ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಣಾಮ ಬೀರದ ವೈದ್ಯರ ಮುಷ್ಕರ

Last Updated 3 ಜನವರಿ 2018, 6:57 IST
ಅಕ್ಷರ ಗಾತ್ರ

ಮೈಸೂರು: ನಗರದ ಖಾಸಗಿ ಕ್ಲಿನಿಕ್‌ಗಳು, ನರ್ಸಿಂಗ್‌ ಹೋಂಗಳು ತಮ್ಮ ಹೊರರೋಗಿಗಳ ವಿಭಾಗವನ್ನು ಮುಚ್ಚುವ ಮೂಲಕ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಸ್ಥಾ‍ಪನೆ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮಂಗಳವಾರ ಕರೆ ನೀಡಿದ್ದ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದವು.

ಆದರೆ, ಜೆಎಸ್ಎಸ್‌, ಕಾಮಾಕ್ಷಿ, ಕೊಲಂಬಿಯಾ ಏಷಿಯಾ, ಅಪೊಲೊ ಬಿಜಿಎಸ್ ಆಸ್ಪತ್ರೆಗಳ ಹೊರರೋಗಿ ಚಿಕಿತ್ಸಾ ವಿಭಾಗಗಳಲ್ಲಿ ಚಿಕಿತ್ಸೆ ಮುಂದುವರಿಯಿತು. ಎಲ್ಲ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ಹಾಗೂ ಒಳರೋಗಿ ಚಿಕಿತ್ಸಾ ವಿಭಾಗ ಎಂದಿನಂತಿತ್ತು. ಇದರಿಂದ ಜನಸಾಮಾನ್ಯರ ಮೇಲೆ ಮುಷ್ಕರ ಹೆಚ್ಚಿನ ಪರಿಣಾಮ ಬೀರಲಿಲ್ಲ.

ಶಾಂತವೇರಿ ಗೋಪಾಲಗೌಡ ಆಸ್ಪತ್ರೆ, ಚಂದ್ರಕಲಾ ಆಸ್ಪತ್ರೆ, ಬಸಪ್ಪ ಸ್ಮಾರಕ ಆಸ್ಪತ್ರೆ, ಬಿ.ಬಿ.ಆಯಿಷಾ ಮಿಲಿ ಆಸ್ಪತ್ರೆ, ಸಿಎಸ್‌ಐ ಹೋಲ್ಡ್ಸ್‌ವರ್ತ್ ಸ್ಮಾರಕ ಆಸ್ಪತ್ರೆ (ಮಿಷನ್ ಆಸ್ಪತ್ರೆ) ಸೇರಿದಂತೆ ಇನ್ನಿತರ ಆಸ್ಪತ್ರೆಗಳು ಹೊರರೋಗಿ ಚಿಕಿತ್ಸಾ ವಿಭಾಗವನ್ನು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6ರ ವರೆಗೆ ಬಂದ್ ಮಾಡಿದ್ದವು. ಇದರಿಂದ ಕೆಲವು ರೋಗಿಗಳು ಪರದಾಡಬೇಕಾಗಿ ಬಂತು.

ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ವೈದ್ಯರು ಕಪ್ಪುಪಟ್ಟಿ ಧರಿಸಿ ಕಾರ್ಯನಿರ್ವಹಿಸಿದರು. ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹೆಸರು ಹೇಳಲು ಇಚ್ಛಿಸದ ವೈದ್ಯರು, ‘ಐಎಂಎ ಕರೆ ನೀಡಿರುವ ಮುಷ್ಕರಕ್ಕೆ ನಮ್ಮ ಬೆಂಬಲ ಇದೆ. ಅದಕ್ಕಾಗಿಯೇ ಕಪ್ಪು‍ಪಟ್ಟಿ ಧರಿಸಿದ್ದೇವೆ. ಆದರೆ, ಆಸ್ಪತ್ರೆಗೆ ಹೆಚ್ಚಾಗಿ ಗ್ರಾಮಾಂತರ ಪ್ರದೇಶದ ಜನರೇ ಚಿಕಿತ್ಸೆಗೆ ಬರುತ್ತಾರೆ. ಮುಷ್ಕರದ ಅರಿವಿಲ್ಲದೆ ಬರುವ ಇವರಿಗೆ ಚಿಕಿತ್ಸೆ ನೀಡದೆ ವಾಪಸ್ ಕಳುಹಿಸುವುದು ಮಾನವೀಯತೆ ಅಲ್ಲ. ಹಾಗಾಗಿ, ಚಿಕಿತ್ಸೆಯನ್ನು ಮುಂದುವರಿಸಲಾಗಿದೆ’ ಎಂದು ಹೇಳಿದರು.

ನಿಗದಿಯಂತೆ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳು ಬಂದು, ಬೇಸರಿಸಿಕೊಂಡು ಸಾಗುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು. ಶೇ 30ರಷ್ಟು ಆಸ್ಪತ್ರೆಗಳು, ಕ್ಲಿನಿಕ್‌ಗಳು ಬಂದ್: ಐಎಂಎ ಕೇಂದ್ರ ಘಟಕವು ಒಂದೆರಡು ದಿನಗಳ ಹಿಂದೆಯಷ್ಟೇ ಮುಷ್ಕಕ್ಕೆ ಕರೆ ಕೊಟ್ಟಿದ್ದರಿಂದ ಶೇ 100ರಷ್ಟು ಯಶಸ್ಸು ಗಳಿಸಲು ಸಾಧ್ಯವಾಗಿಲ್ಲ ಎಂದು ಸಂಘದ ಮೂಲಗಳು ತಿಳಿಸಿವೆ. ನಗರದಲ್ಲಿನ ಕ್ಲಿನಿಕ್‌ಗಳು ಹಾಗೂ ಆಸ್ಪತ್ರೆಗಳ ಪೈಕಿ ಶೇ 30ರಷ್ಟು ಮಾತ್ರ ಹೊರರೋಗಿ ವಿಭಾಗವನ್ನು ಮುಚ್ಚಿದ್ದವು. ಉಳಿದಂತೆ, ಕಪ್ಪುಪಟ್ಟಿ ಧರಿಸಿ ಕಾರ್ಯನಿರ್ವಹಿಸಲಾಗಿದೆ. ಇದರಿಂದ ಜನಸಾಮಾನ್ಯರ ಮೇಲೆ ಯಾವುದೇ ಪರಿಣಾಮ ಉಂಟಾಗಿಲ್ಲ.

ಆಸ್ಪತ್ರೆಗಳತ್ತ ಬಾರದ ಜನ

ಮೈಸೂರು: ವೈದ್ಯರ ಮುಷ್ಕರ ಎಂಬ ಸುದ್ದಿ ತಿಳಿದ ಸಾರ್ವಜನಿಕರು ಸರ್ಕಾರಿ ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳ ಕಡೆ ಮಂಗಳವಾರ ಸುಳಿಯಲಿಲ್ಲ. ಕೆ.ಆರ್.ಆಸ್ಪತ್ರೆಗೆ ನಿತ್ಯ 1,500ರಿಂದ 1,700ರ ವರೆಗೆ ಹೊರರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ.

ಆದರೆ, ಮಂಗಳವಾರ ಬಂದಿದ್ದು 1,350 ಮಂದಿ. ಇವರಲ್ಲಿ 93 ಮಂದಿಯನ್ನು ಒಳರೋಗಿಗಳನ್ನಾಗಿ ಚಿಕಿತ್ಸೆಗೆ ದಾಖಲಿಸಿಕೊಳ್ಳಲಾಯಿತು. ಮುಷ್ಕರ ಎಂದು ತಿಳಿದ ಜನರು ಸರ್ಕಾರಿ ವೈದ್ಯರೂ ಮುಷ್ಕರದಲ್ಲಿ ಪಾಲ್ಗೊಳ್ಳುವರು ಎಂದು ತಪ್ಪು ತಿಳಿದು ಆಸ್ಪತ್ರೆಯತ್ತ ಬರಲಿಲ್ಲ ಎಂದು ಕೆ.ಆರ್.ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಚಂದ್ರಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಕೆ

ಮೈಸೂರು: ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಮಂಗಳವಾರ ಕೇಂದ್ರ ಸರ್ಕಾರದ ನಡೆ ವಿರೋಧಿಸಿ ಜಿಲ್ಲಾಧಿಕಾರಿ ಹಾಗೂ ಸಂಸದ ಪ್ರತಾಪಸಿಂಹ ಅವರ ಕಚೇರಿಗೆ ಮನವಿ ಪತ್ರ ಸಲ್ಲಿಸಿದರು.

ಸದ್ಯ ಇರುವ ಭಾರತೀಯ ವೈದ್ಯಕೀಯ ಮಂಡಳಿಯನ್ನೇ ರದ್ದುಪಡಿಸಲು ಸರ್ಕಾರ ಚಿಂತಿಸುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾದ ಕ್ರಮ. ಇದರ ಜತೆಗೆ, ಆಯುಷ್ ವೈದ್ಯರಿಗೆ ಕಡಿಮೆ ಅವಧಿಯ ಕೋರ್ಸ್‌ ಅನ್ನು ಪರಿಚಯಿಸಿ ಅವರನ್ನು ಎಂಬಿಬಿಎಸ್ ಅಧ್ಯಯನ ಮಾಡಿದ ವೈದ್ಯರಿಗೆ ಸಮಾನವಾಗಿ ಪರಿಗಣಿಸುವ ಅಂಶ ಇದೆ. ಇದರಿಂದ ತಪ್ಪು ಚಿಕಿತ್ಸೆ ನೀಡುವ ಅಪಾಯ ಇದೆ. ಇದರ ವಿರುದ್ಧವಾಗಿ ಮುಷ್ಕರ ನಡೆಸಲಾಗುತ್ತಿದೆ ಎಂದು ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ.ಸುರೇಶ್‌ ರುದ್ರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT