ಬುಧವಾರ, ಆಗಸ್ಟ್ 5, 2020
23 °C

ಇದ್ದೂ ಇಲ್ಲದಂತಾದ ಕ್ರಿಕೆಟ್‌ ಕ್ರೀಡಾಂಗಣ!

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ಇದ್ದೂ ಇಲ್ಲದಂತಾದ ಕ್ರಿಕೆಟ್‌ ಕ್ರೀಡಾಂಗಣ!

ಬಳ್ಳಾರಿ: ಹಲವು ವರ್ಷಗಳ ಹಿಂದೆ ಕ್ರಿಕೆಟ್‌ ಆಟಗಾರರಿಗೆಂದೇ ನಿರ್ಮಿಸಲಾದ ಕ್ರೀಡಾಂಗಣ ಈಗ ಒತ್ತುವರಿಯಿಂದ ಬಳಲಿದೆ. ಕ್ರೀಡಾ ಉದ್ದೇಶವನ್ನು ಹೊರತುಪಡಿಸಿ ಮಿಕ್ಕೆಲ್ಲ ಉದ್ದೇಶಕ್ಕೂ ಇದು ಉಚಿತವಾದ ಸ್ಥಳ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಕ್ರೀಡಾಂಗಣವನ್ನು ನೋಡಲು ಕೋಟೆ ಪ್ರದೇಶಕ್ಕೆ ಬರಬೇಕು. ವರ್ಷಕ್ಕೊಮ್ಮೆ ನಡೆಯುವ ಕೋಟೆ ಮಲ್ಲೇಶ್ವರ ಜಾತ್ರೆಯ ಸಂದರ್ಭದಲ್ಲಿ ಮಾತ್ರ ಜನದಟ್ಟಣೆಯುಳ್ಳ ಮಲ್ಲೇಶ್ವರ ಗುಡಿ ರಸ್ತೆಯ ಆರಂಭದಲ್ಲೇ ಕ್ರೀಡಾಂಗಣ ಗಮನ ಸೆಳೆಯುತ್ತದೆ. ಆದರೆ ಕಣ್ಣು ಕೀಲಿಸಿ ನೋಡಿದರೆ ಮಾತ್ರ ಅದು ಆಟದ ಮೈದಾನ ಎಂದು ಗೋಚರಿಸುತ್ತದೆ. ಇಲ್ಲವಾದರೆ ಅದೊಂದು ವ್ಯರ್ಥ ಬಯಲು ಪ್ರದೇಶದಂತೆ ಮಾತ್ರ ಕಾಣುತ್ತದೆ.

ಅನ್ಯರಿಂದ ಬಳಕೆ: ಇಲಾಖೆಯು ಕ್ರೀಡಾ ಉದ್ದೇಶಕ್ಕೆ ಕ್ರೀಡಾಂಗಣ ಬಳಸುವುದನ್ನು ಮರೆತಿರುವುದರಿಂದ ಸುತ್ತಮುತ್ತಲಿನ ಜನ ಅದನ್ನು ತಮಗೆ ಬೇಕಾದಂತೆ ಬಳಸುತ್ತಿರುವುದು ಎದ್ದು ಕಾಣುತ್ತದೆ. ಅದು ಲಾರಿಗಳ ರಾತ್ರಿ ನಿಲ್ದಾಣವಾಗಿದೆ. ಕಟ್ಟಡ ಸಾಮಗ್ರಿಗಳ ದಾಸ್ತಾನು ಸ್ಥಳ. ಕತ್ತಲೆಯಲ್ಲಿ ಬಯಲು ಮಲವಿಸರ್ಜನೆಗೆ ಹೇಳಿ ಮಾಡಿಸಿದ ಜಾಗವಾಗಿದೆ.

ಕಾಂಪೌಂಡ್‌ ಇಲ್ಲ: ‘ಇಲಾಖೆಯ ಒಂದು ಕೊಠಡಿಯೂ ಇರುವ ಕ್ರೀಡಾಂಗಣದಲ್ಲಿ ಕಾಪೌಂಡ್‌ ಇಲ್ಲದಿರುವುದು ಒತ್ತುವರಿದಾರರಿಗೆ ಹೆಚ್ಚು ಅನುಕೂಲ ಕಲ್ಪಿಸಿದೆ. ಕ್ರೀಡಾಂಗಣದ ವಿಸ್ತೀರ್ಣ, ವ್ಯಾಸವೆಷ್ಟು ಎಂಬ ಬಗ್ಗೆ ಎಲ್ಲಿಯೂ ಮಾಹಿತಿ ಇಲ್ಲ. ಯಾರು ಬೇಕಾದರೂ, ಹೇಗೆ ಬೇಕಾದರೂ ಕ್ರೀಡಾಂಗಣವನ್ನು ಬಳಸಬಹುದು ಮತ್ತು ಒತ್ತುವರಿ ಮಾಡಬಹುದು ಎಂಬ ಸನ್ನಿವೇಶ ನಿರ್ಮಾಣವಾಗಿರುವುದು ವಿಷಾದನೀಯ’ ಎಂದು ಕೋಟೆ ಪ್ರದೇಶದ ಯುವಕ ರವೀಶ್‌ ತಿಳಿಸಿದರು.

‘ಇಲ್ಲಿ ಯಾವುದೇ ಕ್ರೀಡೆ ಆಡಲೂ ಅವಕಾಶವಿಲ್ಲದಂತಾಗಿದೆ. ಚಿಕ್ಕಮಕ್ಕಳು ಆಟವಾಡುವಂಥ ವಾತಾವರಣವೂ ಇಲ್ಲ. ಇಂಥ ವಿಶಾಲವಾದ ಕ್ರೀಡಾಂಗಣವನ್ನು ಇಷ್ಟು ವರ್ಷವಾದರೂ ಇಲಾಖೆ ಏಕೆ ಅಭಿವೃದ್ಧಿಪಡಿಸದೇ ಸುಮ್ಮನಿದೆ ಎಂಬುದೇ ಅರ್ಥವಾಗುತ್ತಿಲ್ಲ. ಕನಿಷ್ಠ ಒತ್ತುವರಿ ತಡೆಯುವ ಕೆಲಸವನ್ನಾದರೂ ಇಲಾಖೆ ಮಾಡಬೇಕು’ ಎಂದು ಶ್ರೀನಿವಾಸ್‌ ಆಗ್ರಹಿಸಿದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕ ರಹತಮ್‌ ಉಲ್ಲಾ, ‘ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಲಾಗುವುದು. ಇಲಾಖೆಯ ಕೊಠಡಿಯನ್ನು ದುರಸ್ತಿ ಮಾಡಿಸಬೇಕೆ ಅಥವಾ ನೆಲಸಮಗೊಳಿಸಿ ಮತ್ತೆ ನಿರ್ಮಿಸಬೇಕೆ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗಿದೆ’ ಎಂದರು.

‘ಕ್ರೀಡಾಂಗಣವನ್ನು ಕೆಲವೆಡೆ ಒತ್ತುವರಿ ಮಾಡಲಾಗಿದೆ ಎಂಬ ದೂರುಗಳಿವೆ. ಅದನ್ನು ಪರಿಶೀಲಿಸಬೇಕಾದರೆ, ಕ್ರೀಡಾಂಗಣದ ಮರುಸರ್ವೆ ಮಾಡಬೇಕು. ಅದಕ್ಕೂ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಅಥ್ಲೆಟಿಕ್ಸ್‌ಗೂ ಅಡ್ಡಿ

ಕ್ರಿಕೆಟ್‌ ಕ್ರೀಡಾಂಗಣ ಬಳಸುವ ಸ್ಥಿತಿಯಲ್ಲಿ ಇಲ್ಲದಿರುವುದರಿಂದ ಕ್ರಿಕೆಟ್‌ ಆಟಗಾರರು ನಗರದ ಜಿಲ್ಲಾ ಕ್ರೀಡಾಂಗಣವನ್ನೇ ಬಳಸುತ್ತಿದ್ದಾರೆ. ಅದು ಅಥ್ಲೆಟಿಕ್ಸ್‌ ಕ್ರೀಡೆಗಳಿಗೆ ಮಾತ್ರ ಮೀಸಲಿದ್ದರೂ, ಅಥ್ಲೆಟಿಕ್ಸ್‌ ಅಭ್ಯಾಸ ಮಾಡುವವರಿಗಿಂತ ಹೆಚ್ಚಾಗಿ ಕ್ರಿಕೆಟಿಗರ ಅಂಕಣವಾಗಿ ಮಾರ್ಪಟ್ಟಿದೆ. ರಜಾದಿನಗಳಲ್ಲಿ ಬೆಳಿಗ್ಗೆ, ಸಂಜೆ ಟ್ರ್ಯಾಕ್‌ನಲ್ಲಿ ಓಡುವ ಅಭ್ಯಾಸ ಮಾಡುವವರು ಕ್ರಿಕೆಟ್‌ ಆಟಗಾರರು ಚಿಮ್ಮಿಸುವ ಚೆಂಟಿನ ಏಟನ್ನು ತಪ್ಪಿಸಿಕೊಂಡು ಓಡಬೇಕಾದ ಅನಿವಾರ್ಯತೆ ಇದೆ.

‘ಕ್ರಿಕೆಟ್‌ ಮೈದಾನವನ್ನು ಅಭಿವೃದ್ಧಿಪಡಿಸಿದರೆ ನಾವು ಜಿಲ್ಲಾ ಕ್ರೀಡಾಂಗಣದಲ್ಲಿ ಇನ್ನಷ್ಟು ಉತ್ತಮವಾಗಿ ಅಭ್ಯಾಸ ನಡೆಸಲು ಸಾಧ್ಯವಾಗುತ್ತದೆ’ ಎಂದು ಅಭ್ಯಾಸಿಯೊಬ್ಬರು ಅಭಿಪ್ರಾಯಪಟ್ಟರು. ‘ಸಮಾವೇಶಗಳನ್ನು ಹಮ್ಮಿಕೊಳ್ಳಲು ಈ ಕ್ರೀಡಾಂಗಣದಲ್ಲಿ ಅವಕಾಶ ನೀಡುವುದರಿಂದಲೂ ಅಭ್ಯಾಸಕ್ಕೆ ತೊಂದರೆಯಾಗುತ್ತಿದೆ’ ಎಂದು ದೂರಿದರು.

* * 

ಕ್ರೀಡಾಂಗಣದ ಸುತ್ತ ಪಾಲಿಕೆ ವತಿಯಿಂದ ಕಾಂಪೌಂಡ್‌ ನಿರ್ಮಿಸುವ ಕಾರ್ಯಕ್ಕೆ ಚಾಲನೆ ದೊರೆತಿದೆ. ಒತ್ತುವರಿ ಗುರುತಿಸುವ ಕಾರ್ಯವೂ ಆರಂಭವಾಗಲಿದೆ

–ರಹಮತ್‌ ಉಲ್ಲಾ, ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.