ಪ್ಯಾಂಟ್‌ ಎಳೆದು, ಬಟ್ಟೆಗೆ ಕೈ ಹಾಕಿದರು?

7

ಪ್ಯಾಂಟ್‌ ಎಳೆದು, ಬಟ್ಟೆಗೆ ಕೈ ಹಾಕಿದರು?

Published:
Updated:
ಪ್ಯಾಂಟ್‌ ಎಳೆದು, ಬಟ್ಟೆಗೆ ಕೈ ಹಾಕಿದರು?

ಬೆಂಗಳೂರು: ಭಾನುವಾರ ರಾತ್ರಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಬ್ರಿಗೇಡ್‌ ರಸ್ತೆಯಲ್ಲಿ ನೂಕುನುಗ್ಗಲು ಉಂಟಾದ ವೇಳೆ ಕಿಡಿಗೇಡಿಗಳು ಮಹಿಳೆಯರಿಗೆ ಕಿರುಕುಳ ನೀಡಿದ್ದಾರೆ. ಹಲವರೊಂದಿಗೆ ತೀರಾ ಅನುಚಿತವಾಗಿ ವರ್ತಿಸಿದ್ದಾರೆ.

ತಡರಾತ್ರಿ 12 ಗಂಟೆಗೆ ಸಂಭ್ರಮಾಚರಣೆ ಬಳಿಕ ಬ್ರಿಗೇಡ್‌ ರಸ್ತೆಯಲ್ಲಿ ಜನರ ಓಡಾಟವನ್ನು ಪೊಲೀಸರು ನಿರ್ಬಂಧಿಸಿದ್ದರು. ಅಲ್ಲಿ ಸೇರಿದ್ದವರನ್ನು ಲಾಠಿ ಬೀಸಿ ಚದುರಿಸಿದ್ದರು. ಈ ವೇಳೆ ನೂಕುನುಗ್ಗಲು ಉಂಟಾಯಿತು.

ಜನಸಂದಣಿಯ ನಡುವೆ ಇಂದಿರಾ ನಗರದ ದಂಪತಿ ಸಿಲುಕಿದ್ದರು. ಈ ವೇಳೆ ಪತ್ನಿ ಜೊತೆ ಕಿಡಿಗೇಡಿಗಳು ಅನುಚಿತವಾಗಿ ವರ್ತಿಸಿದ್ದನ್ನು ಪತಿ ಪ್ರಶ್ನಿಸಿದ್ದರು. ಅವರ ಮೇಲೆಯೇ ಕಿಡಿಗೇಡಿಗಳು ಹಲ್ಲೆ ನಡೆಸಲು ಮುಂದಾಗಿದ್ದರು. ಪತ್ನಿಯನ್ನು ರಕ್ಷಿಸಿಕೊಂಡು ಪತಿ ಹೊರಗೆ ಬಂದು, ಕಟ್ಟಡವೊಂದರ ಬಳಿ ಆಶ್ರಯ ಪಡೆದರು. ರಕ್ಷಣೆಗೆ ಬಾರದ ಪೊಲೀಸರ ವಿರುದ್ಧ ಅವರು ಅಸಮಾಧಾನ ವ್ಯಕ್ತಪಡಿಸಿದರು.

ನಂಬಿಕೆ ಹುಸಿಯಾಯಿತು: ಘಟನೆ ಬಗ್ಗೆ ಅಹವಾಲು ತೋಡಿಕೊಂಡ ಪತಿ, ‘ಬ್ರಿಗೇಡ್‌ ರಸ್ತೆಯಲ್ಲಿ ನೂಕುನುಗ್ಗಲಿನ ವೇಳೆ ಕೆಲವರು ಉದ್ದೇಶಪೂರ್ವಕವಾಗಿ ಯುವತಿಯರ ಮೈಮೇಲೆ ಬೀಳಲು ಆರಂಭಿಸಿದರು. ಅದನ್ನು ಪ್ರಶ್ನಿಸುವವರು ಯಾರೂ ಇರಲಿಲ್ಲ. ಪೊಲೀಸರು ಭದ್ರತೆ ಒದಗಿಸಿರುತ್ತಾರೆ ಎಂಬ ಕಾರಣಕ್ಕೆ ಪತ್ನಿ ಜತೆ ಬ್ರಿಗೇಡ್‌ ರಸ್ತೆಗೆ ಬಂದಿದ್ದೆ. ನನ್ನ ನಂಬಿಕೆ ಹುಸಿಯಾಯಿತು’ ಎಂದು ದೂರಿದರು.

‘ಕೆಲವರಂತೂ ಯುವತಿಯರ ಪ್ಯಾಂಟ್‌ ಎಳೆಯಲು ಹಾಗೂ ಬಟ್ಟೆಯೊಳಗೆ ಕೈ ಹಾಕಲು ಯತ್ನಿಸಿದರು. ಈ ದೃಶ್ಯಗಳನ್ನು ಕಣ್ಣಾರೆ ಕಂಡೆ. ನನ್ನ ಪತ್ನಿಗೂ ಅಂಥ ಅನುಭವವಾಯಿತು. ಅದನ್ನು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆಯೇ ಕೆಲವರು ಮುಗಿಬಿದ್ದರು. ಪತ್ನಿಯನ್ನು ಕರೆದುಕೊಂಡು ಹೊರಗೆ ಬಂದೆ. ನನ್ನ ಹಿಂದೆಯೇ ಇದ್ದ ಹಲವು ದಂಪತಿ ತೊಂದರೆಗೆ ಸಿಲುಕಿದರು’ ಎಂದರು.

‘ಆರಂಭದಲ್ಲಿ ದಂಪತಿಯನ್ನಷ್ಟೇ ಪೊಲೀಸರು ಒಳಗೆ ಬಿಟ್ಟಿದ್ದರು. ಯುವಕರನ್ನು ಪ್ರತ್ಯೇಕವಾಗಿ ಬ್ರಿಗೇಡ್‌ ಜಂಕ್ಷನ್‌ನತ್ತ ಕಳುಹಿಸಿದ್ದರು. ಬಳಿಕ ಅಷ್ಟೊಂದು ಯುವಕರು ಎಲ್ಲಿಂದ ಬಂದರು ಎಂದೇ ಗೊತ್ತಾಗಲಿಲ್ಲ’ ಎಂದು ತಿಳಿಸಿದರು.

ಮಹಿಳೆಗೆ ಆಘಾತ: ‘ಘಟನೆಯಿಂದ ಪತ್ನಿ ಆಘಾತಕ್ಕೆ ಒಳಗಾಗಿದ್ದು, ಯಾರ ಜತೆಯೂ ಸರಿಯಾಗಿ ಮಾತನಾಡುತ್ತಿಲ್ಲ. ಕಿಡಿಗೇಡಿಗಳ ವಿರುದ್ಧ ದೂರು ನೀಡುವ ಬಗ್ಗೆ ಪೋಷಕರೊಂದಿಗೆ ಚರ್ಚಿಸುತ್ತಿದ್ದೇನೆ’ ಎಂದರು.

ದೌರ್ಜನ್ಯ ಪ್ರಕರಣ ವರದಿ ಆಗಿಲ್ಲ: ‘ಬ್ರಿಗೇಡ್‌ ರಸ್ತೆ, ಎಂ.ಜಿ. ರಸ್ತೆ ಹಾಗೂ ಚರ್ಚ್‌ ಸ್ಟ್ರೀಟ್‌ಗಳಲ್ಲಿ ಲಕ್ಷಕ್ಕೂ ಅಧಿಕ ಜನ ಸೇರಿದ್ದರು. ಅಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆದ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ’ ಎಂದು ನಗರ ಪೊಲೀಸ್‌ ಕಮಿಷನರ್‌ ಟಿ.ಸುನೀಲ್‌ ಕುಮಾರ್‌ ತಿಳಿಸಿದರು.

‘ಭದ್ರತೆ ಬಿಗಿಯಾಗಿತ್ತು. ಸಣ್ಣ ಅಹಿತಕರ ಘಟನೆಗೂ ನಾವು ಆಸ್ಪದ ನೀಡಿಲ್ಲ. ದೌರ್ಜನ್ಯ ಆಗಿದೆ ಎಂದು ಯಾರೊಬ್ಬರೂ ದೂರು ನೀಡಿಲ್ಲ. ಕೆಲವರು ಸುಖಾಸುಮ್ಮನೇ ಮಾತನಾಡುತ್ತಿದ್ದಾರೆ. ದೌರ್ಜನ್ಯ ನಡೆದಿದ್ದರೆ ಅವರು ದೂರು ನೀಡಬಹುದು’ ಎಂದರು.

ಕಣ್ಣೀರಿಟ್ಟ ಯುವತಿಯರು: ಕಾವೇರಿ ಎಂಪೋರಿಯಂ ವೃತ್ತದಲ್ಲಿ ಉಂಟಾದ ನೂಕುನುಗ್ಗಲಿನಲ್ಲಿ ಸಿಲುಕಿದ್ದ ಐವರು ಯುವತಿಯರು, ಅಳುತ್ತಲೇ ಪೊಲೀಸರ ಸಹಾಯ ಕೋರಿದರು. ಪೊಲೀಸರು ಅವರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿಕೊಟ್ಟರು.

ಸಂಭ್ರಮ ಆಚರಣೆ ಮುಗಿಯುತ್ತಿದ್ದಂತೆ ಯುವತಿಯರು ಮನೆಯತ್ತ ಹೊರಟಿದ್ದರು. ಅದೇ ವೇಳೆ ಜನರನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದರು. ಆಗ ಕೆಲವರು ಯುವತಿಯರನ್ನು ತಳ್ಳಾಡುತ್ತಲೇ ಓಡಿಹೋದರು. ಯುವತಿಯರು, ಪೊಲೀಸರ ಗುಂಪಿನತ್ತ ಬಂದು ಕಣ್ಣೀರಿಟ್ಟರು.

ಚಾಲಕನಿಗೆ ಹಲ್ಲೆ– ಬಾಲಕ ವಶಕ್ಕೆ: ಎಂ.ಜಿ. ರಸ್ತೆಯಲ್ಲಿ ಭಾನುವಾರ ರಾತ್ರಿ ಓಲಾ ಕ್ಯಾಬ್‌ ಚಾಲಕ ರಾಜೇಶ್‌ ಎಂಬುವರ ಮೇಲೆ ಹಲ್ಲೆ ನಡೆಸಿದ್ದ ಆರೋಪದಡಿ ಬಾಲಕನೊಬ್ಬನನ್ನು ಕಬ್ಬನ್‌ ಪಾರ್ಕ್‌ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಉತ್ತರಹಳ್ಳಿ ನಿವಾಸಿ ರಾಜೇಶ್, ಪ್ರಯಾಣಿಕರನ್ನು ಮನಗೆ ಮರಳಿಸಿ ಹಿಂತಿರುಗುತ್ತಿದ್ದರು. ಕಾರಿಗೆ ಆರೋಪಿಯ ಬೈಕ್‌ ಉಜ್ಜಿಕೊಂಡು ಹೋಗಿತ್ತು. ಅದನ್ನು ಪ್ರಶ್ನಿಸಿದ್ದಕ್ಕೆ ಚಾಲಕನ ಮೇಲೆ ಹಲ್ಲೆ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ಕುಡಿದ ಅಮಲಿನಲ್ಲಿದ್ದ ಆರೋಪಿಗಳು, ಬೈಕ್‌ನಲ್ಲಿ ಮಚ್ಚು ಇಟ್ಟುಕೊಂಡಿದ್ದರು. ಅದರಿಂದ ಚಾಲಕನ ಕೈಗೆ ಹೊಡೆದು ಪರಾರಿಯಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಚಾಲಕ ಠಾಣೆಗೆ ಬಂದು ದೂರು ನೀಡಿದ್ದಾರೆ. ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ಹೇಳಿದರು.

ಬೌನ್ಸರ್‌ನಿಂದ ಹಲ್ಲೆ– ಇಬ್ಬರು ವಶಕ್ಕೆ

ಎಂ.ಜಿ. ರಸ್ತೆಯ ಪಬ್‌ ಒಂದರಲ್ಲಿ ಗ್ರಾಹಕರ ಮೇಲೆ ಬೌನ್ಸರ್‌ಗಳು ಹಲ್ಲೆ ಮಾಡಿದ್ದು, ಈ ಸಂಬಂಧ ಗಾಯಾಳು ಕಬ್ಬನ್‌ ಪಾರ್ಕ್‌ ಠಾಣೆಗೆ ದೂರು ನೀಡಿದ್ದಾರೆ.

‘ಸ್ನೇಹಿತನ ಜತೆ ಪಬ್‌ಗೆ ಹೋಗಿದ್ದೆ. ಗ್ಲಾಸ್‌ ಕೈತಪ್ಪಿ ಕೆಳಗೆ ಬಿದ್ದಿತ್ತು. ಅದರ ಹಣ ನೀಡುವುದಾಗಿ ಹೇಳಿದ್ದೆ. ಅಷ್ಟಾದರೂ ಬೌನ್ಸರ್‌ಗಳು ನನ್ನ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದರು. ಭುಜಕ್ಕೆ ಪೆಟ್ಟಾಗಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

25 ಮಂದಿ ವಶಕ್ಕೆ

ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದ, ಕಳ್ಳತನಕ್ಕೆ ಯತ್ನಿಸಿದ ಹಾಗೂ ಕುಡಿದು ಗಲಾಟೆ ಮಾಡುತ್ತಿದ್ದ ಅನುಮಾನದ ಮೇಲೆ 25 ಮಂದಿಯನ್ನು ನಗರದ ಪೊಲೀಸರು ಭಾನುವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ.

‘ಕಬ್ಬನ್‌ ಪಾರ್ಕ್‌ ಠಾಣೆಯ ಪೊಲೀಸರು 10 ಹಾಗೂ ಅಶೋಕನಗರ ಪೊಲೀಸರು 5 ಮಂದಿಯನ್ನು ವಶಕ್ಕೆ ಪಡೆದಿದ್ದರು. ಕೃತ್ಯವನ್ನು ಸಾಬೀತುಪಡಿಸುವ ಸಾಕ್ಷ್ಯ ಸಿಕ್ಕಿರಲಿಲ್ಲ. ಹಾಗಾಗಿ ಅವರ ವಿಳಾಸ ಪಡೆದು ಕಳುಹಿಸಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

* ಮುಂದಿನ ಹೊಸ ವರ್ಷಾಚರಣೆಗೆ ಬ್ರಿಗೇಡ್‌ ರಸ್ತೆಯತ್ತ ತಲೆಯನ್ನೂ ಹಾಕುವುದಿಲ್ಲ. ಅತ್ತ ಹೋಗದಂತೆ ಗೆಳೆಯರಿಗೂ ಹೇಳುತ್ತೇನೆ.

–ಕಿರುಕುಳಕ್ಕೊಳಗಾದ ಮಹಿಳೆಯ ಪತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry