ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷಾ ಎಷ್ಟೇ ಸಲ ಬಂದರೂ ಗೆಲ್ಲಲ್ಲ– ಸಿದ್ದರಾಮಯ್ಯ

Last Updated 1 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಎಷ್ಟೇ ಬಾರಿ ಕರ್ನಾಟಕಕ್ಕೆ ಬಂದರೂ ಬಿಜೆಪಿ ಗೆಲ್ಲುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

‘ಬಿಜೆಪಿಯಲ್ಲಿ ಗುಂಪುಗಾರಿಕೆ ಜಾಸ್ತಿಯಾಗಿದೆ. ಯಡಿಯೂರಪ್ಪ ಹೋದಲ್ಲೆಲ್ಲಾ ಟಿಕೆಟ್ ಘೋಷಿಸುತ್ತಿದ್ದಾರೆ ಎಂದು ಅವರ ಪಕ್ಷದವರೇ ಆರೋಪ ಮಾಡಿದ್ದಾರೆ. ಯಾರು ಯಾರಿಗೆ ಆಪ್ತರಿದ್ದರೂ ಟಿಕೆಟ್ ಖಾತ್ರಿ ಮಾಡುವಂತಿಲ್ಲ. ಎಲ್ಲರಿಗೂ ಟಿಕೆಟ್ ನೀಡುವುದು ನಾವು ಎಂದು ಅಮಿತ್ ಷಾ ಎಚ್ಚರಿಸಿದ್ದಾರೆ. ಯಡಿಯೂರಪ್ಪ ರಾಜ್ಯಾಧ್ಯಕ್ಷರಾಗಿದ್ದರೂ ಏನೂ ಮಾತನಾಡದಂತೆ ಬಾಯಿಗೆ ಬೀಗ ಹಾಕಿದ್ದಾರೆ’ ಎಂದು ಅವರು ಗೃಹಕಚೇರಿ ಕೃಷ್ಣಾದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

‘ರಾಜ್ಯ ಸರ್ಕಾರದ ವಿರುದ್ಧ ಆರೋಪಪಟ್ಟಿ ಸಿದ್ಧಪಡಿಸುವುದಾಗಿ ಹೇಳಿದ್ದಾರೆ. ಅವರು ಪಟ್ಟಿ ಸಿದ್ಧಪಡಿಸಲು ಸರ್ಕಾರದ ವಿರುದ್ಧ ಯಾವುದೇ ಆರೋಪಗಳಿಲ್ಲ. ಬುಟ್ಟಿಯಲ್ಲಿ ಹಾವು ಇದೆ ಎಂದು ಬರೀ ಪುಂಗಿ ಊದುವುದೇ ಅವರ ಕೆಲಸ’ ಎಂದು ಲೇವಡಿ ಮಾಡಿದರು.

ನೀರು ಬಿಡುಗಡೆ ಮಾಡಲಿ

‘ಮಹದಾಯಿ ವಿಚಾರದಲ್ಲಿ ತಮ್ಮೊಂದಿಗೆ ಮಾತುಕತೆ ನಡೆಸಲು ಇಷ್ಟವಿಲ್ಲದಿದ್ದರೆ, 7.56 ಟಿಎಂಸಿ ಅಡಿ ನೀರು ಬಿಡುಗಡೆ ಮಾಡಲು ಸಿದ್ಧ ಎಂದು ಗೋವಾ ಮುಖ್ಯಮಂತ್ರಿ ನೇರವಾಗಿ ನ್ಯಾಯ ಮಂಡಳಿಗೇ ಪತ್ರ ಬರೆಯಲಿ’ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.

‘ಡಿ.15ರೊಳಗೆ ಮಹದಾಯಿ ನೀರು ಹರಿಸುವುದಾಗಿ ಯಡಿಯೂರಪ್ಪ ಹೇಳಿದ್ದರು. ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಪ್ರವಾಸ ಮಾಡುವಾಗ ಜನರನ್ನು ಸೇರಿಸಲು ಅವರಿಗೆ ಅದು ಅನಿವಾರ್ಯವಾಗಿತ್ತು. ಅದಕ್ಕಾಗಿ ಗೋವಾ ಮುಖ್ಯಮಂತ್ರಿಗೆ ಪತ್ರ ಬರೆದರು. ಅದಕ್ಕೆ ಪರ್ರಿಕರ್ ಮರಳಿ ಪತ್ರ ಬರೆದು ಇಬ್ಬರೂ ನಾಟಕವಾಡಿದರು’ ಎಂದು ಟೀಕಿಸಿದರು.

‘ಯಡಿಯೂರಪ್ಪ ಅವರಿಗೆ ಗೋವಾ ಮುಖ್ಯಮಂತ್ರಿ ಬರೆದ ಪತ್ರವನ್ನು ನ್ಯಾಯಮಂಡಳಿ ಮುಂದೆ ಸಲ್ಲಿಸಬೇಕು ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಇದು ಸಾಧ್ಯವೇ? ಇದಕ್ಕಿಂತ ನಗೆಪಾಟಲಿನ ವಿಚಾರ ಮತ್ತೊಂದಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಒಬ್ಬ ಮುಖ್ಯಮಂತ್ರಿ ಇನ್ನೊಬ್ಬ ಮುಖ್ಯಮಂತ್ರಿಗೆ ಪತ್ರ ಬರೆಯಬೇಕು. ಅದು ಬಿಟ್ಟು ಸ್ಪಪಕ್ಷದವರಿಗೆ ಬರೆದ ಪತ್ರವನ್ನು ಪರಿಗಣಿಸಲು ಬರುವುದಿಲ್ಲ’ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

* ತ್ರಿವಳಿ ತಲಾಖ್ ನಿಷೇಧ ಮಸೂದೆ ಬಗ್ಗೆ ಕಾಂಗ್ರೆಸ್‌ ಹೈಕಮಾಂಡ್‌ ಕೈಗೊಳ್ಳುವ ತೀರ್ಮಾನವೇ  ನಮ್ಮ ನಿಲುವು.

– ಸಿದ್ದರಾಮಯ್ಯ, ಮುಖ್ಯಮಂತ್ರಿ

ಆಪರೇಶನ್ ಹಸ್ತ: ಪರಮೇಶ್ವರ ಸುಳಿವು‍

ಬಿಜೆಪಿಯ ಕೆಲವು ಪ್ರಮುಖರು ಕಾಂಗ್ರೆಸ್‌ ಸೇರಲು ಮುಂದೆ ಬಂದಿದ್ದಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ. ಪರಮೇಶ್ವರ ಹೇಳಿದರು.

‘ಪಕ್ಷಕ್ಕೆ ಬರುವ ಎಲ್ಲರನ್ನೂ ಸೇರಿಸಿಕೊಳ್ಳಲು ಆಗುವುದಿಲ್ಲ. ಆಯಾ ಜಿಲ್ಲೆ ಮತ್ತು ಕ್ಷೇತ್ರಗಳ ಮೇಲೆ ಏನು ಪರಿಣಾಮ ಬೀರಲಿದೆ ಎಂಬುದನ್ನು ಗಮನಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಎಲ್ಲರನ್ನು ಕರೆದುಕೊಳ್ಳಲು ನಾವೇನು ಆಪರೇಶನ್ ಹಸ್ತ ಆರಂಭಿಸಿಲ್ಲ. ನೀವು ಅದನ್ನು ಏನು ಬೇಕಾದರೂ ಕರೆಯಿರಿ’ ಎಂದು ಅವರು ಸೋಮವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ಅಮಿತ್ ಷಾ ತಂತ್ರಕ್ಕೆ ಪಕ್ಷ ಪ್ರತಿತಂತ್ರ ಹೆಣೆಯಲಿದೆ. ಅವರ ಪಕ್ಷದ ಆಂತರಿಕ ಗೊಂದಲ ಬಗೆಹರಿಸಲು ಷಾ ಭೇಟಿ ನೀಡುತ್ತಿದ್ದಾರೆ. ಅವರ ಭೇಟಿಯಿಂದ ನಮ್ಮ ಪಕ್ಷಕ್ಕೆ ಏನೂ ತೊಂದರೆಯಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT