ಸೋಮವಾರ, ಜೂಲೈ 6, 2020
21 °C

ಕಾಲುವೆ ನೀರಿನ ಕೊರತೆ ನಡುವೆ ಭತ್ತ ನಾಟಿ ಮಾಡಿದ ರೈತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಲುವೆ ನೀರಿನ ಕೊರತೆ ನಡುವೆ ಭತ್ತ ನಾಟಿ ಮಾಡಿದ ರೈತರು

ಶಹಾಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ನಾರಾಯಣಪುರ ಎಡದಂಡೆ ಕಾಲುವೆ ನೀರಿನ ಕೊರತೆ ನಡುವೆಯೂ ಬೆಳೆ ಪದ್ಧತಿ ಉಲ್ಲಂಘಿಸಿ ಹಿಂಗಾರು ಹಂಗಾಮಿನ ಭತ್ತ ನಾಟಿ ಕಾರ್ಯ ಮುಕ್ತಾಯ ಹಂತಕ್ಕೆ ಬಂದಿದೆ.

ಹಿಂಗಾರು ಹಂಗಾಮಿನ ಬೆಳೆಗೆ ಮಾರ್ಚ್ 28ರವೆಗೆ ಮಾತ್ರ ಕಾಲುವೆಗೆ ನೀರು ಹರಿಸಲಾಗುವುದು. ಲಘು ಬೆಳೆ ಬೆಳೆಯಬೇಕು. ವಾರ ಬಂದಿ ನಿಯಮ ಪದ್ದತಿಯಂತೆ (12 ದಿನ ಕಾಲುವೆಗೆ ನೀರು ಹರಿಸುವುದು 10 ದಿನ ನೀರು ಸ್ಥಗಿತಗೊಳಿಸುವುದು) ನೀರು ಹರಿಸುವ ನಿರ್ಣಯವವನ್ನು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಆದರೆ ಇದನ್ನು ಲೆಕ್ಕಿಸದ ರೈತರು ಭತ್ತ ನಾಟಿ ಮಾಡಿದ್ದಾರೆ. ಇದರಿಂದ ಕಾಲುವೆ ಕೊನೆ ಭಾಗದ ರೈತರಿಗೆ ನೀರಿನ ಸಮಸ್ಯೆ ಉಂಟಾಗುತ್ತದೆ ಎಂದು ಕೃಷ್ಣಾ ಅಚ್ಚುಕಟ್ಟು ಪ್ರದೇಶ ಭೂಮಿ ಉಳಿಸಿ ಹೋರಾಟ ಸಮಿತಿ ಸಂಚಾಲಕ ಅಶೋಕ ಮಲ್ಲಾಬಾದಿ ಆಪಾದಿಸಿದರು.

ವಾರಬಂದಿ ನಿಯಮ ಜಾರಿಗೆ ಬಂದರೆ ಭತ್ತಕ್ಕೆ ಸಮರ್ಪಕವಾಗಿ ನೀರು ದೊರೆಯುವುದಿಲ್ಲ. ಅದಕ್ಕಾಗಿ ರೈತರು ಉಪ ಕಾಲುವೆ ಸೀಳಿ ಅಕ್ರಮವಾಗಿ ಪೈಪ್ ಅಳವಡಿಸಿಕೊಂಡು ಜಮೀನಿನಲ್ಲಿ ಕೃತಕ ಕೆರೆ ನಿರ್ಮಿಸಿ ನೀರು ಸಂಗ್ರಹಿಸಿಕೊಂಡಿದ್ದಾರೆ ಎಂದು ದಲಿತ ಸೇನೆಯ ತಾಲ್ಲೂಕು ಸಂಚಾಲಕ ಬಿ.ಎಚ್.ಶರಣುರಡ್ಡಿ ಆರೋಪಿಸಿದರು.

ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ ನೀರಿನ ಬೇಡಿಕೆ ಹೆಚ್ಚಾದಂತೆ ಕಾಲುವೆ ಕೆಳ ಭಾಗದ ರೈತರಿಗೆ ನೀರು ದೊರಕದೆ ಹೈರಾಣಾಗುತ್ತಾರೆ. ನ್ಯಾಯಬದ್ದ ನೀರಿನ ಹಕ್ಕನ್ನು ಪಡೆದ ರೈತರನ್ನು ಕಾಲುವೆ ನೀರಿನಿಂದ ವಂಚಿತ

ರನ್ನಾಗಿ ಮಾಡುವುದು ಪ್ರತಿವರ್ಷ ಸಾಮಾನ್ಯವಾಗಿದೆ. ನೀರಿಗಾಗಿ ರೈತರು ಕೃಷ್ಣಾ ಭಾಗ್ಯ ಜಲ ನಿಗಮದ ಭೀಮರಾಯನಗುಡಿ ಕಚೇರಿ ಮುಂದೆ ಪ್ರತಿಭಟನೆ ನಡೆಸುವ ಮುನ್ನವೆ ಜಿಲ್ಲಾಧಿಕಾರಿ ಗಮನಹರಿಸಿ ಅನಧಿಕೃತವಾಗಿ ನೀರು ಪಡೆಯುವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕಾಲುವೆ ಜಾಲದ ಕೆಳಭಾಗದ ರೈತರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.