ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಜಿಲೆಂಡ್‌–ವಿಂಡೀಸ್‌ ಪಂದ್ಯ ಮಳೆಗೆ ಆಹುತಿ

Last Updated 1 ಜನವರಿ 2018, 19:30 IST
ಅಕ್ಷರ ಗಾತ್ರ

ಮೌಂಟ್‌ ಮೌಂಗಾನುಯಿ, ನ್ಯೂಜಿಲೆಂಡ್‌: ನ್ಯೂಜಿಲೆಂಡ್‌ ಮತ್ತು ವೆಸ್ಟ್‌ ಇಂಡೀಸ್‌ ನಡುವಣ ಎರಡನೇ ಟಿ–20 ಪಂದ್ಯ ಮಳೆಯಿಂದಾಗಿ ರದ್ದಾಗಿದೆ.

ಸೋಮವಾರ ಬೆಳಗಿನಿಂದಲೇ ಧಾರಾಕಾರ ಮಳೆ ಸುರಿಯಿತು. ಮಳೆ ನಿಂತ ನಂತರ (ನಿಗದಿತ ಅವಧಿಗಿಂತ 20 ನಿಮಿಷ ತಡವಾಗಿ) ಪಂದ್ಯ ಆರಂಭಿಸಲಾಯಿತು.

ಟಾಸ್‌ ಗೆದ್ದ ಕೆರಿಬಿಯನ್‌ ನಾಡಿನ ತಂಡ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್‌ ಮಾಡಿದ ಕಿವೀಸ್‌ ನಾಡಿನ ತಂಡ ಮಾರ್ಟಿನ್‌ ಗಪ್ಟಿಲ್‌ (2) ವಿಕೆಟ್‌ ಬೇಗನೆ ಕಳೆದುಕೊಂಡಿತು.

ಶೆಲ್ಡನ್‌ ಕಾಟ್ರೆಲ್‌ ಬೌಲ್‌ ಮಾಡಿದ ದಿನದ ಮೊದಲ ಓವರ್‌ನ ನಾಲ್ಕನೇ ಎಸೆತದಲ್ಲಿ ಗಪ್ಟಿಲ್‌, ವಿಕೆಟ್‌ ಕೀಪರ್‌ ಚಾಡ್ವಿಕ್‌ ವಾಲ್ಟನ್‌ಗೆ ಕ್ಯಾಚ್‌ ನೀಡಿದರು.

ಆ ನಂತರ ಕಾಲಿನ್‌ ಮನ್ರೊ ಗರ್ಜಿಸಿದರು. ಮೊದಲ ಪಂದ್ಯದಲ್ಲಿ ಅರ್ಧಶತಕ ಗಳಿಸಿ ಮಿಂಚಿದ್ದ ಅವರು ಬೇ ಓವಲ್‌ ಅಂಗಳದಲ್ಲೂ ವಿಂಡೀಸ್‌ ಬೌಲರ್‌ಗಳ ಮೇಲೆ ಸವಾರಿ ಮಾಡಿದರು.

ಸ್ಫೋಟಕ ಆಟ ಆಡಿದ ಮನ್ರೊ, 18 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಬಳಿಕವೂ ಮಿಂಚಿದ ಅವರು 23 ಎಸೆತಗಳಲ್ಲಿ 66ರನ್‌ ಗಳಿಸಿ ಔಟಾದರು. ಇದರಲ್ಲಿ 11 ಬೌಂಡರಿ ಮತ್ತು 3 ಸಿಕ್ಸರ್‌ಗಳೂ ಸೇರಿದ್ದವು. ಎಂಟನೇ ಓವರ್‌ನಲ್ಲಿ ಗ್ಲೆನ್‌ ಫಿಲಿಪ್ಸ್‌ (10; 5ಎ, 1ಸಿ) ಅವರನ್ನು ಸ್ಯಾಮುಯೆಲ್‌ ಬದ್ರಿ ಎಲ್‌ಬಿಡಬ್ಲ್ಯು ಬಲೆಯಲ್ಲಿ ಬಂದಿಸಿದರು. ಆಗ ಕಿವೀಸ್‌ ನಾಡಿನ ತಂಡದ ಖಾತೆಯಲ್ಲಿ 92ರನ್‌ ಗಳಿದ್ದವು. ಟಾಮ್‌ ಬ್ರೂಸ್‌ (3) ಕೂಡ ಬಂದಷ್ಟೇ ವೇಗವಾಗಿ ಪೆವಿಲಿಯನ್‌ ಸೇರಿಕೊಂಡರು.

ಬಳಿಕ ನಾಯಕ ಕೇನ್‌ ವಿಲಿಯಮ್ಸನ್‌ (ಔಟಾಗದೆ 17; 15ಎ, 1ಬೌಂ) ಮತ್ತು ಅನರು ಕಿಚನ್‌ (ಔಟಾಗದೆ 1) ಎಚ್ಚರಿಕೆಯ ಆಟ ಆಡಿದರು.

ನ್ಯೂಜಿಲೆಂಡ್‌ ತಂಡ 9 ಓವರ್‌ಗಳಲ್ಲಿ 102ರನ್‌ ಗಳಿಸಿದ್ದ ವೇಳೆ ಮತ್ತೆ ವರುಣನ ಆರ್ಭಟ ಶುರುವಾಯಿತು. ಸಾಕಷ್ಟು ಸಮಯ ಕಾದರೂ ಮಳೆ ನಿಲ್ಲಲಿಲ್ಲ. ಹೀಗಾಗಿ ಅಧಿಕಾರಿಗಳು ಪಂದ್ಯ ರದ್ದು ಮಾಡುವ ನಿರ್ಧಾರ ಪ್ರಕಟಿಸಿದರು.

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲೆಂಡ್‌: 9 ಓವರ್‌ಗಳಲ್ಲಿ 4 ವಿಕೆಟ್‌ಗೆ 102 (ಕಾಲಿನ್‌ ಮನ್ರೊ 66, ಕೇನ್‌ ವಿಲಿಯಮ್ಸನ್‌ ಔಟಾಗದೆ 17, ಗ್ಲೆನ್‌ ಫಿಲಿಪ್ಸ್‌ 10; ಶೆಲ್ಡನ್‌ ಕಾಟ್ರೆಲ್‌ 21ಕ್ಕೆ1, ಸ್ಯಾಮುಯೆಲ್‌ ಬದ್ರಿ 23ಕ್ಕೆ1, ಕೇಸ್ರಿಕ್‌ ವಿಲಿಯಮ್ಸ್‌ 24ಕ್ಕೆ1, ಆ್ಯಷ್ಲೆ ನರ್ಸ್‌ 13ಕ್ಕೆ1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT