ಮಲ್ಲಿಗೆ ಹೂವು ದುಬಾರಿ, ಕಣ್ಣೀರು ಒರಸಿದ ಈರುಳ್ಳಿ

5

ಮಲ್ಲಿಗೆ ಹೂವು ದುಬಾರಿ, ಕಣ್ಣೀರು ಒರಸಿದ ಈರುಳ್ಳಿ

Published:
Updated:
ಮಲ್ಲಿಗೆ ಹೂವು ದುಬಾರಿ, ಕಣ್ಣೀರು ಒರಸಿದ ಈರುಳ್ಳಿ

ಮಂಡ್ಯ: ಹೊಸ ವರ್ಷದಲ್ಲಿ ಹೂವಿನ ಬೆಲೆ ಗಗನಕ್ಕೇರಿದೆ. ಎಲ್ಲೆಡೆ ಧನುರ್ಮಾಸದ ಚಳಿ ಹೆಚ್ಚಾಗಿರುವ ಕಾರಣ ಮಾರುಕಟ್ಟೆಗೆ ಬರುತ್ತಿರುವ ಹೂವಿನ ಪ್ರಮಾಣ ಕುಗ್ಗಿದೆ. ಹೀಗಾಗಿ ಮಾರು ಹೂವಿನ ಬೆಲೆ ನೂರರ ಗಡಿ ದಾಟಿದೆ.

ಡಿ.31ರಂದು ಮಾರು ಮಲ್ಲಿಗೆ ಹೂವು ಕೆ.ಜಿ.ಗೆ ₹ 120ಕ್ಕೆ ಮಾರಾಟವಾಗುತ್ತಿತ್ತು. ಜ.1ರಂದು ಕೊಂಚ ಬೆಲೆ ಕುಗ್ಗಿದ್ದು ₹ 100ಕ್ಕೆ ಮಾರಾಟವಾಗುತ್ತಿದೆ. ಹೊಸ ವರ್ಷದ ಅಂಗವಾಗಿ ದೇವಾಲಯಕ್ಕೆ ತೆರಳುವ ಭಕ್ತರು ಹೂವಿನ ಬೆಲೆ ಕೇಳಿ ಬೆರಗಾಗುತ್ತಿದ್ದಾರೆ. ಮಾರುಕಟ್ಟೆಗೆ ಬರುತ್ತಿರುವ ಮಾಲು ಕಡಿಮೆಯಾಗಿರುವ ಕಾರಣ ಬೆಲೆ ಹೆಚ್ಚಳವಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

‘ಚಳಿಗಾಲವಾದ್ದರಿಂದ ಮಲ್ಲಿಗೆ ಮೊಗ್ಗು ಅರಳುತ್ತಿಲ್ಲ. ಹೂವನ್ನು ಬೆಳಿಗ್ಗೆಯೇ ಬಿಡಿಸಬೇಕು. ಶೀತ ಹೆಚ್ಚಾದಂತೆ ಮೊಗ್ಗು ಕಮರಿ ಹೋಗುವ ಸಾಧ್ಯತೆಯೂ ಇದೆ. ಹೀಗಾಗಿ ಕೆಲವೆಡೆ ಹೂವಿನ ಗಿಡವೇ ಹಾಳಾಗಿದೆ. ಈ ಎಲ್ಲಾ ಕಾರಣಗಳಿಂದ ಮಲ್ಲಿಗೆ ದುಬಾರಿಯಾಗಿದೆ’ ಎಂದು ಹೂವಿನ ವ್ಯಾಪಾರಿ ಗೌರೀಶ್‌ ತಿಳಿಸಿದರು.

ಕಳೆದ ತಿಂಗಳು ಮಾರು ಸೇವಂತಿಗೆ ₹ 30 ಇತ್ತು. ಆ ದರೆ ಈ ವಾರ ಮಾರುಕಟ್ಟೆಯ ಲ್ಲಿ ₹ 50ಕ್ಕೆ ಮಾರಾಟವಾಗುತ್ತಿದೆ. ಸಣ್ಣ ಗುಲಾಬಿ ಹೂವು ಕೆ.ಜಿ.ಗೆ ₹ 250, ಚೆಂಡು ಹೂವು ಮಾರು ₹ 40, ಮರಳೆ ಹೂವು ₹ 50ಕ್ಕೆ ಮಾರಾಟವಾಗುತ್ತಿದೆ. ಸಣ್ಣ ಹಾರಕ್ಕೆ ₹ 40, ದೊಡ್ಡ ಹಾರ ₹ 150 ಬೆಲೆ ಇದೆ. ಮಲ್ಲಿಗೆ ಜೋಡಿ ಹಾರ

₹ 600ಕ್ಕೆ ಮಾರಾಟವಾಗುತ್ತಿದೆ.

ತರಕಾರಿ ಬೆಲೆ ಸ್ಥಿರ: ನಗರದ ತರಕಾರಿ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರವಾಗಿದೆ. ಪ್ರತಿ ಕೆ.ಜಿ. ಹಾಗಲಕಾಯಿ, ಹೂ ಕೋಸು, ಬೀಟ್‌ರೂಟ್‌ ₹ 40 ಇದೆ. ಬದನೆಕಾಯಿ, ಮೆಣಸಿನಕಾಯಿ, ಶುಂಠಿ ಹಾಗೂ ಬೆಳ್ಳುಳ್ಳಿ ₹ 30ಕ್ಕೆ ಮಾರಾಟವಾಗುತ್ತಿವೆ. ಅವರೆಕಾಯಿ, ತೊಗರಿಕಾಯಿ ₹ 25ರಂತೆ ಭರಾಟೆಯಿಂದ ಮಾರಾಟವಾಗುತ್ತಿವೆ. ಬೀನ್ಸ್‌, ಹೀರೇಕಾಯಿ, ಗೆಡ್ಡೆಕೋಸು, ಆಲೂಗೆಡ್ಡೆ, ಸೀಮೆ ಬದನೆಕಾಯಿ ₹ 20 ಇದೆ. ಟೊಮೆಟೊ ಬೆಲೆ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು ಕೆ.ಜಿ. ₹ 5ಕ್ಕೆ ಮಾರಾಟವಾಗುತ್ತಿದೆ. ಸೌತೆಕಾಯಿ ₹ 10 ಕ್ಕೆ 5ರಂತೆ ಮಾರಾಟವಾಗುತ್ತಿದೆ. ಕಳೆದ ವಾರ ₹ 10ಕ್ಕೆ 10 ಸೌತೆಕಾಯಿ ಮಾರಾಟವಾಗುತ್ತಿತ್ತು. ಹೊಸ ವರ್ಷ ಬಂದ ಕಾರಣ ನಗರದಲ್ಲಿ ಮಾಂಸದೂಟ ಸವಿಯುವವ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಸೌತೆಕಾಯಿ ಬೆಲೆ ಕೊಂಚೆ ಏರಿಕೆ ಕಂಡಿದೆ.

ಸೊಪ್ಪಿನ ಬೆಲೆಯೂ ಸ್ಥಿರವಾಗಿದೆ. ಸಬ್ಬಸಿಗೆ ಸೊಪ್ಪು, ಪಾಲಾಕ್‌ ಸೊಪ್ಪು, ಕರಿಬೇವು, ದಂಟಿನ ಸೊಪ್ಪಿನ ಬೆಲೆಯು ಒಂದು ಕಂತೆಗೆ ₹ 5 ರಂತೆ ಮಾರಾಟವಾಗುತ್ತಿದೆ. ಮೆಂಥೆ ಸೊಪ್ಪು ₹ 10 ಇದೆ. ಕೀರೆಸೊಪ್ಪು ₹ 10ಕ್ಕೆ ನಾಲ್ಕುಕಂತೆ ಮಾರಾಟವಾಗುತ್ತಿವೆ. ಕಣ್ಣೀರು ಒರೆಸಿದ ಈರುಳ್ಳಿ: ಕಳೆದ ಎರಡು ವಾರಗಳಿಂದ ಈರುಳ್ಳಿ ಬೆಲೆ ಗಗನಮುಖಿಯಾಗಿತ್ತು. ಬೆಲೆ ಇನ್ನೂ ಹೆಚ್ಚಳವಾಗಲಿದೆ ಎಂಬ ಆತಂಕ ಸೃಷ್ಟಿಯಾಗಿತ್ತು.

ಆದರೆ, ಈ ವಾರ ಬೆಲೆ ಕೊಂಚ ತಗ್ಗಿದೆ. ಕೆ.ಜಿ. ಈರುಳ್ಳಿ₹ 40ಕ್ಕೆ ಮಾರಾಟವಾಗುತ್ತಿದ್ದು ಗ್ರಾಹಕರು ಕಣ್ಣೀರು ಒರೆಸಿಕೊಂಡಿದ್ದಾರೆ. ಈರುಳ್ಳಿ ಬದಲು ಕ್ಯಾರೆಟ್‌ಗೆ ಬಂಗಾರದ ಬೆಲೆ ಬಂದಿದೆ. ಕೆ.ಜಿಗೆ ₹ 60 ರಂತೆ ಮಾರಾಟವಾಗುತ್ತಿದೆ. ‘ತರಕಾರಿ ಬೆಲೆಗಳು ಗ್ರಾಹಕರ ಕೈಗೆಟುಕುವಂತಿವೆ. ಹೆಚ್ಚೇನೂ ಬದಲಾವಣೆ ಆಗಿಲ್ಲ. ಇನ್ನೂ ಒಂದು ತಿಂಗಳು ಹೀಗೆಯೇ ಮುಂದುವರಿಯುತ್ತದೆ’ ಎಂದು ತರಕಾರಿ ವ್ಯಾಪಾರಿ ಹರ್ಷ ಹೇಳಿದರು.

ಒಂದು ತೆಂಗಿನ ಕಾಯಿ ₹ 15–40 ರಂತೆ ಮಾರಾಟವಾಗುತ್ತಿದೆ. ಹಣ್ಣುಗಳ ಬೆಲೆಯಲ್ಲಿ ಸ್ಥಿರತೆ ಕಂಡಿದ್ದು ಕೆ.ಜಿ.ಗೆ ಕಪ್ಪು ದ್ರಾಕ್ಷಿ, ಹಸಿರು ದ್ರಾಕ್ಷಿ ಬೆಲೆ ₹ 100, ಸೇಬು ₹ 100– 120, ದಾಳಿಂಬೆ, ಮೋಸಂಬಿ ಕೆ.ಜಿ.ಗೆ ₹ 60, ಸಪೋಟ ಹಣ್ಣು ₹ 30 ಇದೆ. ಮಾರುಕಟ್ಟೆಗೆ ಸ್ಥಳೀಯವಾಗಿ ಬೆಳೆಯುವ ಏಲಕ್ಕಿ ಬಾಳೆಹಣ್ಣು ಹೇರಳವಾಗಿ ಬರುತ್ತಿರುವ ಕಾರಣ ಬೆಲೆಯೂ ಕಡಿಮೆಯಾಗಿದೆ. ಕೆ.ಜಿ ಏಲಕ್ಕಿ ಬಾಳೆಹಣ್ಣು ₹ 40 ಇದೆ. ಪಚ್ಚಬಾಳೆ 30 ರಂತೆ ಮಾರಾಟವಾಗುತ್ತಿದೆ. ಒಂದು ಬಾಕ್ಸ್‌ ಕಿವಿ ಹಣ್ಣಿನ ಬೆಲೆಯು ₹ 80 ಇದೆ. ‘ಮುಂದೆ ಹಣ್ಣಿನ ಬೆಲೆ ಹೆಚ್ಚಳವಾಗುವ ಸಂಭವವಿದೆ’ ಎಂದು ಹಣ್ಣಿನ ವ್ಯಾಪಾರಿ ಮೊಹಮ್ಮದ್‌ ಆಸಿಫ್ ತಿಳಿಸಿದರು.

ಹಳೆ ವರ್ಷದ ವಿದಾಯ ಹಾಗೂ ಹೊಸ ವರ್ಷದ ಸ್ವಾಗತದ ಪರಿಣಾಮ ನಗರದ ಮಾರುಕಟ್ಟೆಯಲ್ಲಿ ಬೆಲೆಗಳು ತುಸು ಏರುಪೇರಾಗಿವೆ. ದೇವಸ್ಥಾನಗಳಲ್ಲಿ ಪೂಜಾದಿ ಕಾರ್ಯಗಳು ಹೆಚ್ಚಾಗಿದ್ದರಿಂದ ಎಲ್ಲ ಹೂಗಳ ಬೆಲೆ ಗಗನಕ್ಕೇರಿದೆ. ಇದರಿಂದ ಹೂವಿನ ವ್ಯಾಪಾರಿಗಳು ನಿರುಮ್ಮಳವಾಗಿದ್ದು, ಭಕ್ತರ ಜೇಬು ಖಾಲಿಯಾಗಿದೆ. ಉಳಿದಂತೆ ತರಕಾರಿ ದರಗಳು ಯಥಾಸ್ಥಿತಿ ಇವೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry