಾನಿಗಳೂ, ವಿಶ್ವವಿದ್ಯಾಲಯದ ಪ್ರೊಫೆಸರುಗಳೂ, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳೂ, ಪಂಚಾಯಿತಿ ಸದಸ್ಯರೂ, ಸರ್ಕಾರಿ ಅಧಿಕಾರಿಗಳೂ, ವಿದೇಶಿ ತಜ್ಞರೂ ಭಾಗವಹಿಸಿದ್ದ ಕಾರ್ಯಾಗಾರ ಅದಾಗಿತ್ತು. ಬರದ ಬವಣೆಗೆ ಸಿಕ್ಕು ನಲುಗುತ್ತಿರುವ ಭಾರತದ ನದಿಗಳನ್ನು ಪುನಶ್ಚೇತನಗೊಳಿಸುವುದು ಹೇಗೆ, ಯಾವ ಕಾರ್ಯವಿಧಾನಗಳು ಹೆಚ್ಚು ಸೂಕ್ತ, ವೈಜ್ಞಾನಿಕ ವಿಧಾನಗಳಿಂದ ಶೀಘ್ರವಾದ ಪರಿಣಾಮ ಪಡೆಯುವುದು ಹೇಗೆ ಎಂಬ ವಿಚಾರಗಳು ಅಲ್ಲಿ ಮಂಡನೆಯಾದವು. ಕರ್ನಾಟಕದ ಕುಮುದ್ವತಿ, ವೇದಾವತಿ, ಪಾಲಾರ್ ನದಿಗಳಲ್ಲಿ ಈಗಾಗಲೇ ಕೈಗೊಂಡಿರುವ ಕಾರ್ಯವೈಖರಿಯ ನೋಟಗಳೂ, ಅದರಿಂದ ಆಗಿರುವ ಪರಿಣಾಮಗಳೂ ಅಲ್ಲಿ ಚರ್ಚಿತವಾದವು. ಹಾಗೆಯೇ ಮಹಾರಾಷ್ಟ್ರ, ತಮಿಳುನಾಡಿ

ನಲ್ಲಿ ಕೈಗೊಂಡಿರುವ ಹಲವಾರು ಪ್ರಯತ್ನಗಳ ಮತ್ತು ಅವುಗಳ ಅದ್ಭುತಪರಿಣಾಮಗಳೂ ಸಚಿತ್ರ ವಿವರಣೆಯೊಂದಿಗೆ ನೋಡಲು ದೊರೆತವು.

ಇಂತಹುದೇ ಇನ್ನೊಂದು ಅಭೂತಪೂರ್ವವಾದ, ಜನ ಮತ್ತು ಸರ್ಕಾರಗಳನ್ನು ಜಾಗೃತಿಗೊಳಿಸುವ ಪ್ರಯತ್ನ ಇನ್ನೋರ್ವ ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ ಅವರ ನಾಯಕತ್ವದಲ್ಲಿ ‘ರ‍್ಯಾಲಿ ಫಾರ್ ರಿವರ್’ ಎಂಬ ಶೀರ್ಷಿಕೆಯೊಂದಿಗೆ ಸೆಪ್ಟೆಂಬರ್ 3ರಿಂದ ಅಕ್ಟೊಬರ್ 2ರವರೆಗೆ ನಡೆಯಿತು. ಆ ರ‍್ಯಾಲಿಯಲ್ಲಿಯೂ ನಾನು ಭಾಗಿಯಾಗಿದ್ದೆ. ‘ಗಂಗಾ,ಕೃಷ್ಣಾ, ನರ್ಮದಾ, ಕಾವೇರಿಯಂತಹ ನದಿಗಳು ಮತ್ತೆ ವರ್ಷಪೂರ್ತಿ ಹರಿಯುವಂತಾಗಲು ನದಿಯ ಇಕ್ಕೆಲಗಳಲ್ಲಿ 1 ಕಿ.ಮೀ.ವರೆಗೆ ಗಿಡ ನೆಡುವುದು ಅಗತ್ಯ. ಅದಕ್ಕಾಗಿ ಸರ್ಕಾರಿ ಕಾರ್ಯನೀತಿಯೇ ಬದಲಾಗಬೇಕು’ ಎಂಬ ಒತ್ತಾಯ ಅಲ್ಲಿ ಪ್ರಮುಖವಾಗಿತ್ತು. 16 ರಾಜ್ಯಗಳ ಮೂಲಕ ಸುಮಾರು 9,300 ಕಿ.ಮೀ. ಕ್ರಮಿಸಿ ದೆಹಲಿ ತಲುಪಿದಾಗ, ಎಲ್ಲಾ ರಾಜ್ಯಗಳ ಒಡಂಬಡಿಕೆಗಳೂ ಸೇರಿ ಕೋಟ್ಯಂತರ ಗಿಡಗಳನ್ನು ನೆಡುವ ಒಪ್ಪಂದಗಳಿಗೆ ಸಹಿ ಹಾಕಲಾಗಿತ್ತು. ನೀರಿನ ಬವಣೆ ನೀಗಿಸಲು ಇದೊಂದು ಅಭಿನಂದನೀಯ ಹೆಜ್ಜೆ.

ಬೃಹತ್ತಾದ ಯೋಜನೆಗಳಿಂದ ಆಗಬಹುದಾದ ಬದಲಾವಣೆಗಳೂ ಬೃಹತ್ ಆಗಿಯೇ ಇರುತ್ತವೆ. ಋಗ್ವೇದದಲ್ಲೊಂದು ಸೂಕ್ತ ಹೇಳುತ್ತದೆ.

‘ಭೂಮೈವ ಸುಖಂ. ನಾಲ್ಪೇ ಸುಖಮಸ್ತಿ’. ಬೃಹತ್ತಾದುದರಲ್ಲಿ ಮಾತ್ರ ಸುಖವಿದೆ. ಅಲ್ಪದಲ್ಲಿ ಸುಖವಿಲ್ಲ ಎಂದು ಇದರ ಅರ್ಥ. ದುರ್ದೈವವೆಂದರೆ ನಮ್ಮ ರಾಜಕಾರಣಿಗಳಿಗೂ ಬೃಹತ್ತಾದುದೇ ಬೇಕು. ಏಕೆಂದರೆ ಬೃಹತ್‌ ಯೋಜನೆಗಳಲ್ಲಿ ಸಂಬಂಧಪಟ್ಟವರಿಗೆ ಹಣ ಮಾಡುವ ಅವಕಾಶವೂ ಬೃಹತ್ ಆಗಿಯೇ ಇರುತ್ತದೆ. ಸಣ್ಣ ಸಣ್ಣ ಪ್ರಯತ್ನಗಳು ಒಂದುಗೂಡಿ ಬೃಹತ್ ಆದುದನ್ನು ರೂಪಿಸಬಹುದಾದರೆ ಅದರಲ್ಲಿ ಬೃಹತ್ ಲಾಭವನ್ನು ಒಟ್ಟಿಗೇ ಒಬ್ಬರೇ ಗಳಿಸುವ ಅವಕಾಶ ಅಲ್ಪ. ಹಾಗಾಗಿಯೇ ಬೃಹತ್ ಯೋಜನೆಗಳಿಗೆ ಅಷ್ಟೊಂದು ಮುತುವರ್ಜಿ. ಆಧ್ಯಾತ್ಮಿಕ ಗುರುಗಳ ಆಶಯ ಜನರೆಲ್ಲರನ್ನೂ ಒಟ್ಟುಗೂಡಿಸಿ, ಅವರಲ್ಲಿ ಜಾಗೃತಿ ಮೂಡಿಸಿ ಶಾಶ್ವತವಾದ ಬದಲಾವಣೆಯನ್ನು ತರುವುದೇ ಆಗಿದ್ದರೂ, ರಾಜಕಾರಣಿಗಳಿಗೆ ಅದು ಬೃಹತ್ ಆದ ಗಂಗಾ-ಕಾವೇರಿ ಜೋಡಣೆಯಂತಹ ಯೋಜನೆಯಾಗಿ ಮಾತ್ರ ಕಣ್ಣಿಗೆ ಕಟ್ಟುತ್ತದೆ.

ಮಹದಾಕಾಂಕ್ಷೆಯ ಕೆಲವು ಯೋಜನೆಗಳು ದೊಡ್ಡ ಮೊತ್ತದ ಬಜೆಟ್ಟನ್ನೇ ಹೊಂದಿದ್ದು ಹಾಗೆಯೇ ನಿರ್ವಹಣೆಗೆ ಒಳಗಾಗಬೇಕು. ಚಂದ್ರಯಾನದಂತಹ ಬೃಹತ್ ಯೋಜನೆ ಹಲವು ಸಣ್ಣ ರಾಕೆಟ್‌ಗಳ ಉಡಾವಣೆಯಿಂದ ಅಸಾಧ್ಯ. ಅದೇ, ದೇಶದಾದ್ಯಂತ ಸ್ವಾವಲಂಬನೆಯನ್ನು ತಂದಿತ್ತ ಕ್ಷೀರಕ್ರಾಂತಿಯಾಗಲೀ, ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ತಂದ ಹಸಿರು ಕ್ರಾಂತಿಯಾಗಲೀ ಭಾರೀ ವೆಚ್ಚದ ಬೃಹತ್ ಯೋಜನೆಯಿಂದ ಆದುದಲ್ಲ. ಈಗ ಆಗಬೇಕಾಗಿರುವ ಜಲಕ್ರಾಂತಿಯೂ ಆ ಮಾದರಿಯದೇ ಹೊರತು ಒಂದು ಬೃಹತ್ ಯೋಜನೆಯಲ್ಲ.

ಈ ನಿಟ್ಟಿನಲ್ಲಿ ನೋಡಿದಾಗ ಮಹಾರಾಷ್ಟ್ರದಲ್ಲಿ ನಟ ಅಮೀರ್ ಖಾನ್ ಮತ್ತು ಅವರ ಪತ್ನಿ ಕಿರಣ್ ಅವರ ‘ಪಾನಿ ಫೌಂಡೇಷನ್’ನ ಪ್ರಯತ್ನವೂ ಶ್ಲಾಘನೀಯ. ಹೆಚ್ಚಿನ ಹಣಕಾಸಿನ ನೆರವು ನೀಡದೆ, ಬರೀ ಜನಜಾಗೃತಿ ಮೂಡಿಸಿ, ತಂತ್ರಜ್ಞಾನದ ನೆರವು ನೀಡಿ, ಬರಪೀಡಿತ ಹಳ್ಳಿಗಳ ನಡುವೆಯೇ ಸ್ಪರ್ಧೆ ಏರ್ಪಡಿಸಿ, ಅಲ್ಲಿಯ ಜನರೇ ಭಾಗವಹಿಸುವಂತೆ ಪ್ರೇರೇಪಿಸಿ ಅವರನ್ನು ಜಲ ಸ್ವಾವಲಂಬನೆಯತ್ತ ಕೊಂಡೊಯ್ದಿರುವುದು ಮೆಚ್ಚಲೇಬೇಕಾದ ಪ್ರಯತ್ನ. ಕರ್ನಾಟಕದಲ್ಲಿಯೂ ಚಿತ್ರನಟ ಯಶ್ ಅವರ ‘ಯಶೋಮಾರ್ಗ’ ಸಂಸ್ಥೆಯು ಉತ್ತರಕರ್ನಾಟಕದ ಕೆರೆಯೊಂದರ ಹೂಳೆತ್ತುವ ಕೆಲಸವನ್ನು ಕೈಗೆತ್ತಿಕೊಂಡಿದ್ದು, ಈ ವರ್ಷದ ಅನುಕೂಲಕರವಾದ ಮಳೆಯಿಂದಾಗಿ ಆ ಕೆರೆಯಲ್ಲಿ ನೀರು ತುಂಬಿರುವುದು ಸ್ಥಳೀಯ ಜನರ ಬಾಗವಹಿಸುವಿಕೆಯ ಮತ್ತೊಂದು ಉದಾಹರಣೆ.

ಬೃಹತ್ತಾದ ನದಿಗಳ ಪುನಶ್ಚೇತನದ ಮೂಲಸೂತ್ರ ಅಡಗಿರುವುದು ಹಳ್ಳಿಗಳಲ್ಲಿ ಹರಿಯುವ ಹಳ್ಳಗಳ ಪುನಶ್ಚೇತನದಲ್ಲಿ. ಗಂಗಾ– ಕಾವೇರಿ

ಯನ್ನು ಒಂದು ಮಾಡುವ ಬೃಹತ್ ಯೋಜನೆಯನ್ನು ರೂಪಿಸುವುದರ ಮೊದಲು ಹಳ್ಳಗಳ ಪುನರುಜ್ಜೀವನವಾಗಬೇಕು. ಗಂಗಾ, ಕೃಷ್ಣಾ, ಕಾವೇರಿ... ಭಾರತದ ಜೀವನದಿಗಳಾಗಿರುವಂತೆಯೇ, ಹಳ್ಳಿಹಳ್ಳಿಗಳ ಸಾವಿರಾರು ಸಂಖ್ಯೆಯ ಹಳ್ಳಗಳು ಅಲ್ಲಿನ ಜನರ ಜೀವನಾಡಿಗಳಾಗಿರುವುದೂ ಸತ್ಯ. ಅಲ್ಲಲ್ಲಿ ಬೀಳುವ ಮಳೆನೀರನ್ನು ಇಂಗಿಸಿ ಅಂತರ್ಜಲ ಹೆಚ್ಚಿಸಿ ಅಲ್ಲಿಯ ಕುಡಿಯುವ ನೀರಿನ ಬಾವಿಗಳಲ್ಲಿ ಮತ್ತೆ ನೀರು ಕಾಣುವಂತೆ ಮಾಡುವುದನ್ನು ಬಿಟ್ಟು, ಮಳೆಗಾಲದ ನೀರನ್ನು ಹಳ್ಳಗಳಲ್ಲಿ ಹರಿಯಲು ಬಿಟ್ಟು ದೊಡ್ಡ ನದಿ ಸೇರಿದ ಮೇಲೆ ಅಲ್ಲಿ ಬೃಹತ್ತಾದ ಒಂದು ಡ್ಯಾಂ ಕಟ್ಟಿ ಅಲ್ಲಿಂದ ಪಂಪ್ ಮಾಡಿದ ನೀರನ್ನು ನಾಲೆಗಳ ಮೂಲಕ ಹರಿಸಿ ಕುಡಿಯುವ ನೀರಿನ ಸಮಸ್ಯೆ, ಕೃಷಿಕರ ಬವಣೆಯನ್ನು ನೀಗಿಸುವುದು ಯಾವ ನ್ಯಾಯ? ನೀರೇ ಇಲ್ಲದ ನದಿಗಳಲ್ಲಿ ಜಲಸಾರಿಗೆಯ ಕನಸು ಕಾಣಬೇಕೆಂದರೆ ಇಂತಹ ಯೋಜನೆಗಳು ಮನಸ್ಸಲ್ಲಿ ಮೂಡಿದರೆ ಆಶ್ಚರ್ಯವಿಲ್ಲ.

ನಮ್ಮೂರಿನಲ್ಲೊಂದು ಹಳ್ಳವಿದೆ. ಭಾರತದ ಶೇ 99 ಮಂದಿ ಹೆಸರೇ ಕೇಳಿರದ ‘ದ್ಯಾವಾಸ ಹೊಳೆ’ ಎಂಬ ಈ ಹಳ್ಳ ಸುಮಾರು 9 ಕಿ.ಮೀ. ಹರಿದು ಶರಾವತಿ ನದಿ ಸೇರುತ್ತದೆ. ಮಲೆನಾಡಿನ ಮಧ್ಯದಲ್ಲಿದ್ದೂ ಬೇಸಿಗೆಯಲ್ಲಿ ಕುಡಿಯುವ ನೀರಿನ ಬವಣೆ ಅನುಭವಿಸುತ್ತಿರುವ ಹೆಗ್ಗೋಡು ಮತ್ತು ಅದರ ಸುತ್ತಮುತ್ತಲಿನ ಹಳ್ಳಿಗಳಿಗೆ ಈ ಹಳ್ಳ ನೀರು ಒದಗಿಸಬಲ್ಲದು. ಅದಕ್ಕಾಗಿ ಗಂಗಾ, ಕಾವೇರಿಯಂತಹ ಬೃಹತ್ ಯೋಜನೆಗೆ ಕಾಯದೇ, ಕಾದರೂ ಪ್ರಯೋಜನ ಕಾಣದೆಂಬ ಅರಿವಿನಿಂದ ಸ್ಥಳೀಯವಾದ ಕಾಕಾಲ್ ಫೌಂಡೇಷನ್ ಮತ್ತು ಗ್ರಾಮ ಪಂಚಾಯ್ತಿಗಳು, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಹಾಗೂ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ನೆರವನ್ನೂ ಪಡೆದು, ಈ ಹಳ್ಳದ ಪುನರುಜ್ಜೀವನದ ನೀಲಿನಕ್ಷೆ ತಯಾರು ಮಾಡಿದ್ದು, ಈಗ ಕೆಲಸ ಪ್ರಾರಂಭವಾಗುತ್ತಿದೆ. ದೇಶದಾದ್ಯಂತ ಇರುವ ಸಾವಿರಾರು ಹಳ್ಳಗಳಿಗೆ ನಮ್ಮ ಹಳ್ಳದ ಪುನರುಜ್ಜೀವನ ಮಾದರಿಯಾಗಲಿ ಎಂಬ ಆಶಯ ನಮ್ಮದು.

ಬೃಹತ್ ನದಿ ಯೋಜನೆಗಳನ್ನು ನಿತ್ಯ ಸ್ಮರಿಸುವ ಸರ್ಕಾರಗಳು, ನರೇಗಾ ಅಥವಾ ಮತ್ತಿತರ ಸರ್ಕಾರಿ ಯೋಜನೆಗಳ ಮೂಲಕ ನಮ್ಮ ಹಳ್ಳಗಳನ್ನು ಪುನರುಜ್ಜೀವನಗೊಳಿಸಲು ಮುಂದಾಗಬೇಕು. ನರೇಗಾ ಯೋಜನೆಯಲ್ಲಿ ಹಳ್ಳಗಳ ಪುನರುಜ್ಜೀವನ ಕೈಗೆತ್ತಿಕೊಳ್ಳಲು ಅನುಕೂಲವಾಗುವಂತೆ ಸ್ಥಳೀಯ ಗ್ರಾಮ ಪಂಚಾಯ್ತಿಯ ಪದಾಧಿಕಾರಿಗಳಿಗೆ ತರಬೇತಿ ನೀಡಬೇಕು. ಇಂತಹ ಯೋಜನೆಗಳಿಗೆ ಸ್ವಲ್ಪಮಟ್ಟಿಗೆ ಯಂತ್ರಗಳ ಬಳಕೆ ಮಾಡಲೂ ಅವಕಾಶ ಕಲ್ಪಿಸಬೇಕು. ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳು ಗ್ರಾಮ ಪಂಚಾಯ್ತಿಗಳ ಜೊತೆ ಕೈಜೋಡಿಸಿ, ಮಾನವ ದೇಹದ ನರನಾಡಿಗಳಂತೆ ದೇಶದ ಉದ್ದಗಲಕ್ಕೂ ಹರಡಿರುವ ಹಳ್ಳಗಳ ಜಾಲವನ್ನು ಮತ್ತೆ ನಳನಳಿಸುವಂತೆ ಮಾಡಬೇಕು. ಆಗ ನಿಜವಾದ ಜಲಕ್ರಾಂತಿಯ ಕನಸು ಸಾಕಾರವಾಗುತ್ತದೆ ಹಾಗೂ ಈ ಹಳ್ಳಗಳು ದೊಡ್ಡ ದೊಡ್ಡ ನದಿಗಳನ್ನು ತಾವಾಗಿಯೇ ಪುನಶ್ಚೇತನಗೊಳಿಸುತ್ತವೆ.

ಲೇಖಕ: ಇನ್ಫೊಸಿಸ್‌ನ ಮಾಜಿ ಹಿರಿಯ ಅಧಿಕಾರಿ ಮತ್ತು ಕಾಕಾಲ್ ಫೌಂಡೇಷನ್‌ನ ಸಂಸ್ಥಾಪಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry