ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯುವಕರು ಮೋದಿ ಸರ್ಕಾರ ಕಿತ್ತೊಗೆಯಲಿ’

ಕೇಂದ್ರ ಸರ್ಕಾರದ ವಿರುದ್ಧ ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ಬಿ.ಕೆ.ಚಂದ್ರಶೇಖರ್‌ ಟೀಕೆ
Last Updated 1 ಜನವರಿ 2018, 10:00 IST
ಅಕ್ಷರ ಗಾತ್ರ

ಮೈಸೂರು: ‘ದೇಶವನ್ನು ಪ್ರಗತಿಪಥದತ್ತ ಕೊಂಡೊಯ್ಯಲು ವಿಫಲವಾದ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಅದನ್ನು ಮರೆಮಾಚಲು ಭಯೋತ್ಪಾದನೆಯ ಉಚ್ಛಾಟನೆ ಎಂಬ ನಾಟಕ ಶುರುಮಾಡಿದೆ’ ಎಂದು ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ಬಿ.ಕೆ.ಚಂದ್ರಶೇಖರ್‌ ಆರೋಪಿಸಿದರು.

‘ಅಧಿಕಾರಕ್ಕೆ ಬರುವ ಮುಂಚೆ ತಮ್ಮ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದ ಅಭಿವೃದ್ಧಿಗಳನ್ನು ಅನುಷ್ಠಾನಗೊಳಿಸಲು ಬಿಜೆಪಿ ವಿಫಲವಾಗಿದೆ. ನೋಟು ರದ್ದತಿ, ಜಿಎಸ್‌ಟಿ ಕಾಯ್ದೆಗಳು ದೊಡ್ಡ ವೈಫಲ್ಯ. ಅಂತೆಯೇ, ಯುವಕರಿಗೆ ಉದ್ಯೋಗ ಸೃಷ್ಟಿಸಲು ಸಾಧ್ಯವಾಗದೆ ಇರುವುದು, ಕೃಷಿ ಕ್ಷೇತ್ರವನ್ನು ಬೆಳೆಸದೆ ಇರುವುದು ದೊಡ್ಡ ಹಿನ್ನಡೆ. ಇದನ್ನು ಮರೆಮಾಚಲು ಭಯೋತ್ಪಾದನೆಯನ್ನು ಗುರಾಣಿ ಮಾಡಿಕೊಳ್ಳುವುದು ದೊಡ್ಡ ನಗೆಪಾಟಲಿನ ವಿಚಾರ’ ಎಂದು ಟೀಕಿಸಿದರು.

‘ಹಿಂದೂ ಮೂಲಭೂತವಾದಿ ಭಯೋತ್ಪಾದನೆ ಭಾರತದಲ್ಲಿ ಹೆಚ್ಚಿರುವ ಬಗ್ಗೆ ಇಡೀ ವಿಶ್ವವೇ ಆತಂಕ ವ್ಯಕ್ತಪಡಿಸಿದೆ. ಇಲ್ಲಿ ವಿಚಾರವಾದಿಗಳ ಹತ್ಯೆಗಳಾಗಿವೆ. ಮುಕ್ತ ಚಿಂತನೆಯ ಮೇಲೆ ಹಲ್ಲೆ ನಡೆದಿದೆ. ಉತ್ತರ ಭಾರತದಲ್ಲಿ ಕಾನೂನು, ಸುವ್ಯವಸ್ಥೆಯೇ ಹಾಳಾಗಿದೆ. ಹೀಗಿರುವಾಗ ಭಯೋತ್ಪಾದನೆಯ ವಿರುದ್ಧ ಭಾರತವಿದೆ ಎಂದು ಹೇಳಿ ಕೊಂಡರೆ ಅದು ಮರ್ಯಾದೆ ತರುವ ವಿಚಾರವೇ’ ಎಂದು ಕುಟುಕಿದರು.

ಉದ್ಯೋಗ ಕಳೆದುಕೊಳ್ಳುವ ಅಪಾಯ:
‘ಭಾರತದ ಲ್ಲಿನ ಹಿಂದುತ್ವ ಹೇರಿಕೆಯ ಧರ್ಮ ರಾಜಕಾರಣವನ್ನು ಗಮನಿಸಿ ರುವ ಪಾಶ್ಚಿಮಾತ್ಯ ಮಾಧ್ಯಮಗಳು, ಭಾರತದಲ್ಲಿ ಅಭಿವೃದ್ಧಿ ಕಷ್ಟ ಎಂದು ಹೇಳಿವೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಮೋದಿ ಎಷ್ಟು ಅಪ್ಪಿಕೊಂಡರೂ ಪ್ರಯೋಜನವಾಗಿಲ್ಲ. ಟ್ರಂಪ್‌ ಮನವೊಲಿಸಲು ಆಗಿಲ್ಲ. ಅಮೆರಿಕದ ಕಠಿಣ ವೀಸಾ ನೀತಿಯನ್ನು ಬದಲಿಸುವುದು ಅಸಾಧ್ಯ. ಅಮೆರಿಕದಲ್ಲಿ ವಿದೇಶಿಗಳಿಗೆ ಕೆಲಸ ನೀಡುವುದಿಲ್ಲ ಎಂದು ಟ್ರಂಪ್ ಹೇಳಿಯೇ ಬಿಟ್ಟಿದ್ದಾರೆ. ಅಮೆರಿಕದಲ್ಲಿರುವ ಶೇ 70ರಷ್ಟು ಉದ್ಯೋಗಿಗಳು ಭಾರತೀಯರೇ. ಹೀಗಿ ರುವಾಗ ಮೋದಿಯನ್ನು ಮುಂದಿನ ಚುನಾವಣೆಯಲ್ಲಿ ಬೆಂಬಲಿಸಬೇಕೇ ಬೇಡವೇ ಎಂದು ಯುವಕರು ಚಿಂತಿಸಬೇಕಲ್ಲವೇ’ ಎಂದು ಪ್ರಶ್ನಿಸಿದರು.

‘ಗುಜರಾತ್‌ನಲ್ಲಿ ಸಂಪೂರ್ಣ ಸ್ವಯಂಚಾಲಿತ ಕೈಗಾರಿಕೆಗಳನ್ನು ಸ್ಥಾಪಿಸ ಲಾಗುತ್ತಿದೆ. ಇದರ ಮೂಲಕ ಲಕ್ಷಾಂತರ ಕಾರ್ಮಿಕರ ಕೆಲಸ ಕಸಿದುಕೊಂಡಂತೆ ಆಗುತ್ತದೆ. ಇದು ದೇಶದ ಎಲ್ಲೆಡೆ ಭವಿಷ್ಯದಲ್ಲಿ ವಿಸ್ತರಣೆಗೊಳ್ಳುತ್ತದೆ. ಎಲ್ಲವೂ ಸ್ವಯಂಚಾಲಿತವಾದರೆ ಉದ್ಯೋಗ ಕಳೆದುಕೊಳ್ಳುವ ಯುವಕರು ಭವಿಷ್ಯದಲ್ಲಿ ಬೀದಿಗೆ ಬರಬೇಕಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಅದಾನಿ, ಅಂಬಾನಿಗಳಂತಹ ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದು ಪಕ್ಷಪಾತಿ ರಾಜಕಾರ ಣವೇ ಅಲ್ಲವೇ? ಇದಕ್ಕೆ ಹಿನ್ನೆಲೆಯಾಗಿ, 2014ರ ಚುನಾವಣೆಯನ್ನು ಮೆಲುಕು ಹಾಕಬೇಕು, ಅತಿ ತೀಕ್ಷ್ಣ ಬಂಡವಾಳಶಾಹಿ ಪ್ರಾಯೋಜಿತ ಪ್ರಚಾರ ನಡೆದಿದ್ದನ್ನು ಸ್ಮರಿಸಬೇಕು. ಹಣದ ಪ್ರಾಧಾನ್ಯತೆ ಪ್ರಚಾರದಲ್ಲಿ ಕೆನ್ನೆಗೆ ಬಾರಿಸುವಂತೆ ಇತ್ತು. ಡಿಜಿಟಲ್‌ ಮಾಧ್ಯಮಗಳ ಮೂಲಕ, ವಿಮಾನಗಳ ಮೂಲಕ ಪ್ರಚಾರ ನಡೆಸಿದ್ದು ನಿಬ್ಬೆರಗಾಗಿಸಿತ್ತು. ಬೇರೆ ಪಕ್ಷಗಳಿಗೆ ಇಂತಹ ಅವಕಾಶವೇ ಇರಲಿಲ್ಲ. ಅದರ ಋಣ ತೀರಿಸಲು ಮೋದಿ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ. ಇದರಲ್ಲಿ ಯಾವುದೇ ಸಂದೇಹ ಬೇಡ, ಈಗಿನ ಅವರ ಕೈಗಾರಿಕಾ ಪರ ನಿಲುವುಗಳು ಇದನ್ನು ಸಾಬೀತುಪಡಿಸುತ್ತವೆ’ ಎಂದು ವಿವರಿಸಿದರು.

‘ಯುವಕರ ಸ್ವಾತಂತ್ರ್ಯ ಕಿತ್ತುಕೊಳ್ಳ ಹೊರಟಿರುವ ಬಿಜೆಪಿಯನ್ನು ಯುವಕರೇ ಕಿತ್ತೊಗೆಯಬೇಕು. 2014ರ ಚುನಾವಣೆಯ ಪ್ರಣಾಳಿಕೆಯನ್ನು ಇದಕ್ಕೆ ಪೂರಕವಾಗಿ ಉಲ್ಲೇಖಿಸಬೇಕು. ಪ್ರಣಾಳಿಕೆಯಲ್ಲಿ ಬಾಲಗಂಧಾದರ ತಿಲಕ್‌ ಅವರಿಂದ ಪ್ರೇರೇಪಿತರಾದ ಮಹಾತ್ಮ ಗಾಂಧಿ, ಬೋಸ್‌ ಹಾಗೂ ಇತರರು ಎಂದು ಬರೆಯಲಾಗಿದೆ. ಆದರೆ, ಜವಾಹರಲಾಲ್ ನೆಹರೂ ಹಾಗೂ ಬಿ.ಆರ್.ಅಂಬೇಡ್ಕರ್‌ ಅವರ ಹೆಸರನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ. ಇದೇ ಅವರ ಮನಸ್ಥಿತಿ ಕಲುಷಿತ ಎಂದು ತೋರಿಸುತ್ತದೆ’ ಎಂದು ಉಲ್ಲೇಖಿಸಿದರು.

***
ವೈಯಕ್ತಿಕ ಮಟ್ಟದಲ್ಲಿ ಭ್ರಷ್ಟಾಚಾರ ನಡೆದಿಲ್ಲ ಎನ್ನುವುದನ್ನು ಮೋದಿ ಸರ್ಕಾರದ ಸಾಧನೆ ಎನ್ನಬಹುದು. ಆದರೆ, ಅದಾನಿ, ಅಂಬಾನಿಗಳಂತಹ ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದನ್ನು ಭ್ರಷ್ಟಾಚಾರ ಎನ್ನಲೇಬೇಕು
- ಪ್ರೊ.ಬಿ.ಕೆ.ಚಂದ್ರಶೇಖರ್‌
ಕಾಂಗ್ರೆಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT