ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರಿತ್ರೆಯ ಮಜಲುಗಳನ್ನು ತೆರೆದಿಡುವ ಮಹಲುಗಳು!

Last Updated 1 ಜನವರಿ 2018, 19:30 IST
ಅಕ್ಷರ ಗಾತ್ರ

ಎರಡೂವರೆ ವರ್ಷದ ಹಿಂದೆ ದೊಡ್ಡಬಳ್ಳಾಪುರದಿಂದ ಹಂಪಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಚುಮುಚುಮು ಬೆಳಿಗ್ಗೆ 6ಕ್ಕೆ ಸರಿಯಾಗಿ ಬಳ್ಳಾರಿಯ ರೈಲು ನಿಲ್ದಾಣಕ್ಕೆ ಲಗೇಜು ಗಳೊಡನೆ ಬಂದು ಇಳಿದಾಗ, ಪ್ಲಾಟ್‌ಫಾರ್ಮ್‌ ಎಲ್ಲ ನಿಲ್ದಾಣಗಳಂತೆಯೇ ಕಾಣಿಸಿತ್ತು. ಆದರೆ ಹೊರಕ್ಕೆ ಬಂದು ಹಿಂತಿರುಗಿ ನೋಡಿದರೆ ಸುಂದರ ಕಲಾಕೃತಿಯೊಂದು ಎದುರಿಗೆ ನಿಂತಿತ್ತು. ಆ ಕಡೆಯಿಂದ ಈ ಕಡೆಗೆ ಬಂದೆ. ಮಧ್ಯದಲ್ಲಿ ನಿಂತೆ. ಹೇಗೆ ನೋಡಿದರೂ ನಿರಾಭರಣ ಸುಂದರಿಯ ವೈಯಾರ ಮೈವೆತ್ತಂತೆ.

ಅದು ಬಳ್ಳಾರಿ ರೈಲು ನಿಲ್ದಾಣದ ಸೊಗಸು. ಎರಡು ಗೋಪುರಗಳ ನಡುವಿನ ಸಮತಟ್ಟು ಚಾವಣಿಯ ಸುಂದರ ಕಲ್ಲಿನ ಕಟ್ಟಡ. ಹೆಂಚು ಹೊದಿಸಿದ ಗೋಪುರಗಳ ನಾಲ್ಕು ದಿಕ್ಕಿಗೂ ತಲಾ ಮೂರು ತೆರೆದ ಕಮಾನಿನಾಕಾರದ ಕಿಟಕಿಗಳು. ಸರಳುಗಳಿಲ್ಲ, ಬಾಗಿಲೂ ಇಲ್ಲ. ಅದರ ಕೆಳಗೆ ಮತ್ತೆರಡು ಕಿಟಕಿ, ಮತ್ತೂ ಕೆಳಗೆ ಒಂದು. ಇದು ವಿನ್ಯಾಸ. ಗೋಪುರಗಳ ನಡುವಿನ ಮೇಲಂತಸ್ತಿನ ಹಜಾರ ಕಾಣುವಂತೆ ಆರು ಕಮಾನು ಕಿಟಕಿಗಳು, ಕೆಳ ಅಂತಸ್ತಿನಲ್ಲೂ ಅದೇ ಸೊಗಸು. ಮುಂಭಾಗದ ಕಿರು ಕಟ್ಟಡಕ್ಕೆ ಮೂರು ಕಡೆಯಿಂದ ಪ್ರವೇಶ ದ್ವಾರ. ಅದರ ಪಕ್ಕ ಎರಡು ತೆರೆದ ಕಿಟಕಿಗಳು. ಜಗಲಿಗಳೆಂದರೂ ನಡೆದೀತು. ಅಲ್ಲಿ ಎಲ್ಲಿಯೂ ಬಾಗಿಲುಗಳಿಲ್ಲ. ಎಲ್ಲ ಕಮಾನುಗಳ ಅಂಚಿನ ಸುತ್ತ ಕೆಮ್ಮಣ್ಣಿನ ಬಣ್ಣ. ಕಟ್ಟಡದ ಮೈಗೆಲ್ಲ ಹಾಲಿನ ಬಣ್ಣ. ಕಲ್ಪನೆಯ ರೆಕ್ಕೆಗಳಿಗೆ ಕಟ್ಟಡದ ಚೌಕಟ್ಟು ಎಂದು ಹೇಳಬಹುದೆ? ಖಂಡಿತಾ ಇಲ್ಲ. ಎದುರಿನ ರಸ್ತೆಗೆ ಬಂದು ಮತ್ತೆ ಹಿಂತಿರುಗಿ ನೋಡಿದರೆ ಕಟ್ಟಡ ಆಗಸದಲ್ಲಿ ತೇಲು ತ್ತಿರುವಂತೆ ಭಾಸವಾಗುತ್ತದೆ. ಅದರೊಂದಿಗೇ ನಾವೂ..!


ಸೆಂಟ್ ಫಿಲೊಮಿನಾ ಪ್ರೌಢಶಾಲೆ

ಅಲ್ಲಿ ಹತ್ತಿದ ಆಟೊರಿಕ್ಷಾ ನಿಲ್ದಾಣದ ಹೊರಗಿನ ರಸ್ತೆಗೆ ಬರುತ್ತಿದ್ದಂತೆಯೇ ಕಾಣಿಸಿತು ಮತ್ತೊಂದು ಬಂಗಲೆ. ಅದೇನು? ಎಂದು ಕೇಳಿದರೆ, ಚಾಲಕ ಹೇಳಿದರು: ಅದು ಡಿ.ಸಿ. ಕಚೇರಿ. ಮೂರು ಅಂತಸ್ತಿನ, ಕಲ್ಲಿನಿಂದ ಕಟ್ಟಿದ ವಿಶಾಲ ಅರಮನೆಯಂತೆ ಅದು. ಕಾಕತಾಳೀಯವೇನಲ್ಲ. ರೈಲು ನಿಲ್ದಾಣದ ಎದುರಿಗೇ ಡಿ.ಸಿ. ಕಚೇರಿ ಇರುವುದು.

ಅದೂ ಕಲ್ಲಿನ ಕಟ್ಟಡವೇ. ಅಲ್ಲಿಯೂ ಹತ್ತಾರು ಕಮಾನುಗಳು, ಗೋಪುರಗಳು. ಈಗ ಅಲ್ಲಿ ಹೆಚ್ಚುವರಿ ಡಿ.ಸಿ, ಎ.ಸಿ ಕಚೇರಿ ಸೇರಿದಂತೆ ಹಲವು ಕಚೇರಿಗಳಿವೆ. ಡಿ.ಸಿ ಕಚೇರಿಯ ಒಳಗೆ, ಮೇಲಂತಸ್ತಿನ ಕೊಠಡಿಗಳಲ್ಲಿ, ಹಜಾರದಲ್ಲಿ ನಿಂತು ಸುಮ್ಮನೆ ಕಣ್ಣಾಡಿಸಿದರೆ, ಕಾಲುಗಳು ಚಡಪಡಿಸುತ್ತವೆ. ಅಲ್ಲಿನ ಕಲೆಗಾರಿಕೆಯ ಸೊಗಸೇ ಹಾಗೆ. ಸಾರ್ವಜನಿಕ ಆಡಳಿತ ನಡೆಸುವವರಿಗೆ ಇರುವ ಸೌಂದರ್ಯ ಪ್ರಜ್ಞೆಯ ಸಂಕೇತದಂತೆಯೂ ಅದು ಕಂಗೊಳಿಸುತ್ತದೆ. ಈಗ ಈ ಕಟ್ಟಡವನ್ನು ಮ್ಯೂಸಿಯಂ ಮಾಡಲು ಸಿದ್ಧತೆ ನಡೆದಿದೆ.

ಅದಿರಲಿ, ಇಂಥ ಸೊಗಸಾದ ಕಟ್ಟಡಗಳು ಬಳ್ಳಾರಿ ನಗರದಲ್ಲಿ ಎಲ್ಲ ದಿಕ್ಕಿನಲ್ಲೂ ಇವೆ. ಎಣಿಸುವುದಕ್ಕಿಂತಲೂ ಕುತೂಹಲವಿರಲಿ ಎಂದು ಬಾಯ್ಮಾತಿನಲ್ಲಿ ಹತ್ತಾರು ಎಂದು ಹೇಳಬಹುದು. ಆದರೆ ನೆನಪಿರಲಿ, ಈ ಸೊಗಸಿಗೆ ಕಾರಣ ಬ್ರಿಟಿಷರು.

‘ಬ್ರಿಟಿಷ್‌ ಕರ್ನಾಟಕ’ದ ಚರಿತ್ರೆ: ಹಾಗೆ ಹೇಳುವಾಗ ಒಂದು ವಿಷಯವನ್ನು ಮರೆಯುವಂತಿಲ್ಲ: ಬಳ್ಳಾರಿಯು ರಾಜ ಪ್ರಭುತ್ವ, ಬ್ರಿಟಿಷ್‌ ಪ್ರಭುತ್ವ ಮತ್ತು ಪ್ರಜಾಪ್ರಭುತ್ವದ ನಡುವೆ ಉಯ್ಯಾಲೆಯಾಡಿದ ಹಾಗೂ ‘ಬ್ರಿಟಿಷ್‌ ಕರ್ನಾಟಕ’ದ ಚರಿತ್ರೆಯ ವಿಶೇಷ ಪ್ರದೇಶ.


ಬ್ರಿಟಿಷ್ ಚರ್ಚ್

ಈ ಪ್ರಾಂತ್ಯ ಸಾಮ್ರಾಟ ಅಶೋಕನಾದಿಯಾಗಿ ಹೈದರಾಲಿ, ಟಿಪ್ಪೂ ಸುಲ್ತಾನನವರೆಗೆ ರಾಜರು, ಸಾಮಂತರ ಆಡಳಿತಕ್ಕೆ ಒಳಪಟ್ಟಿತ್ತು. ನಂತರ ಬ್ರಿಟಿಷರು ಆಡಳಿತ ನಡೆಸಿದರು. ಹೀಗಾಗಿಯೇ ಇಲ್ಲಿ ಕೋಟೆ ಕೊತ್ತಲಗಳು, ಕಲ್ಯಾಣಿಗಳು, ಶಸ್ತ್ರಾಗಾರಗಳೂ ಉಂಟು. ಅವುಗಳ ನಡುವೆ ಬ್ರಿಟಿಷರು ಕಟ್ಟಿದ ಸುಂದರ ಕಟ್ಟಡಗಳೂ ಉಂಟು. ಯಾವುದೇ ಆಡಳಿತವು ಆಡಳಿತಗಾರರ ಜೀವನಶೈಲಿಯ ಪ್ರತೀಕವೂ ಆಗಿರುತ್ತದೆ. ಬ್ರಿಟಿಷರು ಇಲ್ಲಿ ನೆಲೆಸಿ, ಆಡಳಿತ ನಡೆಸಿದ್ದರಿಂದಲೇ ಅವರ ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಪ್ರಜ್ಞೆ ಹಾಗೂ ಆಧುನಿಕ ಜೀವನ ಶೈಲಿಗೆ ತಕ್ಕಂಥ ಕಚೇರಿ, ಶಾಲೆ, ಪೊಲೀಸ್‌ ಠಾಣೆ, ಚರ್ಚ್‌ಗಳನ್ನು ನಿರ್ಮಿಸಿದರು. ಇಲ್ಲಿ ಕ್ರಿಶ್ಚಿಯನ್‌ ಮಿಷನರಿಗಳ ಪಾತ್ರ ದೊಡ್ಡದು.

1799ರ 4ನೇ ಆಂಗ್ಲ ಮೈಸೂರು ಯುದ್ಧದಲ್ಲಿ ಟಿಪ್ಪು ವಿರುದ್ಧ ಬ್ರಿಟಿಷರ ಜೊತೆಯಲ್ಲಿದ್ದ ಹೈದರಾಬಾದ್‌ ನಿಜಾಮ, ಸಹಾಯಕ ಸೈನ್ಯ ಪದ್ಧತಿಗೆ ಒಪ್ಪಿಕೊಂಡು, ಬಳ್ಳಾರಿ ಪ್ರಾಂತ್ಯವನ್ನು 1800ರಲ್ಲಿ ಬ್ರಿಟಿಷರಿಗೆ ಬಿಟ್ಟುಕೊಟ್ಟ ಬಳಿಕ ಬಳ್ಳಾರಿಯ ಸ್ವರೂಪ ಬದಲಾಯಿತು. ಬಿರುಬಿಸಿಲು, ಕಪ್ಪುಮಣ್ಣಿನ ಈ ಪ್ರದೇಶ ಬ್ರಿಟಿಷ್‌ ಸೈನಿಕರ ನೆಲೆಯಾಗಿ 147 ವರ್ಷ ಬ್ರಿಟಿಷರ ನೇರ ಆಡಳಿತಕ್ಕೆ ಒಳಪಟ್ಟಿತ್ತು.

ಎಷ್ಟೊಂದು ಕಟ್ಟಡಗಳು: ಬೆಂಗಳೂರು ರಸ್ತೆಯಲ್ಲಿರುವ ಬ್ರೂಸ್‌ಪೇಟೆ ಠಾಣೆ, ಕೋಟೆ ಮಲ್ಲೇಶ್ವರನ ಗುಡಿಯ ಸಮೀಪದಲ್ಲಿರುವ ಬ್ರಿಟಿಷ್‌ ಚರ್ಚ್‌, ಬಳ್ಳಾರಿ ಜೈಲು ಎಂದೇ ಕರೆಯಲ್ಪಡುವ ಕೇಂದ್ರ ಕಾರಾಗೃಹ, ನಗರದ ಹೊರಗಿದ್ದ ಅಲ್ಲೀಪುರ ಜೈಲು (ಈಗ ಅಲ್ಲಿ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ –ವಿಮ್ಸ್‌ ಕಾರ್ಯನಿರ್ವಹಿಸುತ್ತಿದೆ), ಎರಡು ಶತಮಾನ ಕಂಡಿರುವ ನ್ಯಾಯಾಲಯ ಕಟ್ಟಡಗಳು, ದಂಡು ಪ್ರದೇಶದಲ್ಲಿದ್ದ ಸೈನಿಕರ ವಸತಿ ಗೃಹಗಳು, ಮದ್ದು–ಗುಂಡು ದಾಸ್ತಾನು ಕಟ್ಟಡ, ಕೋಟೆ ಪ್ರದೇಶದಲ್ಲಿರುವ ಯುದ್ಧ ಸಾಮಗ್ರಿ ದಾಸ್ತಾನು ಕಟ್ಟಡ, ಡಿ.ಸಿ ಕಚೇರಿ, ಅನಂತಪುರ ರಸ್ತೆಯಲ್ಲಿರುವ ಡಿ.ಸಿ. ಬಂಗಲೆ, ಸಿರುಗುಪ್ಪ ರಸ್ತೆಯಲ್ಲಿರುವ ರೈಲು ಸಿಬ್ಬಂದಿಗಳ ವಾಸದ ಸಂಕೀರ್ಣ, ವಾರ್ಡ್ಲಾ ಹೈಸ್ಕೂಲ್‌, ಸತ್ಯನಾರಾಯಣಪೇಟೆಯ ಲಂಡನ್‌ ಮಿಷನ್‌ ಕನ್ನಡ ಶಾಲೆ, ಸೆಂಟ್‌ ಜಾನ್ಸ್‌ ಹೈಸ್ಕೂಲ್‌, ಸೆಂಟ್‌ ಫಿಲೋಮಿನಾ ಶಾಲೆ, ಬಾಲಕಿಯರ ಪ್ರೌಢಶಾಲೆ, ರೇಡಿಯೊ ಪಾರ್ಕ್‌ ಪ್ರದೇಶದ ಶಿಕ್ಷಕರ ತರಬೇತಿ ಶಾಲೆ, ಕೋಟೆ ಪ್ರದೇಶದಲ್ಲಿರುವ ಹಾಗೂ ಡಿ.ಸಿ ಕಚೇರಿ ಪಕ್ಕದ ರಸ್ತೆಯಲ್ಲಿರುವ ಅಂಚೆ ಕಚೇರಿ, ತಾಳೂರು ರಸ್ತೆಯಲ್ಲಿರುವ ನ್ಯಾಯಾಧೀಶರ ಬಂಗಲೆ... ಇವುಗಳ ಪೈಕಿ ಕೆಲವು ಪಾಳು ಬಿದ್ದಿವೆ. ಕೆಲವೆಡೆ ಕಟ್ಟಡ ನೆಲಸಮ ಮಾಡಿ ಹೊಸ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಕೆಲವು ಕಟ್ಟಡಗಳನ್ನು ಆಗ ಬಳ್ಳಾರಿಯಲ್ಲಿ ಗುತ್ತಿಗೆದಾರರಾಗಿದ್ದ ಸಕ್ಕರೆ ಕರೆಡಪ್ಪ ನಿರ್ಮಿಸಿದ್ದರು ಎಂದೂ ಹೇಳಲಾಗುತ್ತದೆ.


ರೈಲು ನಿಲ್ದಾಣ

ಬ್ರೂಸ್‌ಪೇಟೆ ಪೊಲೀಸ್‌ ಠಾಣೆ: ಹಳೇ ಬೆಂಗಳೂರು ರಸ್ತೆಯ ಒಂದು ವೃತ್ತದಲ್ಲಿ, ವಾಹನಗಳ ದಟ್ಟಣೆ ನಡುವೆ ಮೂಲೆಗುಂಪಾದಂತೆ ಕಾಣುವ, ನಿಜಕ್ಕೂ ಮೂಲೆಯಲ್ಲೇ ಇರುವ ಬ್ರೂಸ್‌ಪೇಟೆ ಪೊಲೀಸ್‌ ಠಾಣೆಯು ಇಲ್ಲಿ ಆಡಳಿತ ನಡೆಸಿದ ಕಲೆಕ್ಟರ್‌ ಬ್ರೂಸ್‌ನ ನೆನಪು ತರುತ್ತದೆ. ಅಲ್ಲಿಂದ ಮುಂದಕ್ಕೆ ಹೋದರೆ ಮತ್ತೆ ಮಿಲ್ಲರ್‌ ಪೇಟೆ ಸಿಗುತ್ತದೆ. ಅದು 1840–48ರಲ್ಲಿ ಕಲೆಕ್ಟರ್‌ ಆಗಿದ್ದ ಎ.ಮಿಲ್ಲರ್‌ ನೆನಪಿಗಾಗಿ ಇಟ್ಟ ಹೆಸರು.

ಬಳ್ಳಾರಿ ಜೈಲು: ನಗರದಲ್ಲಿರುವ ಬ್ರಿಟಿಷರ ಕಾಲದ ಕಟ್ಟಡಗಳ ಪೈಕಿ ಬಳ್ಳಾರಿ ಜೈಲುಗಳಿಗೆ ಇರುವ ಖದರೇ ಬೇರೆ. ಏಕೆಂದರೆ ಇಲ್ಲಿನ ಜೈಲುಗಳು ಅಪರಾಧ ಕೈದಿಗಳ ಹಿನ್ನೆಲೆಯಿಂದಷ್ಟೇ ಅಲ್ಲದೆ, ಯುದ್ಧ ಹಾಗೂ ಸ್ವಾತಂತ್ರ್ಯ ಹೋರಾಟದ ಕೈದಿಗಳ ಹಿನ್ನೆಲೆಯಿಂದಲೂ ಗಮನ ಸೆಳೆಯುವಂಥವು.

ಬ್ರಿಟಿಷ್‌ ಆಡಳಿತದ ಮೊದಲ ಕಲೆಕ್ಟರ್‌ ಆಗಿದ್ದ ಸರ್ ಥಾಮಸ್‌ ಮನ್ರೋ ಪ್ರಯತ್ನದ ಫಲವಾಗಿ ನಗರದಲ್ಲಿ 1884ರಲ್ಲಿ ಜೈಲು ಸ್ಥಾಪನೆಯಾಗಿತ್ತು. ಅದರೊಂದಿಗೆ, ಮೊದಲ ಮಹಾಯುದ್ಧ ಕಾಲದಲ್ಲಿ ನಗರ ಹೊರವಲಯದ ಅಲ್ಲೀಪುರದಲ್ಲಿ ಇನ್ನೊಂದು ಜೈಲನ್ನು ಸ್ಥಾಪಿಸಲಾಗಿತ್ತು. ಮಹಾತ್ಮ ಗಾಂಧೀಜಿ ಸೇರಿದಂತೆ ಹಲವು ಸ್ವಾತಂತ್ರ್ಯ ಹೋರಾಟಗಾರರನ್ನು, ಕೇರಳದಲ್ಲಿ ನಡೆದಿದ್ದ ಮಾಪಿಳ್ಳಾ ದಂಗೆಯಲ್ಲಿ ಸೆರೆಸಿಕ್ಕಿದ ಸಾವಿರಾರು ಮುಸ್ಲಿಂ ಗೇಣಿದಾರರನ್ನು, ಆಂಗ್ಲೋ–ಟರ್ಕಿ ಯುದ್ಧದಲ್ಲಿ ಭಾಗಿಯಾಗಿದ್ದ ಟರ್ಕಿ ದೇಶದ ಕೈದಿಗಳನ್ನೂ ಅಲ್ಲಿ ಇಡಲಾಗಿತ್ತು. ಜೈಲಿನಲ್ಲೇ ಮೃತಪಟ್ಟ ಯುದ್ಧ ಕೈದಿಗಳ ಸಮಾಧಿಗಳೂ ನಗರದಲ್ಲಿವೆ. ಸ್ವಾತಂತ್ರ್ಯ ಹೋರಾಟದ ಬಳಿಕ ಮಹತ್ವ ಕಳೆದುಕೊಂಡ ಅಲ್ಲೀಪುರ ಜೈಲು ಕ್ರಮೇಣ ವಿಮ್ಸ್‌ ಆಸ್ಪತ್ರೆಯಾಯಿತು. ಸೈನಿಕರ ಬ್ಯಾರಕ್‌ಗಳು ವೈದ್ಯರ ನಿವಾಸಗಳಾದವು. ಹೋರಾಟಗಾರರನ್ನು ಇರಿಸಿದ್ದ ಸೆಲ್‌ಗಳನ್ನೇ ‘ಸ್ವಾತಂತ್ರ್ಯ ಸೌಧ’ ವನ್ನಾಗಿ ವಿಮ್ಸ್‌ ಆವರಣ ದಲ್ಲಿ ನಿರ್ಮಿಸಿದ್ದರೂ, ನಿರ್ವಹಣೆ ಇಲ್ಲದೆ ಸೊರಗಿದೆ.

ಇವು ಕೇವಲ ಒಂದೆರಡು ಪ್ರಮುಖ ಕಟ್ಟಡಗಳ ಕಥೆಯಷ್ಟೇ. ಒಂದೊಂದು ಕಟ್ಟಡದ ಮುಂದೆ ನಿಂತರೂ ಚರಿತ್ರೆಯ ಒಂದೊಂದು ಕಥೆ ಬಿಚ್ಚಿಕೊಳ್ಳುತ್ತದೆ. ಬ್ರಿಟಿಷರ ವರ್ಣರಂಜಿತ, ಆಧುನಿಕ ಶೈಲಿಯ ಆಡಳಿತ, ಸ್ವಾತಂತ್ರ್ಯ ಹೋರಾಟದ ಕಿಚ್ಚು, ಮಹಾಯುದ್ಧದ ಉನ್ಮಾದ, ಯುದ್ಧಕೈದಿಗಳ ಸಾವು–ಸಮಾಧಿ ಹೀಗೆ... ಕಟ್ಟಡಗಳು ನವರಸಗಳ ಸಮ್ಮಿಶ್ರಣವನ್ನು ಮೌನವಾಗಿ ಬಡಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT