ಮಂಗಳವಾರ, ಆಗಸ್ಟ್ 11, 2020
24 °C

ಸುರಂಗದೊಳಗೆ 10 ನಿಮಿಷ ಉಳಿದ ರೈಲು: ಅರ್ಧ ಗಂಟೆ ಮೆಟ್ರೊ ಸೇವೆ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುರಂಗದೊಳಗೆ 10 ನಿಮಿಷ ಉಳಿದ ರೈಲು: ಅರ್ಧ ಗಂಟೆ ಮೆಟ್ರೊ ಸೇವೆ ಸ್ಥಗಿತ

ಬೆಂಗಳೂರು: ವಿದ್ಯುತ್‌ ಪೂರೈಕೆ ಜಾಲದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ನೇರಳೆ ಮಾರ್ಗದ ಮೆಟ್ರೊ ರೈಲು ಸೇವೆಯಲ್ಲಿ ಮಂಗಳವಾರ ವ್ಯತ್ಯಯ ಉಂಟಾಯಿತು. ಸಂಚರಿಸುತ್ತಿದ್ದ ರೈಲುಗಳು ಮಾರ್ಗ ಮಧ್ಯದಲ್ಲೇ ನಿಂತವು. ಬಳಿಕ ಅಲ್ಲಲ್ಲಿ ನಿಂತು ಮುಂದಕ್ಕೆ ಸಾಗಿದವು. ಇದರಿಂದಾಗಿ ಪ್ರಯಾಣಿಕರು ಆತಂಕಕ್ಕೊಳಗಾದರು.

ಕೆಲವು ರೈಲುಗಳು ಸುರಂಗ ಮಾರ್ಗದೊಳಗೆ 10 ನಿಮಿಷಕ್ಕೂ ಹೆಚ್ಚು ಹೊತ್ತು ನಿಂತಿದ್ದರಿಂದ ಪ್ರಯಾಣಿಕರು ಉಸಿರುಗಟ್ಟುವ ವಾತಾವರಣದಲ್ಲಿ ಸಿಲುಕಿಕೊಳ್ಳಬೇಕಾಯಿತು. ರೈಲು ಸಂಚಾರ ದಿಢೀರ್‌ ಸ್ಥಗಿತಗೊಳ್ಳಲು ಕಾರಣ ಏನು ಎಂಬ ಬಗ್ಗೆಯೂ ಸಮರ್ಪಕ ಮಾಹಿತಿ ಸಿಗದ ಕಾರಣ ಪ್ರಯಾಣಿಕರು ಗೊಂದಲಕ್ಕೊಳಗಾದರು.

ನಿಗಮದ ವಿದ್ಯುತ್ ಜಾಲದಲ್ಲಿ ಬೆಳಿಗ್ಗೆ 10.02ರಿಂದ ಬೆಳಿಗ್ಗೆ 10.28ರ ನಡುವೆ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು. ಬೆಳಿಗ್ಗೆ ಕಚೇರಿಗೆ ತಲುಪುವ ಧಾವಂತದಲ್ಲಿದ್ದ ಪ್ರಯಾಣಿಕರು, ರೈಲುಗಳು ನಿಗದಿತ ಅವಧಿಯಲ್ಲಿ ಸಂಚರಿಸದ ಕಾರಣ ಚಡಪಡಿಸಿದರು. ಈ ವ್ಯತ್ಯಯದಿಂದಾಗಿ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಉಂಟಾಯಿತು.

ಸಂಜೆ 6.20ರಿಂದ 6.26ರ ನಡುವೆ ಮತ್ತೆ ತಾಂತ್ರಿಕ ದೋಷ ಕಂಡು ಬಂತು. ಆಗಲೂ ರೈಲು ಸಂಚಾರ ದಿಢೀರ್‌ ಸ್ಥಗಿತಗೊಂಡಿತು. ಈ ವೇಳೆಯೂ ರೈಲುಗಳಲ್ಲಿ ಹಾಗೂ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚು ಇತ್ತು.

‘ನಾನು ವಿಜಯನಗರದಿಂದ ಎಂ.ಜಿ.ರಸ್ತೆವರೆಗೆ ಮೆಟ್ರೊದಲ್ಲಿ ನಿತ್ಯ ಪ್ರಯಾಣಿಸುತ್ತೇನೆ. ಪ್ರಯಾಣಕ್ಕೆ 16 ನಿಮಿಷ ಸಾಕು. ಮಂಗಳವಾರ ಬೆಳಿಗ್ಗೆ 10.02 ನಿಮಿಷಕ್ಕೆ ವಿಜಯನಗರದಲ್ಲಿ ಮೆಟ್ರೊ ಹತ್ತಿದ್ದೆ. ಎಂ.ಜಿ.ರಸ್ತೆ ತಲುಪುವಾಗ 10.39 ಆಗಿತ್ತು. ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮತ್ತು ಸೆಂಟ್ರಲ್‌ ಕಾಲೇಜು ಬಳಿಯ ಸರ್‌ ಎಂ.ವಿಶ್ವೇಶ್ವರಯ್ಯ ನಿಲ್ದಾಣದ ನಡುವಿನ ಸುರಂಗದಲ್ಲಿ ರೈಲು 10 ನಿಮಿಷಕ್ಕೂ ಹೆಚ್ಚು ಹೊತ್ತು ನಿಂತಿತ್ತು’ ಎಂದು ಕಾಮಾಕ್ಷಿಪಾಳ್ಯ ನಿವಾಸಿ ಗುರುದೇವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ರೈಲು ನಿಂತಾಗ ಹವಾನಿಯಂತ್ರಣ ವ್ಯವಸ್ಥೆಯೂ ಕಾರ್ಯನಿರ್ವಹಿಸಲಿಲ್ಲ. ರೈಲು ಪ್ರಯಾಣಿಕರಿಂದ ಭರ್ತಿಯಾಗಿತ್ತು. ಕಾಲಿಡುವುದಕ್ಕೂ ಜಾಗ ಇರಲಿಲ್ಲ. ಸುರಂಗದೊಳಗೆ ರೈಲು ನಿಂತಿದ್ದರಿಂದ, ಸ್ವಲ್ಪ ಹೊತ್ತಿನಲ್ಲೇ ಪ್ರಯಾಣಿಕರೆಲ್ಲ ಬೆವರಲು ಆರಂಭಿಸಿದರು. ಉಸಿರಾಡುವುದಕ್ಕೂ ಕಷ್ಟಪಡಬೇಕಾಯಿತು’ ಎಂದು ಅವರು ವಿವರಿಸಿದರು.

ತೆರೆಯದ ಬಾಗಿಲು: ಮೈಸೂರು ರಸ್ತೆಯಿಂದ ಬೈಯಪ್ಪನಹಳ್ಳಿಗೆ ಹೊರಟಿದ್ದ ಇನ್ನೊಂದು ರೈಲು ಕಬ್ಬನ್‌ ಪಾರ್ಕ್‌ ನಿಲ್ದಾಣದ ಬಳಿ ಸುರಂಗದಲ್ಲಿ ಸಾಗು

ತ್ತಿದ್ದಾಗ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತು. ಅದು ಬೆಳಿಗ್ಗೆ 10.17ಕ್ಕೆ ಕಬ್ಬನ್‌ ಉದ್ಯಾನ ನಿಲ್ದಾಣವನ್ನು ತಲುಪಿತಾದರೂ ಕೆಲವು ನಿಮಿಷ ಬಾಗಿಲುಗಳು ತೆರೆದುಕೊಳ್ಳಲೇ ಇಲ್ಲ. ಅದೇ ಸಮಯದಲ್ಲಿ ಹವಾನಿಯಂತ್ರಣ ವ್ಯವಸ್ಥೆಯೂ ಸ್ಥಗಿತಗೊಂಡಿತು. ರೈಲಿನೊಳಗಿದ್ದ ಪ್ರಯಾಣಿಕರಿಗೆ ದಿಕ್ಕೇ ತೋಚದಂತಾಯಿತು.

ಮಹಿಳೆ ಅಸ್ವಸ್ಥ

ರೈಲು ಸ್ಥಗಿತಗೊಂಡಿದ್ದರಿಂದ ಮಹಿಳೆಯೊಬ್ಬರು ಅಸ್ವಸ್ಥಗೊಂಡರು. ವಿಶ್ವೇಶ್ವರಯ್ಯ ನಿಲ್ದಾಣದಲ್ಲಿ ರೈಲಿನಿಂದ ಹೊರಗೆ ಬರುತ್ತಿದ್ದಂತೆಯೇ ಅವರು ಕುಸಿದು ಬಿದ್ದರು. ಅರೆ‍ಪ್ರಜ್ಞಾವಸ್ಥೆಯಲ್ಲಿದ್ದ ಅವರಿಗೆ ಚಿಕಿತ್ಸೆ ಕೊಡಿಸಲಾಯಿತು ಎಂದು ಸಹಪ್ರಯಾಣಿಕರೊಬ್ಬರು ತಿಳಿಸಿದರು.

ಟಿಕೆಟ್‌ ಹಣ ಮರಳಿಸುವಂತೆ ಒತ್ತಾಯ

ಮೆಟ್ರೊ ಸೇವೆ ದಿಢೀರ್‌ ಸ್ಥಗಿತಗೊಂಡಿದ್ದರಿಂದ ಸಾವಿರಾರು ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ. ಈ ನಷ್ಟವನ್ನು ಬಿಎಂಆರ್‌ಸಿಎಲ್‌ ಭರಿಸಬೇಕು. ಕನಿಷ್ಠ ಪಕ್ಷ ಟಿಕೆಟ್‌ ಹಣವನ್ನಾದರೂ ಮರಳಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

‘ಸ್ಪಂದಿಸದ ಹಿರಿಯ ಅಧಿಕಾರಿಗಳು’

ಜನರ ಎದುರಿಗೇ ಮೆಟ್ರೊ ಸಿಬ್ಬಂದಿಯು ಹಿರಿಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡುತ್ತಿದ್ದರೂ ಅಧಿಕಾರಿಗಳು ಕರೆಯನ್ನು ಸ್ವೀಕರಿಸಲಿಲ್ಲ. ಹಲವು ಬಾರಿ ಪ್ರಯತ್ನಿಸಿದ ಬಳಿಕ ಕರೆ ಸ್ವೀಕರಿಸಿದ ತಾಂತ್ರಿಕ ವಿಭಾಗದವರು ಸ್ಪಷ್ಟವಾದ ಮಾಹಿತಿಯನ್ನೂ ನೀಡಲಿಲ್ಲ. ಇದು ಕೂಡ ಸಾರ್ವಜನಿಕರ ಕೋಪಕ್ಕೆ ಕಾರಣವಾಯ್ತು.

‘ನಾನು ರೈಲಿನಿಂದ ಇಳಿದ ಬಳಿಕ ಬಿಎಂಆರ್‌ಸಿಎಲ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ದೂರವಾಣಿ ಸಂಖ್ಯೆ ಹುಡುಕಿ ಕರೆ ಮಾಡಿದೆ. ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಕಚೇರಿಯ ದೂರವಾಣಿಗೆ ಕರೆ ಮಾಡಿದಾಗ ಯಾರೂ ಪ್ರತಿಕ್ರಿಯಿಸಲಿಲ್ಲ’ ಎಂದು ಗುರುದೇವ್‌ ಆರೋಪಿಸಿದರು.

‘ತುರ್ತು ಸಂದರ್ಭದಲ್ಲಿ ನಿಗಮದ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಲು ಬೋಗಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಸುರಂಗದಲ್ಲಿ ಸಿಲುಕಿದ್ದಾಗ ಅದನ್ನು ಬಳಸಿ ಮಾಹಿತಿ ನೀಡಿದಾಗಲೂ ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.  ತುರ್ತು ಪರಿಸ್ಥಿತಿಯಲ್ಲಿ ಪ್ರಯಾಣಿಕರ ಆತಂಕ ಕಡಿಮೆ ಮಾಡಲು ನಿಗಮವು ಪ್ರಕಟಣೆ ನೀಡುವ ವ್ಯವಸ್ಥೆ ಇದೆ. ಈ ವ್ಯವಸ್ಥೆ ಸಹ ಇಂದು ಕಾರ್ಯನಿರ್ವಹಿಸಿಲ್ಲ’ ಎಂದು ಅವರು ದೂರಿದರು.

ಟ್ರಿಪ್‌ ಸಂಖ್ಯೆ ಹೆಚ್ಚಳದಿಂದ ಸಮಸ್ಯೆ?

ಪ್ರಯಾಣಿಕರ ದಟ್ಟಣೆ ಹೆಚ್ಚು ಇರುವ ಅವಧಿಯಲ್ಲಿ ರೈಲುಗಳ ಸಂಖ್ಯೆಯನ್ನು ಬಿಎಂಆರ್‌ಸಿಎಲ್‌ ಹೆಚ್ಚಿಸಿದೆ. ಈ ವ್ಯವಸ್ಥೆ ಮಂಗಳವಾರದಿಂದಲೇ ಜಾರಿಗೆ ಬಂದಿದೆ. ಇದರಿಂದಾಗಿ ರೈಲು ಸಂಚಾರಕ್ಕೆ ಎಂದಿಗಿಂತ ಹೆಚ್ಚು ವಿದ್ಯುತ್‌ ಬಳಕೆ ಆಗಿದ್ದೇ ವಿದ್ಯುತ್‌ ಪೂರೈಕೆ ವ್ಯವಸ್ಥೆಯಲ್ಲಿ ದೋಷ ಕಾಣಿಸಿಕೊಂಡಿರುವ ಸಾಧ್ಯತೆ ಇದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ನಿಗಮದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನೇರಳೆ ಮಾರ್ಗದ ರೈಲು ಸಂಚಾರಕ್ಕೆ ಬೈಯಪ್ಪನಹಳ್ಳಿಯಲ್ಲಿರುವ 33 ಕಿಲೋ ವಾಟ್‌ ಸಾಮರ್ಥ್ಯದ ಸ್ವೀಕರಣ ಉಪಕೇಂದ್ರದಿಂದ (ರಿಸೀವಿಂಗ್‌ ಸಬ್‌ಸ್ಟೇಷನ್‌) ವಿದ್ಯುತ್‌ ಪೂರೈಕೆ ಆಗುತ್ತದೆ. ಈ ವಿದ್ಯುತ್‌ ಪ್ರತಿ ನಿಲ್ದಾಣಗಳಲ್ಲಿ ಇರುವ ಟ್ರ್ಯಾಕ್ಷನ್‌ ಉಪಕೇಂದ್ರಗಳಿಗೆ (ಸುರಂಗ ಮಾರ್ಗದಲ್ಲಿ ಪ್ರತಿ ಎರಡು ನಿಲ್ದಾಣಗಳಿಗೆ ಒಂದು ಉಪಕೇಂದ್ರ ಇದೆ) ರವಾನೆ ಆಗುತ್ತದೆ. ಅಲ್ಲಿ ಎ.ಸಿ. ವಿದ್ಯುತ್‌ ಡಿ.ಸಿ ವಿದ್ಯುತ್‌ ಆಗಿ ಪರಿವರ್ತನೆಯಾಗಿ ವಿದ್ಯುತ್‌ ಪೂರೈಕೆ ಹಳಿಗೆ (ಥರ್ಡ್‌ರೈಲ್‌) ಪೂರೈಕೆ ಆಗುತ್ತದೆ. ಹೆಚ್ಚುವರಿ ರೈಲುಗಳ ಸಂಚಾರದಿಂದ ಹೆಚ್ಚುವರಿ ಬೇಡಿಕೆ ಸೃಷ್ಟಿಯಾಗಿದ್ದರಿಂದ ಬೈಯಪ್ಪನಹಳ್ಳಿ ಕೇಂದ್ರದಲ್ಲಿ ವಿದ್ಯುತ್‌ ಪೂರೈಕೆ ವ್ಯವಸ್ಥೆಯಲ್ಲಿ ದೋಷ ಕಾಣಿಸಿಕೊಂಡಿರುವ ಸಾಧ್ಯತೆ ಹೆಚ್ಚು’ ಎಂದರು.

‘ಈ ತಾಂತ್ರಿಕ ದೋಷಕ್ಕೆ ಕಾರಣ ಏನು ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ರಾತ್ರಿ ವೇಳೆ ಇಡೀ ವ್ಯವಸ್ಥೆಯನ್ನು ಸಮಗ್ರವಾಗಿ ಪರಿಶೀಲಿಸುತ್ತೇವೆ. ಟ್ರಿಪ್‌ ಸಂಖ್ಯೆ ಹೆಚ್ಚಿಸಿದ್ದರಿಂದಲೇ ದೋಷ ಕಾಣಿಸಿಕೊಂಡಿದೆ ಎನ್ನಲಾಗದು. ಏಕೆಂದರೆ ಈ ಹಿಂದೆ ಟ್ರಿಪ್‌ ಸಂಖ್ಯೆ ಹೆಚ್ಚಿಸಿದಾಗ  ಯಾವುದೇ ತೊಂದರೆ ಉಂಟಾಗಿರಲಿಲ್ಲ’ ಎಂದು ನಿಗಮದ ಕಾರ್ಯಾಚರಣೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಶಂಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೆಳಿಗ್ಗೆ 26 ನಿಮಿಷ ಸೇವೆ ವ್ಯತ್ಯಯಗೊಂಡ ವೇಳೆ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿತ್ತು. ಈ ಸಂದರ್ಭದಲ್ಲಿ ಶಾರ್ಟ್‌ ಲೂಪ್‌ ವ್ಯವಸ್ಥೆ ಮೂಲಕ ಹೆಚ್ಚುವರಿ ರೈಲು ಸೇವೆ ಒದಗಿಸಿದ್ದೇವೆ. ಬೆಳಿಗ್ಗೆ 11 ಗಂಟೆ ಸುಮಾರಿಗೆ ಮೆಟ್ರೊ ಸೇವೆ ಸಹಜ ಸ್ಥಿತಿಗೆ ಬಂದಿದೆ. ಸಂಜೆ ಕೂಡಾ 6 ನಿಮಿಷ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು’ ಎಂದು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯು.ಎ.ವಸಂತ ರಾವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

24 ರೈಲುಗಳು ಸ್ಥಗಿತ

ನೇರಳೆ ಮಾರ್ಗದಲ್ಲಿ ಏಕಕಾಲದಲ್ಲಿ 24 ರೈಲುಗಳು ಸಂಚರಿಸುತ್ತಿರುತ್ತವೆ. ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆ ಕಡೆಗೆ ಹಾಗೂ ಮೈಸೂರು ರಸ್ತೆ ಕಡೆಯಿಂದ ಬೈಯಪ್ಪನಹಳ್ಳಿ ಕಡೆಗೆ  ತಲಾ 12 ರೈಲುಗಳು ಸಂಚರಿಸುತ್ತವೆ. ಪ್ರತಿ ರೈಲಿನಲ್ಲಿ ಸುಮಾರು 1,000 ಮಂದಿ ಪ್ರಯಾಣಿಕರು ಇರುತ್ತಾರೆ. ದಟ್ಟಣೆ ಹೆಚ್ಚು ಇರುವ ಅವಧಿಯಲ್ಲಿ ಪ್ರಯಾಣಿಕರ ಸಂಖ್ಯೆ ಇನ್ನೂ ಹೆಚ್ಚು ಇರುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.