ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಸಿ ಕಚೇರಿ ಎದುರು ತರಕಾರಿ ವಿತರಿಸಿ ಧರಣಿ

Last Updated 2 ಜನವರಿ 2018, 6:59 IST
ಅಕ್ಷರ ಗಾತ್ರ

ಕೋಲಾರ: ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ನಗರದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಸಾರ್ವಜನಿಕರಿಗೆ ಹಾಗೂ ಅಧಿಕಾರಿಗಳಿಗೆ ಉಚಿತವಾಗಿ ತರಕಾರಿ ವಿತರಿಸಿ ವಿನೂತನ ರೀತಿಯಲ್ಲಿ ಧರಣಿ ನಡೆಸಿದರು.

‘ರಾಜ್ಯದಲ್ಲಿ ನಾಲ್ಕೈದು ವರ್ಷದಿಂದ ಸತತ ಬರ ಪರಿಸ್ಥಿತಿ ಇದೆ. ಬರದಿಂದ ಕೋಟ್ಯಂತರ ರೂಪಾಯಿ ಬೆಳೆ ನಷ್ಟವಾಗಿ ಸಂಕಷ್ಟಕ್ಕೆ ಸಿಲುಕಿರುವ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ರೈತರ ಸಮಸ್ಯೆಯು ರಾಜಕೀಯ ಲಾಭದ ವಸ್ತುವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕಾರ್ಪೊರೇಟ್‌ ಕಂಪೆನಿಗಳು ಹಾಗೂ ಬಂಡವಾಳಶಾಹಿಗಳ ಸಾಲ ಮನ್ನಾ ಮಾಡುವ ಸರ್ಕಾರಗಳು ದೇಶಕ್ಕೆ ಅನ್ನ ಬೆಳೆದು ಕೊಡುವ ರೈತರ ಸಾಲ ಮನ್ನಾ ಮಾಡಲು ಮೀನಾಮೇಷ ಎಣಿಸುತ್ತವೆ. ಸರ್ಕಾರಗಳಿಗೆ ರೈತರ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ. ಅವೈಜ್ಞಾನಿಕ ಕೃಷಿ ನೀತಿಯಿಂದಾಗಿ ರೈತರು ದಿವಾಳಿಯಾಗಿದ್ದಾರೆ’ ಎಂದು ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಹೇಳಿದರು.

ರೈತರು ಬಡ್ಡಿ ಸಾಲ ಮಾಡಿ ದುಬಾರಿ ಬೆಲೆಗೆ ಬೀಜ, ರಸಗೊಬ್ಬರ, ಕೀಟನಾಶಕ ಖರೀದಿಸಿ ಬೆಳೆ ಬೆಳೆಯುತ್ತಿದ್ದಾರೆ. ಕೃಷಿ ಕಾರ್ಮಿಕರ ಕೂಲಿ ಸಹ ದುಬಾರಿಯಾಗಿದೆ. ಕಳಪೆ ಬಿತ್ತನೆ ಬೀಜ ಹಾವಳಿಯಿಂದ ಹಲವೆಡೆ ಬೆಳೆಯೇ ಬಂದಿಲ್ಲ. ಕೆಲವೆಡೆ ಅಲ್ಪಸ್ವಲ್ಪ ಬೆಳೆ ಬಂದರೂ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುತ್ತಿಲ್ಲ ಎಂದರು.

ಭ್ರಷ್ಟಾಚಾರದ ಕೂಪ: ಸರ್ಕಾರಿ ಕಚೇರಿಗಳು ಭ್ರಷ್ಟಾಚಾರದ ಕೂಪವಾಗಿವೆ. ಎಪಿಎಂಸಿ ಮಾರುಕಟ್ಟೆಗಳಲ್ಲಿ ಕಮಿಷನ್‌ ದಂಧೆ ಮೇರೆ ಮೀರಿದೆ. ವರ್ತಕರು ಮತ್ತು ದಲ್ಲಾಳಿಗಳು ಶಾಮೀಲಾಗಿ ಬಡ ರೈತರನ್ನು ಶೋಷಿಸುತ್ತಿದ್ದಾರೆ. ಅಧಿಕಾರಿಗಳಿಗೆ ರೈತರ ಬಗ್ಗೆ ಮಾನವೀಯತೆ ಇಲ್ಲವಾಗಿದೆ ಎಂದು ಧರಣಿನಿರತರು ಆರೋಪಿಸಿದರು.

ಬೆಳೆ ನಷ್ಟದಿಂದ ರೈತರಿಗೆ ಸಾಲದ ಕಂತು ಕಟ್ಟಲು ಕಷ್ಟವಾಗಿದೆ. ಮತ್ತೊಂದೆಡೆ ರೈತರು ಕೃಷಿ ನಿರ್ವಹಣೆ ಮಾಡಲಾಗದೆ ಪಟ್ಟಣ ಹಾಗೂ ನಗರ ಪ್ರದೇಶಕ್ಕೆ ಗುಳೆ ಹೋಗುತ್ತಿದ್ದಾರೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಖಾಸಗಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳ ಅಧಿಕಾರಿಗಳು ಸಾಲದ ಕಂತು ಕಟ್ಟುವಂತೆ ರೈತರಿಗೆ ನೋಟಿಸ್‌ ಜಾರಿ ಮಾಡುತ್ತಿದ್ದಾರೆ. ಸಾಲಕ್ಕೆ ಅಡವಿಟ್ಟಿರುವ ಜಮೀನು, ಮನೆ ಹಾಗೂ ಚಿನ್ನಾಭರಣ ಹರಾಜು ಹಾಕುವುದಾಗಿ ಬೆದರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಶೋಷಣೆ ತಪ್ಪಿಸಬೇಕು: ತಿನ್ನುವ ಅನ್ನದ ಋಣಕ್ಕಾದರೂ ರೈತನ ಶೋಷಣೆ ತಪ್ಪಿಸಬೇಕು. ಕೃಷಿಕರ ಪರವಾದ ಬೆಳೆ ವಿಮೆ ನೀತಿ ಜಾರಿಗೊಳಿಸಬೇಕು. ಸ್ವಾಮಿನಾಥನ್ ಆಯೋಗದ ವರದಿ ಅನ್ವಯ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿಪಡಿಸಬೇಕು. ಭ್ರಷ್ಟಾಚಾರ ಹಾಗೂ ಕಮಿಷನ್‌ ದಂಧೆಗೆ ಕಡಿವಾಣ ಹಾಕಬೇಕು ಎಂದು
ಒತ್ತಾಯಿಸಿದರು.

ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್, ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಹರಿಕುಮಾರ್, ಸಂಚಾಲಕ ಕೆ.ಶ್ರೀನಿವಾಸಗೌಡ, ಸದಸ್ಯರಾದ ನಾಗರಾಜಗೌಡ, ಫಾರೂಕ್‌ ಪಾಷಾ, ರಂಜಿತ್ ಕುಮಾರ್, ಉಮಾಗೌಡ, ವಿಜಯಪಾಲ್, ಮಂಜು, ವೆಂಕಟೇಶ್, ಭರತ್, ಕೃಷ್ಣೇಗೌಡ, ನಾರಾಯಣಸ್ವಾಮಿ ಪಾಲ್ಗೊಂಡಿದ್ದರು.

* * 

ರೈತರ ಹೆಸರು ಹೇಳಿಕೊಂಡು ರಾಜಕಾರಣ ಮಾಡುವ ಸರ್ಕಾರಗಳು ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸದೆ ಮೋಸ ಮಾಡುತ್ತಿವೆ. ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಕಂಪೆನಿಗಳು ಬಿತ್ತನೆಯಿಂದ ಮಾರುಕಟ್ಟೆವರೆಗೂ ರೈತರ ರಕ್ತ ಹೀರುತ್ತಿವೆ. ಆದರೆ, ಅಧಿಕಾರಿ ವರ್ಗ ಕಣ್ಮುಚ್ಚಿ ಕುಳಿತಿದೆ
ಕೆ.ನಾರಾಯಣಗೌಡ, ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಘಟಕದ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT