ಆರೋಗ್ಯ ಶಿಶುವಿಗಾಗಿ ‘ಮಾತೃವಂದನಾ’

7
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯಲ್ಲಿ ‘ಪ್ರಧಾನ ಮಂತ್ರಿ ಮಾತೃವಂದನಾ' ಯೋಜನೆ ಅರ್ಜಿ ಲಭ್ಯ

ಆರೋಗ್ಯ ಶಿಶುವಿಗಾಗಿ ‘ಮಾತೃವಂದನಾ’

Published:
Updated:
ಆರೋಗ್ಯ ಶಿಶುವಿಗಾಗಿ ‘ಮಾತೃವಂದನಾ’

ದಾವಣಗೆರೆ: ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿಗೆ ಉಚಿತವಾಗಿ ಬಿಸಿಯೂಟ ನೀಡುವ ಮೂಲಕ ತಾಯಿ ಹಾಗೂ ಶಿಶುವಿನಲ್ಲಿ ಅಪೌಷ್ಟಿಕತೆ ನಿವಾರಿಸುವ ನಿಟ್ಟಿನಲ್ಲಿ ಅನುಷ್ಠಾನಗೊಂಡ ‘ಮಾತೃಪೂರ್ಣ’ ಯೋಜನೆಗೆ ಪೂರಕವಾಗಿ ‘ಮಾತೃವಂದನಾ’ ಎಂಬ ಮತ್ತೊಂದು ನೂತನ ಯೋಜನೆಯು ಜಿಲ್ಲೆಯಲ್ಲಿ ಇಂದಿನಿಂದ ಜಾರಿಯಾಗಲಿದೆ.

ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳಿಂದ ಗರ್ಭಿಣಿಗೆ ಸಕಾಲಕ್ಕೆ ಪೌಷ್ಟಿಕಾಂಶ ಆಹಾರ ಸಿಗದೇ ತಾಯಿ ಹಾಗೂ ನವಜಾತಶಿಶು ಅನಾರೋಗ್ಯ ಮತ್ತು ಅಪೌಷ್ಟಿಕತೆಯಿಂದ ಬಳಲುವ ಸಾಧ್ಯತೆ ಇರುತ್ತದೆ. ಇದನ್ನು ತಪ್ಪಿಸುವ ಉದ್ದೇಶದಿಂದ ರಾಷ್ಟ್ರೀಯ ಅಹಾರ ಭದ್ರತಾ ಕಾಯ್ದೆ ಅನ್ವಯ ಕೇಂದ್ರ ಸರ್ಕಾರವು ನೂತನವಾಗಿ ‘ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ’ಯನ್ನು ಜಾರಿಗೊಳಿಸಿದೆ.

ಏನಿದು ಮಾತೃವಂದನಾ?: ಮೊದಲ ಬಾರಿ ಗರ್ಭಿಣಿಯಾದ ಫಲಾನುಭವಿಗೆ ಮಾತೃವಂದನಾ ಯೋಜನೆಯಡಿ ಮೂರು ಹಂತಗಳಲ್ಲಿ ಒಟ್ಟು ₹ 5 ಸಾವಿರ ಪ್ರೋತ್ಸಾಹಧನವನ್ನು ನೇರವಾಗಿ ಅವರ ಬ್ಯಾಂಕ್‌ ಖಾತೆಗೆ ಜಮಾ ಮಾಡುವ ಮೂಲಕ ತಾಯಿ ಹಾಗೂ ಶಿಶುವಿನ ಆರೋಗ್ಯವನ್ನು ರಕ್ಷಿಸುವ ಯೋಜನೆ ಇದು.

‘ರಾಜ್ಯದಲ್ಲಿ ಇಂದಿಗೂ ಸಾಕಷ್ಟು ಗರ್ಭಿಣಿಯರು ಹಾಗೂ ನವಜಾತು ಶಿಶುಗಳು ಅಪೌಷ್ಟಿಕತೆಗೆ ಒಳಗಾಗಿದ್ದಾರೆ. ಅಂತಹ ಫಲಾನುಭವಿಗೆ ನೇರವಾಗಿ ಸರ್ಕಾರದಿಂದಲೇ ಸಹಾಯಧನ ನೀಡುವ ಮೂಲಕ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಅವರನ್ನು ಬಲಪಡಿಸುವುದು ಯೋಜನೆಯ ಉದ್ದೇಶವಾಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಎಚ್‌.ವಿಜಯಕುಮಾರ್‌ ಹೇಳುತ್ತಾರೆ.

ಮೂರು ಕಂತುಗಳಲ್ಲಿ ಸಹಾಯಧನ: ಮೊದಲ ಬಾರಿ ಗರ್ಭಿಣಿ ಆದವರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಿ, ಹೆಸರು ನೋಂದಾಯಿಸಬೇಕು. ನೋದಾಯಿತ ಫಲಾನುಭವಿಗೆ ಯೋಜನೆಯ ಅನ್ವಯ ಮೊದಲ ಕಂತಿನಲ್ಲಿ ₹ 1 ಸಾವಿರ ಸಹಾಯಧನವನ್ನು ನೇರವಾಗಿ ಅವರ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗುತ್ತದೆ. ಆರು ತಿಂಗಳ ನಂತರ ಗರ್ಭಿಣಿಯ ಆರೋಗ್ಯ ತಪಾಸಣೆಯಾದ ಮೇಲೆ ಎರಡನೇ ಕಂತಿನ ₹ 2 ಸಾವಿರ ಸಹಾಯಧನವು ಅವರ ಬ್ಯಾಂಕ್‌ ಖಾತೆಗೆ ಜಮಾ ಆಗುತ್ತದೆ. ನಂತರ ಮಗು ಜನನವಾಗಿ ಮೊದಲ ಹಂತದ ಚುಚ್ಚುಮದ್ದು (ಬಿಸಿಜಿ, ಡಿಪಿಟಿ, ಒಪಿವಿ) ಹಾಕಿಸಿದ ಮೇಲೆ ಮೂರನೇ ಹಂತದ ₹ 2 ಸಾವಿರ ನೀಡಲಾಗುತ್ತದೆ. ಇದರ ಜತೆಗೆ ಜನನಿ ಸುರಕ್ಷಾ ಯೋಜನೆಯಿಂದಲೂ ಹೆಚ್ಚುವರಿಯಾಗಿ ₹ 1 ಸಾವಿರ ಜಮಾ ಆಗುತ್ತದೆ. ಒಟ್ಟು ₹ 6 ಸಾವಿರ ಸಹಾಯಧನವು ಫಲಾನುಭವಿಯ ಬ್ಯಾಂಕ್‌ ಖಾತೆಗೆ ಸಂದಾಯವಾಗಲಿದೆ’ ಎಂದು  ಯೋಜನೆಯ ಮಾಹಿತಿ ನೀಡಿದರು.

ಮೊದಲ ಬಾರಿ ಗರ್ಭಿಣಿಯಾದವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಒಂದು ಬಾರಿ ಯೋಜನೆಯ ಫಲಾನುಭವಿಯಾಗಿ, ಎರಡನೇ ಬಾರಿ ಗರ್ಭಿಣಿಯಾದವರು ಅರ್ಜಿ ಸಲ್ಲಿಸುವಂತಿಲ್ಲ ಎನ್ನುತ್ತಾರೆ ಅವರು.

ಗರ್ಭಪಾತವಾದರೆ....?

ಗರ್ಭಿಣಿಯು ಹೆಸರು ನೋಂದಾಯಿಸಿ ಮೊದಲ ಕಂತಿನ ಸಹಾಯಧನ ಪಡೆದ ನಂತರ ಒಂದು ವೇಳೆ ಫಲಾನುಭವಿಗೆ ಗರ್ಭಪಾತವಾದಲ್ಲಿ ಯೋಜನೆಯ ಮುಂದಿನ ಕಂತಿನ ಸಹಯಧನ ಪಡೆಯಲು ಸಾಧ್ಯವಿಲ್ಲ. ಅದೇ ಮಹಿಳೆ ಎರಡನೇ ಬಾರಿ ಗರ್ಭಿಣಿಯಾದ ನಂತರ ಮೊದಲ ಹಂತದಲ್ಲಿ ಎಲ್ಲಿಗೆ ಸಹಾಯಧನವನ್ನು ನಿಲ್ಲಿಸಲಾಗಿರುತ್ತದೆಯೋ ಅಲ್ಲಿಂದ ಪ್ರೋತ್ಸಾಹಧನ ನೀಡಿಕೆ ಮುಂದುವರಿಯುತ್ತದೆ.

ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರನ್ನು ಹೊರತುಪಡಿಸಿ ಎಲ್ಲ ಸಮುದಾಯದ ಅರ್ಹ ಫಲಾನುಭವಿಗಳು ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಹೇಳುತ್ತಾರೆ ಅವರು.

ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಮೇಲ್ವಿಚಾರಕ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಜಿಲ್ಲೆಯ ಎಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರಿಗೆ ತರಬೇತಿಯನ್ನೂ ನೀಡಲಾಗಿದೆ. ಅರ್ಹರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯಲ್ಲಿ ಅರ್ಜಿ ಪಡೆದು, ಅಂಗನವಾಡಿ ಕೇಂದ್ರಕ್ಕೆ ಅಥವಾ ಸಿಡಿಪಿಒ ಕಚೇರಿಗೆ ಸಲ್ಲಿಸಬೇಕು ಎನ್ನುತ್ತಾರೆ.

ಮಾತೃವಂದನಾ ಯೋಜನೆಯು ಈ ಹಿಂದೆ ಪ್ರಾಯೋಗಿಕವಾಗಿ ಧಾರವಾಡ ಮತ್ತು ಕೋಲಾರ ಜಿಲ್ಲೆಗಳಲ್ಲಿ ಜಾರಿಯಾಗಿತ್ತು. ಜಿಲ್ಲೆಯಲ್ಲಿ ಈಗಾಗಲೇ 2860 ಗರ್ಭಿಣಿಯರು ಪ್ರೋತ್ಸಾಹಧನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ವಿವರ ನೀಡಿದರು.

ಅಗತ್ಯ ದಾಖಲೆಗಳು

* ಪತಿ, ಪತ್ನಿ ಇಬ್ಬರದೂ ಆಧಾರ ಕಾರ್ಡ್‌ ಇರಬೇಕು

* ಫಲಾನುಭವಿಯ ಬ್ಯಾಂಕ್‌ ಖಾತೆ ಹಾಗೂ ಐಎಫ್‌ಸಿ ಸಂಖ್ಯೆ

* ಗರ್ಭಿಣಿಯ ಗುರುತಿನ ಚೀಟಿ (ಚುನಾವಣೆ ಐಡಿ/ ಕಿಸಾನ್‌ ಪಾಸ್‌ ಪುಸ್ತಕ/ ವಾಹನ ಚಾಲನಾ ಪರವಾನಗಿ/ ಪಾನ್‌ ಕಾರ್ಡ್‌/ಉದ್ಯೋಗ ಕಾರ್ಡ್‌– ಯಾವುದಾದರು ಒಂದು)

* ಗರ್ಭಿಣಿ ಆರೋಗ್ಯ ತಪಾಸಣೆ ಕಾರ್ಡ್‌ (2ನೇ ಕಂತು ಪಡೆಯಲು).

* ಮಗುವಿಗೆ ಚುಚ್ಚುಮದ್ದು ವಿವರದ ತಾಯಿ ಕಾರ್ಡ್‌ (3ನೇ ಕಂತು ಪಡೆಯಲು).

ಮಾತೃವಂದಾನ ಅರ್ಜಿ ಸಲ್ಲಿಕೆ ವಿವರ

(ಡಿ.30ರ ಮಾಹಿತಿ)

ತಾಲ್ಲೂಕು  ಫಲಾನುಭವಿಗಳು

ದಾವಣಗೆರೆ
 – 706

ಹರಿಹರ – 420

ಹರಪನಹಳ್ಳಿ – 554

ಜಗಳೂರು – 400

ಚನ್ನಗಿರಿ – 492

ಹೊನ್ನಾಳಿ – 288

ಒಟ್ಟು – 2,860

–––––––––––––

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry