ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಸೇರಿ 11 ನಗರಗಳು ಆಯ್ಕೆ

Last Updated 1 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ನಿರ್ಧರಿಸಿರುವ ಕೇಂದ್ರ ಸರ್ಕಾರ, ಈ ಉದ್ದೇಶಕ್ಕಾಗಿ ಬೆಂಗಳೂರು ಸೇರಿದಂತೆ ದೇಶದ 11 ನಗರಗಳನ್ನು ಆಯ್ಕೆ ಮಾಡಿದೆ.

ಸಾರ್ವಜನಿಕ ಸಾರಿಗೆಗೆ ಬಳಕೆಯಾಗುವ ಬಸ್‌, ಟ್ಯಾಕ್ಸಿ ಮತ್ತು ಆಟೊ ರಿಕ್ಷಾಗಳನ್ನು ಎಲೆಕ್ಟ್ರಿಕ್‌ ವ್ಯವಸ್ಥೆಗೆ ಬದಲಿಸುವ ನಿಟ್ಟಿನಲ್ಲಿ ‘ಫಾಸ್ಟರ್‌ ಅಡಾಪ್ಷನ್‌ ಅಂಡ್‌ ಮೆನ್ಯುಫ್ಯಾಕ್ಚರಿಂಗ್‌ ಆಫ್‌ ಹೈಬ್ರಿಡ್‌ ಅಂಡ್‌ ಎಲೆಕ್ಟ್ರಿಕ್‌ ವೆಹಿಕಲ್ಸ್‌ ಇನ್‌ ಇಂಡಿಯಾ’ (ಫೇಮ್‌ ಇಂಡಿಯಾ) ಯೋಜನೆ ಅಡಿ ಈ ನಗರಗಳನ್ನು ಆಯ್ಕೆ ಮಾಡಲಾಗಿದೆ ಎಂದು ಕೇಂದ್ರದ ಭಾರಿ ಕೈಗಾರಿಕೆ ಸಚಿವಾಲಯ ತಿಳಿಸಿದೆ.

ನವದೆಹಲಿ, ಅಹಮದಾಬಾದ್‌, ಜೈಪುರ, ಮುಂಬೈ, ಲಕ್ನೌ, ಹೈದರಾಬಾದ್‌, ಇಂದೋರ್‌, ಕೋಲ್ಕತ್ತ, ಜಮ್ಮು ಮತ್ತು ಗುವಾಹತಿ ನಗರಗಳು ಈ ಯೋಜನೆಗಾಗಿ ಬೆಂಗಳೂರಿನ ಜೊತೆ ಆಯ್ಕೆಯಾಗಿರುವ ದೇಶದ ಇತರ ನಗರಗಳಾಗಿವೆ.

ಯೋಜನೆ ಅಡಿ ಎಲೆಕ್ಟ್ರಿಕ್‌ ಬಸ್‌, ಆಟೊ ರಿಕ್ಷಾ ಮತ್ತು ಟ್ಯಾಕ್ಸಿ ಖರೀದಿಸಲು ಹಾಗೂ ಮೂಲ ಸೌಕರ್ಯ ಅಭಿವೃದ್ಧಿಪಡಿಸಲು ಆಯಾ ರಾಜ್ಯಗಳಿಗೆ ಆರ್ಥಿಕ ನೆರವು ನೀಡಲು ನಿರ್ಧರಿಸಲಾಗಿದ್ದು, ₹ 437 ಕೋಟಿ ಅನುದಾನ ಮಂಜೂರು ಮಾಡಲಾಗುವುದು. ಇದರಲ್ಲಿ ₹ 40 ಕೋಟಿ ಅನುದಾನವನ್ನು ಮೂಲಸೌಕರ್ಯ ಅಭಿವೃದ್ಧಿಗಾಗಿ ಬಳಸಲೆಂದೇ ಮೀಸಲಿರಿಸಲಾಗಿದೆ.

ಬಸ್‌ ಖರೀದಿಸಲು ಅಗತ್ಯವಿರುವ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಹಾಗೂ ಅಗತ್ಯ ಮೂಲ ಸೌಕರ್ಯ ಅಭಿವೃದ್ಧಿಪಡಿಸುವಂತೆ ಆಯಾ ರಾಜ್ಯ ಸರ್ಕಾರಗಳಿಗೆ ಸೂಚಿಸಿರುವ ಕೇಂದ್ರ, ಎಲೆಕ್ಟ್ರಿಕ್‌ ಬಸ್‌ಗಳ ಖರೀದಿಗಾಗಿ ₹ 1 ಕೋಟಿ, ಟ್ಯಾಕ್ಸಿ ಖರೀದಿಗಾಗಿ ₹ 1.24 ಲಕ್ಷ ಹಾಗೂ ಆಟೊ ರಿಕ್ಷಾ ಖರೀದಿಗಾಗಿ ₹61,000 ದವರೆಗೆ ಸಹಾಯಧನ ಸೌಲಭ್ಯ ನೀಡಲಿದೆ.

ಈ ವಾಹನಗಳಲ್ಲಿ ಬಳಸಲಾಗುವ ಲೀಥಿಯಂ ಬ್ಯಾಟರಿಗಳನ್ನು ಕಡಿಮೆ ಬೆಲೆಗೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT