ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣು ಮಕ್ಕಳ ಗ್ಯಾಂಗ್‌ ವಾರ್'

Last Updated 1 ಜನವರಿ 2018, 19:30 IST
ಅಕ್ಷರ ಗಾತ್ರ

‘ಕೌರವರ ನಿರ್ನಾಮ ಆಗೋತನಕ ದ್ರೌಪದಿ ಕೂದಲು ಕಟ್ಟಲಿಲ್ಲ. ಹೆಣ್ಣಿನ ಮೇಲೆ ದಬ್ಬಾಳಿಕೆ ನಿಲ್ಲೋತನಕ ಗುಲಾಬಿ ಗ್ಯಾಂಗ್‌ವಾರ್ ನಿಲ್ಲೋದಿಲ್ಲ. ಇದು ಅಸಹಾಯಕರೆಂದುಕೊಂಡಿದ್ದ ಹೆಣ್ಣುಮಕ್ಕಳ ಗ್ಯಾಂಗ್‌ವಾರ್’ ಇದು ಗುಲಾಬಿಬಣ್ಣದ ಸೀರೆಯುಟ್ಟಿರುವ ಮಹಿಳೆಯರ ಘೋಷಣೆ.

ಉತ್ತರ ಪ್ರದೇಶದ ಬುಂದೇಲಖಂಡ್ ಜಿಲ್ಲೆ ಬಡೋಸಾ ಗ್ರಾಮದಲ್ಲಿರುವ ತಂಡ ಇದು. ಮನೆಗಳಲ್ಲಿ ಹೆಂಗಸರ ಮೇಲೆ ನಡೆಯುತ್ತಿರುವ ಕೌಟುಂಬಿಕ ದೌರ್ಜನ್ಯಗಳ ವಿರುದ್ಧ ನಿಂತವರು ಈ ತಂಡದ ಸದಸ್ಯೆಯರಾಗಿದ್ದಾರೆ. ಗುಲಾಬಿ ಬಣ್ಣದ ಸೀರೆ ಇವರ ಸಮವಸ್ತ್ರ.

ಸಂಪತ್‌ಪಾಲ್‌ ದೇವಿ ಅವರ ಸ್ನೇಹಿತೆಯ ಮನೆಯಲ್ಲಿ ಪ್ರತಿದಿನ ರಣರಂಗ. ಆಕೆಯ ಗಂಡ ಕುಡಿದು ಬಂದು ಹೆಂಡತಿಯನ್ನು ಹೊಡೆಯುತ್ತಿರುತ್ತಾನೆ. ನೆರೆಹೊರೆಯವರ ಸಹಾಯದಿಂದ ಈ ದೌಜ್ಯನ್ಯಕ್ಕೆ ಕಡಿವಾಣ ಹಾಕುವಲ್ಲಿ ಸಂಪತ್‌ಪಾಲ್ ದೇವಿ ಯಶಸ್ವಿಯಾಗುತ್ತಾರೆ. ನಂತರದ ದಿನಗಳಲ್ಲಿ 16ರಿಂದ 60 ವರ್ಷಗಳ ವಯಸ್ಸಿನ ಮಹಿಳೆಯರು ‘ಗುಲಾಬಿ ಗ್ಯಾಂಗ್’ ತಂಡ ಕಟ್ಟಿಕೊಳ್ಳುತ್ತಾರೆ.

ಈ ಗ್ಯಾಂಗ್ ಬಗ್ಗೆ ತಿಳಿದುಕೊಂಡ ಕನ್ನಡದ ‘ರಂಗಪಯಣ’ ರಂಗತಂಡವು ರಂಗಭೂಮಿಯಲ್ಲಿ ಈ ಸಾಧನೆಯನ್ನು ಪ್ರದರ್ಶಿಸಬೇಕು ಎಂಬ ಕನಸು ಕಂಡಿದ್ದರು. ಈ ಬಗ್ಗೆ ತಿಳಿದುಕೊಂಡ ರಂಗಕರ್ಮಿ ಪ್ರವೀಣ್‌ ಸೂಡ ಅವರು ಗುಲಾಬಿ ಗ್ಯಾಂಗ್ ಕುರಿತು ವಿವರಗಳನ್ನು ಸಂಗ್ರಹಿಸಿ, ಸಂಪತ್ ಪಾಲ್ ದೇವಿ ಅವರೊಡನೆ ಕೆಲ ದಿನ ಒಡನಾಡಿದರು. ಇವರ ಪರಿಶ್ರಮದಿಂದ ಕನ್ನಡಕ್ಕೆ ‘ಗುಲಾಬಿ ಗ್ಯಾಂಗ್’ ಹೆಸರಿನ ನಾಟಕ ಬಂತು. ನಾಟಕಕ್ಕೆ ಉತ್ತರ ಕರ್ನಾಟಕದ ಸೊಗಡು ಕೊಟ್ಟವರು ನಿರ್ದೇಶಕ ರಾಜಗುರು ಹೊಸಕೋಟೆ.

‘ಮಾಸ್ ತಲುಪುವಂಥ ನಾಟಕಗಳು ಅಂದರೆ ನಂಗೆ ಇಷ್ಟ. ಗುಲಾಬಿ ಗ್ಯಾಂಗ್ ಕೂಡ ಅಂಥದ್ದೇ ನಾಟಕ. ಗ್ಯಾಂಗಿನ ಹೆಸರು ನನ್ನನ್ನು ಆಕರ್ಷಿಸಿತು. ನಂತರದ ದಿನಗಳಲ್ಲಿ ಗ್ಯಾಂಗ್‌ನ ಚಟುವಟಿಕೆಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋದೆ. ಇಂದು ಕರ್ನಾಟಕದಲ್ಲಿಯೂ ಇಂಥ ದಿಟ್ಟ ಮಹಿಳಾ ಗ್ಯಾಂಗ್ ಅಗತ್ಯ’ ಎನ್ನುತ್ತಾರೆ ರಾಜಗುರು ಹೊಸಕೋಟೆ.

‘ಈ ಮೊದಲು ನಾವು ‘ಚಂದ್ರಗಿರಿಯ ತೀರದಲ್ಲಿ’ ನಾಟಕ ಮಾಡಿದ್ದೆವು. ಇದು ಸಾಂಪ್ರದಾಯಿಕ ಕುಟುಂಬಗಳ ಹಿನ್ನೆಲೆಯ ಹೆಣ್ಣಿನ ತವಕ ತಲ್ಲಣಗಳು, ಸಹಿಸಿಕೊಂಡು ಹೋಗುವ ವ್ಯಕ್ತಿತ್ವದ ಬಗೆಗಿನ ಕಥಾವಸ್ತುವನ್ನು ಒಳಗೊಂಡಿತ್ತು. ಆದರೆ ಗುಲಾಬಿ ಗ್ಯಾಂಗ್ ಇದಕ್ಕೆ ತದ್ವಿರುದ್ಧ. ಕಂಡದ್ದನ್ನು ಕಂಡ ಹಾಗೆ, ತಪ್ಪಿದ್ದರೆ ಅಲ್ಲಿಯೇ ಅದನ್ನು ಧೈರ್ಯವಾಗಿ ಹೇಳುವ ಸ್ವಭಾವದ ಹೆಣ್ಣುಮಗಳ ಕಥೆಯಿದು. ಮಹಿಳಾಪರ ನಾಟಕಗಳ ಮೂಲಕ ಮಹಿಳಾ ಚಳವಳಿಗೆ ಕೊಡುಗೆ ನೀಡಬೇಕು ಎಂಬುದು ನನ್ನ ಆಶಯ. ಈ ನಿಟ್ಟಿನಲ್ಲಿ ಗುಲಾಬಿ ಗ್ಯಾಂಗ್ ನನ್ನೊಳಗೆ ಮಾತ್ರವಲ್ಲ, ಈ ನಾಟಕಕ್ಕಾಗಿ ಕೆಲಸ ಮಾಡಿದ ಎಲ್ಲರಿಗೂ ಧೈರ್ಯ ತುಂಬಿದೆ’ ಎನ್ನುತ್ತಾರೆ ರಂಗಪಯಣದ ರೂವಾರಿ ನಯನ ಸೂಡ.

ಶ್ರದ್ಧಾ, ಮಾದಾರ ಚೆನ್ನಯ್ಯ, ಭೂಮಿ, ಒಂದಾನೊಂದು ಕಾಲದಲ್ಲಿ ಸೇರಿದಂತೆ ಹಲವು ನಾಟಕಗಳನ್ನು ಈ ತಂಡ ಪ್ರದರ್ಶಿಸಿದೆ. ಬೆಂಗಳೂರು, ಕುಂದಾಪುರ, ಮಂಜೇಶ್ವರ ಹಾಗೂ ದೆಹಲಿಯಲ್ಲಿ ಈ ನಾಟಕ ಪ್ರದರ್ಶನ ಕಂಡಿದೆ. ಕರ್ನಾಟಕದ ಪ್ರತಿ ಹಳ್ಳಿಗೂ ಈ ನಾಟಕದ ಆಶಯ ತಲುಪಿಸುವ ಆಶಯವನ್ನು ರಂಗತಂಡ ಹೊಂದಿದೆ.
***
ನಾಟಕ: ಗುಲಾಬಿ ಗ್ಯಾಂಗ್
ರಂಗರೂಪ: ಪ್ರವೀಣ್ ಸೂಡ
ನಿರ್ದೇಶನ: ರಾಜಗುರು ಹೊಸಕೋಟೆ
ಪ್ರದರ್ಶನ: ಜನವರಿ 4
ಸಮಯ: ಸಂಜೆ 7
ಸ್ಥಳ: ಕಲಾಗ್ರಾಮ ಸಮುಚ್ಚಯ, ಮಲ್ಲತ್ತಹಳ್ಳಿ.
ಟಿಕೆಟ್‌ ದರ: 70

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT