ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಡಿಜಿಪಿ ಹುದ್ದೆ ರದ್ದು ಸಂಭವ

ಸ್ಪಷ್ಟನೆ ಕೋರಿ ಗೃಹ ಇಲಾಖೆಗೆ ಪತ್ರ
Last Updated 2 ಜನವರಿ 2018, 20:33 IST
ಅಕ್ಷರ ಗಾತ್ರ

ಬೆಂಗಳೂರು: ಡಿ.31ರಂದು ನಡೆದ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಯಿಂದ ರಾಜ್ಯದಲ್ಲಿ ಒಂದು ಡಿಜಿಪಿ ಹುದ್ದೆ ರದ್ದುಗೊಳ್ಳುವ ಸಂಭವ ಎದುರಾಗಿದ್ದು, ಈ ಬಗ್ಗೆ ಸ್ಪಷ್ಟನೆ ನೀಡುವಂತೆ ತರಬೇತಿ ವಿಭಾಗದ ಮುಖ್ಯಸ್ಥರಾಗಿದ್ದ ಡಿಜಿಪಿ ಪ್ರೇಮ್‌ಶಂಕರ್ ಮೀನಾ ಅವರು ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಮಂಗಳವಾರ ಪತ್ರ ಬರೆದಿದ್ದಾರೆ.

ಮೀನಾ ಅವರನ್ನು ಸಿಐಡಿಗೆ ವರ್ಗಾವಣೆ ಮಾಡಿರುವ ಸರ್ಕಾರ, ಅವರಿಂದ ತೆರವಾದ ತರಬೇತಿ ವಿಭಾಗದ ಮುಖ್ಯಸ್ಥ ಸ್ಥಾನಕ್ಕೆ ಎಡಿಜಿಪಿ ದರ್ಜೆಯ ಚರಣ್‌ರೆಡ್ಡಿ ಅವರನ್ನು ನೇಮಿಸಿದೆ. ಇದರಿಂದಾಗಿ ತರಬೇತಿ ವಿಭಾಗದ ಮುಖ್ಯಸ್ಥ ಸ್ಥಾನಕ್ಕೆ ಹಿಂಬಡ್ತಿ ಸಿಕ್ಕಂತಾಗಿದ್ದು, ಸರ್ಕಾರ ಒಂದು ಡಿಜಿಪಿ ಹುದ್ದೆಯನ್ನು ರದ್ದುಗೊಳಿಸುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ವರ್ಗಾವಣೆ ಆದೇಶದಿಂದಾಗಿ ಆಡಳಿತಾತ್ಮಕ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿದೆ. ತರಬೇತಿ ವಿಭಾಗದ ಮುಖ್ಯಸ್ಥ ಹುದ್ದೆ ಡಿಜಿಪಿ ಸ್ಥಾನಮಾನಕ್ಕೋ ಅಥವಾ ಎಡಿಜಿಪಿ ಸ್ಥಾನಮಾನಕ್ಕೋ ಎಂಬುದನ್ನು ಆದೇಶದಲ್ಲಿ ತಿಳಿಸಿಲ್ಲ. ಈ ಕುರಿತು ಸ್ಪಷ್ಟನೆ ನೀಡಿ ಗೊಂದಲ ನಿವಾರಿಸಿ’ ಎಂದು ಪ್ರೇಮ್‌ಶಂಕರ್ ಮೀನಾ ಪತ್ರ ಬರೆದಿರುವುದಾಗಿ ಮೂಲಗಳು ತಿಳಿಸಿವೆ.

ಮಂಜೂರಾತಿ ಮೂರು, ಇರುವುದು ಏಳು!: ‘ಕೇಂದ್ರ ಲೋಕಾಸೇವಾ ಆಯೋಗದ ನಿಯಮಾವಳಿ ಪ್ರಕಾರ ರಾಜ್ಯವು ಮೂರು ಕೇಡರ್ ಡಿಜಿಪಿ ಹುದ್ದೆಗಳ ಮಂಜೂರಾತಿ ಪಡೆದಿದ್ದು, ಆ ಸ್ಥಾನಗಳಿಗೆ ಎರಡು ಪಟ್ಟು ಹುದ್ದೆಗಳನ್ನು ಸರ್ಕಾರ ಸೃಜಿಸಿಕೊಳ್ಳಬಹುದಾಗಿದೆ.’

‘ಅಂತೆಯೇ, ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ರಾಜು, ಅಗ್ನಿಶಾಮಕ ಇಲಾಖೆ ಮುಖ್ಯಸ್ಥ ಎಂ.ಎನ್.ರೆಡ್ಡಿ ಹಾಗೂ ಗೃಹ ಮಂಡಳಿ ಮುಖ್ಯಸ್ಥ ಕಿಶೋರ್ ಚಂದ್ರ ಅವರು ಕೇಡರ್ ಡಿಜಿಪಿ ಸ್ಥಾನ ಪಡೆದಿದ್ದಾರೆ. ಇನ್ನುಳಿದ ಮೂವರು ಡಿಜಿಪಿಗಳಿಗೆ, ರಾಜ್ಯ ಸರ್ಕಾರವೇ ಪ್ರತ್ಯೇಕ ವಿಭಾಗಗಳನ್ನು ಸೃಷ್ಟಿಸಿಕೊಟ್ಟಿದೆ.’

‘ನೀಲಮಣಿ ರಾಜು 2016ರಲ್ಲಿ ರಾಜ್ಯ ಸೇವೆಗೆ ಮರಳಿದಾಗ ರಾಜ್ಯದಲ್ಲಿ ಆರು ಡಿಜಿಪಿ ಹುದ್ದೆಗಳೂ ಭರ್ತಿಯಾಗಿದ್ದವು. ಆಗ ಸರ್ಕಾರ ಆಂತರಿಕ ಭದ್ರತಾ ವಿಭಾಗದ ಮುಖ್ಯಸ್ಥ ಸ್ಥಾನವನ್ನು ಡಿಜಿಪಿ ದರ್ಜೆಗೇರಿಸಿ, ನೀಲಮಣಿ ರಾಜು ಅವರನ್ನು ನೇಮಕ ಮಾಡಿತು.’

‘ಈ ಬೆಳವಣಿಗೆಯಿಂದಾಗಿ ಮೀನಾ ಹೆಚ್ಚುವರಿ ಡಿಜಿಪಿ ಎಂದೇ ಗಣನೆಗೆ ಬಂದಿದ್ದರು. ಹೀಗಾಗಿ, ಡಿಜಿಪಿ ವೇತನ, ಸ್ಥಾನಮಾನ ಪೂರ್ತಿಯಾಗಿ ಸಿಗುತ್ತಿರಲಿಲ್ಲ. ಇದೇ ಅಕ್ಟೋಬರ್‌ನಲ್ಲಿ ಆರ್‌.ಕೆ.ದತ್ತ ಡಿಜಿ–ಐಜಿಪಿ ಸ್ಥಾನದಿಂದ ನಿವೃತ್ತಿ ಹೊಂದಿದರು. ಇದರಿಂದ ಹೆಚ್ಚುವರಿ ಹುದ್ದೆಯಲ್ಲಿದ್ದ ಮೀನಾ, ಸಿಐಡಿ ಮುಖ್ಯಸ್ಥರಾಗಿದ್ದಾರೆ. ಒಂದು ಹುದ್ದೆಯನ್ನು ರದ್ದುಗೊಳಿಸುವ ಉದ್ದೇಶದಿಂದಲೇ ಸರ್ಕಾರ ಈ ರೀತಿ ಆದೇಶ ಹೊರಡಿಸಿರಬಹುದು’ ಎಂದು ಹಿರಿಯ ಅಧಿಕಾರಿಯೊಬ್ಬರು ಸಂಶಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT