ಮಂಗಳವಾರ, ಆಗಸ್ಟ್ 11, 2020
26 °C

ರಣಜಿ ಟ್ರೋಫಿ: ವಿದರ್ಭಕ್ಕೆ ಚೊಚ್ಚಲ ರಣಜಿ ಗರಿ

ಪಿಟಿಐ Updated:

ಅಕ್ಷರ ಗಾತ್ರ : | |

ರಣಜಿ ಟ್ರೋಫಿ: ವಿದರ್ಭಕ್ಕೆ ಚೊಚ್ಚಲ ರಣಜಿ ಗರಿ

ಇಂದೋರ್‌: ನವ ಸಂವತ್ಸರದ ಮೊದಲ ದಿನವೇ ವಿದರ್ಭ ತಂಡ ದೇಶಿ ಕ್ರಿಕೆಟ್‌ನ ದೊರೆಯಾಗಿ ಮೆರೆಯಿತು.

ರಣಜಿ ಟ್ರೋಫಿ ಫೈನಲ್‌ನಲ್ಲಿ 9 ವಿಕೆಟ್‌ಗಳಿಂದ ದೆಹಲಿ ತಂಡವನ್ನು ಮಣಿಸಿದ ಫಯಾಜ್‌ ಫಜಲ್‌ ಬಳಗ ಚೊಚ್ಚಲ ಕಿರೀಟ ಮುಡಿಗೇರಿಸಿಕೊಂಡಿತು. ಹೊಸ ವರ್ಷದ ದಿನವೇ ತಂಡವೊಂದು ಪ್ರಶಸ್ತಿ ಗೆದ್ದಿದ್ದು ರಣಜಿ ಇತಿಹಾಸದಲ್ಲಿ ಮೊದಲು.

ಹೋಳ್ಕರ್‌ ಕ್ರೀಡಾಂಗಣದಲ್ಲಿ 7 ವಿಕೆಟ್‌ಗೆ 528ರನ್‌ಗಳಿಂದ ಸೋಮವಾರ ಆಟ ಮುಂದುವರಿಸಿದ ವಿದರ್ಭ ತಂಡ ಮೊದಲ ಇನಿಂಗ್ಸ್‌ನಲ್ಲಿ 163.4 ಓವರ್‌ಗಳಲ್ಲಿ 547ರನ್‌ ಕಲೆಹಾಕಿತು.

ದ್ವಿತೀಯ ಇನಿಂಗ್ಸ್‌ ಶುರುಮಾಡಿದ ರಿಷಭ್‌ ಪಂತ್‌ ಪಡೆ ಮತ್ತೊಮ್ಮೆ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ಈ ತಂಡ 76 ಓವರ್‌ಗಳಲ್ಲಿ 280ರನ್‌ಗಳಿಗೆ ಆಲೌಟ್‌ ಆಯಿತು.

29 ರನ್‌ಗಳ ಸುಲಭ ಗುರಿಯನ್ನು ವಿದರ್ಭ 5 ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡು ಮುಟ್ಟಿತು. ಕುಲವಂತ್‌ ಖೇಜ್ರೋಲಿಯಾ ಬೌಲ್‌ ಮಾಡಿದ ಐದನೇ ಓವರ್‌ನ ಕೊನೆಯ ಎಸೆತವನ್ನು ವಾಸೀಂ ಜಾಫರ್‌ ಬೌಂಡರಿ ಗೆರೆ ದಾಟಿಸುತ್ತಿದ್ದಂತೆ ವಿದರ್ಭ ಪಾಳಯದಲ್ಲಿ ಸಂಭ್ರಮ ಗರಿಗೆದರಿತು. ಡಗ್‌ಔಟ್‌ನಲ್ಲಿ ಕುಳಿತಿದ್ದ ಆಟಗಾರರು ಮೈದಾನದೊಳಕ್ಕೆ ಓಡಿ ಬಂದು ಜಾಫರ್‌ ಮತ್ತು ಸಂಜಯ್‌ ರಾಮಸ್ವಾಮಿ ಅವರನ್ನು ಅಪ್ಪಿಕೊಂಡು ಖುಷಿಪಟ್ಟರು.

ನಡೆಯದ ಫಜಲ್‌ ಆಟ: ಗುರಿ ಬೆನ್ನಟ್ಟಿದ ವಿದರ್ಭ ತಂಡ ಮೊದಲ ಓವರ್‌ನಲ್ಲೇ ವಿಕೆಟ್‌ ಕಳೆದುಕೊಂಡಿತು. ಕುಲವಂತ್‌ ಖೇಜ್ರೋಲಿಯಾ ಹಾಕಿದ ಮೂರನೇ ಎಸೆತದಲ್ಲಿ ನಾಯಕ ಫಜಲ್‌ (2) ಎಲ್‌ಬಿಡಬ್ಲ್ಯು ಆದರು.

ಬಳಿಕ ವಾಸೀಂ ಜಾಫರ್‌ (ಔಟಾಗದೆ 17; 17ಎ, 4ಬೌಂ) ಮಿಂಚಿದರು. ಅವರು ಖೇಜ್ರೋಲಿಯಾ ಹಾಕಿದ ಐದನೇ ಓವರ್‌ನಲ್ಲಿ ನಾಲ್ಕು ಬೌಂಡರಿ ಸಿಡಿಸಿ ಸಂಭ್ರಮಿಸಿದರು. ಸಂಜಯ್‌ ರಾಮಸ್ವಾಮಿ (ಔಟಾಗದೆ 9; 10ಎ, 1ಬೌಂ) ಕೂಡ ತಂಡದ ಗೆಲುವಿಗೆ ರನ್‌ ಕಾಣಿಕೆ ನೀಡಿದರು.

ಮತ್ತೆ ವೈಫಲ್ಯ: ದ್ವಿತೀಯ ಇನಿಂಗ್ಸ್‌ ಆರಂಭಿಸಿದ ದೆಹಲಿ ತಂಡ ಬ್ಯಾಟಿಂಗ್‌ ವೈಫಲ್ಯಕ್ಕೆ ಒಳಗಾಯಿತು. ಕುನಾಲ್‌ ಚಂಡೇಲಾ (9) ಬೇಗನೆ ಔಟಾದರು. ಗೌತಮ್‌ ಗಂಭೀರ್‌ (36; 37ಎ, 7ಬೌಂ) ವೇಗದ ಆಟ ಆಡಿದರೂ ಹೆಚ್ಚು ಕಾಲ ಕ್ರೀಸ್‌ನಲ್ಲಿ ನಿಲ್ಲಲಿಲ್ಲ.

ಬಳಿಕ ಒಂದಾದ ಧ್ರುವ ಶೋರೆ (62; 142ಎ, 10ಬೌಂ) ಮತ್ತು ನಿತೀಶ್‌ ರಾಣಾ (64; 113ಎ, 12ಬೌಂ) ವಿದರ್ಭ ಬೌಲರ್‌ಗಳನ್ನು ಕಾಡಿದರು. ಇವರು ಮೂರನೇ ವಿಕೆಟ್‌ಗೆ 110ರನ್‌ ಸೇರಿಸಿದ್ದರಿಂದ ದೆಹಲಿ ತಂಡ ಆರಂಭಿಕ ಸಂಕಷ್ಟದಿಂದ ಪಾರಾಯಿತು. ಇವರು ಔಟಾದ ನಂತರ ತಂಡ ಮತ್ತೆ ಕುಸಿತದ ಹಾದಿ ಹಿಡಿಯಿತು.

ನಾಯಕ ರಿಷಭ್‌ ಪಂತ್‌ (32; 36ಎ, 3ಬೌಂ, 1ಸಿ) ಮತ್ತು ವಿಕಾಸ್‌ ಮಿಶ್ರಾ (34; 32ಎ, 3ಬೌಂ, 2ಸಿ) ಅವರ ಪ್ರಯತ್ನವೂ ಸಾಕಾಗಲಿಲ್ಲ. 76ನೇ ಓವರ್‌ನ ಕೊನೆಯ ಎಸೆತದಲ್ಲಿ ಆಕಾಶ್‌ ಸೂದನ್‌ (18; 20ಎ, 1ಬೌಂ, 1ಸಿ) ಆದಿತ್ಯ ಸರ್ವಟೆಗೆ ವಿಕೆಟ್‌ ಒಪ್ಪಿಸುತ್ತಿದ್ದಂತೆ ದೆಹಲಿ ತಂಡದ ಎಂಟನೇ ಪ್ರಶಸ್ತಿಯ ಕನಸು ಕಮರಿತು.

ಸಂಕ್ಷಿಪ್ತ ಸ್ಕೋರ್‌: ದೆಹಲಿ: ಮೊದಲ ಇನಿಂಗ್ಸ್‌: 102.5 ಓವರ್‌ಗಳಲ್ಲಿ 295 ಮತ್ತು 76 ಓವರ್‌ಗಳಲ್ಲಿ 280 (ಗೌತಮ್‌ ಗಂಭೀರ್‌ 36, ಧ್ರುವ ಶೋರೆ 62, ನಿತೀಶ್‌ ರಾಣಾ 64, ರಿಷಭ್‌ ಪಂತ್‌ 32, ವಿಕಾಸ್‌ ಮಿಶ್ರಾ 34, ಆಕಾಶ್‌ ಸೂದನ್‌ 18; ರಜನೀಶ್‌ ಗುರುಬಾನಿ 92ಕ್ಕೆ2, ಅಕ್ಷಯ್‌ ವಾಖರೆ 95ಕ್ಕೆ4, ಆದಿತ್ಯ ಸರ್ವಟೆ 30ಕ್ಕೆ3, ಸಿದ್ದೇಶ್‌ ನೇರಲ್‌ 39ಕ್ಕೆ1).

ವಿದರ್ಭ: ಮೊದಲ ಇನಿಂಗ್ಸ್‌: 163.4 ಓವರ್‌ಗಳಲ್ಲಿ 547 (ಅಕ್ಷಯ್‌ ವಾಡಕರ್‌ 133, ಸಿದ್ದೇಶ್‌ ನೇರಲ್‌ 74; ಆಕಾಶ್‌ ಸೂದನ್‌ 102ಕ್ಕೆ2, ನವದೀಪ್‌ ಸೈನಿ 135ಕ್ಕೆ5, ನಿತೀಶ್‌ ರಾಣಾ 32ಕ್ಕೆ1, ಕುಲವಂತ್‌ ಖೇಜ್ರೋಲಿಯಾ 132ಕ್ಕೆ2).

ಎರಡನೇ ಇನಿಂಗ್ಸ್‌: 5 ಓವರ್‌ಗಳಲ್ಲಿ 1 ವಿಕೆಟ್‌ಗೆ 32 (ವಾಸೀಂ ಜಾಫರ್‌ ಔಟಾಗದೆ 17, ಸಂಜಯ್‌ ರಾಮಸ್ವಾಮಿ ಔಟಾಗದೆ 9; ಕುಲವಂತ್‌ ಖೇಜ್ರೋಲಿಯಾ 21ಕ್ಕೆ1).

ಫಲಿತಾಂಶ: ವಿದರ್ಭ ತಂಡಕ್ಕೆ 9 ವಿಕೆಟ್‌ ಗೆಲುವು ಹಾಗೂ ಪ್ರಶಸ್ತಿ.

ಪಂದ್ಯ ಶ್ರೇಷ್ಠ: ರಜನೀಶ್‌ ಗುರುಬಾನಿ.

₹ 5 ಕೋಟಿ ಬಹುಮಾನ

ರಣಜಿಯಲ್ಲಿ ಪ್ರಶಸ್ತಿ ಗೆದ್ದ ತಂಡಕ್ಕೆ ವಿದರ್ಭ ಕ್ರಿಕೆಟ್‌ ಸಂಸ್ಥೆ ₹ 5 ಕೋಟಿ ಬಹುಮಾನ ಪ್ರಕಟಿಸಿದೆ.

‘ರಣಜಿ ಟ್ರೋಫಿ ಗೆದ್ದಿದ್ದಕ್ಕೆ ಸಿಗುವ ₹2 ಕೋಟಿಯ ಜೊತೆಗೆ ಸಂಸ್ಥೆಯ ವತಿಯಿಂದ ₹ 3 ಕೋಟಿ ಬಹುಮಾನವನ್ನು ಆಟಗಾರರು ಮತ್ತು ತಂಡದ ಸಿಬ್ಬಂದಿಗಳಿಗೆ ನೀಡುತ್ತೇವೆ’ ಎಂದು ವಿಸಿಎ ಅಧ್ಯಕ್ಷ ಆನಂದ್‌ ಜೈಸ್ವಾಲ್‌ ತಿಳಿಸಿದ್ದಾರೆ.

ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ.ಖನ್ನಾ ಮತ್ತು ಸಿಇಒ ರಾಹುಲ್‌ ಜೊಹ್ರಿ ಅವರು ವಿದರ್ಭ ತಂಡದ ಆಟಗಾರರನ್ನು ಅಭಿನಂದಿಸಿದ್ದಾರೆ.ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.