ಗುರುವಾರ , ಆಗಸ್ಟ್ 13, 2020
26 °C

ಸೌರಶಕ್ತಿ ವಿದ್ಯುತ್ ಬಳಕೆಯತ್ತ ‘ಚಿಂತಾಕಿ’ ಚಿತ್ತ

ಮನ್ಮಥಪ್ಪ ಸ್ವಾಮಿ Updated:

ಅಕ್ಷರ ಗಾತ್ರ : | |

ಸೌರಶಕ್ತಿ ವಿದ್ಯುತ್ ಬಳಕೆಯತ್ತ ‘ಚಿಂತಾಕಿ’ ಚಿತ್ತ

ಔರಾದ್: ಸ್ವಚ್ಛ ಭಾರತ ಅಭಿಯಾನ ಜಾರಿ, ಸೌರಶಕ್ತಿ ವಿದ್ಯುತ್ ಬಳಕೆ ಮತ್ತು ಉತ್ತಮ ಆಡಳಿತ ನಿರ್ವಹಣೆಯ ಮೂಲಕ ಚಿಂತಾಕಿ ಗ್ರಾಮ ಪಂಚಾಯಿತಿಯು ತಾಲ್ಲೂಕಿನಲ್ಲಿ ಗಮನ ಸೆಳೆದಿದೆ. ಜನರಿಗೆ ಅತ್ಯುತ್ತಮ ಸೇವೆ ನೀಡಿದ್ದಕ್ಕಾಗಿ ಕಳೆದ ಸಾಲಿನಲ್ಲಿ ಗಾಂಧಿ ಗ್ರಾಮ ಪುರಸ್ಕಾರ ಪಡೆದಿರುವ ಈ ಪಂಚಾಯಿತಿ ಈ ವರ್ಷ ಬಯಲು ಶೌಚಾಲಯ ಮುಕ್ತ ಗ್ರಾಮಗಳಿಗಾಗಿ ವಿನೂತನ ಅಭಿಯಾನ ಆರಂಭಿಸಿದೆ.

ಈಚೆಗೆ ಬೆಲ್ದಾಳ ಗ್ರಾಮದಲ್ಲಿ ‘ಶೌಚಾಲಯ ಸಂಭ್ರಮ’ ಎಂಬ ಕಾರ್ಯಕ್ರಮ ಹಾಕಿಕೊಂಡು ಇಡೀ ಊರು ಬಯಲು ಶೌಚಾಲಯದಿಂದ ಮುಕ್ತಿ ಪಡೆದಿದೆ. ಎಲ್ಲ 150 ಮನೆಯ ಸದಸ್ಯರು ಶೌಚಾಲಯ ಬಳಕೆ ಮಾಡಿಕೊಳ್ಳುತ್ತಿರುವುದು ಅಧಿಕಾರಿಗಳಲ್ಲಿ ಖುಷಿ ತಂದಿದೆ.

ಗ್ರಾಮ ಪಂಚಾಯಿತಿ ಅಧ್ಯಕ್ಷ ವೀರಾರೆಡ್ಡಿ ಮತ್ತು ಮೂವರು ಸದಸ್ಯರು ‘ಚಿಂತಾಕಿ’ ಗ್ರಾಮವನ್ನು ದತ್ತು ಪಡೆದು ಅಲ್ಲಿ ಬಯಲು ಮಲವಿಸರ್ಜನೆ ತೊಡೆದು ಹಾಕಲು ಸಂಕಲ್ಪ ಮಾಡಿದ್ದಾರೆ. ನಿಮ್ಮ ಮನೆಯಲ್ಲಿ ಶೌಚಾಲಯ ಆಗುವ ತನಕ ಚಪ್ಪಲಿ ತೊಡುವುದಿಲ್ಲ ಶಪಥ ಮಾಡಿದ್ದಾರೆ. ಜನ ಅವರ ಮಾತಿಗೆ ಬೆಲೆ ಕೊಟ್ಟು ಶೌಚಾಲಯ ಕಟ್ಟಿಕೊಳ್ಳಲು ಮುಂದಾಗಿದ್ದಾರೆ. 600 ಕುಟುಂಬಗಳ ಪೈಕಿ 500 ಮನೆಯಲ್ಲಿ ಶೌಚಾಲಯ ನಿರ್ಮಾಣ ಆಗಿವೆ. ಇನ್ನು ಒಂದು ತಿಂಗಳಲ್ಲಿ ಉಳಿದ ಮನೆಗಳಲ್ಲೂ ಶೌಚಾಲಯ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.

ಸೋಲಾರ್ ದೀಪ ವ್ಯವಸ್ಥೆ: ನಿರಂತರ ವಿದ್ಯುತ್ ಸಿಗದೆ ಜನರ ಕೆಲಸ ಕಾರ್ಯಗಳಿಗೆ ಆಗುವ ಅಡಚಣೆ ತಪ್ಪಿಸುವ ಸಲುವಾಗಿ ಗ್ರಾಮ ಪಂಚಾಯಿತಿಯು ಕಚೇರಿಯ ಕೆಲಸ ಕಾರ್ಯಗಳಿಗೆ ಸೋಲಾರ್‌ ಬಳಕೆ ಮಾಡಿಕೊಳ್ಳುವ ಮೂಲಕ ತಾಲ್ಲೂಕಿನಲ್ಲೇ ಗಮನ ಸೆಳೆದಿದೆ.

ಗ್ರಾಮ ಪಂಚಾಯಿತಿಗೆ ಸೇರಿದ ಕಟ್ಟಡವೊಂದರ ಬಾಡಿಗೆ ಹಣ ಬಳಸಿಕೊಂಡು 150 ಲಕ್ಷ ವೆಚ್ಚದಲ್ಲಿ ಸೋಲಾರ್ ಘಟಕ ಅಳವಡಿಸಿಕೊಂಡು ವಿದ್ಯುತ್ ಪಡೆಯಲಾಗುತ್ತಿದೆ. 2 ಕಿಲೊ ವ್ಯಾಟ್ ವಿದ್ಯುತ್ ಉತ್ಪಾದಿಸಿ 3 ಕಂಪ್ಯೂಟರ್‌, 12 ದೀಪ, 6 ಫ್ಯಾನ್ ನಿರಂತರವಾಗಿ ಬಳಕೆಯಾಗುತ್ತಿವೆ. ‘ಈಗ ನಮಗೆ ಜೆಸ್ಕಾಂ ವಿದ್ಯುತ್ ಅವಶ್ಯಕತೆ ಬೇಕಾಗಿಲ್ಲ. ಹೀಗಾಗಿ ಮಾಸಿಕ ₹1,500 ರಿಂದ ₹ 2,000 ಪಂಚಾಯಿತಿಗೆ ಉಳಿತಾಯವಾಗುತ್ತಿದೆ’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಾನಂದ ಔರಾದೆ ಹೇಳುತ್ತಾರೆ.

‘ಚುನಾಯಿತ ಸದಸ್ಯರು ಮತ್ತು ಜನರ ಸಹಕಾರದಿಂದ ಹಿಂದುಳಿದ ಪ್ರದೇಶದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದೇವೆ. ₹ 10 ಲಕ್ಷ ವೆಚ್ಚದಲ್ಲಿ ಪಂಚಾಯಿತಿ ಕಟ್ಟಡ ಕಟ್ಟಿಸಲಾಗಿದೆ. ₹ 5 ಲಕ್ಷ ಖರ್ಚು ಮಾಡಿ ಸುತ್ತಗೋಡೆ, ಉದ್ಯಾನ ಮತ್ತು ನೀರಿನ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸರ್ಕಾರ ನಮ್ಮ ಕೆಲಸ ಗುರುತಿಸಿ ಗಾಂಧಿ ಗ್ರಾಮ ಪುರಸ್ಕಾರ ನೀಡಿದೆ. ಮಾರ್ಚ್ ವೇಳೆಗೆ ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಐದು ಗ್ರಾಮಗಳಲ್ಲಿ 1,700 ಶೌಚಾಲಯ ಕಟ್ಟುವ ಗುರಿ ಸಾಧಿಸುತ್ತೇವೆ’ ಎಂದು ಅವರು ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾರೆ.

* * 

ಬಾಡಿಗೆ ಕಟ್ಟಡವೊಂದರಿಂದ ಬಂದ ಬಾಡಿಗೆ ಹಣದಿಂದ ಸೋಲಾರ್‌ ಘಟಕ ನಿರ್ಮಿಸಲಾಗಿದೆ. ಅಲ್ಲದೇ ಗ್ರಾಮದ 50 ಮಕ್ಕಳಿಗೆ ಸೋಲಾರ್ ವಿದ್ಯುತ್‌ ದೀಪ ವಿತರಿಸಲಾಗಿದೆ.

ಶಿವಾನಂದ ಔರಾದೆ, ಚಿಂತಾಕಿ ಪಿಡಿಒ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.