ನಿಜಾಂಶ ಎಷ್ಟು?

7

ನಿಜಾಂಶ ಎಷ್ಟು?

Published:
Updated:

ಮಹದಾಯಿ ವಿವಾದ ದಿನಗಳೆದಂತೆ ಜಟಿಲಗೊಂಡು ಅನೇಕ ರಾಜಕೀಯ, ಭಾವನಾತ್ಮಕ ಕ್ಲೇಶಗಳಿಗೆ ಕಾರಣವಾಗುತ್ತಿದೆ. ಮಹದಾಯಿ ನದಿಗೆ ಹರಿಯುವ ನೀರಿನಲ್ಲಿ 7.56 ಟಿಎಂಸಿ ಅಡಿಯಷ್ಟು ನೀರನ್ನು ಮಲಪ್ರಭಾಕ್ಕೆ ತಿರುಗಿಸುವುದರಿಂದ ಗೋವಾ ರಾಜ್ಯದ ಕುಡಿಯುವ ನೀರು, ಪರಿಸರ, ಜೀವಜಾಲದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತದೆ ಎಂದು ಗೋವಾ ಆತಂಕ ವ್ಯಕ್ತಪಡಿಸುತ್ತಿದೆ.

ಮಹದಾಯಿಯಲ್ಲಿ 200 ಟಿಎಂಸಿ ಅಡಿಗೂ ಅಧಿಕ ನೀರು ಹರಿಯುತ್ತದೆ ಎಂದು ಹೇಳಲಾಗುತ್ತದೆ. ಅದರಲ್ಲಿ ಬಹಳಷ್ಟು ನೀರು ಸಮುದ್ರ ಸೇರುತ್ತದೆ. ಗೋವಾದಲ್ಲಿ ಬಳಕೆ ಆಗುತ್ತಿರುವ, ಸಮುದ್ರ ಸೇರುತ್ತಿರುವ ನೀರಿನ ಪ್ರಮಾಣ ಎಷ್ಟು? ಸಮುದ್ರಕ್ಕಂತೂ ನೀರಿನ ಕೊರತೆ ಆಗದು. ಹಾಗಾದರೆ ಗೋವಾದ ಆತಂಕ ನೈಜವಾದುದೇ ಅಥವಾ ಭಾವನಾತ್ಮಕವಾದುದೇ ಎಂಬ ಬಗ್ಗೆ ಮೊದಲು ನಿಷ್ಕರ್ಷೆ ಆಗಬೇಕು. ಮಹದಾಯಿ ನ್ಯಾಯಮಂಡಳಿ ಅಥವಾ ಸಂಬಂಧಿಸಿದ ರಾಜ್ಯಗಳ ಸರ್ಕಾರಗಳು ಈ ಬಗ್ಗೆ ಮೊದಲು ತಜ್ಞರಿಂದ ನಿಷ್ಪಕ್ಷಪಾತ ವರದಿ ಪಡೆಯುವುದು ಉಚಿತ.

ದೇಶದಲ್ಲಿ ನೂರಾರು ಅಣೆಕಟ್ಟುಗಳ ಮೂಲಕ ಲಕ್ಷಾಂತರ ಟಿಎಂಸಿ ಅಡಿ ನೀರನ್ನು ತಿರುಗಿಸಿ ಕೃಷಿ, ಕುಡಿಯುವ ನೀರು ಸಹಿತ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತಿದೆ. ಇಲ್ಲದಿದ್ದಲ್ಲಿ ದೇಶದಲ್ಲಿ ಆಹಾರ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ಮಹದಾಯಿ ನದಿಯಿಂದ 7.56 ಟಿಎಂಸಿ ಅಡಿ ನೀರು ತಿರುಗಿಸುವುದರಿಂದ ಆಗುವ ಪ್ರಯೋಜನ, ಸಾಧಕ–ಬಾಧಕಗಳೇನು, ಗೋವಾ ರಾಜ್ಯದ ವಿರೋಧ ಸಮಂಜಸವೇ ಎಂಬುದು ಮುನ್ನೆಲೆಗೆ ಬರಬೇಕಾಗಿದೆ.

ಸಮಸ್ಯೆಗೆ ರಾಜಕೀಯ ಪರಿಹಾರ ಕಷ್ಟಸಾಧ್ಯ ಎಂಬಂತೆ ಗೋಚರಿಸುತ್ತಿದೆ. ಆದ್ದರಿಂದ ನ್ಯಾಯಮಂಡಳಿ ಹೆಚ್ಚು ವಿವೇಚನೆಯಿಂದ, ವಾಸ್ತವಿಕ ನೆಲೆಗಟ್ಟಿನ ಮೇಲೆ ನ್ಯಾಯೋಚಿತ ಪರಿಹಾರವನ್ನು ತ್ವರಿತವಾಗಿ ಕಂಡು ಹಿಡಿಯಬೇಕು. ವಿಳಂಬ ಆದಷ್ಟೂ ಕ್ಲೇಶ, ಕಲಹ ಹೆಚ್ಚುತ್ತಲೇ ಹೋಗುತ್ತವೆ.

–ವೆಂಕಟೇಶ್ ಮಾಚಕನೂರ, ಧಾರವಾಡ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry