ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಧವಾರ, 3–1–1968

Last Updated 2 ಜನವರಿ 2018, 19:30 IST
ಅಕ್ಷರ ಗಾತ್ರ

ಷೇಖ್ ಅಬ್ದುಲ್ಲಾ: ಈಗ ಸರ್ವ ಸ್ವತಂತ್ರ ವ್ಯಕ್ತಿ

ನವದೆಹಲಿ, ಜ. 2– ಷೇಖ್ ಅಬ್ದುಲ್ಲಾ ಇಂದಿನಿಂದ ಸ್ವತಂತ್ರರು. ಕೇಂದ್ರ ಸರ್ಕಾರ ಇಂದು ಅವರ ಮೇಲೆ ಹೇರಿದ್ದ ಎಲ್ಲಾ ನಿರ್ಬಂಧಗಳನ್ನು ರದ್ದುಗೊಳಿಸಿತು.

ಬೆಳಿಗ್ಗೆ 9 ಗಂಟೆಗೆ ನಿರ್ಬಂಧಗಳನ್ನು ರದ್ದುಗೊಳಿಸುವ ಕೇಂದ್ರ ಸರ್ಕಾರದ ಆಜ್ಞೆಯನ್ನು ಷೇಖ್ ಅಬ್ದುಲ್ಲಾರವರಿಗೆ ತಲುಪಿಸಲಾಯಿತು.

ಸ್ಥಾನಬದ್ಧತೆಯಿಂದ ವಿಮುಕ್ತರಾದ ಕೂಡಲೆ ಷೇಖ್ ಅಬ್ದುಲ್ಲಾ ರಾಷ್ಟ್ರಪತಿ ಡಾ. ಜಾಕೀರ್ ಹುಸೇನ್‌ರವರನ್ನು ಭೇಟಿ ಮಾಡಿದ್ದರು. ಬಳಿಕ ಅವರು ಜುಮ್ಮಾ ಮಸೀದಿಯಲ್ಲಿ  ನಡೆದ ಈದ್ ಉಲ್ ಫಿತ್ತಾರ್ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದ್ದರು.

ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ಪುನಃ ಷೇಖ್ ಯತ್ನ

ನವದೆಹಲಿ, ಜ. 2– ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ತಾವು ನಡೆಸಿದ ಯತ್ನ ಜವಾಹರಲಾಲ್ ನೆಹ್ರೂ ಅವರ ನಿಧನದ ನಂತರ ನಿಂತು ಹೋಗಿದ್ದು, ಅದನ್ನು ಈಗ ಪುನಃ ನಡೆಸುವುದಾಗಿ ಷೇಖ್ ಅಬ್ದುಲ್ಲಾ ಇಂದು ಇಲ್ಲಿ ಹೇಳಿದರು.

ನೆಹ್ರೂ ಅವರಂತೆ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅವರೂ ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸುವರೇ ಎಂಬ ಪ್ರಶ್ನೆಗೆ, ತಂದೆಯ ಅಪೇಕ್ಷೆಯನ್ನು ಮಗಳು ಪೂರೈಸುವರೆಂದು ತಮ್ಮ ನಿರೀಕ್ಷೆ ಎಂದು ಅವರು ಹೇಳಿದರು.

‘ಬದಲಿ ಹೃದಯದ’ಎರಡನೇ ಚಿಕಿತ್ಸೆ

ಕೇಪ್‌ಟೌನ್, ಜ. 2– ಗ್ರೂಟಿಷೂರ್ ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ತಜ್ಞರು ಇಂದು ಸತ್ತ ವರ್ಣೀಯನೊಬ್ಬನ ಹೃದಯವನ್ನು 58 ವರ್ಷ ವಯಸ್ಸಿನ ಶ್ವೇತವರ್ಣೀಯನೊಬ್ಬನ ದೇಹದೊಳಕ್ಕೆ ಅಳವಡಿಸಿ ಶಸ್ತ್ರ ಚಿಕಿತ್ಸೆ ನಡೆಸಿದರು.

ಗ್ರೂಟಿಷೂರ್ ಆಸ್ಪತ್ರೆ ನಡೆಸಿರುವ ‘ಬದಲಿ ಹೃದಯ‍’ ಎರಡನೇ ಶಸ್ತ್ರ ಚಿಕಿತ್ಸೆ ಇದು.

ರಾಜ್ಯದಲ್ಲಿ 20 ಲಕ್ಷ ವಿದ್ಯಾವಂತ ನಿರುದ್ಯೋಗಿಗಳು

ಬೆಂಗಳೂರು, ಜ. 2– ನಾಲ್ಕನೇ ಪಂಚವಾರ್ಷಿಕ ಯೋಜನೆ ಮುಗಿಯುವುದರೊಳಗೆ ಮೈಸೂರು ರಾಜ್ಯದಲ್ಲಿ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ 20 ಲಕ್ಷಗಳಿಗೇರುವ ಸಂಭವವಿದೆ.

ಮಾನವ ಸ್ವಭಾವ ಪರಿವರ್ತನೆ ಪ್ರಯೋಗಾಲಯ: ಜೈಲುಗಳ ಬಗ್ಗೆ ಜ್ಯೋತ್ಸ್ನಾಶಹಾ ಕಲ್ಪನೆ

ಬೆಂಗಳೂರು, ಜ. 2– ತುರಂಗಗಳು, ಗಾಂಧೀಜಿಯು ಹೇಳಿದ ಹಾಗೆ ಅಪರಾಧ ಪ್ರವೃತ್ತಿಗೆ ಚಿಕಿತ್ಸೆ ಮಾಡುವ ‘ಆಸ್ಪತ್ರೆಗಳಾಗಿ’, ಅಪರಾಧಿಗಳ ಸುಧಾರಣೆ ಸೇವಾ ಡೈರೆಕ್ಟರ್ (ಕೇಂದ್ರದ) ಶ್ರೀಮತಿ ಜ್ಯೋತ್ಸ್ನಾ ಶಹಾರವರು ಆಶಿಸಿರುವ ಹಾಗೆ ‘ಮಾನವನ ಸ್ವಭಾವವನ್ನು ಪರಿವರ್ತಿಸುವ ಪ್ರಯೋಗಾಲಯಗಳಾಗಿ’ ಆಗುವ ದಿನ ಬಹು ದೂರ ಉಳಿದಿಲ್ಲ.

ಶ್ರೀಮತಿ ಜ್ಯೋತ್ಸ್ನಾರವರ ಅಭಿಪ್ರಾಯದಲ್ಲಿ ಜೈಲು ಸುಧಾರಣೆಗಳ ಬಗ್ಗೆ ನಿರೀಕ್ಷೆ ಕೈಗೂಡುವುದು ಹೊಸ, ಸಮಗ್ರ  ಮತ್ತು ಏಕ ರೂಪದ ಅಖಿಲ ಭಾರತ ಬಂದೀಖಾನೆ ನಿಯಮಾವಳಿಯನ್ನು ಕಾರ್ಯಗತ ಮಾಡುವುದನ್ನು  ಅವಲಂಬಿಸಿದೆ.

ಹತ್ತು ಮಂದಿ ತಮಿಳು ಕವಿಗಳ ಪ್ರತಿಮೆ ಅನಾವರಣ

ಮದರಾಸು, ಜ. 2– ತಮಿಳು ಭಾಷೆ ಹಾಗೂ ಸಂಸ್ಕೃತಿಗೆ ಗಮನಾರ್ಹ ಸೇವೆ ಸಲ್ಲಿಸಿದ ಹತ್ತು ಮಂದಿ ಮಹಾ ಕವಿಗಳ ಹಾಗೂ ವಿದ್ವನ್ಮಣಿಗಳ ಪೂರ್ಣಾಕಾರದ ಪ್ರತಿಮೆಗಳನ್ನು ಇಂದು ರಾತ್ರಿ ಇಲ್ಲಿ ಅನಾವರಣ ಮಾಡಲಾಯಿತು.

ನಾಳೆ ಇಲ್ಲಿ ಪ್ರಾರಂಭವಾಗುವ ದ್ವಿತೀಯ ಅಂತರ ರಾಷ್ಟ್ರೀಯ ತಮಿಳು ಸಮ್ಮೇಳನಕ್ಕೆ ಸಂಬಂಧಿಸಿದಂತೆ ಮೇರಿನಾ ಬೀಚ್‌ನ ನಾನಾ ಸ್ಥಳಗಳಲ್ಲಿ ಅನಾವರಣ ಮಾಡಲಾದ ಈ ಪ್ರತಿಮೆಗಳಲ್ಲಿ ಇಬ್ಬರು ಮಹಿಳೆಯರ ಹಾಗೂ ಮೂವರು ವಿದೇಶಿಯರ ಪ್ರತಿಮೆಗಳೂ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT