ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರು, ದುರ್ಬಲರಿಗೂ ‘ಸ್ಮಾರ್ಟ್‌ಸಿಟಿ’

Last Updated 2 ಜನವರಿ 2018, 6:10 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಸ್ಮಾರ್ಟ್‌ಸಿಟಿ’ಗೆ ಶಿವಮೊಗ್ಗ ಆಯ್ಕೆಯಾಗಿ ಎರಡು ವರ್ಷಗಳು ಕಳೆದರೂ ಇನ್ನೂ ಅಂತಿಮ ರೂಪುರೇಷೆ ಸಿದ್ಧವಾಗಿಲ್ಲ. ಆದರೆ, ಕಟೀಲು ಅಶೋಕ್ ಪೈ ಸ್ಮಾರಕ ಪದವಿ ಕಾಲೇಜಿನ ವಿದ್ಯಾರ್ಥಿಗಳು ಸಿದ್ಧಪಡಿಸಿದ ಸಮುದಾಯ ಸಹಭಾಗಿತ್ವದ ಸ್ಮಾರ್ಟ್‌ಸಿಟಿ ಜನಮೆಚ್ಚುಗೆಗೆ ಪಾತ್ರವಾಗಿದೆ.

ಕಾಲೇಜಿನ ಸಮಾಜಕಾರ್ಯ ವಿಭಾಗದ ಅಧ್ಯಾಪಕರು, ವಿದ್ಯಾರ್ಥಿಗಳು ಜನರ ಸಹಭಾಗಿತ್ವದ ಪರಿಕಲ್ಪನೆಯ ಆಧಾರದಲ್ಲಿ ಇಂತಹ ನೂತನ ಯೋಜನೆ ಸಿದ್ಧಪಡಿಸಿದ್ದಾರೆ. ಮಹಿಳೆಯರು, ಮಕ್ಕಳು, ದುರ್ಬಲರಿಗೆ ಈ ಸಮಾಜದಲ್ಲಿ ಹೆಚ್ಚಿನ ಪ್ರಾಮುಖ್ಯ ದೊರೆತಿದೆ.

ಮಹಿಳೆಯರಿಗೆ ಪ್ರತ್ಯೇಕ ನಗರಿ: ಕುಟುಂಬದ ಒಂದು ಭಾಗವೇ ಆಗಿರುವ ಮಹಿಳೆಯರ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ಬಡಾವಣೆಯನ್ನೇ ನಿರ್ಮಿಸಲಾಗಿದೆ. ಮಹಿಳೆಯರು ಗೃಹ ಕಾರ್ಯವನ್ನೆಲ್ಲ ಮುಗಿಸಿಕೊಂಡು ಈ ನಗರಿಗೆ ಬರುತ್ತಾರೆ.

ಅಲ್ಲಿ ಸ್ವಯಂ ಉದ್ಯೋಗ ತರಬೇತಿ, ಆರ್ಥಿಕ ಸಬಲತೆಯ ಸೂತ್ರಗಳು, ಉನ್ನತ ಶಿಕ್ಷಣದ ಪಾಠಗಳು, ವ್ಯಾಯಾಮಶಾಲೆ, ಕಾನೂನು ಸಲಹಾ ಕೇಂದ್ರ, ಮಹಿಳಾ ಪೊಲೀಸ್ ಠಾಣೆ ಇದೆ. ಆರೋಗ್ಯ ಕೇಂದ್ರ, ಸಾಂತ್ವನ ಕೇಂದ್ರ, ಪ್ರತ್ಯೇಕ ರಂಗಮಂದಿರ. ನಿರ್ಗತಿಕ ಮಹಿಳೆಯರಿಗೆ ವಸತಿ ವ್ಯವಸ್ಥೆ, ಮಹಿಳಾ ದೌರ್ಜನ್ಯ ತಡೆ ಘಟಕ, ಸಬಲೀಕರಣಕ್ಕೆ ಅಗತ್ಯವಾದ ಎಲ್ಲ ವ್ಯವಸ್ಥೆಯೂ ಅಲ್ಲಿ ನೆಲೆಗೊಂಡಿದೆ.

ಮಕ್ಕಳ ವಿಕಸನ ತಾಣ: ಮಕ್ಕಳಿಗಾಗಿಯೇ ಪ್ರತ್ಯೇಕ ಆಧುನಿಕ ಗ್ರಾಮ ನಿರ್ಮಾಣ ಮಾಡಲಾಗಿದೆ. ಅಲ್ಲಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ  ವ್ಯವಸ್ಥೆ ಕಲ್ಪಿಸಲಾಗಿದೆ. ಬಾಲಕ ಮತ್ತು ಬಾಲಕಿಯರಿಗೆ ಬಾಲಮಂದಿರ, ಮಕ್ಕಳಿಗಾಗಿಯೇ ಒಳಾಂಗಣ ಮತ್ತು ಸಾಮಾನ್ಯ ಕ್ರೀಡಾಂಗಣ, ಸಹಾಯವಾಣಿ ಕೇಂದ್ರ, ಶಿಶು ಅಭಿವೃದ್ಧಿ ಕೇಂದ್ರ, ಬುದ್ಧಿಮಾಂದ್ಯ ಮಕ್ಕಳ ಪುನಶ್ಚೇತನ ಕೇಂದ್ರ, ಕಾಮನಬಿಲ್ಲು ತರಬೇತಿ ಕೇಂದ್ರ ಸ್ಥಾಪಿಸಲಾಗಿದೆ.

ವೃದ್ಧರ ನೆಮ್ಮದಿಗೆ ಉನ್ನತ ಕ್ರಮ: ಇಂದು ವಿಭಕ್ತ ಕುಟುಂಬಗಳ ಪರಿಕಲ್ಪನೆ ಜಾಸ್ತಿಯಾಗುತ್ತಿದೆ. ಉದ್ಯೋಗಕ್ಕಾಗಿ ಬೇರೆ ದೇಶ, ಪ್ರದೇಶಗಳಿಗೆ ವಲಸೆ ಹೋಗುವ ಮಕ್ಕಳು ತಂದೆ–ತಾಯಿ ನಿರ್ಲಕ್ಷಿಸುತ್ತಿದ್ದಾರೆ. ವೃದ್ಧಾಶ್ರಮಗಳು ಎಲ್ಲೆಂದರಲ್ಲಿ ತಲೆ ಎತ್ತುತ್ತಿವೆ. ಇಂತಹ ಜ್ವಲಂತ ಸಮಸ್ಯೆ ನಿವಾರಿಸಲು ಯೋಜನೆಯಲ್ಲಿ ಹೆಚ್ಚಿನ ಕ್ರಮ ಕೈಗೊಳ್ಳಲಾಗಿದೆ.

ಅವರಿಗಾಗಿಯೇ ಪ್ರತ್ಯೇಕ ಧ್ಯಾನ ಕೇಂದ್ರ, ಆರೋಗ್ಯ ತಪಾಸಣಾ ಕೇಂದ್ರ, ಮುಸ್ಸಂಜೆ ಉದ್ಯಾನ. ಆ ಉದ್ಯಾನದ ಒಳಗೇ ಪ್ರತ್ಯೇಕ ವಾಯುವಿಹಾರ ಪಥ, ಸಾಂಸ್ಕೃತಿಕ ಚಟುವಟಿಕೆಗಳಿಗಾಗಿಯೇ ಸುಸಜ್ಜಿತ ರಂಗಮಂದಿರ ನಿರ್ಮಾಣಕ್ಕೆ ವ್ಯವಸ್ಥೆ ಮಾಡಲಾಗಿದೆ.

ಯುವಕರ ವಿಕಸನಕ್ಕೂ ಆದ್ಯತೆ: ಯುವಕರ ವಿಕಸನಕ್ಕೂ ಯೋಜನೆಯಲ್ಲಿ ಒತ್ತು ನೀಡಲಾಗಿದೆ. ಅವರಿಗೆ ಸೂಕ್ತ ತರಬೇತಿ, ಆಪ್ತ ಸಮಾಲೋಚನೆ, ವ್ಯಕ್ತಿತ್ವ ವಿಕಸನಕ್ಕೆ ಅಗತ್ಯ ವ್ಯವಸ್ಥೆ, ವಸತಿ ಗೃಹ, ಸಹಕಾರ ಸಂಘ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ.

‘ಸಮಾಜದ ಅಭಿವೃದ್ಧಿಗೆ ದುರ್ಬಲ ವರ್ಗದ ಜನರ ಕೊಡುಗೆಯೂ ಸಾಕಷ್ಟಿದೆ. ಗೃಹಕಾರ್ಯ ನಿರ್ವಹಿಸುವ ಮಹಿಳೆಯರು, ಭವಿಷ್ಯದ ನಾಯಕತ್ವ ವಹಿಸಿಕೊಳ್ಳುವ ಮಕ್ಕಳು, ಈಗಾಗಲೇ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿ ನೆಲೆ ಕಳೆದುಕೊಂಡು ಅತಂತ್ರರಾಗಿರುವ ವೃದ್ಧರಿಗೆ ಸೂಕ್ತ ಅವಕಾಶ, ನೆಲೆ ಕಲ್ಪಿಸಿದರೆ ಅಂತಹ ಸಮಾಜ ನಿಜಕ್ಕೂ ಮಾನವೀಯ ಬುನಾದಿಯ ಮೇಲೆ ನಿಂತಿರುತ್ತದೆ’ ಎಂದು ಯೋಜನೆಯ ಕುರಿತು ವಿಶ್ಲೇಷಿಸುತ್ತಾರೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ. ಸಂಧ್ಯಾ ಕಾವೇರಿ ಹಾಗೂ ಸಮಾಜಕಾರ್ಯ ವಿಭಾಗ ಮುಖ್ಯಸ್ಥ ಎಸ್. ಮಂಜುನಾಥ ಸ್ವಾಮಿ.

ಸ್ಮಾರ್ಟ್‌ಸಿಟಿ ಪರಿಕಲ್ಪನೆಯ ಜತೆಗೆ, ಜನರ ಮಾನಸಿಕ ತೊಳಲಾಟ, ನಡವಳಿಕೆ, ಬದುಕು, ಮನೋಸ್ಥಿತಿಯ ಬದಲಾವಣೆಗಳು, ಕೀಳರಿಮೆಯ ಸಿದ್ಧಾಂತಗಳು, ಪರಿಹಾರ, ಚಿಕಿತ್ಸೆ ಕುರಿತು ಚಿತ್ರ ವಿಶ್ಲೇಷಣೆಗಳ ಮೂಲಕ ಜನರಿಗೆ ಮನವರಿಕೆ ಮಾಡಿಕೊಟ್ಟ ರೀತಿ ಬೆರಗು ಮೂಡಿಸಿತು. ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಬಿ.ಜಿ. ಶ್ರೀಧರ್, ಮನಶಾಸ್ತ್ರಜ್ಞೆ ಶ್ವೇತಾ ಅವರು ಇಂತಹ ಸೂಕ್ಷ್ಮ ವಿಚಾರಗಳನ್ನು ವಿದ್ಯಾರ್ಥಿಗಳ ಸಹಕಾರದಲ್ಲಿ ಯಶಸ್ವಿಯಾಗಿ ನಿರೂಪಿಸಿದ್ದರು.

ನಗರದೊಳಗೇ ಕೃಷಿ ನಗರಿ

ಗ್ರಾಮೀಣ ಜನರೇ ಕೃಷಿಯಿಂದ ವಿಮುಖರಾಗುತ್ತಿರುವ ಈ ದಿನಗಳಲ್ಲಿ ಸ್ಮಾರ್ಟ್‌ಸಿಟಿಯಲ್ಲಿ ಪ್ರತ್ಯೇಕ ಕೃಷಿ ನಗರಿ ರೂಪಿಸಿರುವುದು ಕುತೂಹಲ ಮೂಡಿಸುತ್ತದೆ. ವಿಭಿನ್ನ ಕೃಷಿ ಚಟವಟಿಕೆ, ವೈವಿಧ್ಯಮಯ ಬೆಳೆಗಳು, ವಿದ್ಯಾರ್ಥಿಗಳಿಗೆ ಕೃಷಿ ಕಾಲೇಜು, ಕೃಷಿ ವಿಜ್ಞಾನ ಕೇಂದ್ರ, ವಿವಿಧೋತ್ಪನ್ನಗಳ ಅಭಿವೃದ್ಧಿ ಕೇಂದ್ರ, ಕೃಷಿ ಕೈಗಾರಿಕೆ, ಕೃಷಿ ತಂತ್ರಜ್ಞಾನ ಮತ್ತು ಮಾಹಿತಿ ಕೇಂದ್ರ, ಇಡೀ ನಗರಕ್ಕೆ ಅಗತ್ಯವಿರುವ ವಿದ್ಯುತ್ ಪೂರೈಸಲು ಬಹುದೊಡ್ಡ ಸೋಲಾರ್ ಘಟಕ ಅಳವಡಿಕೆಗೆ ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

* * 

ಸ್ಮಾರ್ಟ್‌ಸಿಟಿ ಎನ್ನುವುದು ಕೇವಲ ದೊಡ್ಡದೊಡ್ಡ ಕಟ್ಟಡಗಳ ನಿರ್ಮಾಣವಲ್ಲ. ಅದು ಸಮುದಾಯದ ದುರ್ಬಲರ ಸರ್ವತೋಮುಖ ಅಭಿವೃದ್ಧಿಗೆ ಬುನಾದಿಯಾಗಬೇಕು.
ಡಾ.ಸಂಧ್ಯಾ ಕಾವೇರಿ, ಪ್ರಾಂಶುಪಾಲರು, ಕಟೀಲ್ ಅಶೋಕ್ ಪೈ ಕಾಲೇಜು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT