ವಸೂಲಾಗದ ಸಾಲ: ಜೇಟ್ಲಿ–ಚಿದಂಬರಂ ಜಟಾಪಟಿ

7

ವಸೂಲಾಗದ ಸಾಲ: ಜೇಟ್ಲಿ–ಚಿದಂಬರಂ ಜಟಾಪಟಿ

Published:
Updated:
ವಸೂಲಾಗದ ಸಾಲ: ಜೇಟ್ಲಿ–ಚಿದಂಬರಂ ಜಟಾಪಟಿ

ನವದೆಹಲಿ: ವಸೂಲಾಗದ ಸಾಲಕ್ಕೆ (ಎನ್‌ಪಿಎ) ಸಂಬಂಧಿಸಿದಂತೆ ಹಣಕಾಸು ಸಚಿವ ಅರುಣ್‌ ಜೇಟ್ಲಿ ಮತ್ತು ಕಾಂಗ್ರೆಸ್‌ ಮುಖಂಡ, ಯುಪಿಎ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಪಿ.ಚಿದಂಬರಂ ನಡುವೆ ಮಂಗಳವಾರ ರಾಜ್ಯಸಭೆಯಲ್ಲಿ ಜಟಾಪಟಿ ನಡೆಯಿತು.

ಪ್ರಶ್ನೋತ್ತರ ವೇಳೆಯಲ್ಲಿ, ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ವಸೂಲಾಗದ ಸಾಲಗಳನ್ನು ಮನ್ನಾ ಮಾಡುವುದಕ್ಕೆ ಸಂಬಂಧಿಸಿದ ಪ್ರಶ್ನೆಗೆ ಜೇಟ್ಲಿ ಉತ್ತರಿಸುವ ಸಂದರ್ಭದಲ್ಲಿ ವಾಗ್ಯುದ್ಧ ನಡೆಯಿತು.

‘ಎನ್‌ಪಿಎ ಬಗೆಗಿನ ಚರ್ಚೆ ಯಾವತ್ತೂ ಮುಗಿಯದು. ಬ್ಯಾಂಕುಗಳ ಆರ್ಥಿಕ ಸ್ಥಿತಿಗತಿ ಪರಿಶೀಲನೆಯ ಸಂದರ್ಭದಲ್ಲಿ ವಸೂಲಾಗದ ಸಾಲದ ಬಗ್ಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ಗೊತ್ತಾಗುತ್ತದೆ. ‘ಈ ಹಿಂದೆ ಈ ನಿಯಮ ಸಡಿಲವಾಗಿತ್ತು; ಬ್ಯಾಂಕುಗಳ ಆರ್ಥಿಕ ಸ್ಥಿತಿಗತಿ ಪರಿಶೀಲನೆಯು ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಿದೆ’ ಎಂದು ಸಚಿವರು ಹೇಳುತ್ತಿದ್ದಾರೆ. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. 2014ರ ಏಪ್ರಿಲ್‌ 1ರ ನಂತರ ಸರ್ಕಾರಿ ಬ್ಯಾಂಕುಗಳು ನೀಡಿದ್ದರಲ್ಲಿ ಈಗ ಎಷ್ಟು ಸಾಲಗಳು ವಸೂಲಾಗದ ಸಾಲಗಳಾಗಿ ಬದಲಾಗಿವೆ ಎಂಬ ಮಾಹಿತಿ ಸಚಿವರ ಬಳಿ ಇದೆಯೇ, ಇಲ್ಲದಿದ್ದರೇ ಅದನ್ನು ಸಂಗ್ರಹಿಸಿ ಕೊಡಬಹುದೇ ಎಂಬುದು ನನ್ನ ಪ್ರಶ್ನೆ’ ಎಂದು ಚಿದಂಬರಂ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜೇಟ್ಲಿ, ‘ನಿರ್ದಿಷ್ಟ ಸಮಯಗಳಲ್ಲಿ ನೀಡಿದ ಸಾಲಗಳಿಗೆ ಸಂಬಂಧಿಸಿದಂತೆ ಈ ಪ್ರಶ್ನೆ ಇಲ್ಲ. ಆದರೆ, ಬಹುತೇಕ ವಸೂಲಾಗದ ಸಾಲಗಳು 2014ರ ಏಪ್ರಿಲ್‌ 1ಕ್ಕೂ ಮೊದಲು ನೀಡಿದ್ದ ಸಾಲಗಳಾಗಿವೆ ಎಂಬುದು ಸ್ಪಷ್ಟ’ ಎಂದು ಯುಪಿಎ ಅವಧಿಯಲ್ಲೇ ಎನ್‌ಪಿಎ ಸೃಷ್ಟಿಯಾಗಿದ್ದವು ಎಂದು ಪರೋಕ್ಷವಾಗಿ ತಿರುಗೇಟು ನೀಡಿದರು.

ಮಧ್ಯಪ್ರವೇಶಿಸಿದ ಅಕಾಲಿ ದಳದ ಸಂಸದ ನರೇಶ್‌ ಗುಜ್ರಾಲ್‌, ಪ್ರತಿ ಬ್ಯಾಂಕ್‌ನ ಕನಿಷ್ಠ 10 ಅತ್ಯಂತ ದೊಡ್ಡ ಎನ್‌ಪಿಎಗಳ ಬಗ್ಗೆ ಸರ್ಕಾರ ಯಾಕೆ ವಿಧಿವಿಜ್ಞಾನ ಲೆಕ್ಕಪರಿಶೋಧನೆ ನಡೆಸಬಾರದು ಎಂದು ಕೇಳಿದರು.

‘ಈ ಹಿಂದೆ ಬೇಕಾಬಿಟ್ಟಿಯಾಗಿ ಸಾಲ ಕೊಡುವ ಪದ್ಧತಿ ಇತ್ತು. ಕಟ್ಟು ನಿಟ್ಟು ಇಲ್ಲದೆ, ಅಪಾಯದ ಮೌಲ್ಯಮಾಪನ ಮಾಡದೆ ಸಾಲಗಳನ್ನು ನೀಡಲಾಗಿತ್ತು. ಇದರಿಂದಾಗಿ ಭಾರಿ ಪ್ರಮಾಣದಲ್ಲಿ ವಸೂಲಾಗದ ಸಾಲಗಳು ಸೃಷ್ಟಿಯಾಗಿವೆ. ಬಹುತೇಕ ಸಾಲಗಳಿಗೆ ಸಾಕಷ್ಟು ಭದ್ರತೆಯೂ ಇರಲಿಲ್ಲ’ ಎಂದು ಜೇಟ್ಲಿ ಹೇಳಿದರು.

‘ಬ್ಯಾಂಕಿಂಗ್‌ ಉದ್ಯಮಕ್ಕೆ ಸಂಬಂಧಿಸಿದ ನಿರ್ದಿಷ್ಟ ವಿಷಯಗಳು ಬೆಳಕಿಗೆ ಬಂದಾಗಲೆಲ್ಲ ಆರ್‌ಬಿಐ, ಬ್ಯಾಂಕುಗಳು ಮತ್ತು ತನಿಖಾ ಸಂಸ್ಥೆಗಳು ಕಾಲಕ್ಕೆ ತಕ್ಕಂತೆ ಕ್ರಮ ಕೈಗೊಳ್ಳುತ್ತಿವೆ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry