ಸೋಮವಾರ, ಆಗಸ್ಟ್ 3, 2020
25 °C

‘ಈಗ ನಾನು ಡಾ.ಪಾಲ್‌’

ಸುಮನಾ ಕೆ. Updated:

ಅಕ್ಷರ ಗಾತ್ರ : | |

‘ಈಗ ನಾನು ಡಾ.ಪಾಲ್‌’

* ನಟನಾ ಕ್ಷೇತ್ರಕ್ಕೆ ಬಂದಿದ್ದು ಹೇಗೆ?

ನನಗೆ ನಿರ್ದೇಶನದ ಬಗ್ಗೆ ಆಸಕ್ತಿ ಇತ್ತು. ‘ವೆನ್‌ ವಿ ಗಾಟ್ ಫ್ರೀಡಂ’ ಎಂಬ ಕಿರುಚಿತ್ರ ಮಾಡಿದೆ. ಎಡಿಟಿಂಗ್‌ಗೆ ನಿರ್ದೇಶಕ ವಿಕ್ರಮ್‌ ಯೋಗಾನಂದ್‌ ಅವರ ಬಳಿ ಹೋಗಿದ್ದೆ. ಆಗ ಅವರ ಪರಿಚಯವಾಗಿ ನಾವಿಬ್ಬರೂ ಸಮಾನಮನಸ್ಕರು ಎಂಬುದು ಅರಿವಾಯಿತು. ಅದಾದ ಮೇಲೆ ಇಬ್ಬರೂ ಜೊತೆಯಾಗಿ ಕೆಲಸ ಆರಂಭಿಸಿದೆವು.

* ಹಾಸ್ಯಗಾರನಾಗಿ ಬದಲಾಗಿದ್ದು...

ನಾನು ತುಂಬಾ ಮಾತನಾಡುತ್ತೇನೆ. ಸಮಯಕ್ಕೆ ತಕ್ಕ ಹಾಗೆ ಹಾಸ್ಯ ಮಾಡುವುದು ನನಗೆ ದೈವದತ್ತ ವರ. ಸುಮ್ಮನೆ ಕುಳಿತಿರುವ ಗುಂಪನ್ನು ನಗಿಸುವ ಶಕ್ತಿ ನನಗಿದೆ. ಇದನ್ನು ಮೊದಲು ಗುರುತಿಸಿದವರು ವಿಕ್ರಮ್‌ ಯೋಗಾನಂದ್‌.  ಸಿನಿಮಾದಲ್ಲೂ ಹಾಸ್ಯಗಾರರಾಗಿ ನಟಿಸಿ, ನಿಮಗೆ ಮೈಲೇಜ್‌ ಸಿಗಬಹುದು ಎಂದು ಹೇಳಿದರು. ಹೀಗೆ ಹಾಸ್ಯಗಾರನಾದೆ.

* ಡಾ.ಪಾಲ್‌ ಪಾತ್ರಕ್ಕೆ ಆಯ್ಕೆ ಹೇಗಾಯಿತು?

ಡಾ. ಪಾಲ್‌ಗೆ ವೆಬ್‌ ಸಿರೀಸ್‌ಗೆ ನಾನೇ ಸಂಭಾಷಣೆ ಬರೆದೆ. ಆ ಪಾತ್ರ ಹೀಗೇ ಇರಬೇಕು ಎಂದು ವಿವರಿಸಿದವನು ನಾನು. ಆಗ ವಿಕ್ರಮ್‌ ಸಡನ್ನಾಗಿ ಆ ಪಾತ್ರವನ್ನೂ ನೀವೇ ಮಾಡಿ ಎಂದು ಹೇಳಿದರು. ನಾನು ಒಂದು ಸಾರಿ ಟ್ರೈ ಮಾಡಿದೆ. ಈಗ ಎಲ್ಲರೂ ನನ್ನನ್ನು ಡಾ. ಪಾಲ್‌ ಅಂತಾನೇ ಕರೀತಾರೆ

* ಕೈಲಾಶ್‌ ಪಾಲ್‌ ಈಗ ಡಾ. ಪಾಲ್‌ ಆಗಿದ್ದಾರಲ್ವಾ ?

ಮೊದಲು ಜನ ನನ್ನನ್ನು ಗುರುತಿಸುತ್ತಿರಲಿಲ್ಲ.  ಬರುಬರುತ್ತಾ ಗುರುತಿಸಬಹುದು ಎಂದು ನಂಬಿಕೆ ಇತ್ತು. ಇತ್ತೀಚೆಗೆ ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆ. ಅಲ್ಲಿ ಒಂದು ಸಣ್ಣ ಪಾಪು ಡಾ. ಪಾಲ್‌, ಡಾ. ಪಾಲ್‌ ಅಂತಾ ಕರೆಯಿತು. ಇದಕ್ಕಿಂತ ಖುಷಿ ಬೇರೆ ಇಲ್ಲ.

* ಡಾ. ಪಾಲ್‌ ಲೈಂಗಿಕ ತಜ್ಞ. ಇದರಿಂದ ನಿಮಗೆ ಇರಿಸು– ಮುರಿಸು ಆಗಿದ್ದಿದ್ಯಾ?

ಇಲ್ಲ, ನನ್ನ ಹೆಸರೇ ಕೈಲಾಶ್‌ ಪಾಲ್‌. ಜನರು ಪಾಲ್‌ ಅಂತ್ಲೇ ನನ್ನನ್ನು ಕರಿಯೋದು. ಡಾ.ಪಾಲ್‌ ಆದ್ಮೇಲೆ ಏನೂ ಜಾಸ್ತಿ ಬದಲಾವಣೆ ಆಗಿಲ್ಲ. ಇದು ಅರಿವು ಮೂಡಿಸುವ ವೆಬ್‌ ಸಿರೀಸ್‌.

* ನಿಜಜೀವನದಲ್ಲಿ ಕೈಲಾಶ್‌ ಪಾಲ್‌ ಹೇಗಿರ್ತಾರೆ?

ಕೈಲಾಶ್‌ ಸಣ್ಣ ಇದ್ದ. ಆದರೆ ಡಾ. ಪಾಲ್‌ಗೆ ಡಾಕ್ಟರ್‌ ಲುಕ್‌ ಬೇಕಲ್ವಾ? ಸ್ವಲ್ಪ ದಪ್ಪ ಆಗ್ಬೇಕಿತ್ತು. ಹೀಗಾಗಿ ಒಂದೆರಡು ತಿಂಗಳು ಸರಿ ತಿಂದು ದಪ್ಪಗಾದೆ. ಡಾ. ಪಾಲ್‌ ಪಾತ್ರಕ್ಕಾಗಿ ಶರ್ಟ್‌ ಹಾಕಿಕೊಂಡು, ತಲೆಕೂದಲು ಕ್ರಾಪ್‌ ಬಾಚಿಕೊಳ್ಳುತ್ತಿದ್ದಾನೆ. ಪಾಲ್‌ ವಯಸ್ಸು 35. ಆದರೆ ಕೈಲಾಶ್‌ ಪಾಲ್‌ ಜಸ್ಟ್‌ 28.

* ಸಂಭಾಷಣೆ ಬರೆಯುವುದಕ್ಕೂ, ನಟನೆಗೂ ಏನು ವ್ಯತ್ಯಾಸ?

ಅಷ್ಟೊಂದು ವ್ಯತ್ಯಾಸ ಇದೆ ಎಂದು ನನಗೆ ಅನಿಸುತ್ತಿಲ್ಲ. ನಾನೇ ಪಾತ್ರ ಮಾಡೋನಲ್ವಾ? ಬರೆದುಕೊಂಡ ಸಂಭಾಷಣೆಯನ್ನು ಸ್ವಲ್ಪ ಸರಿಪಡಿಸಿಕೊಳ್ತೀನಿ.

* ಮುಂದೇನು?

ಹಾಸ್ಯಗಾರನಾಗಿ ಮುಂದುವರಿಯಬೇಕು ಎಂದುಕೊಂಡಿದ್ದೇನೆ. ಕನ್ನಡ ಚಿತ್ರರಂಗದಲ್ಲಿ ಮುಸುರಿ ಕೃಷ್ಣಮೂರ್ತಿ, ನರಸಿಂಹರಾಜು, ತಮಿಳಿನಲ್ಲಿ ಗೌಂಡಮನಿ ನನಗೆ ಇಷ್ಟ.

ವಿಕ್ರಮ್‌ ಯೋಗಾನಂದ್‌ ನಿರ್ದೇಶನದ ಪ್ರೊಡಕ್ಷನ್‌ ನಂ 2 ಹಾಗೂ ಗುರುಪ್ರಸಾದ್‌ ಅವರ ‘ಅದೇಮ’ ಚಿತ್ರದಲ್ಲಿ ಹಾಸ್ಯನಟನಾಗಿ ಅಭಿನಯಿಸುತ್ತಿದ್ದೇನೆ.

* ಡಾ. ಪಾಲ್‌ ಕೋಟ್‌ ಹಾಕಲ್ವಾ?

ಎಲ್ಲಾ ಡಾಕ್ಟರ್‌ಗಳು ಕೋಟ್‌ ಹಾಕಲ್ಲ. ಹೀಗಾಗಿ ನಾನು ಹಾಕಲ್ಲ.

* ಹಾಸ್ಯಗಾರರಾದ ನಿಮಗೆ ನಿಮ್ಮಲ್ಲಿ ನಗು ಉಕ್ಕಿಸುವ ಕ್ಷಣ ಯಾವುದು?

ಸುಳ್ಳು ಹೇಳಿ, ಅದಕ್ಕೆ ಸಿಕ್ಕಾಪಟ್ಟೆ ಬಿಲ್ಡಪ್‌ ಕೊಟ್ಟು, ಆಮೇಲೆ ಸಿಕ್ಕಿಹಾಕಿಕೊಂಡ ಕ್ಷಣ.

* ಅಂದ್ರೆ ನೀವು ತುಂಬಾ ಸುಳ್ಳು ಹೇಳ್ತೀರಾ ಅನ್ನಿ

ಹಾಗೇನಿಲ್ಲ ಅನ್ನೋಕಾಗಲ್ಲ.

ಜಾಗೃತಿಗೆ ಪ್ರಯತ್ನ

ಲೈಂಗಿಕ ವಿಷಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ‘ಡಾ.ಪಾಲ್’ ಧಾರಾವಾಹಿಯ ಉದ್ದೇಶ. ಸ್ಮಾರ್ಟ್‌ ಸ್ಕ್ರೀನ್‌ ನಿರ್ಮಾಣದ ಈ ಧಾರಾವಾಹಿ ‘ಸಕ್ಕತ್‌ ಸ್ಟುಡಿಯೊ’ ಯೂಟ್ಯೂಬ್‌ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿದೆ. ವೀಕ್ಷಕರ ಸಂಖ್ಯೆ 1 ಲಕ್ಷ ದಾಟಿದೆ.

’ಸುಮಾರು ಎಂಟು ನಿಮಿಷ ಅವಧಿಯ ಧಾರಾವಾಹಿಯ ಪ್ರತಿ ಸಂಚಿಕೆಗೂ ಕಥೆಯನ್ನು ನಾನು ಸಿದ್ಧಪಡಿಸುತ್ತೇನೆ. ಕೈಲಾಶ್‌ ಪಾಲ್ ಸಂಭಾಷಣೆ ಬರೆಯುತ್ತಾರೆ. ಮನರಂಜನೆಯ ಜೊತೆಗೆ ಮಾಹಿತಿಯನ್ನೂ ಕೊಡುವುದು ನಮ್ಮ ಉದ್ದೇಶ’ ಎನ್ನುತ್ತಾರೆ ನಿರ್ದೇಶಕ ವಿಕ್ರಮ್ ಯೋಗಾನಂದ್.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.