ಎಸ್‌ಎನ್‌ಆರ್‌ ಜಿಲ್ಲಾಸ್ಪತ್ರೆಗೆ ಹೈಟೆಕ್‌ ಸ್ಪರ್ಶ

7
ಮೂರ್ನಾಲ್ಕು ವರ್ಷಗಳಲ್ಲಿ ಸಾಕಷ್ಟು ಸುಧಾರಣೆ ಕಂಡ ಆಸ್ಪತ್ರೆಗಳಲ್ಲಿ ಸಕಲ ವೈದ್ಯಕೀಯ ಸವಲತ್ತು: ಸರ್ಕಾರಿ ಆಸ್ಪತ್ರೆಗಳಿಗೆ ಮಾದರಿ

ಎಸ್‌ಎನ್‌ಆರ್‌ ಜಿಲ್ಲಾಸ್ಪತ್ರೆಗೆ ಹೈಟೆಕ್‌ ಸ್ಪರ್ಶ

Published:
Updated:
ಎಸ್‌ಎನ್‌ಆರ್‌ ಜಿಲ್ಲಾಸ್ಪತ್ರೆಗೆ ಹೈಟೆಕ್‌ ಸ್ಪರ್ಶ

ಕೋಲಾರ: ಸರ್ಕಾರಿ ಆಸ್ಪತ್ರೆ ಎಂದರೆ ಸಮಸ್ಯೆಗಳ ಆಗರವೆಂದು ಮೂಗು ಮುರಿಯುವವರೆ ಹೆಚ್ಚು. ಆದರೆ, ಇದಕ್ಕೆ ಅಪವಾದ ಎಂಬಂತಿರುವ ನಗರದ ಶ್ರೀ ನರಸಿಂಹರಾಜ (ಎಸ್‌ಎನ್ಆರ್‌) ಜಿಲ್ಲಾ ಆಸ್ಪತ್ರೆಯು ಈಗ ಮತ್ತಷ್ಟು ಹೈಟೆಕ್‌ ಆಗಿದೆ.

ಮೈಸೂರಿನ ಮಹಾರಾಜ ಕೃಷ್ಣರಾಜ ಒಡೆಯರ್‌ ಅವರಿಂದ 1937ರಲ್ಲಿ ಲೋಕಾರ್ಪಣೆಯಾದ ಈ ಆಸ್ಪತ್ರೆಯು 80 ವರ್ಷಗಳ ಭವ್ಯ ಇತಿಹಾಸ ಹೊಂದಿದೆ. ಇತರೆ ಸರ್ಕಾರಿ ಆಸ್ಪತ್ರೆಗಳಂತೆಯೇ ಹಿಂದೆ ಮೂಲಸೌಕರ್ಯ ಸಮಸ್ಯೆಯಿಂದ ನಲುಗಿದ್ದ ಆಸ್ಪತ್ರೆಯು ಮೂರ್ನಾಲ್ಕು ವರ್ಷಗಳಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ.

ಸಕಲ ವೈದ್ಯಕೀಯ ಸೇವೆಗಳನ್ನು ಒಳಗೊಂಡಿರುವ ಈ ಆಸ್ಪತ್ರೆಯು ಸರ್ಕಾರಿ ಆಸ್ಪತ್ರೆಗಳಿಗೆ ಮಾದರಿಯಾಗಿದೆ. ಗುಣಮಟ್ಟದ ವೈದ್ಯಕೀಯ ಸೇವೆ, ಸ್ವಚ್ಛತೆ, ಔಷಧಗಳ ಲಭ್ಯತೆ, ವೈದ್ಯಕೀಯ ಸಿಬ್ಬಂದಿ, ಸುಸಜ್ಜಿತ ವಾರ್ಡ್‌ಗಳು ಹಾಗೂ ಮೂಲಸೌಲಭ್ಯದ ವಿಷಯದಲ್ಲಿ ಆಸ್ಪತ್ರೆಯು ಹೆಚ್ಚಿನ ಪ್ರಗತಿ ಸಾಧಿಸುವ ಮೂಲಕ ಖಾಸಗಿ ಆಸ್ಪತ್ರೆಗಳಿಗೆ ಸೆಡ್ಡು ಹೊಡೆಯುತ್ತಿದೆ. ನಗರ ಹಾಗೂ ಜಿಲ್ಲೆಯ ವಿವಿಧ ಭಾಗದ ರೋಗಿಗಳು ಖಾಸಗಿ ಆಸ್ಪತ್ರೆಗಳ ಬದಲಿಗೆ ಈ ಆಸ್ಪತ್ರೆಯತ್ತ ಮುಖ ಮಾಡಿದ್ದಾರೆ.

400 ಹಾಸಿಗೆ ಸಾಮರ್ಥ್ಯದ ಈ ಆಸ್ಪತ್ರೆಯಲ್ಲಿ ತಿಂಗಳಿಗೆ ಸುಮಾರು 1,500 ಹೊರ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ತಿಂಗಳಿಗೆ ಸರಾಸರಿ 480 ಹೆರಿಗೆಗಳಾಗುತ್ತಿವೆ. 24 ತಾಸು ಕಾರ್ಯನಿರತವಾಗಿರುವ ರಕ್ತನಿಧಿ ಕೇಂದ್ರವಿದೆ. ಒಳ ರೋಗಿಗಳ ಪ್ರತಿ ವಾರ್ಡ್‌ನಲ್ಲೂ ಸ್ನಾನಕ್ಕೆ ಬಿಸಿ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ₹ 85 ಲಕ್ಷ ಅಂದಾಜು ವೆಚ್ಚದಲ್ಲಿ ರಕ್ತ ವಿದಳನ ಘಟಕ ಆರಂಭಿಸುವ ಪ್ರಯತ್ನ ನಡೆದಿದೆ.

ಎಂಆರ್‌ಐ ಸ್ಕ್ಯಾನಿಂಗ್‌: ಆಸ್ಪತ್ರೆಯಲ್ಲಿ ಸುಮಾರು ₹ 7 ಕೋಟಿ ವೆಚ್ಚದಲ್ಲಿ ಎಂಆರ್‌ಐ ಸ್ಕ್ಯಾನಿಂಗ್‌ ಸೇವೆಯ ಆರಂಭಕ್ಕೆ ಸಿದ್ಧತೆ ನಡೆದಿದೆ. ರಾಜ್ಯದ ಬೆರಳೆಣಿಕೆ ಜಿಲ್ಲಾಸ್ಪತ್ರೆಗಳಲ್ಲಿ ಈ ಸೇವೆ ಲಭ್ಯವಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಎಂಆರ್‌ಐ ಸ್ಕ್ಯಾನಿಂಗ್‌ಗೆ ಕನಿಷ್ಠ ₹ 8 ಸಾವಿರ ದರವಿದೆ. ಇನ್ನು ಸಿ.ಟಿ ಸ್ಕ್ಯಾನಿಂಗ್‌ಗೆ ಕನಿಷ್ಠ ₹ 3,500 ದರವಿದೆ. ಬಡ ರೋಗಿಗಳಿಗೆ ದುಬಾರಿ ದರ ಪಾವತಿಸಿ ಈ ಸೇವೆಗಳನ್ನು ಪಡೆಯುವುದು ನಿಜಕ್ಕೂ ಕಷ್ಟ.

ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿ ಇತ್ತೀಚೆಗೆ ಸಿ.ಟಿ ಸ್ಕ್ಯಾನಿಂಗ್‌ ಸೇವೆ ಆರಂಭವಾಗಿದ್ದು, ರೋಗಿಗಳಿಗೆ ಕೇವಲ ₹ 5ಕ್ಕೆ ಈ ಸೇವೆ ನೀಡಲಾಗುತ್ತಿದೆ. ಜತೆಗೆ ಡಯಾಲಿಸಿಸ್‌, ಎಕ್ಸ್‌–ರೇ, ರಕ್ತ ಪರೀಕ್ಷೆಯನ್ನು ಉಚಿತವಾಗಿ ಮಾಡಲಾಗುತ್ತಿದೆ. ಎಂಆರ್‌ಐ ಸ್ಕ್ಯಾನಿಂಗ್‌ ಸೇವೆ ಆರಂಭವಾದರೆ ಬಡ ರೋಗಿಗಳಿಗೆ ಮತ್ತಷ್ಟು ಅನುಕೂಲವಾಗುತ್ತದೆ.

ಔಷಧೀಯ ಸಸ್ಯೋದ್ಯಾನ: ಆಸ್ಪತ್ರೆ ಆವರಣದಲ್ಲಿ ಇತ್ತೀಚೆಗೆ ಔಷಧೀಯ ಸಸ್ಯೋದ್ಯಾನ ಮಾಡಲಾಗಿದ್ದು, ಔಷಧೀಯ ಗುಣವುಳ್ಳ 60ಕ್ಕೂ ಹೆಚ್ಚು ಸಸ್ಯಗಳನ್ನು ಬೆಳೆಸಲಾಗಿದೆ. ಆ ಸಸ್ಯಗಳ ಹೆಸರು, ಅವುಗಳ ಔಷಧೀಯ ಗುಣ ಮತ್ತು ವೈದ್ಯಕೀಯ ಮಹತ್ವದ ವಿವರವನ್ನು ಒಳಗೊಂಡ ಫಲಕಗಳನ್ನು ಅಳವಡಿಸಲಾಗಿದೆ.

ಒಳ ರೋಗಿಗಳಿಗೆ ದಿನನಿತ್ಯ ಮಧ್ಯಾಹ್ನ ಮತ್ತು ರಾತ್ರಿ ಉಚಿತವಾಗಿ ಊಟ ಕೊಡಲಾಗುತ್ತಿದೆ. ಆಸ್ಪತ್ರೆಯ ಅಡುಗೆ ಕೋಣೆಯಲ್ಲಿನ ತರಕಾರಿ ಸಿಪ್ಪೆ ಮತ್ತು ಸೊಪ್ಪಿನ ತ್ಯಾಜ್ಯವನ್ನು ಬೀದಿಗೆಸೆದು ವ್ಯರ್ಥ ಮಾಡುತ್ತಿಲ್ಲ. ಬದಲಿಗೆ ಆ ತ್ಯಾಜ್ಯದಿಂದ ಆಸ್ಪತ್ರೆಯಲ್ಲೇ ಎರೆ ಹುಳು ಗೊಬ್ಬರ ಉತ್ಪಾದಿಸಿ, ಸಸ್ಯೋದ್ಯಾನಕ್ಕೆ ಬಳಸಲಾಗುತ್ತಿದೆ.

ಎನ್‌ಎನ್‌ಎಫ್ ಮಾನ್ಯತೆ: ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಹಾಗೂ ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) ಮತ್ತು ಬೆಂಗಳೂರಿನ ಸೆಂಟ್‌ ಜಾನ್ಸ್ ಆಸ್ಪತ್ರೆ ಸಹಯೋಗದೊಂದಿಗೆ ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿ ಮಕ್ಕಳ ಆರೈಕೆಗಾಗಿ ಸುಸಜ್ಜಿತ ತೀವ್ರ ನಿಗಾ ಘಟಕ ಆರಂಭಿಸಲಾಗಿದೆ. ಈ ಘಟಕದಲ್ಲಿ ತಾಯಿ ಮತ್ತು ಮಗುವಿಗೆ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ.

ನವಜಾತ ಶಿಶುಗಳ ಆರೈಕೆಗಾಗಿ ಆಸ್ಪತ್ರೆಯಲ್ಲಿ ಕಾಂಗರೊ ಮದರ್ ಕೇರ್‌ ಘಟಕ ತೆರೆಯಲಾಗಿದೆ. ಆಸ್ಪತ್ರೆಯು ಮಕ್ಕಳ ಆರೈಕೆ ಮತ್ತು ಸ್ವಚ್ಛತೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಆಸ್ಪತ್ರೆಯ ಮಕ್ಕಳ ಘಟಕಕ್ಕೆ 2017ರ ಮಾರ್ಚ್‌ನಲ್ಲಿ ರಾಷ್ಟ್ರೀಯ ನವಜಾತ ಶಿಶುಪಾಲನಾ ಸಂಸ್ಥೆಯ (ಎನ್‌ಎನ್‌ಎಫ್) ಮಾನ್ಯತೆ ಸಿಕ್ಕಿದೆ. ಮುಖ್ಯವಾಗಿ ಹೆರಿಗೆಗಳ ಪ್ರಮಾಣದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಆಸ್ಪತ್ರೆಯು ಖಾಸಗಿ ಆಸ್ಪತ್ರೆಗಳಿಗೆ ತೀವ್ರ ಪೈಪೋಟಿ ನೀಡುತ್ತಿದೆ. ಸ್ವಚ್ಛ ಭಾರತ ಅಭಿಯಾನದಡಿ ಆಸ್ಪತ್ರೆಗೆ ₹ 3 ಲಕ್ಷ ಬಹುಮಾನ ದೊರೆತಿದೆ.

ಸ್ವಚ್ಛತೆ, ಶೌಚಾಲಯ ಸೌಲಭ್ಯ, ರೋಗಿಗಳ ಆರೈಕೆ, ಸಿಬ್ಬಂದಿಯ ಸ್ಪಂದನೆ, ಕುಡಿಯುವ ನೀರು, ವಿಶ್ರಾಂತಿ ಹೀಗೆ ಹತ್ತಾರು ವಿಭಾಗಗಳಲ್ಲಿ ಅತ್ಯುತ್ತಮ ನಿರ್ವಹಣೆ ತೋರುವ ಸರ್ಕಾರಿ ಆಸ್ಪತ್ರೆಗಳಿಗೆ ಕೇಂದ್ರ ಸರ್ಕಾರ ನೀಡುವ ₹ 50 ಲಕ್ಷ ಮೊತ್ತದ ಕಾಯಕಲ್ಪ ಪ್ರಶಸ್ತಿಗೆ ಈ ಬಾರಿ ಎಸ್‌ಎನ್‌ಆರ್‌ ಆಸ್ಪತ್ರೆ ಆಯ್ಕೆಯಾಗುವ ನಿರೀಕ್ಷೆ ಗರಿಗೆದರಿದೆ.

*

ಬಹುತೇಕ ಎಲ್ಲಾ ವೈದ್ಯಕೀಯ ಸೇವೆಗಳು ಆಸ್ಪತ್ರೆಯಲ್ಲಿ ಲಭ್ಯವಿವೆ. ಸದ್ಯದಲ್ಲೇ ಎಂಆರ್ಐ ಸ್ಕ್ಯಾನಿಂಗ್‌ ಸೇವೆ ಆರಂಭಿಸಲಾಗುತ್ತದೆ.

–ಡಾ.ಎಚ್‌.ಆರ್‌.ಶಿವಕುಮಾರ್‌, ಜಿಲ್ಲಾ ಶಸ್ತ್ರಚಿಕಿತ್ಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry