7

ಹೊಸ ವರ್ಷಕ್ಕೆ ಪೊಲೀಸರಿಂದ ಉಡುಗೊರೆ!

Published:
Updated:
ಹೊಸ ವರ್ಷಕ್ಕೆ ಪೊಲೀಸರಿಂದ ಉಡುಗೊರೆ!

ಬೆಂಗಳೂರು: ಕಳ್ಳತನವಾಗಿದ್ದ ಚಿನ್ನಾಭರಣವನ್ನು ಭಾನುವಾರ ಮಧ್ಯರಾತ್ರಿ ಮನೆಗೆ ತಲುಪಿಸುವ ಮೂಲಕ ಪೊಲೀಸರು, ದೂರುದಾರರಿಗೆ ಹೊಸ ವರ್ಷದ ಉಡುಗೊರೆ ನೀಡಿದರು.

ಹುಣಸಮಾರನಹಳ್ಳಿಯ ವೆಂಕಟೇಶ್ವರಲು ದಂಪತಿ ಮನೆಯಲ್ಲಿ ಕೆಲ ತಿಂಗಳ ಹಿಂದೆ ಕಳ್ಳತನವಾಗಿತ್ತು. ಆ ಬಗ್ಗೆ ತನಿಖೆ ನಡೆಸಿದ್ದ ಪೊಲೀಸರು, ಆರೋಪಿಯನ್ನು ಪತ್ತೆಹಚ್ಚಿದ್ದರು.

ಚಿನ್ನಾಭರಣ ಸಮೇತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೊಸ ವರ್ಷದ ಉಡುಗೊರೆಯಾಗಿ 40 ಗ್ರಾಂ ಚಿನ್ನಾಭರಣವನ್ನು ದೂರುದಾರರಿಗೆ ವಾಪಸ್‌ ಕೊಡಲು ಅನುಮತಿ ಪಡೆದುಕೊಂಡಿದ್ದರು.

ಅದರಂತೆ ಯಲಹಂಕ ಇನ್‌ಸ್ಪೆಕ್ಟರ್‌ ಮಂಜೇಗೌಡ ಹಾಗೂ ಸಿಬ್ಬಂದಿ, ದೂರುದಾರರ ಮನೆಗೆ ಹೋಗಿ ಚಿನ್ನಾಭರಣವನ್ನು ಕೊಟ್ಟರು. ಮಧ್ಯರಾತ್ರಿ ಬಾಗಿಲ ಬಳಿ ಬಂದು ನಿಂತಿದ್ದ ಪೊಲೀಸರನ್ನು ಕಂಡ ದಂಪತಿ ಕೆಲ ನಿಮಿಷ ಆತಂಕಗೊಂಡರು. ಪೊಲೀಸರು ವಿಷಯ ತಿಳಿಸಿದ ಮೇಲೆ ಖುಷಿಯಿಂದ ಅವರನ್ನು ಬರಮಾಡಿಕೊಂಡರು.

ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ವಾಸವಿರುವ ನಂದಕಿಶೋರ್‌ ಎಂಬುವರ ಮನೆಯಲ್ಲೂ ಕಳ್ಳತನವಾಗಿತ್ತು. ಅವರ ಮನೆಗೂ ತೆರಳಿದ ಇನ್‌ಸ್ಪೆಕ್ಟರ್‌ ರಾಜೇಶ್‌, ₹3 ಲಕ್ಷ ಮೌಲ್ಯದ ಚಿನ್ನಾಭರಣವನ್ನು ದೂರುದಾರರಿಗೆ ಒಪ್ಪಿಸಿದರು. 

ಪೊಲೀಸರ ಈ ಕೆಲಸಕ್ಕೆ ನಗರ ಪೊಲೀಸ್‌ ಕಮಿಷನರ್‌ ಟಿ.ಸುನೀಲ್‌ ಕುಮಾರ್‌ ಸೇರಿ ಹಲವು ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry