‘ಬಿಜೆಪಿ ಮೇಧಾಶ್ವಕ್ಕೆ ತಡೆ ನಿಶ್ಚಿತ’

7

‘ಬಿಜೆಪಿ ಮೇಧಾಶ್ವಕ್ಕೆ ತಡೆ ನಿಶ್ಚಿತ’

Published:
Updated:
‘ಬಿಜೆಪಿ ಮೇಧಾಶ್ವಕ್ಕೆ ತಡೆ ನಿಶ್ಚಿತ’

ಮಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಜೋಡಿ ಭ್ರಷ್ಟಾಚಾರವನ್ನು ಮುಚ್ಚಿಹಾಕುವ ಉದ್ದೇಶದಿಂದ ವಿರೋಧ ಪಕ್ಷಗಳನ್ನು ಸಂಪೂರ್ಣ ನಾಶ ಮಾಡಲು ಕೈಗೆತ್ತಿಕೊಂಡಿರುವ ‘ಅಶ್ವಮೇಧ ಯಾಗದ ಕುದುರೆ’ಗೆ ಕಾರ್ಮಿಕರು ಮತ್ತು ರೈತರು ನಿಶ್ಚಿತವಾಗಿಯೂ ತಡೆ ಹಾಕುತ್ತಾರೆ’ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹೇಳಿದರು.

ಪಕ್ಷದ 22ನೇ ರಾಜ್ಯ ಸಮ್ಮೇಳನದ ಅಂಗವಾಗಿ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ಮಂಗಳವಾರ ನಡೆದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ‘ದೇಶದಲ್ಲಿ ನಡೆಯುತ್ತಿರುವ ಕಾರ್ಮಿಕ, ರೈತ, ವಿದ್ಯಾರ್ಥಿ ಚಳವಳಿಯನ್ನು ಕೇಂದ್ರ ಸರ್ಕಾರ ಹಗುರವಾಗಿ ಪರಿಗಣಿಸುತ್ತಿದೆ. ನಾವು ಚುನಾವಣೆ ಗೆಲ್ಲುತ್ತಿದ್ದೇವೆ ಎಂಬ ಅಹಂಕಾರವನ್ನು ಬಿಜೆಪಿ ಪ್ರದರ್ಶಿಸುತ್ತಿದೆ. ಈ ಅಶ್ವಮೇಧವನ್ನು ಯಾರೂ ತಡೆಯಲಾರರು ಎಂದು ಭಾವಿಸಿದ್ದರೆ ಅದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರ ಭ್ರಮೆ’ ಎಂದರು.

ಶ್ರೀರಾಮನೂ ವನವಾಸ ಮುಗಿಸಿ ಮರಳಿ ರಾಜ್ಯಕ್ಕೆ ಬಂದು ದೊರೆಯ ಪಟ್ಟ ಸ್ವೀಕರಿಸಿದ ಬಳಿಕ ಅಶ್ವಮೇಧ ಯಾಗ ನಡೆಸಿದ್ದ. ಆಗ ಹಲವು ಯುದ್ಧಗಳನ್ನು ಗೆದ್ದಿದ್ದ. ಆದರೆ, ಆತನದ್ದೇ ಅವಳಿ ಮಕ್ಕಳಾದ ಲವ ಮತ್ತು ಕುಶ ಯಾಗದ ಕುದುರೆಯನ್ನು ತಡೆದಿದ್ದರು. ಅಂತಹ ಶಕ್ತಿ ಕಾರ್ಮಿಕರು ಮತ್ತು ರೈತರಿಗೆ ಇದೆ ಎಂದು ಬಣ್ಣಿಸಿದರು.

ದಿಕ್ಕು ತಪ್ಪಿಸುವ ಯತ್ನ: ಕೇಂದ್ರ ಸರ್ಕಾರ ಕೈಗೊಂಡ ನೋಟು ನಿಷೇಧ, ಸರಕು ಮತ್ತು ಸೇವಾ ತೆರಿಗೆ ಜಾರಿಯಂತಹ ನಿರ್ಧಾರಗಳಿಂದ ಸಾಮಾನ್ಯ ಜನರ ಬದುಕು ಹೈರಾಣಾಗಿದೆ. ಆಳ ಸಮುದ್ರಕ್ಕೆ ಹೊಗಿ ಮೀನು ಹಿಡಿದು ತಂದವರು ಅದನ್ನು ಮಾರಾಟ ಮಾಡಿ ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಹೊಣೆ ಹೊರಬೇಕಾದ ಆಡಳಿತ ಪಕ್ಷ ಕೋಮುವಾದಿ ಕಾರ್ಯಸೂಚಿಯ ಮೂಲಕ ಜನರ ದಿಕ್ಕು ತಪ್ಪಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

‘ಕೇಂದ್ರ ಸರ್ಕಾರ ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ದೊಡ್ಡ ಬಂಡವಾಳಷಾಹಿಗಳ ಸಂಪತ್ತು, ಲಾಭ ಹೆಚ್ಚಿಸಲು ಪೂರಕವಾಗಿ ಕೆಲಸ ಮಾಡುತ್ತಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ದೇಶದ ಒಟ್ಟು ನಿವ್ವಳ ಉತ್ಪನ್ನದ (ಜಿಡಿಪಿ) ಶೇಕಡ 49ರಷ್ಟು ಶೇ 1ರಷ್ಟು ಜನರ ಬಳಿ ಇತ್ತು. ಈಗ ಜಿಡಿಪಿಯ ಶೇ 60ರಷ್ಟು ಶೇ 1ರಷ್ಟು ಜನರ ಬಳಿ ಇದೆ. ಕಾರ್ಪೊರೇಟ್‌ ಕಂಪೆನಿಗಳಿಗೆ ನೀಡಿದ್ದ 11 ಲಕ್ಷ ಕೋಟಿ ಸಾಲವನ್ನು ವಸೂಲಾಗದ ಸಾಲ ಎಂದು ಪರಿಗಣಿಸಲು ಕೇಂದ್ರ ಸರ್ಕಾರ ಹೊರಟಿದೆ’ ಎಂದು ಹೇಳಿದರು.

ಈಗ ಸಾಮಾನ್ಯ ಜನರ ಸಂಪತ್ತಿಗೂ ಕೇಂದ್ರ ಸರ್ಕಾರ ಕೈ ಹಾಕಿದೆ. ಭಾರತೀಯ ಸ್ಟೇಟ್‌ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ ಜನರ ₹ 1,700 ಕೋಟಿಯನ್ನು ಸರ್ಕಾರವೇ ಲೂಟಿ ಮಾಡಿದೆ ಎಂದು ಆರೋಪಿಸಿದರು.

ಸುಳ್ಳು ಆರೋಪ: ‘ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಮತೀಯ ಧ್ರುವೀಕರಣಕ್ಕಾಗಿ ಹೆಣದ ರಾಜಕೀಯ ಆರಂಭಿಸಿವೆ. ಕೇರಳ ಸೇರಿದಂತೆ ಹಲವು ಕಡೆಗಳಲ್ಲಿ ನಮ್ಮ ಪಕ್ಷದ ಕಚೇರಿಗಳ ಮೇಲೆ ದಾಳಿ ಮಾಡಲಾಗುತ್ತಿದೆ. ಸಿಪಿಎಂ ಕಾರ್ಯಕರ್ತರನ್ನು ಬಿಜೆಪಿ, ಆರ್‌ಎಸ್‌ಎಸ್‌ ಕಾರ್ಯಕರ್ತರು ಕೊಚ್ಚಿ ಕೊಲೆ ಮಾಡುತ್ತಿದ್ದಾರೆ. ಸಿಪಿಎಂ ಕಾರ್ಯಕರ್ತರ ವಿರುದ್ಧವೇ ಹತ್ಯೆಯ ಆರೋಪ ಹೊರಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ’ ಎಂದು ದೂರಿದರು.

ಈಗ ದೇಶದ ಆಡಳಿತ ಆರ್‌ಎಸ್‌ಎಸ್‌ ಮತ್ತು ಮೋದಿಯವರ ಖಾಸಗಿ ‘ಸೇನೆ’ಯ ಕೈಯಲ್ಲಿದೆ ಎಂಬ ಸಂದೇಶವನ್ನು ಮತೀಯ ರಾಜಕಾರಣದ ಮೂಲಕ ನೀಡಲಾಗುತ್ತಿದೆ. ಇದನ್ನು ತಡೆಯಲು ಸುತ್ತಿಗೆ ಮತ್ತು ಕುಡುಗೋಲು ಶಸಕ್ತವಾಗಿವೆ. ದೇಶದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ಬಂದಾಗ ಅದನ್ನು ರಕ್ಷಿಸಲು ಕೆಂಬಾವುಟ ಸಿದ್ಧವಾಗಿದೆ ಎಂದರು.

ಬಹುತ್ವದ ನಾಶಕ್ಕೆ ಯತ್ನ: ಸಿಪಿಎಂ ರಾಜ್ಯ ಮಂಡಳಿ ಕಾರ್ಯದರ್ಶಿ ಜಿ.ವಿ.ಶ್ರೀರಾಮ ರೆಡ್ಡಿ ಮಾತನಾಡಿ, ‘ಆರ್‌ಎಸ್ಎಸ್‌ನ ಹೆಸರು ರಾಷ್ಟ್ರೀಯ ಸರ್ವನಾಶಕ ಸಂಘ ಎಂದು ಬದಲಾಗಿದೆ. 5,000 ವರ್ಷಗಳಿಂದ ಭಾರತ ಕಾಪಾಡಿಕೊಂಡು ಬಂದಿರುವ ಬಹುತ್ವವನ್ನು ನಾಶಮಾಡಲು ಅದು ಯತ್ನಿಸುತ್ತಿದೆ. ಕೇಂದ್ರ ಸರ್ಕಾರದಲ್ಲಿ ಕೌಶಲ ಅಭಿವೃದ್ಧಿ ಮಂತ್ರಿಯಾಗಿರುವ ಅನಂತಕುಮಾರ್ ಹೆಗಡೆ ಬೆಂಕಿ ಹಚ್ಚುವ ಕೌಶಲ ತೋರಿಸುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ಹೊನ್ನಾವರದಲ್ಲಿ ಪರೇಶ್ ಮೇಸ್ತ ಸಾವಿನ ಹೆಸರಿನಲ್ಲಿ ಸಮಾಜಕ್ಕೆ ಕಿಚ್ಚು ಹಚ್ಚಿದವರು ದಕ್ಷಿಣ ಕನ್ನಡ ಜಿಲ್ಲೆಯ ಹರೀಶ್ ಪೂಜಾರಿ, ವಿನಾಯಕ ಬಾಳಿಗ ಕೊಲೆ ಆದಾಗ ಎಲ್ಲಿಗೆ ಹೋಗಿದ್ದರು. ಉಡುಪಿಯ ಪ್ರವೀಣ್‌ ಪೂಜಾರಿ ಕೊಲೆಯ ಕುರಿತು ಏಕೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದರು.

ಪಕ್ಷದ ಮುಖಂಡ ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಜಿ.ಎನ್‌.ನಾಗರಾಜ್‌, ನಿತ್ಯಾನಂದ ಸ್ವಾಮಿ, ಕೆ.ಶಂಕರ್‌, ಎಸ್‌.ವರಲಕ್ಷ್ಮಿ, ಯು.ಬಸವರಾಜ್, ವಿ.ಜೆ.ಕೆ.ನಾಯರ್, ವಸಂತ ಆಚಾರಿ, ಮೀನಾಕ್ಷಿ ಸುಂದರಂ, ಕೆ.ಆರ್‌.ಶ್ರೀಯಾನ್, ಕೆ.ಎನ್‌.ಉಮೇಶ್, ಮುನಿವೆಂಕಟಪ್ಪ, ರಮಣಿ, ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್‌ ಕಾಟಿಪಳ್ಳ ವೇದಿಕೆಯಲ್ಲಿದ್ದರು.

‘ನಾಯಕ ಬೇಕಿಲ್ಲ, ನೀತಿ ಬೇಕು’

‘ಭಾರತಕ್ಕೆ ಯಾರು ನಾಯಕರಾಗಬೇಕು ಎಂಬುದೇ ಈಗ ಹೆಚ್ಚು ಚರ್ಚೆಯಲ್ಲಿದೆ. ಆದರೆ, ದೇಶ ಬಲಿಷ್ಠವಾಗಿದೆ. ಭಾರತಕ್ಕೀಗ ನಾಯಕರು ಬೇಕಿಲ್ಲ. ಒಳ್ಳೆಯ ನೀತಿಗಳು ಬೇಕು’ ಎಂದು ಸೀತಾರಾಂ ಯೆಚೂರಿ ಹೇಳಿದರು.

‘ನೇತಾ ನಹೀ, ನೀತಿ ಚಾಹಿಯೇ ಎಂದು ನಾವು ಕೇಳಬೇಕು. ಜನರ ಪರವಾಗಿರುವ ಅಥವಾ ಜನರ ವಿರುದ್ಧವಾಗಿರುವ ನೀತಿಗಳ ಬಗ್ಗೆ ಹೆಚ್ಚು ಚರ್ಚೆ ಆಗಬೇಕು. ಬೆರಳೆಣಿಕೆಯ ವ್ಯಕ್ತಿಗಳ ಹೆಸರಿನಲ್ಲಿ ನಾಯಕತ್ವದ ಚರ್ಚೆ ಬೇಕಿಲ್ಲ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry