ಬುಧವಾರ, ಆಗಸ್ಟ್ 5, 2020
21 °C
ಪೊನ್ನಂಪೇಟೆಯಲ್ಲಿ ಅಪ್ಪಚ್ಚಕವಿ 150ನೇ ಜನ್ಮದಿನ ಆಚರಣೆ

ಕೊಡವ ಸಾಹಿತ್ಯದ ಹಿರಿಮೆ ಹೆಚ್ಚಿಸಿದ ಕವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಡವ ಸಾಹಿತ್ಯದ ಹಿರಿಮೆ ಹೆಚ್ಚಿಸಿದ ಕವಿ

ಗೋಣಿಕೊಪ್ಪಲು: ಕೊಡಗಿನ ಆದಿಕವಿ ಹರದಾಸ ಅಪ್ಪನೆರವಂಡ ಅಪ್ಪಚಕವಿ ಭಾಷೆ ಮತ್ತು ಬರವಣಿಗೆ ಮೂಲಕ ಸಾಹಿತ್ಯದ ಹಿರಿಮೆಯನ್ನು ಹೆಚ್ಚಿಸಿದ್ದಾರೆ ಎಂದು ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಹೇಳಿದರು.

ಅಖಿಲ ಅಮ್ಮಕೊಡವ ಸಮಾಜ ಹಾಗೂ ಅಖಿಲ ಕೊಡವ ಸಮಾಜ ಜಂಟಿಯಾಗಿ ಪೊನ್ನಂಪೇಟೆ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಅಪ್ಪಚ್ಚಕವಿಯ 150 ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅನೇಕ ಹೊಸ ಶಬ್ದಗಳನ್ನು ಬಳಸುವ ಮೂಲಕ ಕವಿ ಕೊಡವ ಭಾಷೆಯ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದಾರೆ. ಸಾಹಿತ್ಯದ ಬಗೆಗಿನ ಓದು ಮತ್ತು ಅಭಿರುಚಿಯಿಂದ ಉತ್ತಮ ಕೃತಿಗಳನ್ನು ರಚಿಸಿ ಸಾಹಿತ್ಯ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಮ್ಮಕೊಡವ ಸಮಾಜದ ಚಿಲ್ಲಜಮ್ಮನ ಸೋಮೇಶ್ ಮಾತನಾಡಿ, ಕೊಡಗಿನ ಸಂಸ್ಕೃತಿ, ಪರಂಪರೆ ಹಾಗೂ ಮಣ್ಣಿನ ರಕ್ಷಣೆಗೆ ಅಪ್ಪಚಕವಿಯ ಹಾಡುಗಳು ಪ್ರೇರಣೆ ನೀಡಿವೆ. ಕೊಡವಾಮೆ ರಕ್ಷಣೆಗೂ ಕವಿಯ ಹಾಡುಗಳು ಉತ್ತಮ ಕೊಡುಗೆಯಾಗಿವೆ. ಅವರ ಹಾಡುಗಳನ್ನು ಕೊಡವ ಜನಾಂಗದವರು ಕಲಿಯುವ ಮೂಲಕ ಭಾಷೆ, ಸಂಸ್ಕೃತಿ ಉಳಿವಿಗೆ ಮುಂದಾಗಬೇಕು ಎಂದರು.

ಅಖಿಲ ಅಮ್ಮಕೊಡವ ಸಮಾಜದ ಅಧ್ಯಕ್ಷ ಬಾನಂಡ ಪೃಥ್ಯು ಮಾತನಾಡಿ ಪುತ್ತರಿ ಕೋಲ್ ಮಂದ್ ಮತ್ತು ಉಮ್ಮತ್ತಾಟ್ ನೃತ್ಯದಲ್ಲಿ ಅಪ್ಪಚ್ಚಕವಿಯ ಹಾಡುಗಳನ್ನು ಹಾಡುವ ಮೂಲಕ ಅವರ ಸ್ಮರಣೆ ಮಾಡಲಾಗುತ್ತದೆ. ಅವುಗಳಲ್ಲಿ ಕೊಡವ ಮತ್ತು ಅಮ್ಮಕೊಡವರ ಅನ್ಯೋನ್ಯತೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದರು.

ಆರಂಭದಲ್ಲಿ ಅಲ್ಲಿನ ಬಸವೇಶ್ವರ ದೇವಸ್ಥಾನ ಆವರಣದಿಂದ ಕೊಡವ ಸಾಂಪ್ರದಾಯಕ ದಿರಿಸಿನಲ್ಲಿ ಸಂಘಟಕರು ಮೆರವಣಿಗೆ ಮೂಲಕ ಪ್ರಾಥಮಿಕ ಶಾಲಾ ಸಭಾಂಗಣಕ್ಕೆ ಆಗಮಿಸಿದರು. ಬಳಿಕ ಅಪ್ಪಚ್ಚ ಕವಿಯ ನಾಟಕಗಳಲ್ಲಿ ಬರುವ ಹಾಡುಗಳನ್ನು ಕಲಾವಿದರಾದ ವಿ.ಟಿ.ಶ್ರೀನಿವಾಸ್, ಕುಸುಮಾ ಮಾದಪ್ಪ, ಮದ್ರೀರ ಸಂಜು ಸುಶ್ರಾವ್ಯವಾಗಿ ಹಾಡಿದರು. ತಬಲವಾದಕ ಚಂದ್ರು ಸಾಥ್ ನೀಡಿದರು.

ನಿವೃತ್ತ ಶಿಕ್ಷಕಿ ಹೆಮ್ಮಚಿಮನೆ ಮೀನಾಕ್ಷಿ ಗೋಪಾಲ್, ಅಖಿಲ ಕೊಡವ ಸಮಾಜ ಜಂಟಿ ಕಾರ್ಯದರ್ಶಿ ನಂದೆಟೀರ ರಾಜಾ ಮಾದಪ್ಪ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.