ಗುರುವಾರ , ಜೂಲೈ 9, 2020
26 °C
ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮರೀಚಿಕೆ; ಆವರಣ, ಪ್ರವೇಶ ದ್ವಾರವೂ ಇಲ್ಲ

ಕರಾವಳಿ ಕಾವಲು ಪೊಲೀಸರಿಗೆ ಸಿಗದ ಸೌಕರ್ಯ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರಾವಳಿ ಕಾವಲು ಪೊಲೀಸರಿಗೆ ಸಿಗದ ಸೌಕರ್ಯ!

ಕಾರವಾರ: ಸಮುದ್ರ ಮಾರ್ಗದಲ್ಲಿ ಅಕ್ರಮ ತಡೆಗಟ್ಟಲು ಗಸ್ತು ಕಾರ್ಯಾ ಚರಣೆ ನಡೆಸುವ ಇಲ್ಲಿನ ಕರಾವಳಿ ಕಾವಲು ಪೊಲೀಸರಿಗೆ (ಸಿಎಸ್‌ಪಿ) ಮೂಲಸೌಕರ್ಯ ಎಂಬುದು ಮರೀಚಿಕೆ ಯಾಗಿದೆ. ಕುಡಿಯುವ ನೀರು ಹಾಗೂ ಶೌಚಾಲಯದ ವ್ಯವಸ್ಥೆ ಕೂಡ ಅವರಿಗೆ ಇಲ್ಲವಾಗಿದೆ.

ಇಲ್ಲಿನ ರಾಷ್ಟ್ರೀಯ ಹೆದ್ದಾರಿ–66 ಬದಿಯ ಜಿಲ್ಲಾ ವಿಜ್ಞಾನ ಕೇಂದ್ರದ ಬಳಿ ಕಾರವಾರ ಸಿಎಸ್‌ಪಿ ಠಾಣೆ ಕಾರ್ಯ ನಿರ್ವಹಿಸುತ್ತಿದೆ. ಈ ಠಾಣೆಗೆ ನೀಡಿರುವ ಮೂರು ಇಂಟರ್‌ಸೆಪ್ಟರ್‌ ದೋಣಿಗಳು ಮಾತ್ರ ಬೈತಖೋಲ್‌ ಬಂದರು ಬಳಿಯಿಂದ ಕಾರ್ಯಾಚರಣೆ ನಡೆಸುತ್ತವೆ.

ದಿನದ 24 ಗಂಟೆಯೂ ಪಾಳಿ ಲೆಕ್ಕದಲ್ಲಿ ಸಿಬ್ಬಂದಿಯು ದೋಣಿಯಲ್ಲಿ ಗಸ್ತು ತಿರುಗುತ್ತಾ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ವಹಿಸುತ್ತಾರೆ. ಅಲ್ಲದೇ ಮೀನುಗಾರಿಕೆ ದೋಣಿಗಳು ಅಪಾಯಕ್ಕೆ ಸಿಲುಕಿದ್ದಾಗ ರಕ್ಷಣಾ ಕಾರ್ಯಾಚರಣೆ ಯಲ್ಲೂ ಭಾಗವಹಿಸುತ್ತಾರೆ. ಆದರೆ ಈ ಸಿಬ್ಬಂದಿಗೆ ಬಂದರು ಬಳಿ ಯಾವುದೇ ಸೌಕರ್ಯವನ್ನು ಕಲ್ಪಿಸಿಲ್ಲ. ಜಟ್ಟಿ ಬಳಿಯಲ್ಲಿ ಕಾಂಪೌಂಡ್‌ ಆಗಲಿ, ಪ್ರವೇಶ ದ್ವಾರವಾಗಲಿ ಇಲ್ಲ.

ತಾತ್ಕಾಲಿಕ ಶೆಡ್‌ನಲ್ಲಿ ದೋಣಿಯ ಸಲಕರಣೆಗಳನ್ನು ಇಡಲಾಗಿದ್ದು, ಮಳೆ ಗಾಳಿ ಬಂದರೆ ಅದರೊಳಗೆ ಆಶ್ರಯ ಪಡೆಯುವುದು ಕಷ್ಟವಾಗಿದೆ. ಇನ್ನೂ ವಿದ್ಯುತ್‌ ಸೌಕರ್ಯ ಕೂಡ ಇಲ್ಲಿಲ್ಲ. ರಾತ್ರಿ ಹೊತ್ತು ಸೋಲಾರ್‌ ದೀಪವೇ ಗತಿಯಾಗಿದೆ.

ಸಿಬ್ಬಂದಿ ಕೊರತೆ: ಇಲ್ಲಿನ ಸಿಎಸ್‌ಪಿ ಠಾಣೆ ಯಲ್ಲಿ ಶೇ 50ರಷ್ಟು ಸಿಬ್ಬಂದಿ ಕೊರತೆ ಇದೆ. ಇದರಿಂದ ಗಸ್ತು ಕಾರ್ಯಾಚರಣೆ ನಡೆಸುವ ಸಿಬ್ಬಂದಿಗೆ ಹಲವು ಬಾರಿ ವಿಶ್ರಾಂತಿಯೇ ಸಿಗುವುದಿಲ್ಲ. ‘ಬೆಳಿಗ್ಗೆ 8 ರಿಂದ ಮಧ್ಯಾಹ್ನ 2 ಗಂಟೆವರೆಗೆ ಕಾರ್ಯ ನಿರ್ವಹಿಸಿರುತ್ತೇವೆ. ಮತ್ತೆ ರಾತ್ರಿ 9ಕ್ಕೆ ಬಂದರೆ ಮರುದಿನ ಬೆಳಿಗ್ಗೆ 9ರವರೆಗೆ ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆ’ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಸಿಬ್ಬಂದಿ.

1999ರಲ್ಲಿ ಅಸ್ತಿತ್ವಕ್ಕೆ: ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಟ್ಟು 320 ಕಿ.ಮೀ ಉದ್ದದ ಕಡಲ ತೀರವಿದ್ದು, ಇದನ್ನು ರಕ್ಷಣೆ ಮಾಡುವ ಉದ್ದೇಶದಿಂದ 1999ರಲ್ಲಿ ಕರಾವಳಿ ಕಾವಲು ಪಡೆಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಜಿಲ್ಲೆಯಲ್ಲಿ ಭಟ್ಕಳ, ಹೊನ್ನಾವರ, ಕುಮಟಾ, ಬೇಲೇಕೇರಿ ಹಾಗೂ ಕಾರವಾರದಲ್ಲಿ ತಲಾ ಒಂದೊಂದು ಠಾಣೆಗಳಿವೆ. ಇವುಗಳಲ್ಲಿ ಕಾರವಾರ, ತದಡಿ ಹಾಗೂ ಭಟ್ಕಳ ಠಾಣೆಗೆ ಮಾತ್ರ ಇಂಟರ್‌ಸೆಪ್ಟರ್‌ ದೋಣಿಗಳನ್ನು ಒದಗಿಸಲಾಗಿದೆ.

‘ಬೈತಖೋಲ್‌ನಲ್ಲಿ ಬಂದರು ಇಲಾಖೆಗೆ ಸೇರಿದ ಜಾಗವನ್ನು ಲೀಸ್‌ ಮೇಲೆ ಪಡೆಯಲಾಗಿದೆ. 25 ಮೀ.x 30 ಮೀ. ಜಾಗದ ಸುತ್ತಳತೆಗೆ ಕಂಪೌಂಡ್‌ ಹಾಗೂ ಇಂಟರ್‌ಸೆಪ್ಟರ್‌ ದೋಣಿಯ ಸಾಧನಗಳನ್ನು ಇಟ್ಟುಕೊಳ್ಳಲು ಅಗತ್ಯವಾದ ಶೆಡ್‌ ನಿರ್ಮಾಣಕ್ಕೆ ಕಳೆದ ಕೆಲ ವರ್ಷಗಳ ಹಿಂದೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಇದೀಗ ಸರ್ಕಾರದಿಂದ ಇದಕ್ಕೆ ₹ 50 ಲಕ್ಷ ಬಿಡುಗಡೆಯಾಗಿದ್ದು, ಪಿಡಬ್ಲ್ಯುಡಿ ಕಾಮಗಾರಿ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಶೀಘ್ರದಲ್ಲಿಯೇ ಸಿಬ್ಬಂದಿಗೆ ಮೂಲ ಸೌಕರ್ಯ ದೊರೆಯಲಿದೆ’ ಎಂದು ಕಾರವಾರ ಸಿಎಸ್‌ಪಿ ಠಾಣೆಯ ಇನ್‌ಸ್ಪೆಕ್ಟರ್‌ ಎಸ್‌.ಎಂ. ರಾಣೆ ‘ಪ್ರಜಾವಾಣಿ’ಗೆ ತಿಳಿಸಿದರು.

**

ಇಂಟರ್‌ಸೆಪ್ಟರ್‌ ದೋಣಿಯ ನಿರ್ವಹಣೆ

ಪ್ರತಿ ವರ್ಷ ಮುಂಗಾರು ಆರಂಭವಾಗುತ್ತಿದ್ದಂತೆ ಇಂಟರ್‌ಸೆಪ್ಟರ್‌ ದೋಣಿಗಳನ್ನು ನೀರಿನಿಂದ ದಡಕ್ಕೆ ತಂದು ನಿರ್ವಹಣೆ ಮಾಡಲಾಗುತ್ತದೆ. ಗೋವಾದ ಶಿಪ್‌ಯಾರ್ಡ್‌ ಲಿಮಿಟೆಡ್‌ನ ತಾಂತ್ರಿಕ ಸಿಬ್ಬಂದಿ ಈಗಾಗಲೇ ಸಣ್ಣಪುಟ್ಟ ದುರಸ್ತಿ ಕಾರ್ಯವನ್ನು ಆರಂಭಿಸಿದ್ದಾರೆ. ದೋಣಿಯನ್ನು ದಡಕ್ಕೆ ತಂದು 10 ದಿನಗಳಾಗಿದ್ದು, ಆಗಸ್ಟ್‌ 1ರಿಂದ ಮತ್ತೆ ಕಾರ್ಯಾಚರಣೆಗಾಗಿ ನೀರಿಗೆ ಇಳಿಯಲಿದೆ.

*

ಬೈತಖೋಲ್‌ನಲ್ಲಿ ಜಟ್ಟಿ ನಿರ್ಮಾಣ, ಕಾಂಪೌಂಡ್‌, ಶೆಡ್‌ ನಿರ್ಮಾಣಕ್ಕೆ ₹ 50 ಲಕ್ಷ ಬಿಡುಗಡೆಯಾಗಿದ್ದು, ಮಳೆಗಾಲ ಮುಗಿದ ನಂತರ ಆರಂಭ ಆಗಲಿದೆ

–ಎಸ್‌.ಎಂ.ರಾಣೆ, ಕಾರವಾರ ಕರಾವಳಿ ಕಾವಲು ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.