ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿರಂತರಂ’ ರಾಷ್ಟ್ರೀಯ ಸಂಗೀತ, ನೃತ್ಯೋತ್ಸವ

Last Updated 2 ಜನವರಿ 2018, 19:30 IST
ಅಕ್ಷರ ಗಾತ್ರ

ನಗರದ ‘ನಿರಂತರಂ’ ಸಂಸ್ಥೆ ಒಂಬತ್ತು ವರ್ಷಗಳಿಂದ ಹಮ್ಮಿಕೊಳ್ಳುತ್ತಿರುವ ಭಾರತೀಯ ಕಲಾ ಉತ್ಸವ ‘ಸಂಗೀತ ಸಂಭ್ರಮ’ ದಲ್ಲಿ ಈ ಬಾರಿ ರಾಷ್ಟ್ರೀಯ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳು ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ನಡೆಯಲಿದೆ. ಜನವರಿ 3ರಿಂದ 6ರವರೆಗೆ ನಡೆಯುವ ಉತ್ಸವದಲ್ಲಿ ಸಂಗೀತ ಮತ್ತು ನೃತ್ಯ ಕ್ಷೇತ್ರಗಳ ಹಿರಿಯ ವಿದ್ವಾಂಸರು ಕಾರ್ಯಕ್ರಮ ನೀಡಲಿದ್ದಾರೆ.

ಮೊದಲ ಮೂರು ದಿನದ ಕಾರ್ಯಕ್ರಮಗಳು ಮಲ್ಲೇಶ್ವರದ 14ನೇ ಅಡ್ಡರಸ್ತೆಯಲ್ಲಿರುವ ಸೇವಾ ಸದನದಲ್ಲಿ ನಡೆದರೆ, ಸಮಾರೋಪ ಸಮಾರಂಭ ಚೌಡಯ್ಯ ಸ್ಮಾರಕ ಭವನದಲ್ಲಿ ನಡೆಯಲಿದೆ. ಆದರೆ ಎಲ್ಲಾ ದಿನಗಳ ಕಾರ್ಯಕ್ರಮ ಸಂಜೆ 5.30ಕ್ಕೆ ಶುರುವಾಗಲಿದೆ.

‘ನಿರಂತರಂ ಸಂಸ್ಥೆ 2002ರಲ್ಲಿ ಆರಂಭಿಸಿದ ಕಲೋತ್ಸವಕ್ಕೆ ಈಗ ಒಂಬತ್ತರ ಹರೆಯ. ಈ ಬಾರಿಯ ಉತ್ಸವದಲ್ಲಿ ಹಲವು ಮಂದಿ ಹಿರಿಯ ನೃತ್ಯ ಗುರುಗಳು ಉದಯೋನ್ಮುಖ ನೃತ್ಯ ಕಲಾವಿದರೊಂದಿಗೆ ಕಾರ್ಯಕ್ರಮ ನೀಡಲಿದ್ದಾರೆ. ಹಿರಿಯ ಸಂಗೀತ ವಿದ್ವಾಂಸರಾದ ಟಿ.ವಿ. ಶಂಕರನಾರಾಯಣನ್‌ ಅವರ ಗಾಯನವೂ ಇರುತ್ತದೆ’ ಎಂದು, ‘ನಿರಂತರಂ’ನ ಸಂಸ್ಥಾಪಕಿ ಡಾ.ಪಿ.ರಮಾ ಹೇಳುತ್ತಾರೆ.

ಜನವರಿ 3ರಂದು ಉತ್ಸವಕ್ಕೆ ಚಾಲನೆ. ಅತಿಥಿ– ಡಾ.ಎಂ.ಸೂರ್ಯಪ್ರಸಾದ್‌. ‘ಶ್ರೀ ರಾಮಾನುಜ ವೈಭವಂ’ ಕುರಿತು ಉಪನ್ಯಾಸ– ಅಂಡಾಳ್‌ ಶ್ರೀರಾಮ್‌. ಪ್ರೇರಣಾ ಆತ್ರೇಯ –ಭರತನಾಟ್ಯ. ವಂದನಾ ಸುಪ್ರಿಯಾ ಮತ್ತು ರಾಧಿಕಾ ಮಕರಮ್‌– ಒಡಿಸ್ಸಿ ನೃತ್ಯ.

ಜನವರಿ 4ರಂದು ಅರ್ಜುನ್‌ ಶ್ರೀವಾತ್ಸವ್‌ ಗಾಯನದೊಂದಿಗೆ ಕಾರ್ಯಕ್ರಮ ಶುರುವಾಗಲಿದೆ. ಪ್ರಣವ ಸ್ವರೂಪ್‌– ವಯೊಲಿನ್‌, ವಿನಯ್‌ ನಾಗರಾಜನ್‌–ಮೃದಂಗದಲ್ಲಿ ನೆರವಾಗಲಿದ್ದಾರೆ. ಅತಿಥಿ– ಎನ್.ಎಸ್. ಕೃಷ್ಣಮೂಡರ್ತಿ.

ಹಿರಿಯ ನೃತ್ಯ ವಿದುಷಿ ಪ್ರತಿಭಾ ಪ್ರಹ್ಲಾದ್‌ ಅವರಿಂದ ‘ಸಾತ್ವಿಕಾ– ಆತ್ಮದ ಪ್ರಸ್ತುತಿ’ ವಿಷಯಾಧರಿತ ಭರತನಾಟ್ಯ ಕಾರ್ಯಕ್ರಮ ಹಾಗೂ ಟಿ.ವಿ. ಶಂಕರನಾರಾಯಣನ್‌ ಅವರಿಂದ ಕರ್ನಾಟಕ ಶಾಸ್ತ್ರೀಯ ಗಾಯನ ಇಡೀ ಉತ್ಸವದ ಪ್ರಮುಖ ಆಕರ್ಷಣೆ ಎನಿಸಲಿದೆ. ಶಂಕರನಾರಾಯಣನ್‌ ಅವರಿಗೆ ಬಿಕೆ. ರಘು– ವಯೊಲಿನ್‌, ತುಮಕೂರು ರವಿಶಂಕರ್‌–ಮೃದಂಗ, ಭಾರ್ಗವ ಹಾಲಂಬಿ– ಖಂಜಿರದಲ್ಲಿ ಸಹಕರಿಸಲಿದ್ದಾರೆ.

ಜನವರಿ 5ರಂದು ವಿವಿಧ ಗುರುಗಳಿಂದ ನೃತ್ಯ ಪ್ರಸ್ತುತಿ ‘ಅಭಿನಯ ಅನುಭವ’ದಲ್ಲಿ ಉಷಾ ದಾತಾರ್, ಆಶಾ ಗೋಪಾಲ್‌, ಡಾ. ವಸುಂಧರಾ ದೊರೆಸ್ವಾಮಿ, ಭಾನುಮತಿ, ಗೋಪಿಕಾ ವರ್ಮ, ವೀಣಾ ಮೂರ್ತಿ ವಿಜಯ್‌, ವೈಜಯಂತಿ ಕಾಶಿ, ಪದ್ಮಿನಿ ರವಿ, ಮಂಜು ಭಾರ್ಗವಿ, ಗೋಪಿಕಾ ವರ್ಮ, ಸುಪರ್ಣಾ ವೆಂಕಟೇಶ್‌ ನೃತ್ಯ ಪ್ರದರ್ಶನ ಮಾಡಲಿದ್ದಾರೆ.

ಜನವರಿ 6ರಂದು ಸಮಾರೋಪ: ಲಾಲ್ಗುಡಿ ರಾಜಲಕ್ಷ್ಮಿ, ಎಂ.ವಾಸುದೇವ ರಾವ್‌, ಪದ್ಮಿನಿ ಚಾರಿ, ಅಖಿಲಾ ಅಯ್ಯರ್‌, ವೇಣುಗೋಪಾಲ ರಾಜು ಮತ್ತು ಡಿ.ಕೇಶವ ಅವರಿಗೆ ‘ಸಂಭ್ರಮ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೋಯರ್‌, ಅಶ್ವತ್ಥ ನಾರಾಯಣ, ಪ್ರೊ.ನಾಗಮಣಿ ಶ್ರೀನಾಥ್‌ ಪಾಲ್ಗೊಳ್ಳಲಿದ್ದಾರೆ.

ಹಳೆಯ ಕನ್ನಡ ಚಲನಚಿತ್ರಗಳ ಶಾಸ್ತ್ರೀಯ ಸಂಗೀತದ ಹಾಡುಗಳಿಗೆ ಸಂಯೋಜಿಸಿದ ನೃತ್ಯಗಳನ್ನು 60 ಮಂದಿ ಕಲಾವಿದರು ಪ್ರಸ್ತುತಪಡಿಸಲಿದ್ದಾರೆ. ಈ ಗೀತೆಗಳನ್ನು ವೇದಿಕೆಯಲ್ಲಿ ಹೆಸರಾಂತ ಕಲಾವಿದರು ‘ಲೈವ್‌ ಆರ್ಕೆಸ್ಟ್ರಾ’ದಲ್ಲಿ ಹಾಡಲಿರುವುದು ಮತ್ತೊಂದು ವಿಶೇಷ. ಪಿ. ರಮಾ ಇದಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT