ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘಮ್ಮೆಂದಿತು ಚೇಳೂರು ಸಿದ್ದು ಹಲಸು

Last Updated 1 ಜನವರಿ 2018, 19:30 IST
ಅಕ್ಷರ ಗಾತ್ರ

ಗುಣಮಟ್ಟ ಮತ್ತು ರುಚಿಯಲ್ಲಿ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ‘ಚೇಳೂರು ಸಿದ್ದು’ ಹಲಸು ಉತ್ಕೃಷ್ಟ ಎನಿಸಿದೆ. ಈ ಹಲಸಿನ ತಳಿಯ ಸಸಿಗಳು ಈಗ ಜಾಗತಿಕ ಕೃಷಿ ಮಾರುಕಟ್ಟೆ ಪ್ರವೇಶಿಸಿವೆ. ಸಸಿಗಳನ್ನು ನೀಡುವಂತೆ ದುಬೈನಲ್ಲಿ ವಾಸಿಸುತ್ತಿರುವ ಕೇರಳದ 20 ಮಂದಿ ಹಾಗೂ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಭಾರತೀಯರು ತುಮಕೂರು ಹೊರವಲಯದ ಹಿರೇಹಳ್ಳಿಯ ಕೇಂದ್ರೀಯ ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ (ಸಿಎಚ್‌ಇಎಸ್‌) ಹೆಸರು ನೋಂದಾಯಿಸಿದ್ದಾರೆ.

ಈಗಾಗಲೇ ಸಿಎಚ್‌ಇಎಸ್‌ ರಾಜ್ಯದ ವಿವಿಧ ಭಾಗಗಳ ರೈತರಿಗೆ ಸಿದ್ದು ಹಲಸಿನ 500 ಸಸಿಗಳನ್ನು ನೀಡಿದೆ. 10 ಸಾವಿರಕ್ಕೂ ಹೆಚ್ಚು ಸಸಿಗಳಿಗೆ ಬೇಡಿಕೆ ಬಂದಿದೆ. ಈ ತಳಿಗೆ ಸಿಕ್ಕ ಯಶಸ್ಸು ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿಗಳಲ್ಲಿ ಮತ್ತಷ್ಟು ಹುರುಪು ಮೂಡಿಸಿದೆ. ಮತ್ತೆ 4 ತಳಿಗಳ ಸಂಶೋಧನೆಗೆ ಮುಂದಾಗಿದ್ದಾರೆ. ಕಲ್ಪತರು ನಾಡು ಅಗ್ಗಳಿಕೆಯ ಈ ಜಿಲ್ಲೆ ‌ರಾಷ್ಟ್ರಮಟ್ಟದಲ್ಲಿ ಹಲಸಿನ ಬೀಡು ಎಂದು ಗುರುತಿಸುವಂತೆ ಆಗಬೇಕು ಎನ್ನುವ ಗುರಿ ವಿಜ್ಞಾನಿಗಳದ್ದು.

‘ಹಲಸಿನ ಒಂದು ತಳಿಗೆ ಈ ಮಟ್ಟದಲ್ಲಿ ಬೇಡಿಕೆ ಬಂದಿರುವುದು ದೇಶದಲ್ಲಿ ಇದೇ ಮೊದಲು. ನಮಗೆ ಈಗ ಲಭಿಸಿರುವುದರಲ್ಲಿ ಉತ್ಕೃಷ್ಟವಾದುದು ಸಿದ್ದು ಹಲಸು. ಹುಡುಕಿದರೆ ಜಿಲ್ಲೆಯಲ್ಲಿ ಮತ್ತಷ್ಟು ಉತ್ತಮ ಹಲಸಿನ ತಳಿಗಳು ದೊರೆಯುತ್ತವೆ’ ಎಂದು ಖಚಿತವಾಗಿ ನುಡಿಯು ವರು ಸಿಎಚ್‌ಇಎಸ್‌ ಹಿರಿಯ ವಿಜ್ಞಾನಿ ಡಾ.ಕರುಣಾಕರನ್.

ಏನಿದು ಸಿದ್ದು‌ ಹಲಸು: ಚೇಳೂರಿನ ಸಿದ್ದಪ್ಪ ಅವರ ಜಮೀನಿನಲ್ಲಿರುವ 35 ವರ್ಷ ಪ್ರಾಯದ ಹಲಸಿನ ಮರವನ್ನು ಸಿಎಚ್‌ಇಎಸ್‌ ಮೂರು ವರ್ಷ ಅಧ್ಯಯನಕ್ಕೆ ಒಳಪಡಿಸಿತ್ತು. ರಾಜ್ಯದ ಅತ್ಯುತ್ತಮ‌ ಹಲಸಿನ ತಳಿ ಎಂದು ಇದು ಸಂಶೋಧನೆಯಲ್ಲಿ ದೃಢಪಟ್ಟಿತ್ತು. ಹಳದಿ ಹಣ್ಣಿಗೆ ಹೋಲಿಸಿದರೆ ಈ ಕೆಂಪು ಹಣ್ಣಿನಲ್ಲಿ ಹೆಚ್ಚಿನ ಪೌಷ್ಟಿಕಾಂಶಗಳು ಇರುವುದು ಸಂಶೋಧನೆಯಿಂದ ದೃಢಪಟ್ಟಿದೆ.

ಸಸಿಗೆ ರೈತ ಸಿದ್ದಪ್ಪ ಅವರ ಹೆಸರು ಇಡಲಾಯಿತು. ಸಿದ್ದಪ್ಪ ಅವರ ಮಗ ಪರಮೇಶ್ ಅವರಿಗೆ ರಾಜ್ಯಪಾಲ ವಜುಬಾಯಿ ವಾಲಾ ಅವರು ‘ತಳಿ ಸಂರಕ್ಷಕ’ ಪ್ರಶಸ್ತಿ ನೀಡಿದ್ದಾರೆ. ರಾಷ್ಟ್ರದಲ್ಲಿ ಇದೇ ಮೊದಲ ಬಾರಿ ರೈತರಿಗೆ ‘ತಳಿ ಸಂರಕ್ಷಕ’ ಪ್ರಶಸ್ತಿ ನೀಡಲಾಗಿದೆ. ಮಾಲೀಕರೊಂದಿಗೆ ಸಿಎಚ್‌ಇಎಸ್‌ ಮೂರು ವರ್ಷ ಒಪ್ಪಂದ ಮಾಡಿಕೊಂಡಿದೆ. ಒಂದು ಸಸಿಯನ್ನು ಸಿಎಚ್‌ಇಎಸ್ ₹150ಕ್ಕೆ ಮಾರಾಟ ಮಾಡುತ್ತಿದೆ. ಶೇ 75ರಷ್ಟು ಮಾಲೀಕರಿಗೆ ಶೇ 25ರಷ್ಟು ಹಣ ಸಂಸ್ಥೆಗೆ ಸೇರುತ್ತದೆ.

ಪ್ರತಿ ವರ್ಷ ಸರಾಸರಿ 500 ಕಾಯಿಗಳನ್ನು ಮರ ನೀಡುತ್ತಿದೆ. ಗರಿಷ್ಠ 4 ಕೆ.ಜಿ ತೂಗುವ ಕಾಯಿಗಳಲ್ಲಿ ಸರಾಸರಿ 30 ಸೊಳೆಗಳು ಇರುತ್ತವೆ.

ಚಂದ್ರ ಹಲಸಿನ ಬೀಡು: ಕೆಂಪು ಸೊಳೆಗಳ ಚಂದ್ರ ಹಲಸನ್ನು ಜಿಲ್ಲೆಯಲ್ಲಿ ಹೇರಳವಾಗಿ ಬೆಳೆಯಲಾಗುತ್ತದೆ. ದೇಶದಲ್ಲಿ ಚಂದ್ರ ಹಲಸನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಯುವುದು ಜಿಲ್ಲೆಯಲ್ಲಿ ಮಾತ್ರ. ಪೌಷ್ಟಿಕಾಂಶದಲ್ಲಿಯೂ ಚಂದ್ರ ಹಲಸು ಬೇರೆ ತಳಿಗಳಿಗಿಂತ ಮೊದಲ ಸ್ಥಾನದಲ್ಲಿ ಇದೆ ಎಂದು ಮಾಹಿತಿ ನೀಡುವರು.

ಚಂದ್ರ ಹಲಸು ನೀರು ಒಸರುವುದಿಲ್ಲ. ಹಲಸನ್ನು ಬಿಸ್ಕೆಟ್‌ನಂತೆ ಕಚ್ಚಿ ತಿನ್ನಬಹುದು. ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಕೇರಳದಲ್ಲಿ ಹಲಸು ಹೆಚ್ಚು ಬೆಳೆಯಲಾಗುತ್ತದೆ. ಆದರೆ ಇಲ್ಲಿರುವ ರುಚಿ ಆ ಹಲಸುಗಳಲ್ಲಿ ಇಲ್ಲ. ಕೇರಳದಲ್ಲಿ ಸಿಂಧೂರ ಎನ್ನುವ ಕೆಂಪು ತಳಿಯನ್ನು ಈಗ ನಾಟಿ ಮಾಡಲಾಗಿದೆ. ಇನ್ನೂ ಫಸಲು ಬಂದಿಲ್ಲ ಎಂದರು.

ವಿದೇಶಿ ಹಲಸು ನಾಟಿ: ತಮ್ಮ ಹಲಸಿನ ಮರಕ್ಕೆ ಸಿಕ್ಕ ಪ್ರಶಂಸೆಯಿಂದ ಉತ್ತೇಜಿತರಾಗಿರುವ ಪರಮೇಶ್ ಈಗ ಬ್ರೆಜಿಲ್, ಥಾಯ್ಲೆಂಡ್, ಮಲೇಷ್ಯಾ, ಬರ್ಮಾದ ಹಲಸಿನ ಸಸಿಗಳನ್ನು ನೆಟ್ಟಿದ್ದಾರೆ.

‘ಈ ಮಟ್ಟಕ್ಕೆ ಬೇಡಿಕೆ ಬರು‌ತ್ತದೆ ಎಂದು ತಿಳಿದಿರಲಿಲ್ಲ. ಸಸಿ ಕಸಿ ಮಾಡುವುದನ್ನು ನಾನೇ ಕಲಿತು ನರ್ಸರಿ ಆರಂಭಿಸಬೇಕು ಎಂದುಕೊಂಡಿದ್ದೇನೆ. ಶಿವಮೊಗ್ಗದ ಅನಂತಕುಮಾರ್ ಜವಳಿ ಅವರ ನೆರವಿನಿಂದ ವಿದೇಶಿ ತಳಿಗಳನ್ನು ನಾಟಿ ಮಾಡಿದ್ದೇನೆ. ಎಲ್ಲ ಸಮಯದಲ್ಲಿಯೂ ಫಸಲು ಬಿಡುವ ಸಸಿಗಳನ್ನು ನಾಟಿ ಮಾಡುವ ಆಲೋಚನೆ ಇದೆ’ ಎಂದು ಹೇಳುವರು.

ಹೆಸರುಘಟ್ಟದ ಭಾರತೀಯ ಕೃಷಿ ಸಂಶೋಧನಾ ಮಂಡಳಿಯಲ್ಲಿ (ಐಸಿಎಆರ್‌) ಸಿದ್ದು ಹಲಸು ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯಲಾಗಿದೆ. ಅಲ್ಲಿಗೆ ಹಣ ಜಮೆಯಾಗುತ್ತಿದೆ. ಯಾವುದಾದರೂ ಕಾರ್ಯಕ್ರಮ ನಡೆಸಿ ಹಣ ನೀಡಬಹುದು ಎನ್ನುವರು.


ಕರುಣಾಕರನ್ 

‘ಸಂಶೋಧನಾ ಕೇಂದ್ರದವರು ಇಲ್ಲಿಯವರೆಗೆ ಏಳೆಂಟು ಬಾರಿ ಬಂದು ಕಸಿ ಕಟ್ಟಲು ಕಡ್ಡಿಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಈ ಮರದ ಮೂಲ ತಳಿ ಪಕ್ಕದ ಶೂಲಯ್ಯನಪಾಳ್ಯದ ಅಡಿಕೆ ತೋಟದಲ್ಲಿದೆ. ಆದರೆ ಆ ಹಣ್ಣುಗಳು ಇಷ್ಟು ರುಚಿ ನೀಡುತ್ತಿಲ್ಲ’ ಎಂದು ತಿಳಿಸಿದರು.

‘ಕರುಣಾಕರನ್ ಅವರ ಆಸಕ್ತಿ ಫಲವಾಗಿಯೇ ನಮ್ಮ ಮರ ಮತ್ತು ಜಿಲ್ಲೆಯ ಚಂದ್ರ ಹಲಸಿನ ಕಿಮ್ಮತ್ತು ತಿಳಿಯಿತು’ ಎಂದು ಪರಮೇಶ್ ಹೊಗಳುವರು. ‘ಐಸಿಎಆರ್ ನಿರ್ದೇಶಕ ದಿನೇಶ್ ಅವರ ಸಹಕಾರವೇ ಎಲ್ಲದಕ್ಕೂ ಉತ್ತೇಜನ’ ಎಂದು ಮುಗುಳ್ನಗುವರು ಕರುಣಾಕರನ್.

ಸಮೃದ್ಧ ಮಾರಾಟ: ಚೇಳೂರು ಮತ್ತು ಮಧುಗಿರಿ ಹಲಸಿನ ಮಾರುಕಟ್ಟೆಗೆ ರಾಜ್ಯದಲ್ಲಿಯೇ ಪ್ರಸಿದ್ಧವಾಗಿವೆ. ಚೇಳೂರಿನಿಂದ ಹಲಸಿನ ಅವಧಿಯಲ್ಲಿ ಕೊಚ್ಚಿ, ಚೆನ್ನೈ, ಹಿಂದೂಪುರಕ್ಕೆ ನಿತ್ಯ 25 ಲಾರಿ ಲೋಡ್ ಹಣ್ಣು ಮತ್ತು ಕಾಯಿಗಳು ಪೂರೈಕೆಯಾಗುತ್ತವೆ ಎನ್ನುವ ಅಂದಾಜಿದೆ.

ಮತ್ತೊಂದು ವಿಶೇಷ ಎಂದರೆ ಅನ್‌ಸೀಸನ್ ಸಮಯದಲ್ಲಿಯೂ ವಾರಕ್ಕೆ ಒಮ್ಮೆ ಎರಡರಿಂದ ಮೂರು ಲೋಡ್ ಕೊತ್ತಕಾಯಿ (ಸಾಂಬಾರು, ಪಲ್ಯ ಇತ್ಯಾದಿ ಖಾದ್ಯ ತಯಾರಿಸಲು ಬಳಸುವ ಹಲಸಿನ ಕಾಯಿ) ಪೂನಾಕ್ಕೆ ಜಿಲ್ಲೆಯಿಂದ ಸರಬರಾಜಾಗುತ್ತಿದೆ. ಬೇರೆ ಬೇರೆ ಬ್ರ್ಯಾಂಡ್‌ ಹೆಸರಿನಲ್ಲಿ ಬೆಂಗಳೂರಿನ ಮಾಲ್‌ಗಳಲ್ಲಿಯೂ ‌ಜಿಲ್ಲೆಯ ಹಣ್ಣು ಮಾರಾಟವಾಗುತ್ತಿದೆ ಎಂದು ಮಾಹಿತಿ ನೀಡುವರು ವ್ಯಾಪಾರಿಗಳು. 

ಡಿಎನ್‌ಎ ಪರೀಕ್ಷೆಗೆ ಚಿಂತನೆ: ‘ವಿದೇಶಗಳಿಗೆ ಮಾರಾಟವಾಗುವ ಇಲ್ಲಿನ ತಳಿಗಳನ್ನು ಕಾಲಾಂತರದಲ್ಲಿ ನಮ್ಮದೇ ತಳಿ ಎಂದು ಅವರು ಪ್ರತಿ ಪಾದಿಸುವ ಸಾಧ್ಯತೆ ಇದೆ. ಆದ ಕಾರಣ ಸಸಿಗಳ ಡಿಎನ್‌ಎ ಹಾಗೂ ಆ ಮರಗಳ ಮಾಲೀಕರ ಬೆರಳಚ್ಚು ಸೇರಿಸಿ ಹೊಸ ಮಾದರಿಯಲ್ಲಿ ಡಿಎನ್‌ಎ ಅಭಿವೃದ್ಧಿ ಮಾಡುವ ಚಿಂತನೆ ಇದೆ. ಈ ವಿಧಾನ ಸುಲಭವಾದುದಲ್ಲ. ಆದರೂ ಮಾಡಬೇಕು ಎಂದುಕೊಂಡಿದ್ದೇವೆ’ ಎಂದು ಕರುಣಾಕರನ್ ತಿಳಿಸುವರು.

ಮೌಲ್ಯವರ್ಧನೆ ಅಗತ್ಯ: ಹೇರಳವಾಗಿ ಹಲಸು ಬೆಳೆದರೂ ಮೌಲ್ಯವರ್ಧನೆ ಆಗುತ್ತಿಲ್ಲ. ಇಲ್ಲಿ ಬೆಳೆಯುವ ಹಲಸನ್ನು ಜಿಲ್ಲೆಯ ಜನರು ಶೇ 1ರಷ್ಟು ಸಹ ಬಳಸುತ್ತಿಲ್ಲ ಎಂದು ಚಿಕ್ಕನಾಯಕನಹಳ್ಳಿ ತಾಲ್ಲೂಕು ಕೆಂಕೆರೆಯ ರೈತ ಸಿದ್ದೇಶ್ ತಿಳಿಸುವರು.

‘ಸಾಂಬಾರು ಮತ್ತು ಪಲ್ಯಕ್ಕೆ ಮಾತ್ರ ಹಲಸು ಬಳಸಲಾಗುತ್ತಿದೆ. ಬೇರೆ ಕಡೆಗಳಲ್ಲಿ ಇರುವ ಜಾಗೃತಿ ಇಲ್ಲಿ ಇಲ್ಲ. ಮೌಲ್ಯವರ್ಧನೆಗೆ ಇಲ್ಲಿಂದ ಕಾಯಿಗಳನ್ನು ಖರೀದಿಸುತ್ತಿದ್ದಾರೆ. ಆದರೆ ಬೆಳೆ ಗಾರರೇ ಮೌಲ್ಯವರ್ಧನೆಗೊಳಿಸಿದರೆ ಹೆಚ್ಚು ಆದಾಯ ಪಡೆಯಬಹುದು’ ಎನ್ನುವರು. ತೋವಿನಕೆರೆಯ ಹಳ್ಳಿ ಸಿರಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಮಾತ್ರ ಜಿಲ್ಲೆಯಲ್ಲಿ ಹಲಸಿನ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಈ ಸಂಘದ ಹಲಸಿನಿಂದ 90ಕ್ಕೂ ಹೆಚ್ಚು ಆಹಾರ ಪದಾರ್ಥಗಳನ್ನು ತಯಾರಿಸುತ್ತಿದ್ದು, ಉತ್ಪನ್ನಗಳಿಗೆ ಹೊರ ರಾಜ್ಯಗಳಿಂದಲೂ ಬೇಡಿಕೆ ಇದೆ.

129 ತಳಿ ಗುರುತು

ಸದ್ಯ ಸಿಎಚ್‌ಇಎಸ್‌ ವಿಜ್ಞಾನಿಗಳಿಗೆ ಜಿಲ್ಲೆಯಲ್ಲಿ 129 ಹಲಸಿನ ತಳಿಗಳು ದೊರೆತಿವೆ. ಬಣ್ಣ, ವೈವಿಧ್ಯ, ಗುಣಮಟ್ಟ, ಗಾತ್ರ, ರುಚಿ ಹೀಗೆ ನಾನಾ ವರ್ಗೀಕರಣ ಆಧರಿಸಿ ತಳಿಗಳನ್ನು ಗುರುತಿಸಲಾಗಿದೆ. ಮತ್ತಷ್ಟು ಸಂಶೋಧನೆ ನಡೆಸಿದರೆ ಸಿದ್ದು ಹಲಸು ಮೀರಿಸುವ ತಳಿ ಸಿಗಬಹುದು ಎಂದು ವಿಜ್ಞಾನಿಗಳು ವಿಶ್ವಾಸ ವ್ಯಕ್ತಪಡಿಸುವರು.  ಈ ತಳಿಗಳಿಗೆ ಇನ್ನೂ ಹೆಸರು ಇಟ್ಟಿಲ್ಲ. ರೈತರ ಹೆಸರುಗಳನ್ನೇ ಕೊಡುತ್ತೇವೆ. ಆಸಕ್ತ ರೈತರು ಕೇಂದ್ರಕ್ಕೆ ಭೇಟಿ ನೀಡಿ ತಮ್ಮ ಹಲಸಿನ ಮರಗಳನ್ನು ನೋಂದಾಯಿಸಿಕೊಳ್ಳಬೇಕು. ಆ ಮರಗಳ ಅಧ್ಯಯನ ನಡೆಸುತ್ತೇವೆ. ಮೂರು ವರ್ಷ ಮರದ ಫಸಲಿನ ಅಂಕಿ ಅಂಶ ಸಂಗ್ರಹಿಸುತ್ತೇವೆ ಎಂದು ಹೇಳುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT