ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ವರ್ಷದಲ್ಲಿ ಹೊಸ ಚಿಂತನೆ

Last Updated 1 ಜನವರಿ 2018, 19:30 IST
ಅಕ್ಷರ ಗಾತ್ರ

ಹೊಸ ವರ್ಷಾರಂಭದ ಸಾಮಾನ್ಯ ಚಟುವಟಿಕೆಗಳು ಇವು: ವಿವಿಧ ಸಂದರ್ಭಗಳಲ್ಲಿ ಖರೀದಿಸಿದ ಹೊಸ ಬಟ್ಟೆಗಳನ್ನು ಇಡಲು ಜಾಗವಿಲ್ಲದೆ ಕಪಾಟಿನಲ್ಲಿದ್ದ ಹಳೆಯ, ನಮ್ಮ ಶರೀರದ ಗಾತ್ರಕ್ಕೆ ಸರಿಯಾಗದ, ಹಳೆಯ ಬಟ್ಟೆಗಳನ್ನು ಹುಡುಕಿ ತೆಗೆದು ಮೂಟೆಕಟ್ಟಿ ಮನೆಬಾಗಿಲಿಗೆ ಸಹಾಯವನ್ನು ಯಾಚಿಸಿ ಬರುವ ಬಡವರಿಗೆ ನೀಡಿ ನಮ್ಮ ಔದಾರ್ಯವನ್ನು ಮೆರೆಯುವುದೋ ಅಥವಾ ಯಾವುದಾದರೂ ಅನಾಥಾಶ್ರಮಕ್ಕೆ ಕೊಂಡೊಯ್ದು ಕೊಟ್ಟು, ನಮ್ಮ ಅಂತಃಕರಣವನ್ನು ತೃಪ್ತಿಪಡಿಸುವುದೋ ನಡೆಯುತ್ತದೆ. ಹಲವು ಸಲ, ಇಂಥಹ ನಿರುಪಯುಕ್ತ ವಸ್ತುಗಳನ್ನು ಕೊಂಡೊಯ್ವು ಹೆದ್ದಾರಿ ಬದಿಯಲ್ಲಿ ಬಿಸಾಡಿ ನಮ್ಮ ಮನೆ ಶುದ್ಧವಾಯಿತು ಎಂದುಕೊಳ್ಳುವುದೂ ಉಂಟು. ಅಂತೆಯೇ ಗೋಡೆಯ ಮೇಲಿನ ಹಳೆಯ ಕ್ಯಾಲೆಂಡರ್, ಮೇಜಿನ ಮೇಲಿನ ಹಳೆಯ ಪ್ಲ್ಯಾನರ್, ಹಳೆಯ ಡೈರಿ, ಇನ್ನಿತರಗಳನ್ನು ಕಸದ ಬುಟ್ಟಿಗೆ ಹಾಕಿ ಅವುಗಳ ಸ್ಥಾನದಲ್ಲಿ ಹೊಸ ಕ್ಯಾಲೆಂಡರ್, ಪ್ಲ್ಯಾನರ್, ಡೈರಿ, ಇನ್ನಿತರ ವಸ್ತುಗಳನ್ನು ಜೋಡಿಸಿ ಹೊಸವರ್ಷದಲ್ಲಿ ಹೊಸತನ ಬಂತೆನ್ನುವುದು ನಿಜಕ್ಕೂ ಹಾಸ್ಯಾಸ್ಪದ. ಆಲೋಚನಾ ರೀತಿ ಹಾಗೂ ಮನೋಭಾವದಲ್ಲಿ ಬದಲಾವಣೆಯಾಗಿ ಹೊಸತನ ಬರದಿದ್ದರೆ ಬಾಹ್ಯ ವಿಷಯಗಳು ಅರ್ಥಹೀನ.

ಒಂಟಿ ಶ್ರೀಮಂತ ಮಹಿಳೆಯೊಬ್ಬಳು ಪೂರ್ವಜರಿಂದ ಬಂದ ಹಳೆಯ ಮನೆಯೊಂದರಲ್ಲಿ ವಾಸಿಸುತ್ತಿದ್ದಳು. ತನ್ನ ಮನೆಯ ಸುತ್ತಮುತ್ತ ಹೊಸ, ಸುಂದರ, ವೈಭವೋಪೇತ ಕಟ್ಟಡಗಳು ಏಳುತ್ತಿದ್ದುದ್ದನ್ನು ಕಂಡು ತನ್ನ ಹಳೆಯ ಮನೆಯ ಬಗ್ಗೆ ಅತೃಪ್ತಿಪಟ್ಟು ಬೇಸರಗೊಂಡು ತಾನೂ ಹೊಸ ಮನೆಯಲ್ಲಿ ವಾಸಿಸಬೇಕು ಎಂದುಕೊಂಡಳು. ಕಟ್ಟಡ ನಿರ್ಮಾಪಕನೊಬ್ಬನನ್ನು ಕರೆದು, ಹೊಸ ಮನೆಯೊಂದನ್ನು ಖರೀದಿಸಲು ಸಹಾಯವನ್ನು ಯಾಚಿಸಿ, ತನ್ನ ಹಳೆಯ ಮನೆಗೆ ಒಳ್ಳೆಯ ಗಿರಾಕಿಯೊಬ್ಬನನ್ನು ಹುಡುಕಿಕೊಡಲು ಕೇಳಿಕೊಂಡಳು. ಹಳೆಯ ಮನೆಯನ್ನು ಮಾರುವ ಮೊದಲು ಆ ಕಟ್ಟಡ ನಿರ್ಮಾಪಕನು ಹಣ ಖರ್ಚುಮಾಡಿ ಅದಕ್ಕೆ ಸುಂದರವಾದ ರೂಪವನ್ನು ನೀಡಿದ. ಆನಂತರ ವಾರ್ತಾಪತ್ರಿಕೆಯಲ್ಲಿ ಆ ಕಟ್ಟಡದ ಪ್ರತಿಯೊಂದು ವ್ಯವಸ್ಥೆಯ ಬಗ್ಗೆ ಸುಂದರವಾದ ವಿವರಣೆಯನ್ನು ನೀಡಿ ಜಾಹೀರಾತೊಂದನ್ನು ಪ್ರಕಟಿಸಿದ. ಪ್ರತಿನಿತ್ಯ ವಾರ್ತಾಪತ್ರಿಕೆಗಳಲ್ಲಿ ಹೊಸಮನೆಯ ಹುಡುಕಾಟದಲ್ಲಿದ್ದ ಮಹಿಳೆಯು ಕಟ್ಟಡ ನಿರ್ಮಾಪಕ ಪ್ರಕಟಿಸಿದ್ದ ಜಾಹೀರಾತನ್ನು ಓದಿ ಅದರಿಂದ ಬಹಳವಾಗಿ ಪ್ರಭಾವಿತಳಾದಳು. ಆ ಮನೆಯಲ್ಲಿದ್ದ ವ್ಯವಸ್ಥೆಗಳು ಅವಳು ಬಯಸಿದಂತೇ ಇದ್ದು, ಅದೇ ಮನೆಯನ್ನು ಖರೀದಿಸಲು ನಿರ್ಧರಿಸಿದಳು. ಆದರೆ, ಆ ಕಟ್ಟಡ ನಿರ್ಮಾಪಕನಿಗೆ ಫೋನ್ ಮಾಡಿದ ನಂತರ ತಾನೇ ಅವಳಿಗೆ ತಿಳಿದದ್ದು ಅದು ತಾನು ತಿರಸ್ಕರಿಸಿದ್ದ ತನ್ನದೇ ಹಳೆಯ ಮನೆ ಎಂದು.

ಜೀವನದ ಹಲವು ವಿಷಯಗಳ ಬಗ್ಗೆ ಬೋರಾಗಿ ನಾವು ನಿರಾಸೆಯಲ್ಲಿದ್ದೇವೆ. ಪ್ರತಿನಿತ್ಯ ಅದೇ ಮನೆ, ಅದೇ ಕುಟುಂಬ, ಅದೇ ಕೆಲಸ. ಏಕತಾನತೆಯಿಂದ ಜೀವನದಲ್ಲಿ ಆಸಕ್ತಿಯನ್ನು ಕಳೆದುಕೊಂಡಿದ್ದೇವೆ. ಆದರೆ, ದಿನನಿತ್ಯದ ಈ ವಿಷಯಗಳನ್ನು ಹೊಸ ದೃಷ್ಟಿಯಲ್ಲಿ ನೋಡಿದರೆ, ಸ್ವೀಕರಿಸಿದರೆ ಅವುಗಳಲ್ಲಿರುವ ಹೊಸತನವನ್ನು ನಾವು ಕಾಣಲು ಸಾಧ್ಯ. ನೂತನ ವರ್ಷದಲ್ಲಿ ಎಲ್ಲದರಲ್ಲೂ ಹೊಸತನವನ್ನು ಕಂಡು ನಮ್ಮ ಜೀವನಾಸಕ್ತಿ ಬೆಳೆದು, ಬದುಕು ಹಸನಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT