ಸೋಮವಾರ, ಆಗಸ್ಟ್ 3, 2020
25 °C

ಎಸ್‌ಬಿಐ ಬಡ್ಡಿ ದರ ಕಡಿತ

ಪಿಟಿಐ Updated:

ಅಕ್ಷರ ಗಾತ್ರ : | |

ಎಸ್‌ಬಿಐ ಬಡ್ಡಿ ದರ ಕಡಿತ

ಮುಂಬೈ: ಸರ್ಕಾರಿ ಸ್ವಾಮ್ಯದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ), ಗೃಹ ಸಾಲ ಮಂಜೂರಾತಿ ಶುಲ್ಕ ಮನ್ನಾ ಸೌಲಭ್ಯವನ್ನು ಮಾರ್ಚ್‌ ಅಂತ್ಯದವರೆಗೆ ವಿಸ್ತರಿಸಿದ್ದು, ಮೂಲ ದರವನ್ನು ಶೇ 0.30ರಷ್ಟು ಕಡಿಮೆ ಮಾಡಿದೆ.

ಮೂಲ ದರ ಕಡಿತವು (ಶೇ 8.95 ರಿಂದ ಶೇ 8.65ಕ್ಕೆ) ಸೋಮವಾರದಿಂದ ಜಾರಿಗೆ ಬಂದಿದೆ. ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ (ಎಂಸಿಎಲ್‌ಆರ್‌) ಬಡ್ಡಿ ದರದ ಬದಲು, ಈಗಲೂ ಮೂಲ ದರ ಆಧರಿಸಿ ಗೃಹ ಸಾಲ ಪಡೆದ 80 ಲಕ್ಷ ಗ್ರಾಹಕರಿಗೆ ಇದರಿಂದ ಪ್ರಯೋಜನ ಲಭಿಸಲಿದೆ.

ಬಳಿಯಲ್ಲಿ ಹೆಚ್ಚಿನ ನಗದುತನ ಇರುವ ಕಾರಣಕ್ಕೆ ಎಸ್‌ಬಿಐ, ಕಳೆದ ವರ್ಷದ ಆಗಸ್ಟ್‌ನಲ್ಲಿ ವಾಹನ ಮತ್ತು ಗೃಹ ಸಾಲ ಮಂಜೂರಾತಿ ಶುಲ್ಕ ರದ್ದು ಮಾಡಿತ್ತು.  ಹೊಸದಾಗಿ ಸಾಲ ಪಡೆಯುವವರಿಗೆ ಮತ್ತು ಗೃಹ ಸಾಲವನ್ನು ಎಸ್‌ಬಿಐಗೆ ವರ್ಗಾಯಿಸುವವರಿಗೆ ಈ ಸೌಲಭ್ಯವನ್ನು 2018ರ  ಮಾರ್ಚ್‌ 31ರವರೆಗೆ ವಿಸ್ತರಿಸಲಾಗಿದೆ. ‌

ಮೂಲ ದರ ಕಡಿತ: ಬ್ಯಾಂಕ್‌ನ ಹಾಲಿ ಗ್ರಾಹಕರಿಗೆ ಮೂಲ ದರವನ್ನು ಶೇ 8.95 ರಿಂದ ಶೇ 8.65ಕ್ಕೆ ಮತ್ತು ಸಾಲ ನೀಡಿಕೆ ದರವನ್ನು (ಬಿಪಿಎಲ್‌ಆರ್‌) ಶೇ 13.70 ರಿಂದ ಶೇ 13.40ಕ್ಕೆ ಇಳಿಸಲಾಗಿದೆ.

ಆದರೆ, ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿ ನಿಗದಿ ಮಾಡುವ (ಎಂಸಿಎಲ್‌ಆರ್‌) ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸದ್ಯಕ್ಕೆ ಬ್ಯಾಂಕ್‌ನ ‘ಎಂಸಿಎಲ್‌ಆರ್‌’ ಶೇ 7.95ರಷ್ಟಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ ಅಲ್ಪಾವಧಿ ಬಡ್ಡಿ ದರಗಳನ್ನು ಕಡಿತ ಮಾಡಿದಾಗಲ್ಲೆಲ್ಲ, ವಾಣಿಜ್ಯ ಬ್ಯಾಂಕ್‌ಗಳು ಅದರ ಸಂಪೂರ್ಣ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸುತ್ತಿರಲಿಲ್ಲ. ಹೀಗಾಗಿ ಆರ್‌ಬಿಐ, ಮೂಲ ದರದ ಬದಲಿಗೆ, ‘ಎಂಸಿಎಲ್‌ಆರ್‌’ ಜಾರಿಗೆ ತಂದಿತ್ತು. ಬ್ಯಾಂಕ್‌ಗಳು ‘ಎಂಸಿಎಲ್‌ಆರ್‌’ ಅನ್ನು ತಿಂಗಳು ಮತ್ತು ಮೂಲ ದರವನ್ನು ತ್ರೈಮಾಸಿಕ ಆಧಾರದಲ್ಲಿ ಪರಾಮರ್ಶಿಸುತ್ತವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.