7

ಲಾಭ ಗಳಿಕೆಗೆ ಉತ್ತಮ ಅವಕಾಶ

ಕೆ. ಜಿ. ಕೃಪಾಲ್
Published:
Updated:
ಲಾಭ ಗಳಿಕೆಗೆ ಉತ್ತಮ ಅವಕಾಶ

ಸಂವೇದಿ ಸೂಚ್ಯಂಕ ಈ ವಾರ ಮತ್ತೊಮ್ಮೆ ದಾಖಲೆಯ ಮಟ್ಟಕ್ಕೆ ಜಿಗಿತವನ್ನು ಕಂಡಿತು. ಬುಧವಾರ 33,911 ಕ್ಕೆ ತಲುಪಿದೆ. ಆದರೆ ಮಧ್ಯಮ ಶ್ರೇಣಿ, ಕೆಳಮಧ್ಯಮ ಶ್ರೇಣಿ, ಬಿಎಎಸ್‌ಇನ ಮೂಲಸೌಕರ್ಯ ಸೂಚ್ಯಂಕ, ರಿಯಲ್ ಎಸ್ಟೇಟ್‌ ಸೂಚ್ಯಂಕ, ತಂತ್ರಜ್ಞಾನ ಸೂಚ್ಯಂಕಗಳು ಈ ವಾರ ಮತ್ತೊಮ್ಮೆ ವಾರ್ಷಿಕ ಗರಿಷ್ಠ ಜಿಗಿದಿವೆ.

ಈ ಹಂತದಲ್ಲಿ ಎಲ್ಲಾ ವಲಯಗಳ ಷೇರುಗಳು ಉತ್ತಮ ಏರಿಕೆ ಪ್ರದರ್ಶಿತವಾಗಿದೆ. ಆದರೆ ಕೆಲವು ಷೇರಿನ ಬೆಲೆಗಳು ಸಂಚರಿಸಿದ ವೇಗ ಮಾತ್ರ ಅಚ್ಚರಿ ಮೂಡಿಸುವಂತಿದೆ. ಅಂದರೆ ಕೇವಲ ಭಾವನಾತ್ಮಕ ಭಾಂಧವ್ಯಗಳಿಂದ ಹೊರಬಂದು ಲಾಭಗಳಿಕೆಯೊಂದೇ ಗುರಿ ಹೊಂದಿರುವ ವ್ಯಾವಹಾರಿಕ ಚಟುವಟಿಕೆಗೆ ಈಗಿನ ಪೇಟೆಗಳು ಉತ್ತಮ ಅವಕಾಶ ಒದಗಿಸುತ್ತಿವೆ. ವ್ಯಾಲ್ಯೂ ಪಿಕ್ - ಪ್ರಾಫಿಟ್ ಬುಕ್ ಮೂಲ ಮಂತ್ರವಾಗಿದ್ದರೆ ಫಲಿತಾಂಶ ಅತ್ಯುತ್ತಮವಾಗಿರುತ್ತದೆ.

ಷೇರುಪೇಟೆ ವಾತಾವರಣವು ಬದಲಾಗುವ ವೇಗ ಬುಲೆಟ್ ವೇಗದಂತಿದೆ. ಮೊದಲು ಕೆಲವೇ ಕಂಪೆನಿಗಳ ಷೇರುಗಳಲ್ಲಿ ಈ ವೇಗ ಪ್ರದರ್ಶಿತವಾಗುತ್ತಿತ್ತು. ಇತ್ತೀಚಿಗೆ ಬ್ಯಾಂಕಿಂಗ್ ವಲಯದ ಷೇರುಗಳಲ್ಲಿ ಇದನ್ನು ಕಂಡಿದ್ದೇವೆ. ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಬಂಡವಾಳ ಒದಗಿಸುವ ಸುದ್ಧಿಯು ಈ ವೇಗಕ್ಕೆ ಕಾರಣವಾಯಿತು. ಆದರೆ ಅದು ಸ್ಥಿರತೆ ಕಾಣದೆ ಬ್ಯಾಂಕಿಂಗ್ ಷೇರುಗಳು ಕಂಡಿದ್ದ ಏರಿಕೆಯ ಮಟ್ಟದಿಂದ ಹಿಂದಿರುಗಿಬಂದಿವೆ.

ಗುಜರಾತ್ ರಾಜ್ಯದ ಚುನಾವಣಾ ಫಲಿತಾಂಶದ ದಿನ ಸಹ ಬುಲೆಟ್ ವೇಗದ ಏರಿಳಿತಗಳು ಪ್ರದರ್ಶನವಾಗಿದೆ. 29 ರಂದು ಕೊನೆಗೊಂಡವಾರದಲ್ಲಿಯೂ ಸಹ ಅನೇಕ ಕಂಪೆನಿಗಳು ಬುಲೆಟ್ ವೇಗದಲ್ಲಿ ಏರಿಳಿತಗಳನ್ನು ಪ್ರದರ್ಶಿಸಿವೆ. ಅಂದರೆ ಲಾಭ ಕಂಡಾಕ್ಷಣ ಅನ್ಯತಾ ಚಿಂತಿಸದೆ ನಗದೀಕರಿಸಿಕೊಂಡಲ್ಲಿ ಮಾತ್ರ ಕೈಗೆಟುಕುವುದು ಎಂಬುದನ್ನು ಸಾಬೀತುಪಡಿಸಿದೆ.

ಬುಲೆಟ್ ವೇಗದ ಕಂಪೆನಿಗಳು: ಇನ್ಫಿಬೀಮ್‌ ಇನ್ಕಾರ್ಪೊರೇಷನ್ ಲಿಮಿಟೆಡ್ ಕಂಪೆನಿಯು 'ಎ ' ಗುಂಪಿನಲ್ಲಿ ವಹಿವಾಟಾಗುತ್ತಿದ್ದು ಶುಕ್ರವಾರ ಆರಂಭಿಕ ಚಟುವಟಿಕೆಯಲ್ಲಿ ಷೇರಿನ ಬೆಲೆಯೂ ₹164 ರ ಸಮೀಪದಲ್ಲಿತ್ತು.  ನಂತರ ಸುಮಾರು ಕೇವಲ ಅರ್ಧ ಘಂಟೆಯ ಸಮಯದಲ್ಲಿ ಷೇರಿನ ಬೆಲೆಯು ₹98.80ಕ್ಕೆ ಕುಸಿಯಿತು. ಅಲ್ಲಿಂದ ಭಾರಿ ಕೊಳ್ಳುವಿಕೆಯ ಕಾರಣ ಷೇರಿನ ಬೆಲೆ ₹150 ರ ಸಮೀಪಕ್ಕೆ ಪುಟಿದೆದ್ದು ₹142 ರ ಸಮೀಪ ವಾರಾಂತ್ಯ ಕಂಡಿತು. ಈ ರೀತಿಯ ಏರಿಳಿತ ಪ್ರದರ್ಶಿಸಲು ಆಂತರಿಕವಾಗಿ ಯಾವುದೇ ಅಧಿಕೃತ ಬೆಳವಣಿಗೆಗಳಿಲ್ಲದಿರುವುದು ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಸಿ ಅದರ ಲಾಭ ಪಡೆಯುವುದಾಗಲಿ ಅಥವಾ ಸ್ಟಾಪ್ ಲಾಸ್ ಆರ್ಡರ್‌ಗಳ ಲಾಭ ಪಡೆಯುವುದಾಗಲಿ ಇರಬಹುದು.

ಸ್ಪೆಷಾಲಿಟಿ ಕೆಮಿಕಲ್ ಕಂಪೆನಿ ಅಲ್ಟ್ರಾ ಮರೈನ್ ಅಂಡ್ ಪಿಗ್ಮೆಂಟ್ಸ್ ಲಿಮಿಟೆಡ್ ಕಂಪೆನಿ ಷೇರಿನ ಬೆಲೆ ಈ ತಿಂಗಳ 21 ರಂದು  ₹೨೯೫ ರ ಸಮೀಪವಿತ್ತು.  ಬುಧವಾರದ ಈ ಷೇರಿನ ₹452 ಕ್ಕೆ ಜಿಗಿದು ಗುರುವಾರ ₹378ಕ್ಕೆ ತಲುಪಿ ₹392 ರಲ್ಲಿ ವಾರಾಂತ್ಯಕಂಡಿದೆ. ಈ ಷೇರಿನ ಬೆಲೆ ಒಂದೇ ತಿಂಗಳಲ್ಲಿ ₹264 ರಿಂದ ₹452 ಕ್ಕೆ ತಲುಪಿರುವುದು ವಹಿವಾಟುದಾರರ ಚಟುವಟಿಕೆಯ ವೇಗ ಅರಿವಾಗುತ್ತದೆ.

ಇತ್ತೀಚಿಗೆ ಹೊಸದಾಗಿ ಪೇಟೆ ಪ್ರವೇಶಿಸಿ ಸೆಪ್ಟೆಂಬರ್ ತಿಂಗಳಲ್ಲಿ ₹195 ರಲ್ಲಿದ್ದು ಡಿಸೆಂಬರ್ ಮೊದಲವಾರದಲ್ಲಿ ₹941 ರ ವರೆಗೂ ಏರಿಕೆ ಪ್ರದರ್ಶಿಸಿದ್ದ ಅಪೆಕ್ಸ್ ಫ್ರೋಝನ್ ಫುಡ್ಸ್ ಲಿಮಿಟೆಡ್ ಕಂಪೆನಿ ಷೇರಿನ ಬೆಲೆ ಗುರುವಾರ ₹770 ರವರೆಗೂ ಕುಸಿದು ಶುಕ್ರವಾರ ₹868 ರವರೆಗೂ ಏರಿಕೆ ಕಂಡು ₹838 ರ ಸಮೀಪ ವಾರಾಂತ್ಯಕಂಡಿದೆ.

ನಹಾರ್ ಕ್ಯಾಪಿಟಲ್ ಅಂಡ್ ಫೈನಾನ್ಶಿಯಲ್ ಸರ್ವಿಸಸ್ ಲಿಮಿಟೆಡ್ ಷೇರಿನ ಬೆಲೆಯು ₹159 ರ ಸಮೀಪದಿಂದ ₹227 ರವರೆಗೂ ಕೇವಲ ಎರಡೇ ದಿನಗಳಲ್ಲಿ ಜಿಗಿತ ಕಂಡು ₹195 ರಸಮೀಪ ಕೊನೆಗೊಂಡಿದೆ. ಇಂತಹ ಏರಿಳಿತ ಪ್ರದರ್ಶಿಸುವುದಕ್ಕೆ ಯಾವುದೇ ಅಧಿಕೃತ ಬೆಳವಣಿಗೆಗಳಿಲ್ಲ.

ರಿಲಯನ್ಸ್ ಅನಿಲ್ ಅಂಬಾನಿ ಸಮೂಹದ ರಿಲಯನ್ಸ್ ಕಮ್ಯುನಿಕೇಷನ್ಸ್‌,  ರಿಲಯನ್ಸ್ ಕ್ಯಾಪಿಟಲ್, ರಿಲಯನ್ಸ್ ಇನ್‌ಫ್ರಾಗಳು ಪ್ರದರ್ಶಿಸಿದ ಏರಿಕೆಯ ಮಟ್ಟ ಮತ್ತು ವಹಿವಾಟಿನ ಗಾತ್ರ ಅನಿರೀಕ್ಷಿತವಾಗಿತ್ತು. ವಾರಾಂತ್ಯದ ದಿನ ಅಂಬಾನಿ ಸೋದರರ ಡೀಲ್ ಅಂಶ ಹೊರಬಿದ್ದಿತು.

(9886313380, ಸಂಜೆ 4.30 ರನಂತರ)

ವಾರದ ವಿಶೇಷ

ಷೇರುಪೇಟೆಯಲ್ಲಿ ಚುರುಕಾದ ಚಟುವಟಿಕೆ ನಡೆದು, ಸೂಚ್ಯಂಕಗಳು ಉತ್ತುಂಗಕ್ಕೆ ಜಿಗಿದು ದಿನನಿತ್ಯ ಹೊಸ ಹೊಸ ದಾಖಲೆಗಳನ್ನು ನಿರ್ಮಿಸುತ್ತಿವೆ. ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿ ಕಂಪೆನಿಗಳ ಷೇರುಗಳ ಬೆಲೆಗಳು ತೋರಿರುವ ಏರಿಕೆಯು ಕಲ್ಪನಾತೀತ. ಈ ಸಂದರ್ಭದ ಪ್ರಯೋಜನವನ್ನು ಪಡೆಯಲು ಕೆಲವು ಹಿತಾಸಕ್ತರು ಮೊಬೈಲ್ ಸಂದೇಶಗಳ ಮೂಲಕ ಕೆಲವು ಕಳಪೆ ಷೇರುಗಳನ್ನು ಕೊಳ್ಳಲು ಪ್ರೇರೇಪಿಸುವುದು ಸಹ ಸಾಮಾನ್ಯವಾಗಿದೆ.

ಇತ್ತೀಚಿಗೆ ಯುನಿವರ್ಸಲ್ ಕ್ರೆಡಿಟ್ ಆ್ಯಂಡ್‌ ಸೆಕ್ಯುರಿಟೀಸ್ ಲಿಮಿಟೆಡ್ ಎಂಬ ಎಕ್ಸ್ ಟಿ ಸಮೂಹದ ಕಂಪೆನಿಯನ್ನು ಮೊಬೈಲ್ ಸಂದೇಶಗಳ ಮೂಲಕ ಖರೀದಿಸಲು ಪ್ರೇರಣೆ ನೀಡಲಾಗುತ್ತಿದೆ. ಹೊಸವರ್ಷದಲ್ಲಿ ನಿಮ್ಮ ಹಣವನ್ನು ದ್ವಿಗುಣಗೊಳಿಸಿರಿ, ಇಪತ್ತು ಸಾವಿರ ಷೇರುಗಳನ್ನು ಖರೀದಿಸಿರಿ ಎಂದು ಸಹ ತಿಳಿಸಲಾಗುತ್ತಿದೆ.

ಈ ಕಂಪೆನಿಯ ಷೇರುಗಳು ಗ್ರೇಡೆಡ್ ಸರ್ವೇಲನ್ಸ್ ಮೆಷರ್ - ಸ್ಟೇಜ್ -1 ರಲ್ಲಿವೆ. ಅಂದರೆ ಈ ಕಂಪೆನಿಯ ಚಟುವಟಿಕೆಯು ಸಂಶಯಾಸ್ಪದವಾಗಿದ್ದು, ಇದರ ಮೇಲೆ ನಿಯಂತ್ರಕರ ಗಮನವಿದೆ ಎಂದಾಯಿತು. ಮೇಲಾಗಿ ಈ ಕಂಪೆನಿಯ ಸಾಧನೆಯು ಸಮರ್ಪಕವಾಗಿಲ್ಲ. ಈ ಕಂಪೆನಿಯ ಪ್ರವರ್ತಕರ ಭಾಗಿತ್ವ ಕೇವಲ ಶೇ1.63 ಮಾತ್ರ, ಉಳಿದ ಭಾಗಿತ್ವವು ಸಾರ್ವಜನಿಕರಲ್ಲಿದೆ. ಆದ್ದರಿಂದ ಇಂತಹ ಕಂಪೆನಿಗಳ ವ್ಯಾಮೋಹದಿಂದ ದೂರವಿದ್ದಲ್ಲಿ ಬಂಡವಾಳ ಸುರಕ್ಷಿತವಾಗಿಸಬಹುದು. ಹಂತ ಹಂತದ ಕಣ್ಗಾವಲು ವ್ಯವಸ್ಥೆಯಲ್ಲಿ

(ಗ್ರೇಡೆಡ್ ಸರ್ವೇಲನ್ಸ್ ಮೇಷರ್ಸ್‌) 6 ಹಂತಗಳಿವೆ.

1. ಕೇವಲ ಶೇ5 ರಷ್ಟು ಏರಿಳಿತಕ್ಕೆ ಅವಕಾಶವಿದೆ.

2. ಶೇ 5 ರಷ್ಟರ ಏರಿಳಿತದ ಮಿತಿಯೊಂದಿಗೆ ಶೇ100 ರಷ್ಟು ಅಧಿಕ ಠೇವಣಿ ನೀಡಬೇಕಾಗುತ್ತದೆ.

3.  ಶೇ100 ರಷ್ಟು ಅಧಿಕ ಠೇವಣಿಯಲ್ಲದೆ ಕೇವಲ ವಾರಕ್ಕೆ ಒಂದುದಿನ ಅಂದರೆ ಸೋಮವಾರ ಮಾತ್ರ  ವಹಿವಾಟಿಗೆ ಅವಕಾಶ ನೀಡಲಾಗುವುದು.‌

4. ವಾರಕ್ಕೊಂದು ದಿನ ವಹಿವಾಟು, ಶೇ 200 ರಷ್ಟು ಹೆಚ್ಚಿನ ಹಣ ಠೇವಣಿ ನೀಡಬೇಕಾಗುತ್ತದೆ.

5. ಶೇ200 ರಷ್ಟು ಠೇವಣಿಯಲ್ಲದೆ ವಹಿವಾಟಿಗೆ ಕೇವಲ ತಿಂಗಳಲ್ಲಿ ಒಂದು ದಿನಮಾತ್ರ ವಹಿವಾಟಿಗೆ ಅವಕಾಶವಿದೆ.

6. ತಿಂಗಳಲ್ಲಿ ಒಂದೇ ದಿನ ವಹಿವಾಟು ನಡೆಸಬಹುದಾಗಿದ್ದು ಬೆಲೆಯಲ್ಲಿ ಏರಿಳಿತಕ್ಕೆ ಅವಕಾಶವಿಲ್ಲ.

ಕಂಪೆನಿಗಳ ಲಿಸ್ಟಿಂಗ್ ನಿಯಮ ಪಾಲನೆಯಲ್ಲುಂಟಾಗಿರುವ ಲೋಪದೋಷಗಳನ್ನು ಸರಿಪಡಿಸಿಕೊಂಡಲ್ಲಿ ಅವುಗಳನ್ನು ಗ್ರೇಡೆಡ್ ಸರ್ವೇಲನ್ಸ್ ಮೇಷರ್ ಸಮೂಹದಿಂದ  ತಮ್ಮ ಮೊದಲಿನ ಸಮೂಹಕ್ಕೆ ವರ್ಗಾಯಿಸಲಾಗುವುದು. ಇದಕ್ಕೆ ಉದಾಹರಣೆ ಎಂದರೆ ಆಕ್ಸೆಲ್ ಫ್ರಂಟ್‌ ಲೈನ್ ಕಂಪೆನಿ ಷೇರು 29 ರಿಂದ ಬಿ ಗುಂಪಿಗೆ ವರ್ಗಾಯಿಸಲಾಗಿದೆ.  ಅದೇ ರೀತಿ ಲೋಪ ದೋಷ ಸರಿಪಡಿಸಿಕೊಂಡ ಕಾರಣ ಗ್ಯಾಲಂಟ್  ಇಸ್ಪಾಟ್,  ಗ್ಯಾಲಂಟ್ ಮೆಟಲ್ ಕಂಪೆನಿಗಳು ಜನವರಿ 1  ರಿಂದ ತಮ್ಮ ಮೂಲ ಸಮೂಹ ಬಿ ಗುಂಪಿನಲ್ಲಿ ವಹಿವಾಟಾಗಲಿದೆ.

ಒಂದು ವೇಳೆ ಗ್ರೇಡೆಡ್ ಸರ್ವೇಲನ್ಸ್ ಮೇಷರ್ ಸಮೂಹದ ಕಂಪೆನಿ ನಿಗದಿತ ಸಮಯದಲ್ಲಿ ನ್ಯೂನ್ಯತೆ ಸರಿಪಡಿಸಿಕೊಳ್ಳದಿದ್ದಲ್ಲಿ ಅದನ್ನು ಮುಂದಿನ ಸ್ಟೇಜ್‌ಗೆ ತಳ್ಳಲಾಗುವುದು. ಅಸ್ಟ್ರಾಲ್ ಕೋಕ್ ಅಂಡ್ ಪ್ರಾಜೆಕ್ಟ್ಸ್ ಲಿಮಿಟೆಡ್ ಸದ್ಯ ಸ್ಟೇಜ್ 6 ರಲ್ಲಿ ವಹಿವಾಟಾಗುತ್ತಿದ್ದು, ತನ್ನ ಲೋಪದೋಷಗಳನ್ನು ಸರಿಪಡಿಸಕೊಳ್ಳದ ಕಾರಣ ಕಂಪೆನಿಯನ್ನು ಜನವರಿ 17 ರಿಂದ  ಅಮಾನತುಗೊಳಿಸಲಾಗುತ್ತಿದೆ. ಹೀಗಿರುವಾಗ ವಹಿವಾಟು ನಡೆಸುವ ಮುನ್ನ ಕಂಪೆನಿಯ ಯೋಗ್ಯತೆಯನ್ನರಿತು, ಅದಕ್ಕೆ ಲಗತ್ತಿಸಿರುವ ನಿಯಮಗಳನ್ನು ಅರಿತು ನಡೆಸಿದಲ್ಲಿ ಮಾತ್ರ ಹೂಡಿದ ಬಂಡವಾಳ ಸುರಕ್ಷಿತವಾಗಿರಲು ಸಾಧ್ಯ. ಇಲ್ಲವಾದರೆ ಅನಗತ್ಯವಾಗಿ ಅಪಾಯವನ್ನು ಎಳೆದುಕೊಂಡಂತಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry